Vande Bharat Train: 19 ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ; ಎಲ್ಲೆಲ್ಲಿಗೆ?-ಮಾಹಿತಿ, ವಿವರ
Vande Bharat Train: ಈಗಾಗಲೇ ದೇಶಾದ್ಯಂತ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದೆ. ಇನ್ನು ಆಗ್ನೇಯ ರೈಲ್ವೆ ವಲಯವು ನಾಲ್ಕು ರಾಜ್ಯಗಳ 19 ಹೊಸ ಮಾರ್ಗಗಳಲ್ಲಿ ಶೀಘ್ರದಲ್ಲೇ ವಂದೇ ಭಾರತ್ ರೈಲು ಓಡಿಸಲು ಮುಂದಾಗಿದೆ. ಹಾಗಾದರೆ ಯಾವ್ಯಾವ ಮಾರ್ಗಗಳಲ್ಲಿ, ಯಾವಾಗ ಸಂಚಾರ ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ನಿಲ್ದಾಣಗಳಲ್ಲಿ ವಂದೇ ಭಾರತ್ ರೈಲು ಓಡಿಸಲು ರೈಲ್ವೆ ಇಲಾಖೆ ಈಗಾಗಲೇ ಸಮೀಕ್ಷೆ ನಡೆಸಿದೆ. ಟಾಟಾನಗರದಿಂದ ಗಯಾ, ಹೌರಾ, ಧನ್‌ಬಾದ್ ಮಾರ್ಗವಾಗಿ ವಂದೇ ಭಾರತ್ ರೈಲು ಓಡಿಸುವ ಯೋಜನೆ ಇದಾಗಿದೆ. ಇನ್ನು ಪ್ರಯಾಣಿಕರು ಆಧುನಿಕ ಸೌಲಭ್ಯಗಳೊಂದಿಗೆ ಈ ರೈಲುಗಳಲ್ಲಿ ಪ್ರಯಾಣ ಮಾಡಬಹುದಾಗಿದೆ.

ಈ ಮಾರ್ಗಗಳಲ್ಲಿ ವಂದೇ ಭಾರತ್ ಸಂಚಾರ: ಪ್ರಸ್ತುತ ವಂದೇ ಭಾರತ್ ರೈಲು ರಾಂಚಿಯಿಂದ ಹೌರಾಕ್ಕೆ ಟಾಟಾನಗರ ನಿಲ್ದಾಣದ ಮೂಲಕ ಚಲಿಸುತ್ತದೆ. ಇದರಲ್ಲಿ ಹೆಚ್ಚಿನ ಆಸನಗಳು ಟಾಟಾನಗರದಿಂದ ಬುಕ್ ಆಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೊಸ ಯೋಜನೆಯಡಿ, ವಂದೇ ಭಾರತ್ ರೈಲು ರಾಂಚಿ, ಬೊಕಾರೊ, ರೂರ್ಕೆಲಾ, ಟೋರಿ, ಅಸನ್ಸೋಲ್ ಮತ್ತು ಖರಗ್‌ಪುರದಿಂದ ದಿಘಾ, ಬಾಲಸೋರ್ ಮತ್ತು ಇತರ ಮಾರ್ಗಗಳಲ್ಲಿ ಸಂಚಾರ ಮಾಡಲಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ: ರೈಲ್ವೇ ಇಲಾಖೆ ಪ್ರಕಾರ, ಪ್ರಯಾಣಿಕರ ಬೇಡಿಕೆಯ ಮೇರೆಗೆ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸುವ ಯೋಜನೆ ಇದ್ದು, ಅಲ್ಲಿ ಶೀಘ್ರದಲ್ಲೇ ಪ್ರಯೋಗಗಳು ನಡೆಯಲಿವೆ. ವಂದೇ ಭಾರತ್ ರೈಲು ಓಡಾಟದಿಂದ ಜಾರ್ಖಂಡ್, ಬಂಗಾಳ ಮತ್ತು ಒಡಿಶಾ ವಲಯಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಿದಂತಾಗುತ್ತದೆ. ಮತ್ತೊಂದೆಡೆ, ರೈಲ್ವೆಯು, ಹೇಳಿದ ಮಾರ್ಗದಲ್ಲಿ ಚಲಿಸುವ ರೈಲುಗಳಲ್ಲಿ ಟಿಕೆಟ್ ಬುಕಿಂಗ್ ಮತ್ತು ಪ್ರಯಾಣಿಕರ ಸಂಖ್ಯೆಯ ಮೇಲೆಯೂ ನಗಾ ಇರಿಸಲಿದೆ.
ಕಳೆದ ಕೆಲವು ವರ್ಷಗಳಲ್ಲಿ ವಂದೇ ಭಾರತ್ ರೈಲುಗಳು ಇಡೀ ದೇಶಾದ್ಯಂತ ಸಂಚಾರ ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆಗಳು ಸಹ ಬಂದಿವೆ. ಇನ್ನು ಅತಿ ವೇಗವಾಗಿ ಓಡುವ ಈ ರೈಲುಗಳು ಜನರ ಪ್ರಯಾಣವನ್ನು ಸುಲಭಗೊಳಿಸುತ್ತಿವೆ. ಕೆಲವು ತಿಂಗಳ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ದೇಶದಲ್ಲಿ 82ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ಓಡುತ್ತಿವೆ ಎಂದು ಹೇಳಿದ್ದರು. ಫೆಬ್ರವರಿಯಲ್ಲಿ ಈ ಅಂಕಿಅಂಶವನ್ನು ನೀಡಿದ್ದು, ವಂದೇ ಭಾರತ್ ರೈಲುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿವೆ ಅಂತಾ ಹೇಳಿದ್ದರು.












Click it and Unblock the Notifications