Vande Bharat Express: ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ರೈಲಿಗೆ ಬೇಡಿಕೆ ಹೆಚ್ಚಾಗಲು ಕಾರಣ ಏನು?-ಇಲ್ಲಿದೆ ಮಾಹಿತಿ
Vande Bharat Express Train: ಹುಬ್ಬಳ್ಳಿ-ಧಾರವಾಡ-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿ ನಾಳೆಗೆ ಅಂದರೆ ಜೂನ್ 27, 2024ಕ್ಕೆ ಒಂದು ವರ್ಷ ಆಗಲಿದೆ. ಹಾಗಾದರೆ ಈ ರೈಲಿಗೆ ಪ್ರತಿಕ್ರಿಯೆಗಳು ಹೇಗಿವೆ ಹಾಗೂ ಇಲ್ಲಿವರೆಗೂ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆಯ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು- ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಆರಂಭಗೊಂಡು ನಾಳೆಗೆ ಒಂದು ವರ್ಷ ಆಗಲಿದ್ದು, ಈ ರೈಲಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಎಂದು ಇಲ್ಲಿ ತಿಳಿಯಿರಿ.

ಈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಒಂದು ವರ್ಷದಿಂದ ನಿಧಾನಗತಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹುಬ್ಬಳ್ಳಿ-ಧಾರವಾಡದಿಂದಲೇ ಶೇಕಡಾ 85ರಷ್ಟು ಬುಕ್ಕಿಂಗ್ ಆಗುತ್ತಿದ್ದು, ವಿಶೇಷವಾಗಿ ರಜೆ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡ 110ಕ್ಕೂ ಹೆಚ್ಚಿರುತ್ತದೆ.
ಜೂನ್ 27ರಂದು ತನ್ನ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿರುವ ಈ ಮಾರ್ಗದ ವಂದೇ ಭಾರತ್ ರೈಲು, ವ್ಯಾಪಾರಸ್ಥರು ಮತ್ತು ನೌಕರರ ಪ್ರಯಾಣಿಕರಿಗೆ ನೆಚ್ಚಿನದಾಗಿದೆ ಎಂದು ನೈಋುತ್ಯ ರೈಲ್ವೆ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಹೇಳಿದ್ದಾರೆ.
ಆರಾಮದಾಯಕ ಮತ್ತು ಸುರಕ್ಷಿತ ಐಷಾರಾಮಿ ಪ್ರಯಾಣ ಸೇವೆ ಒದಗಿಸುತ್ತಿರುವ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯ ಬಗ್ಗೆ ಕೆಲವರು, ಹುಬ್ಬಳ್ಳಿ, ಧಾರವಾಡದಿಂದ ತುಂಬ ಕಡಿಮೆ ಪ್ರಯಾಣಿಕರು ಇರುತ್ತಿದ್ದು, ದಾವಣಗೆರೆಯಿಂದ ಹೆಚ್ಚಿನ ಜನರು ಸಂಚಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಸುಳ್ಳು. ಎಲ್ಲಿಂದ ಎಷ್ಟು ಜನರು ಸೀಟು ಕಾಯ್ದಿರಿಸುತ್ತಾರೆ ಎಂಬುದು ನಮ್ಮಲ್ಲಿ ದಾಖಲೆ ಹೇಳುತ್ತವೆ ಎಂದು ಸಿಪಿಆರ್‌ಒ ಡಾ.ಮಂಜುನಾಥ ಹೇಳಿದ್ದಾರೆ.
ರೈಲು ಸಂಖ್ಯೆ 20662ರಲ್ಲಿ ಎಕ್ಸಿಕ್ಯುಟಿವ್ ಕ್ಲಾಸ್ ವಿಭಾಗದಲ್ಲಿ ಕೇವಲ ಶೇಕಡ 15.01ರಷ್ಟು ಸೀಟುಗಳು ದಾವಣಗೆರೆಯಿಂದ ಬುಕ್ ಆಗಿದ್ದರೆ, ಹುಬ್ಬಳ್ಳಿಯಿಂದ ಶೇಕಡ 53.57 ಮತ್ತು ಧಾರವಾಡದಿಂದ ಶೇಕಡ 31.4 ಬುಕ್ ಆಗಿದೆ. ಆದರೆ ಹುಬ್ಬಳ್ಳಿ -ಧಾರವಾಡದಿಂದ ಬುಕ್ಕಿಂಗ್ ಶೇಕಡ 84.97ರಷ್ಟು ಆಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಿಂದ ಧಾರವಾಡದ ಕಡೆಗೆ ಬರುವ ರೈಲು(20661) ದಾವಣಗೆರೆಯಿಂದ ಶೇಕಡ 15.67 ಮತ್ತು ಹುಬ್ಬಳ್ಳಿ ಮತ್ತು ಧಾರವಾಡದಿಂದ ಕ್ರಮವಾಗಿ ಶೇಕಡ 58.09 ಮತ್ತು ಶೇಕಡ 26.2 ಬುಕಿಂಗ್ ಪಡೆಯುತ್ತದೆ. ಹುಬ್ಬಳ್ಳಿ-ಧಾರವಾಡದಿಂದ ಬುಕ್ಕಿಂಗ್ ಶೇಕಡ 84.31ರಷ್ಟು, ಚೇರ್ ಕಾರ್‌ನಲ್ಲಿ ಕೇವಲ ಶೇಕಡ 25.56ರಷ್ಟು ಸೀಟುಗಳು ದಾವಣಗೆರೆಯಿಂದ ಬುಕ್ ಆಗಿದ್ದರೆ, ಹುಬ್ಬಳ್ಳಿಯಿಂದ ಶೇಕಡ 43.16 ಮತ್ತು ಧಾರವಾಡದಿಂದ 31.24ರಷ್ಟು ಜನರು ಟಿಕೆಟ್ ಕಾಯ್ದಿರಿಸಿದ್ದರು ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಜನವರಿಯಿಂದ ಜೂನ್ 24ರವರೆಗಿನ 6 ತಿಂಗಳ ಅವಧಿಯಲ್ಲಿ ಬೆಂಗಳೂರಿನಿಂದ ಧಾರವಾಡವರೆಗೆ ಸರಾಸರಿ 79 ಜನ ನಿತ್ಯ ಪ್ರಯಾಣಿಸಿದ್ದಾರೆ. ಅದೇ ರೀತಿ ಧಾರವಾಡದಿಂದ ಬೆಂಗಳೂರಿಗೆ ಶೇಕಡ 85.35ರಷ್ಟು ಜನರು ಪ್ರಯಾಣ ಮಾಡಿಸಿದ್ದಾರೆ. ಇದೇ ರೀತಿ ಬೆಂಗಳೂರಿನಿಂದ ಧಾರವಾಡ ಮಧ್ಯೆ ಶೇಕಡ 79ರಷ್ಟು ಜನರು ಪ್ರಯಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು-ಧಾರವಾಡ-ಬೆಂಗಳೂರು (20661/20662) ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ನಿತ್ಯವೂ ಬೆಂಗಳೂರಿನಿಂದ ಬೆಳಗ್ಗೆ 5:45ಕ್ಕೆ ಹೊರಟು ಧಾರವಾಡಕ್ಕೆ 12:10ಕ್ಕೆ ತಲುಪಲಿದೆ. ಇದೇ ರೈಲು (20662) ಮಧ್ಯಾಹ್ನ 1:15ಕ್ಕೆ ಧಾರವಾಡದಿಂದ ಹೊರಟು ಬೆಂಗಳೂರಿಗೆ ಸಂಜೆ 7:45ಕ್ಕೆ ತಲುಪಲಿದೆ. ಯಶವಂತಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ಮಾತ್ರ ನಿಲುಗಡೆಯಾಗಲಿದೆ.












Click it and Unblock the Notifications