ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿಯ ಎರಡು ಶತಮಾನದ ನಾಲ್ಕುನಾಡು ಅರಮನೆ

By ಬಿ.ಎಂ.ಲವಕುಮಾರ್
|
Google Oneindia Kannada News

ಕೊಡಗನ್ನು ಆಳಿದ ರಾಜರ ಅರಮನೆಗಳ ಪೈಕಿ ಮಡಿಕೇರಿಯಿಂದ ನಲವತ್ತು ಕಿ.ಮೀ.ಗಳ ದೂರದ ಕಕ್ಕಬ್ಬೆಯ ಸಮೀಪದಲ್ಲಿರುವ ನಾಲ್ಕುನಾಡು ಅರಮನೆಯು ಕೊಡಗಿನ ಸಾಂಪ್ರದಾಯಿಕ ಐನ್ ಮನೆಗಳಂತೆ ಕಾಣುತ್ತದೆ. ಅಷ್ಟೇ ಅಲ್ಲ ಕರ್ನಾಟಕದಲ್ಲಿರುವ ಇತರೆ ಅರಮನೆಗಳಿಗಿಂತ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.

ಕೊಡಗಿನ ಅತ್ಯಂತ ಎತ್ತರದ ಬೆಟ್ಟವಾದ ತಡಿಯಂಡಮೋಳ್ ಬೆಟ್ಟಶ್ರೇಣಿಗಳ ನಡುವೆ ಯುವಕಪಾಡಿ ಗ್ರಾಮದ ಎತ್ತರವಾದ ಗುಡ್ಡದ ಮೇಲೆ ನಾಲ್ಕುನಾಡು ಅರಮನೆಯು ನಿರ್ಮಾಣವಾಗಿದ್ದು, ದಟ್ಟ ಕಾನನದ ನಡುವೆ ಅಂದಿನ ಅರಸ ಅರಮನೆಯನ್ನೇಕೆ ನಿರ್ಮಾಣ ಮಾಡಿದ ಎಂಬ ಕುತೂಹಲದ ಪ್ರಶ್ನೆಗಳಿಗೆ ಈ ಅರಮನೆ ತನ್ನದೇ ಆದ ಇತಿಹಾಸದ ಕಥೆಯನ್ನು ಹೇಳುತ್ತದೆ.[ನಾನಾ ಸೌಂದರ್ಯ, ಸೊಬಗಿನ ತಾಣವೇ ಮೈಸೂರು ಅರಮನೆ]

Two centuries old Nalku Nadu Aramane is in Madikeri

ನಾಲ್ಕು ಗೋಡೆ ಅರಮನೆ ನಿರ್ಮಿಸಿದ್ದು ಯಾರು?

ಅರಮನೆಯ ನಿರ್ಮಾಣದ ಕುರಿತಂತೆ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಒಂದಷ್ಟು ರೋಮಾಂಚನಕಾರಿ ಸಂಗತಿಗಳು ಹೊರಬೀಳುತ್ತವೆ. ಶ್ರೀಮಂತ ನಾಡಾದ ಕೊಡಗನ್ನು ವಶಪಡಿಸಿಕೊಳ್ಳುವುದು ಟಿಪ್ಪುಸುಲ್ತಾನನ ಉದ್ದೇಶವಾಗಿತ್ತು. ಹಾಗಾಗಿ ಕೊಡಗನ್ನು ಆಳುತ್ತಿದ್ದ ಅರಸರ ಮನೆತನದವನಾದ ದೊಡ್ಡ ವೀರರಾಜೇಂದ್ರನನ್ನು ಸೆರೆಹಿಡಿದ ಟಿಪ್ಪುಸುಲ್ತಾನ್ ಪಿರಿಯಾಪಟ್ಟಣದ ಕೋಟೆಯಲ್ಲಿ ಬಂಧಿಸಿಟ್ಟನು.

ಆದರೆ 1791-92ರಲ್ಲಿ ಆಂಗ್ಲೋ-ಮೈಸೂರು ಯುದ್ದದ ಸಮಯದಲ್ಲಿ ಟಿಪ್ಪುಸುಲ್ತಾನನ ಸೆರೆಯಿಂದ ಕುಟುಂಬ ಸಮೇತ ತಪ್ಪಿಸಿಕೊಂಡ ದೊಡ್ಡವೀರರಾಜೇಂದ್ರನು ಕುರ್ಚಿ ಎಂಬ ಗ್ರಾಮಕ್ಕೆ ಬಂದನಾದರೂ ಆ ವೇಳೆಗೆ ಅಲ್ಲಿದ್ದ ಅರಮನೆ ನಾಶವಾಗಿದ್ದರಿಂದ ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸುಭದ್ರ ತಾಣವೊಂದರ ಅಗತ್ಯತೆ ಇತ್ತು.

ಆಗ ದೊಡ್ಡ ವೀರರಾಜೇಂದ್ರ ತನ್ನ ಸೇನಾಪರಿವಾರದೊಂದಿಗೆ ಅರಮನೆಗೆ ಸೂಕ್ತ ಸ್ಥಳವನ್ನು ಹುಡುಕುತ್ತಾ ಬಂದಾಗ ಆತನ ಕಣ್ಣಿಗೆ ಬಿದ್ದಿದ್ದು ತಡಿಯಂಡಮೋಳ್ ಶ್ರೇಣಿಯ ಸಮತಟ್ಟು ಜಾಗ ಯುವಕಪಾಡಿ. ಒಂದು ಕ್ಷಣ ನಿಂತು ಕಣ್ಣಾಯಿಸಿದ ರಾಜನಿಗೆ ಬೆಟ್ಟಶ್ರೇಣಿಗಳಿಂದ ಹಾಗೂ ದಟ್ಟವಾದ ಅರಣ್ಯದಿಂದ ಸುತ್ತುವರಿದ ಈ ತಾಣ ಅರಮನೆ ನಿರ್ಮಿಸಲು ಸೂಕ್ತ ಸ್ಥಳವಾಗಿ ಕಂಡು ಬಂದಿತು. ಕೂಡಲೇ ಅರಮನೆ ನಿರ್ಮಾಣ ಮಾಡಲು ಸೇವಕರಿಗೆ ಆಜ್ಞೆ ಮಾಡಿದನು. ಅಂದು ನಿರ್ಮಾಣಗೊಂಡ ಮನೆ ತದನಂತರ ಒಂದಷ್ಟು ಅಭಿವೃದ್ಧಿಗೊಂಡು ಇಂದು "ನಾಲ್ಕುನಾಡು ಅರಮನೆ"ಯಾಗಿ ಗಮನಸೆಳೆಯುತ್ತಿದೆ.[ಮೈಸೂರಿನ ಅರಮನೆಗಳ ಇತಿಹಾಸ ಗೊತ್ತಾ?]

Two centuries old Nalku Nadu Aramane is in Madikeri

ಈ ಅರಮನೆ ನೋಡಲು ಹೇಗಿದೆ?

ದೊಡ್ಡ ವೀರರಾಜೇಂದ್ರನಿಂದ ನಿರ್ಮಿಸಲ್ಪಟ್ಟ ಈ ಅರಮನೆಯು ಮೊದಲು ಹುಲ್ಲಿನ ಹೊದಿಕೆಯನ್ನು ಹೊಂದಿತ್ತು. ಆ ನಂತರ ಬ್ರಿಟೀಷರ ಕಾಲದಲ್ಲಿ ಅದಕ್ಕೆ ಹೆಂಚಿನ ಹೊದಿಕೆಯನ್ನು ಹಾಕಲಾಯಿತು. ಎರಡು ಪ್ರವೇಶದ್ವಾರವಿರುವ ಈ ಅರಮನೆಯು ಎರಡು ಅಂತಸ್ತುಗಳನ್ನು ಹೊಂದಿದ್ದು, ಮೇಲಿನ ಅಂತಸ್ತಿನಲ್ಲಿ ಸುಂದರ ಕೆತ್ತನೆಗಳನ್ನು ಕಾಣಬಹುದು. ಇಲ್ಲಿ ಚಿಕ್ಕ ಹಾಗೂ ಚೊಕ್ಕದಾದ ವಿನ್ಯಾಸಗಳಿಂದ ಕೂಡಿದ ಹಲವು ಕೋಣೆಗಳಿವೆ. ಸುಂದರ ವರ್ಣ ಲೇಪನವನ್ನು ಹೊಂದಿರುವ ಛಾವಣಿ ಕೂಡ ಮರದಿಂದಲೇ ನಿರ್ಮಾಣವಾಗಿದೆ. ಇನ್ನು ಸುತ್ತಲಿನ ಗೋಡೆಗಳು ಆಕರ್ಷಕವಾಗಿದ್ದು ವೀಕ್ಷಕರ ಮನಸೆಳೆಯುತ್ತವೆ.

ಅರಮನೆಯಲ್ಲಿ ಎಚ್ಟು ಕೋಣೆಗಳಿವೆ?

ಅರಮನೆಯಲ್ಲಿ ಸುಮಾರು 14ಚಿಕ್ಕ ಕೋಣೆಗಳು ಹಾಗೂ ಹಿಂಭಾಗದಲ್ಲಿ ನಾಲ್ಕು ಕತ್ತಲೆ ಕೋಣೆಗಳನ್ನು ಕಾಣಬಹುದು. ರಾಜರ ಕಾಲದಲ್ಲಿ ತಪ್ಪಿತಸ್ಥರನ್ನು ಈ ಕೋಣೆಯಲ್ಲಿ ಬಂಧಿಸಿಡುತ್ತಿದ್ದರೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಛಾವಣಿಯು ಷಟ್ಕೋನಾಕಾರದಲ್ಲಿದ್ದು, ಹನ್ನೆರಡು ಬೃಹತ್ ಕಂಬಗಳ ಮೇಲೆ ನಿಂತಿದೆ. ಉಬ್ಬು ಶಿಲ್ಪಗಳು ಕಂಬದ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಕಿಟಕಿ ಹಾಗೂ ಬಾಗಿಲುಗಳು ವಿಶಿಷ್ಟ ಕೆತ್ತನೆಗಳಿಂದ ಕೂಡಿದ್ದು, ಆ ಕಾಲದ ಕಲಾನೈಪುಣ್ಯತೆಗೆ ಹಿಡಿದ ಕೈಕನ್ನಡಿಯಾಗಿದೆ.

ಅರಮನೆಯಲ್ಲಿ ಏನೆಲ್ಲಾ ಕಾಣ ಸಿಗುತ್ತದೆ?

ಅರಮನೆಯ ಮೊದಲ ಹಜಾರದಲ್ಲಿ ಕಾಣ ಸಿಗುವ ಕಲಾ ಕೆತ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜವೈಭವಗಳನ್ನು ಸಾರುವ ಚಿತ್ರಗಳು ಅಲ್ಲಿವೆ. ಅಂಬಾರಿಯಲ್ಲಿ ಕುಳಿತ ರಾಜ. ಆತನ ಹಿಂದೆ ಹಾಗೂ ಮುಂದೆ ವಾದ್ಯವೃಂದದೊಂದಿಗೆ ಸಾಗುವ ಸೈನ್ಯದ ದೃಶ್ಯಗಳು ಕಂಡು ಬರುತ್ತವೆ. ಸಂಪೂರ್ಣ ಮರದಿಂದಲೇ ನಿರ್ಮಾಣವಾಗಿರುವುದು ಈ ಅರಮನೆಯ ವಿಶೇಷತೆಯಾಗಿದೆ.[ಪ್ರವಾಸಿಗರಿಗೆ ಮೈಸೂರೆಂದರೆ ಅದೇಕೆ ಅಷ್ಟು ಇಷ್ಟವಾಗುತ್ತೆ?]

Two centuries old Nalku Nadu Aramane is in Two centuries old Nalku Nadu Aramane is in Madikeri

ಅರಮನೆಯಲ್ಲಿ ಇನ್ನೇನು ವಿಶೇಷತೆಗಳಿವೆ?

ಅರಮನೆಯ ಮುಂಭಾಗದಲ್ಲಿ ಚೌಕಾಕಾರದ ಕಿರುಮಂಟಪವಿದ್ದು, ಇದಕ್ಕೆ ನಾಲ್ಕು ಪ್ರವೇಶ ದ್ವಾರಗಳಿವೆ. ಮಂಟಪದ ಮೇಲ್ಭಾಗದಲ್ಲಿ ನಾಲ್ಕು ದಿಕ್ಕಿಗೂ ಮಲಗಿರುವ ಬಸವನ ಮೂರ್ತಿಯಿದೆ. ಇನ್ನು ಈ ಕಿರುಮಂಟಪವನ್ನು 'ವಿವಾಹಮಂಟಪ' ಎಂದು ಕೂಡ ಕರೆಯಲಾಗುತ್ತದೆ. ಈ ಮಂಟಪದಲ್ಲಿ 1796ರ ಮಾಘ ಶುದ್ಧ ಭಾನುವಾರ ರಾತ್ರಿ 19ಗಳಿಗೆ ವೃಶ್ಚಿಕ ಲಗ್ನದಲ್ಲಿ ರಾಜಪುರೋಹಿತ ಶಿವಲಿಂಗಸ್ವಾಮಿ ಅವರ ಸಮ್ಮುಖದಲ್ಲಿ ದೊಡ್ಡವೀರರಾಜೇಂದ್ರ ಮತ್ತು ಮಹದೇವಮ್ಮಾಜಿಯವರ ವಿವಾಹ ನಡೆದಿತ್ತು ಎಂದು ಹೇಳಲಾಗಿದೆ.

ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿರುವ ಈ ನಾಲ್ಕುನಾಡು ಅರಮನೆಗೆ ಕಳೆದ ಆರು ವರ್ಷಗಳ ಹಿಂದೆ ಕಾಯಕಲ್ಪ ನೀಡಲಾಗಿದೆ. ಅದಕ್ಕೂ ಮೊದಲು ಇಲ್ಲಿ ಕೆಲವರು ನಿಧಿ ಆಶೆಗಳಿಗಾಗಿ ಅಲ್ಲಲ್ಲಿ ಅಗೆದು, ಅರಮನೆಗೆ ಧಕ್ಕೆ ತಂದಿದ್ದರು. ಕಾಯಕಲ್ಪ ನೀಡಿದ ಬಳಿಕ ಶಿಥಿಲಾವಸ್ಥೆಯತ್ತ ತೆರಳುತ್ತಿದ್ದ ಅರಮನೆಗೆ ಹೊಸಕಳೆ ಬಂದಿದೆ.

ಮೊದಲೆಲ್ಲಾ ಇಲ್ಲಿಗೆ ಹೋಗುವುದೆಂದರೆ ಪ್ರಯಾಸದ ಕೆಲಸವಾಗಿತ್ತು. ಏಕೆಂದರೆ ಸರಿಯಾದ ರಸ್ತೆಯಾಗಲೀ, ವಸತಿ ವ್ಯವಸ್ಥೆಯಾಗಲೀ ಇರಲಿಲ್ಲ. ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳುವವರು ಇಲ್ಲಿಗೆ ಬಂದು ವಾಸ್ತವ್ಯ ಹೂಡುತ್ತಿದ್ದರಷ್ಟೆ. ಈಗ ಹಾಗಿಲ್ಲ ದೂರದಿಂದ ಬರುವ ಪ್ರವಾಸಿಗರು ವಾಸ್ತವ್ಯ ಹೂಡಲೆಂದೇ ಹಲವು ಹೋಂಸ್ಟೇಗಳಾಗಿವೆ.[ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ]

Two centuries old Nalku Nadu Aramane is in Madikeri

ಅರಮನೆ ಬಳಿ ಜಲಧಾರೆಯೂ ಇದೆ:

ಮಳೆಗಾಲದಲ್ಲಿ ಒಂದು ಜಲಪಾತ ಅರಮನೆ ಬಳಿಯ ಗುಡ್ಡದಿಂದ ಧುಮುಕಿದರೆ, ಮತ್ತೊಂದು ಜಲಪಾತ ಅರಮನೆ ಮುಂದಿನ ರಸ್ತೆಯಲ್ಲಿ ಸುಮಾರು ಮೂರು ಕಿ.ಮೀ.ನಷ್ಟು ಸಾಗಿದರೆ ಸಿಗುತ್ತದೆ. ಈ ಸುಂದರ ಜಲಪಾತವನ್ನು ಸ್ಥಳೀಯರು 'ಮಾದಂಡಅಬ್ಬಿ' ಎಂದು ಕರೆಯುತ್ತಾರೆ. ಇನ್ನು ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳುವವರು ಇಲ್ಲಿಂದಲೇ ತಮ್ಮ ಚಾರಣವನ್ನು ಆರಂಭಿಸಬಹುದಾಗಿದೆ.

ದೂರದ ಪ್ರವಾಸಿಗರನ್ನು ಇನ್ನಷ್ಟು ಸೆಳೆಯಬೇಕಾದರೆ ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಅಗತ್ಯವಿದೆ. ಪೇಟೆ ಪಟ್ಟಣದ ಗೌಜು ಗದ್ದಲದಿಂದ ದೂರವಿರುವುದರಿಂದ ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಾರದೆಯಿರುವುದರಿಂದ ಇಲ್ಲಿ ಸದಾ ನೀರವ ಮೌನ ಮನೆಮಾಡಿರುತ್ತದೆ. ಪ್ರವಾಸಿಗರು ನಾಲ್ಕುನಾಡು ಅರಮನೆಗೆ ಮಡಿಕೇರಿಯಿಂದ ನಾಪೋಕ್ಲು- ಕಕ್ಕಬ್ಬೆ ಮೂಲಕ ತೆರಳಬಹುದಾಗಿದೆ.

English summary
Nalku Nadu Aramane located 40 kms away from Madikeri and stands on the foothills of the Thadiyandamol mountain. It is two centuries old and is known for its architectural beauty and carvings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X