ಚಾಮುಂಡೇಶ್ವರಿಯ ಸಹೋದರಿ ಚಿಕ್ಕದೇವಮ್ಮನ ಮೂಲ ನೆಲೆ ಯಾವುದು? ಪುರಾಣದ ಕಥೆ ಹೇಳುವುದೇನು?
ಮೈಸೂರು, ಫೆಬ್ರವರಿ 10: ಮೈಸೂರು ನಗರಕ್ಕೆ ಮುಕುಟ ಮಣಿಯಂತಿರುವ ಚಾಮುಂಡಿ ಬೆಟ್ಟದಲ್ಲಿ ವೀರಾಜಮಾನಳಾಗಿರುವ ಚಾಮುಂಡೇಶ್ವರಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಆಕೆಯ ಏಳು ಸಹೋದರಿಯರಲ್ಲಿ ಒಬ್ಬಳಾದ ಚಿಕ್ಕದೇವಮ್ಮ ತಾಯಿ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ ಎನ್ನಬೇಕು. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಪುರದ ಕಟ್ಟೆ ಬಳಿ ನೆಲೆ ನಿಂತಿರುವ ಚಿಕ್ಕದೇವಮ್ಮ ಕೂಡ ಚಾಮುಂಡೇಶ್ವರಿಯಂತೆ ಆರಾಧ್ಯ ದೈವವಾಗಿದ್ದು, ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಬರುತ್ತಿರುವುದು ವಿಶೇಷವಾಗಿದೆ.
ಚಿಕ್ಕದೇವಮ್ಮ ತಾಯಿ ಕೂಡ ಬೆಟ್ಟದ ಮೇಲೆಯೇ ನೆಲೆಸಿದ್ದು, ಭಕ್ತಿಯಿಂದ ಬರುವ ಭಕ್ತರನ್ನು ಹರಸಿ ಕಳುಹಿಸುತ್ತಾ ಬಂದಿದ್ದಾಳೆ. ಹೆಚ್.ಡಿ.ಕೋಟೆಗೆ ತೆರಳಿದವರು ಇಲ್ಲಿಗೆ ತೆರಳಿ ತಾಯಿಯ ಆಶೀರ್ವಾದ ಪಡೆದು ಬರಬಹುದಾಗಿದೆ. ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಪ್ರವಾಸಿ ತಾಣ ಹಾಗೂ ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿ ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿರುವುದು ಇಲ್ಲಿನ ವೈಶಿಷ್ಟ್ಯತೆಯಾಗಿದೆ.

ಚಿಕ್ಕದೇವಮ್ಮ ತಾಯಿ ಬೆಟ್ಟಗುಡ್ಡಗಳ ಹಸಿರು ಹಚ್ಚಡದ ಸುಂದರ ಪರಿಸರದಲ್ಲಿ ನೆಲೆನಿಂತಿದ್ದು, ಸುತ್ತಮುತ್ತಲ ಊರಿನವರಿಗೆ ಆರಾಧ್ಯದೇವತೆಯಾಗಿ ಪೂಜಿಸಲ್ಪಡುತ್ತಿದ್ದಾಳೆ. ಸ್ಥಳೀಯರು ಮತ್ತು ದೂರದ ಭಕ್ತರು ಆಗಾಗ್ಗೆ ಬೆಟ್ಟವನ್ನೇರಿ ಬಂದು ದೇವಿಯ ದರ್ಶನ ಪಡೆದು ಹಿಂತಿರುಗುತ್ತಾರೆ. ದಿನನಿತ್ಯವೂ ಪೂಜೆ ನಡೆಯುತ್ತಿದ್ದು, ಅದರಲ್ಲೂ ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ತಾಯಿಯ ದರ್ಶನ ಪಡೆದು ಹಿಂತಿರುಗುತ್ತಾರೆ.
ಬೆಟ್ಟದಲ್ಲಿ ಚಿಕ್ಕದೇವಮ್ಮ ನೆಲೆ ನಿಂತಿದ್ದೇಕೆ?
ಪುರಾಣದ ಪ್ರಕಾರ ರಾಕ್ಶಸ ಸಂಹಾರಕ್ಕಾಗಿ ಪಾರ್ವತಿಯು ಏಳು ದೇವತೆಯರ ರೂಪಗಳಲ್ಲಿ ಅವತರಿಸಿ. ಭೂಲೋಕಕ್ಕೆ ಆಗಮಿಸುತ್ತಾಳೆ. ಹೀಗೆ ಬಂದವರು ದಕ್ಷಿಣ ದಿಕ್ಕಿನ ಕಡೆ ಕಾಣುವ ಎತ್ತರದ ಏಳು ಬೆಟ್ಟಗಳಲ್ಲಿ ನಿಂತರಂತೆ. ಇವತ್ತಿನ ಚಿಕ್ಕದೇವಮ್ಮ ಬೆಟ್ಟ ಅವತ್ತು ರಾಕ್ಷಸರಿಂದ ತುಂಬಿತ್ತಂತೆ. ಆಗ ಹೆದರಿದ ಚಿಕ್ಕದೇವಮ್ಮ ಈ ಬೆಟ್ಟದ ಕಡೆಗೆ ಬರುತ್ತಿರಲು ಬೆಟ್ಟವು ಸಾವಿರಾರು ರಾಕ್ಶಸರಿಂದ ತುಂಬಿರುತ್ತದೆ. ಈ ಸಮಯದಲ್ಲಿ ರಾಕ್ಶಸರನ್ನು ಕಂಡು ಮೊದಲಿಗೆ ಹೆದರಿದ ಈಕೆ ಅವರಿಂದ ತಪ್ಪಿಸಿಕೊಂಡು ಬೆಟ್ಟದ ಮೇಲೆ ಇದ್ದ ಗುಹೆಯಲ್ಲಿ ಅವಿತುಕೊಳ್ಳುತ್ತಾಳೆ. ನಂತರ ಎಲ್ಲಾ ರಾಕ್ಶಸರನ್ನು ಸಂಹರಿಸಿ ಬೆಟ್ಟದ ಮೇಲೆ ನೆಲೆಸುತ್ತಾಳೆ.
ಹಿರಿಯರು ಹೇಳುವ ಪ್ರಕಾರ ಶ್ರೀ ಚಿಕ್ಕದೇವಮ್ಮತಾಯಿ ಬೆಟ್ಟಕ್ಕೂ ಮೈಸೂರಿನ ಚಾಮುಂಡಿಬೆಟ್ಟಕ್ಕೂ ಸುರಂಗ ಮಾರ್ಗವಿದೆಯಂತೆ ಇದಕ್ಕೆ ಸಾಕ್ಷಿ ಎನ್ನುವಂತೆ ಸುರಂಗ ಮಾರ್ಗ ಈಗಲೂ ಕಾಣಿಸುತ್ತಿದ್ದು, ಗಿಡಗಂಟಿಗಳು ಆವರಿಸಿ ಮುಚ್ಚಿ ಹೋಗಿದೆ. ಈ ಸುರಂಗದಲ್ಲಿ ಸರ್ಪ ನೆಲೆನಿಂತಿದೆ. ಹೀಗಾಗಿ ಆ ಕಡೆ ಹೋಗಲು ಯಾರೂ ಪ್ರಯತ್ನ ಮಾಡುತ್ತಿಲ್ಲ ಎಂಬ ಮಾತುಗಳು ಜನವಲಯದಲ್ಲಿದೆ.

ಪುರಾಣದ ಕಥೆ ಹೇಳುವುದೇನು?
ಪುರಾಣದ ಪ್ರಕಾರ ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಲು ಹೊರಟು ಯುದ್ಧ ಮಾಡಿದಾಗ ಆಕೆಯ ಸಹೋದರಿಯರು ಸಹಾಯ ಮಾಡಿದ್ದು, ಅದರಲ್ಲಿ ಚಿಕ್ಕಮ್ಮ ತಾಯಿಯ ಸಹಕಾರವೂ ಇರುವುದನ್ನು ನಾವು ಕಾಣಬಹುದಾಗಿದೆ. ಇನ್ನು ಪುರಾಣದ ಕಥೆಯನ್ನು ನೆನಪಿಸಿಕೊಳ್ಳುವುದಾದರೆ, ಪುರಾಣದಲ್ಲಿ ಈಗಿನ ಚಾಮುಂಡಿಬೆಟ್ಟವು ಮಹಾಬಲಬೆಟ್ಟವಾಗಿತ್ತು. ಇಲ್ಲಿ ಮಹಿಷಾಸುರ ಎಂಬ ರಾಕ್ಷಸನಿದ್ದನಂತೆ.
ಈತ ಯಾವ ಗಂಡಸಿಂದಾಗಲೀ, ಯಾವ ಪ್ರಾಣಿಯಿಂದಾಗಲೀ ತನಗೆ ಮರಣ ಬಾರದಂತೆ ಸಾಕ್ಷಾತ್ ಪರಶಿವನಿಂದಲೇ ವರಪಡೆದಿದ್ದನು. ಈ ವರ ಪಡೆದ ಮೇಲೆ ತನಗೆ ಯಾವುದೇ ಸಾವು ಬರಲ್ಲ ಎಂದು ನಂಬಿದ್ದ ಮಹಿಸಾಸುರ ಅಹಂಕಾರದಿಂದ ಮೆರೆಯುತ್ತಿದ್ದನಲ್ಲದೆ, ಅದೇ ಮದದಲ್ಲಿ ಜನ ಹಾಗೂ ಋಷಿ ಮುನಿಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಾ ಯಜ್ಞಯಾಗಾದಿಗಳಿಗೆ ಅಡ್ಡಿಪಡಿಸುತ್ತಿದ್ದನು. ಈ ವೇಳೆ ಅವರೆಲ್ಲರೂ ದುಷ್ಟ ರಾಕ್ಷಸ ಮಹಿಷಾಸುರನಿಂದ ತಮ್ಮನ್ನು ಪಾರು ಮಾಡುವಂತೆ ಶಿವನ ಮೂಲಕ ಪಾರ್ವತಿಗೆ ಮೊರೆಹೋದರು.
ಚಾಮುಂಡೇಶ್ವರಿಗೆ ಸಹಕರಿಸಿದ ಚಿಕ್ಕದೇವಮ್ಮ
ಈ ವೇಳೆ ಚಾಮುಂಡೇಶ್ವರಿ ತನ್ನ ಹದಿನೆಂಟು ಕರಗಳಲ್ಲೂ ಎಲ್ಲಾ ದೇವತೆಗಳಿಂದ ಪಡೆದ ಹದಿನೆಂಟು ಆಯುಧಗಳನ್ನು ಹಿಡಿದು ಕಮಲ, ಅಕ್ಷರಮಾಲೆ, ಬಾಣ, ಖಡ್ಗ, ವಜ್ರ, ಗದೆ, ತ್ರಿಶೂಲ, ಚಕ್ರ, ಪರಶು, ಘಂಟೆ, ಪಾಶ, ಶಕ್ತಿ, ದಂಡ, ಚರ್ಮ, ಧನಸ್ಸು, ಪಾನಪಾತ್ರೆ, ಕಮಂಡಲಗಳೊಡನೆ ದಿವ್ಯಾಭರಣಗಳಿಂದ ಅಲಂಕೃತಳಾಗಿ ಹಿಮವಂತ ನೀಡಿದ ಸಿಂಹವನ್ನೇರಿ ಉಗ್ರಸ್ವರೂಪಿಣಿಯಾಗಿ ಬಂದು ಲೋಕಕಂಟಕನಾಗಿದ್ದ ದುಷ್ಟ ಮಹಿಷಾಸುರವನ್ನು ಸಂಹಾರ ಮಾಡಿದಳು.

ಆ ಕ್ಷಣದಿಂದ ಮಹಿಷಾಸುರ ಮರ್ಧಿನಿಯಾಗಿ ಶ್ರೀ ಚಾಮುಂಡೇಶ್ವರಿಯು ಮಹಿಷ ಮಂಡಲದ ಮಹಾಬಲಬೆಟ್ಟದಲ್ಲಿ ನೆಲೆಸಿದಳು. ಆದರೆ ಭೀಕರ ಯುದ್ಧದ ಸಮಯದಲ್ಲಿ ಆಕೆಯ ಸಹೋದರಿಯಾದ ಚಿಕ್ಕದೇವಮ್ಮ ತಾಯಿಯೂ ಸಹಕಾರ ನೀಡಿದ್ದಳಂತೆ ಅಲ್ಲದೆ ಅಟ್ಟಹಾಸಗೈಯುತ್ತಿದ್ದ ಇತರೆ ರಾಕ್ಷಸರನ್ನು ಸಂಹರಿಸಿದ್ದಳು ಎಂದು ಹೇಳಲಾಗುತ್ತಿದೆ. ಇಂದಿಗೂ ಶಕ್ತಿದೇವತೆಯಾಗಿರುವ ದೇವಿಯ ದರ್ಶನ ಮಾಡಿ ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಜನತೆಯಲ್ಲಿದೆ. ಹೀಗಾಗಿಯೇ ಜನ ಕಷ್ಟ ಬಂದಾಗ ತಾಯಿಗೆ ಹರಕೆ ಹೊತ್ತು ಬಳಿಕ ಶ್ರೀ ಚಿಕ್ಕದೇವಮ್ಮದೇವಿಯ ಸನ್ನಿಧಿಗೆ ಆಗಮಿಸಿ ಹರಕೆ ತೀರಿಸುತ್ತಾರೆ.
ಮುಜರಾಯಿ ಇಲಾಖೆಗೆ ಒಳಪಟ್ಟ ದೇಗುಲ
ಚಾಮುಂಡೇಶ್ವರಿಯನ್ನು ಹೇಗೆ ಪೂಜಿಸುತ್ತಾರೆಯೋ ಹಾಗೆಯೇ ಹಿಂದೆ ಯದುವಂಶದ ಮಹಾರಾಜರು ಚಿಕ್ಕಮ್ಮದೇವಿಯನ್ನು ಪೂಜಿಸುತ್ತಿದ್ದರಂತೆ. ಪರಿವಾರ ಸಹಿತ ಬಂದು ದೇವಿಗೆ ಪೂಜಾಕೈಂಕರ್ಯಗಳನ್ನು ನೆರವೇರಿಸುತ್ತಿದ್ದರಂತೆ. ಇತ್ತೀಚಿಗಿನ ವರ್ಷಗಳಲ್ಲಿ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ದಿನಗಳಲ್ಲದೆ, ವಾರದ ಏಳು ದಿನವೂ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಇನ್ನು ಚಿಕ್ಕದೇವಮ್ಮತಾಯಿ ಕ್ಷೇತ್ರ ಪವಿತ್ರ ತಾಣವಾಗಿದ್ದು, ಇದು ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಇಲ್ಲಿ ಒಂದಷ್ಟು ಮೂಲ ಸೌಕರ್ಯಗಳನ್ನು ಒದಗಿಸಿದ್ದೇ ಆದರೆ ಭಕ್ತರ ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗುವುದರಲ್ಲಿ ಎರಡು ಮಾತಿಲ್ಲ. ಹೆಚ್.ಡಿ.ಕೋಟೆಗೆ ಪ್ರವಾಸಕ್ಕೆ ತೆರಳುವವರು ಚಿಕ್ಕದೇವಮ್ಮ ಬೆಟ್ಟಕ್ಕೂ ಹೋಗಿ ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications