ಎಮ್ಮೆಮಾಡು ‘ಕೊಡಗಿನ ಮೆಕ್ಕಾ’ವಾಗಿದ್ದು ಹೇಗೆ? ಇಲ್ಲಿನ ವಿಶೇಷತೆಗಳೇನು?

ಮಡಿಕೇರಿ, ಮಾರ್ಚ್ 22: ಕೊಡಗಿನಲ್ಲಿರುವ ಮುಸ್ಲಿಂ ಧಾರ್ಮಿಕ ಕೇಂದ್ರದಲ್ಲಿ ಎಮ್ಮೆಮಾಡುವಿನಲ್ಲಿರುವ ದರ್ಗಾಕ್ಕೆ ವಿಶೇಷ ಮಹತ್ವವಿದೆ. ಇದನ್ನು ಕೊಡಗಿನ ಮೆಕ್ಕಾ ಎಂದು ಕರೆಯಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಇಲ್ಲಿಗೆ ಮುಸ್ಲಿಂ ಧರ್ಮೀಯರು ಮಾತ್ರವಲ್ಲದೆ ಹಿಂದೂ ಧಾರ್ಮಿಯರು ತೆರಳಿ ಹರಕೆ ಒಪ್ಪಿಸಿ, ಕಾಣಿಕೆ ಹಾಕಿ ಬರುತ್ತಾರೆ. ಹೀಗಾಗಿ ಇದು ಭಾವೈಕ್ಯತೆಯ ನೆಲೆಯಾಗಿ ಕಂಗೊಳಿಸುತ್ತಾ ಬರುತ್ತಿದೆ.

ಎಮ್ಮೆಮಾಡು ವರ್ಷದಿಂದ ವರ್ಷಕ್ಕೆ ಹೆಸರುವಾಸಿಯಾಗುತ್ತಾ ಸಾಗುತ್ತಿದ್ದು, ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ದೇಶವಿದೇಶದಿಂದಲೂ ಇಲ್ಲಿಗೆ ಜನ ಆಗಮಿಸಿ ಈ ತಾಣದ ಮಹತ್ವವನ್ನು ತಿಳಿದು ಅಚ್ಚರಿಪಡುತ್ತಾರೆ. ಈ ತಾಣ ಸುಂದರ ಪರಿಸರದಲ್ಲಿರುವ ಕಾರಣ ಮತ್ತು ತನ್ನದೇ ಇತಿಹಾಸ ಮತ್ತು ಪವಾಡಗಳನ್ನು ಹೊಂದಿರುವುದರಿಂದ ಕಷ್ಟ, ನೋವನ್ನು ಪರಿಹರಿಸುವಂತೆ ಬೇಡಿ ಬಂದವರ ಇಷ್ಟಾರ್ಥ ನೆರವೇರಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಜನ ಬರುತ್ತಾರೆ.

Travel News How Yemmemadu Place Is Changed As Kodagu Mecca

ಇನ್ನು ಎಮ್ಮೆಮಾಡು ಕೊಡಗಿನ ಮಡಿಕೇರಿಯಿಂದ 32 ಕಿಲೋಮೀಟರ್ ದೂರದಲ್ಲಿದ್ದು, ನಾಪೋಕ್ಲಿಗೆ ಸಮೀಪದಲ್ಲಿದೆ. ಮಡಿಕೇರಿ ಬೆಟ್ಟಗೇರಿ ಅಥವಾ ಮಡಿಕೇರಿ ಮೂರ್ನಾಡು ಮೂಲಕವೂ ತೆರಳಬಹುದಾಗಿದೆ. ಸೂಫಿ ಸಂತರು ಕಾಲಿಟ್ಟು ಪಾವನಗೊಳಿಸಿದ ಪುಣ್ಯ ಭೂಮಿಯಾಗಿರುವ ಕಾರಣ ಜನ ಇಲ್ಲಿಗೆ ಬರುತ್ತಾರೆ. ಜತೆಗೆ ಸುತ್ತಮುತ್ತಲ ಎಲ್ಲ ಧರ್ಮೀಯರ ಜನ ತಮ್ಮ ಮನೆಯಲ್ಲಿ ಸಾಕಿದ ಹಸುಕರುಗಳಿಗೆ ಏನಾದರು ಕಾಯಿಲೆ, ತೊಂದರೆಗಳು ಆದಾಗ ಎಮ್ಮೆಮಾಡು ದರ್ಗಾಕ್ಕೆ ಹರಕೆ ಹೊತ್ತುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಎಮ್ಮೆಮಾಡು ಏಕೆ ಪವಿತ್ರ ತಾಣವಾಯಿತು?

ಕೇವಲ ದನಕರುಗಳ ಸಮಸ್ಯೆಗೆ ಮಾತ್ರವಲ್ಲದೆ, ಮಾನಸಿಕ, ಶಾರೀರಿಕವಾಗಿ ಕೆಲವೊಂದು ತೊಂದರೆಗಳಿಂದ ಬಳಲುತ್ತಿದ್ದವರು ಕೂಡ ಇಲ್ಲಿಗೆ ಭೇಟಿ ನೀಡಿ ಪರಿಹಾರ ಕಂಡುಕೊಂಡ ಹಲವು ಉದಾಹರಣೆಗಳಿವೆ. ದರ್ಗಾಕ್ಕೆ ಜಾತಿಭೇದವಿಲ್ಲದೆ ಎಲ್ಲಾ ಜನಾಂಗದವರು ದರ್ಶನ ಮಾಡಿ ಹರಕೆ ಹೊತ್ತು ಕಷ್ಟ ಪರಿಹಾರವಾದ ಬಳಿಕ ಬೆಳ್ಳಿಯ ಹಸುಕರುವಿನ ಪ್ರತಿಕೃತಿ ಹಾಗೂ ತುಪ್ಪ, ನಗದನ್ನು ಹರಕೆಯ ರೂಪದಲ್ಲಿ ಒಪ್ಪಿಸುವುದು ನಡೆದುಕೊಂಡು ಬಂದಿದೆ.

Travel News How Yemmemadu Place Is Changed As Kodagu Mecca

ಎಮ್ಮೆಮಾಡು ಏಕೆ ಪವಿತ್ರ ತಾಣವಾಯಿತು? ಎಂಬುದನ್ನು ನೋಡುವುದಾದರೆ ಸೂಫಿ ಸಂತರು ತಮ್ಮ ಜೀವಿತಾವಧಿಯ ಕೊನೆಯ ಕಾಲದಲ್ಲಿ ಈ ಗ್ರಾಮಕ್ಕೆ ಆಗಮಿಸಿ ಸಮಾಧಿ ಹೊಂದುವುದರ ಮೂಲಕ ಅಂತಿಮ ವಿಶ್ರಾಂತಿ ಪಡೆಯುತ್ತಿದ್ದು, ನಂಬಿ ಬರುವ ಜನಕ್ಕೆ ಒಳಿತನ್ನು ಮಾಡುತ್ತಿರುವ ಕಾರಣ ಜೀವನದಲ್ಲೊಮ್ಮೆ ಆ ಸಂತರ ದರ್ಶನ ಭಾಗ್ಯ ಪಡೆದು ಧನ್ಯರಾಗೋಣವೆಂದು ಜನ ಇಲ್ಲಿಗೆ ಆಗಮಿಸುತ್ತಾರೆ.

ಸೂಫಿ ಶಹೀದ್ ಸಂತರು ಕಾಲಿಟ್ಟ ಭೂಮಿ

ಎಮ್ಮೆಮಾಡುವಿನ ಸ್ಥಳ ಮಹಿಮೆಯ ಬಗ್ಗೆ ನೋಡುವುದಾದರೆ ತನ್ನದೇ ಆದ ಇತಿಹಾಸವಿರುವುದು ಗೋಚರಿಸುತ್ತದೆ. 1300 ವರ್ಷಗಳಷ್ಟು ಹಿಂದೆ ಪುಟ್ಟಗ್ರಾಮ ಎಮ್ಮೆಮಾಡು ಹಸಿರು ಕಾನನದ ನಡುವಿನ ಸುಂದರ ತಾಣವಾಗಿತ್ತು. ಸುತ್ತಲೂ ಬೆಟ್ಟಗುಡ್ಡಗಳು, ಹರಿಯುವ ತೊರೆ ಹೀಗೆ ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿತ್ತು. ಹೀಗಾಗಿ ಊರೂರು ಅಲೆಯುತ್ತಾ ಶಾಂತಿ ಸಂದೇಶವನ್ನೂ ಸಾರುತ್ತಾ ಸಾಗುತ್ತಿದ್ದ ಸೂಫಿ ಶಹೀದ್ ಸಂತರು ಇಲ್ಲಿಗೆ ಬಂದಿದ್ದರು. ಇಲ್ಲಿನ ವಾತಾವರಣ ಅವರನ್ನು ಸೆಳೆದಿತ್ತು.

ತನ್ನ ಜೀವಿತಾವಧಿಯ ಕೊನೆಯ ವಿಶ್ರಾಂತಿಗೆ ಈ ತಾಣವೇ ಸೂಕ್ತವೆಂದು ನಿರ್ಧರಿಸಿದ ಅವರು ಗ್ರಾಮದ ಎಲ್ಲಾ ಜನಾಗದವರೊಂದಿಗೆ ಬೆರೆಯುತ್ತಾ ಅವರ ಕಷ್ಟಕಾರ್ಪಣ್ಯಕ್ಕೆ ಸಲಹೆ ನೀಡುತ್ತಾ ಜನತೆಯಲ್ಲಿ ಸೌಹಾರ್ಧತೆಯನ್ನು ಬೆಳೆಸುತ್ತಾ ಹೆಚ್ಚಿನ ಕಾಲವನ್ನು ದೇವರ ಸ್ಮರಣೆಯಲ್ಲೇ ಕಳೆಯತೊಡಗಿದ್ದರು. ಸದಾ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದ ಅವರನ್ನು ಜನ ಪೂಜ್ಯ ಭಾವನೆಯಿಂದ ಕಾಣುತ್ತಿದ್ದರಲ್ಲದೆ, ದೈವಸ್ವರೂಪಿಯಾದ ಅವರಿಗೆ ನಮಸ್ಕರಿಸಿ ಹೋಗುತ್ತಿದ್ದರು.

Travel News How Yemmemadu Place Is Changed As Kodagu Mecca

ಸೂಫಿ ಶಹೀದ್ ಸಂತರಿಗೆ ಹಾಲುಣಿಸಿ ಹಸು

ಈ ನಡುವೆ ಸೂಫಿ ಶಹೀದ್ ಸಂತರ ಬಗ್ಗೆ ಕೇಳಿ ತಿಳಿದ ದೂರದ ಜನರು ಅವರ ದರ್ಶನ ಭಾಗ್ಯಕ್ಕಾಗಿ ಹಾತೊರೆಯುತ್ತಿದ್ದರು. ದಿನಗಳು ಕಳೆಯುತ್ತಿದ್ದಂತೆಯೇ ಅವರಿಗೆ ತಮ್ಮ ಬದುಕಿನ ಅಂತಿಮ ದಿನಗಳು ಸಮೀಪಿಸುತ್ತಿದೆ ಎಂಬುವುದು ಗೋಚರವಾಗಿತ್ತು ಹಾಗಾಗಿ ಅವರು ಎಮ್ಮೆಮಾಡು ಬಳಿಯ 'ಬರಾಕೊಲ್ಲಿ' ಎಂಬಲ್ಲಿ ಹೆಬ್ಬಂಡೆಯ ಮೇಲೆ ಮಲಗಿದ್ದರಂತೆ ಬಳಲಿದ್ದ ಅವರನ್ನು ಕಂಡ ಹಸುವೊಂದು ಕಟ್ಟಿಹಾಕಿದ ಹಗ್ಗವನ್ನು ತುಂಡರಿಸಿಕೊಂಡು ಬಂದು ಪಕ್ಕದಲ್ಲೇ ಹರಿದು ಹೋಗುತ್ತಿದ್ದ ತೋಡು(ತೊರೆ)ನ ನೀರಿನಲ್ಲಿ ತನ್ನ ಕೆಚ್ಚಲನ್ನು ಮುಳುಗಿಸಿಕೊಂಡು ಬಂದು ಮಂಡಿಯೂರಿ ಅವರ ಬಾಯಿಗೆ ಹಾಲುಣಿಸಿತಂತೆ. ಇದಕ್ಕೆ ಇಂದಿಗೂ (ದರ್ಗಾದಿಂದ ಒಂದು ಕಿ.ಮೀ.ದೂರ) ಬಂಡೆಕಲ್ಲಿನ ಮೇಲೆ ಉಳಿದಿರುವ ಕೆಲವು ಕುರುಹುಗಳು ಸಾಕ್ಷಿಯಾಗಿವೆ.

ಸೂಫಿ ಶಹೀದ್ ಸಂತರಿಗೆ ಹಸು ಹಾಲುಣಿಸಿದ ಪವಾಡ ನಡೆದಂದಿನಿಂದ ಇಲ್ಲಿಯವರೆಗೂ ಎಮ್ಮೆಮಾಡು ದರ್ಗಾ ಹಸುಕರುಗಳಿಗೆ ಉಂಟಾಗುವ ರೋಗ ರುಜಿನ ಇನ್ನಿತರ ಯಾವುದೇ ತೊಂದರೆಗಳಿಗೆ ಪರಿಹಾರ ನೀಡುತ್ತಾ ಬರುತ್ತಿರುವುದು ಗಮನಾರ್ಹವಾಗಿದೆ. ತನ್ನದೇ ಪವಾಡಗಳಿಂದ ಜನರನ್ನು ಸೆಳೆದಿದ್ದ ಸೂಫಿ ಸಂತರು ಈಗಲೂ ನಂಬಿ ಬಂದವರ ಸಂಕಷ್ಟವನ್ನು ದೂರಮಾಡುತ್ತಿದ್ದಾರೆ. ಇನ್ನು ಇಲ್ಲಿರುವ ದರ್ಗಾ ಸುಂದರವಾಗಿದ್ದು, ಆಕರ್ಷಣೀಯವಾಗಿದೆ.

ಮತ್ತೊಬ್ಬ ಸಂತರ ದರ್ಗಾವೂ ಇಲ್ಲಿದೆ

ಇಲ್ಲಿ ಸೂಫಿ ಶಹೀದ್ ಸಂತರ ದರ್ಗಾವಲ್ಲದೆ, ಪ್ರವಾದಿ ಮಹಮ್ಮದ್ ಪೈಗಂಬರ್ರವರ ವಂಶಸ್ಥರಾದ ಸೈಯದ್ ಹಸನ್ ಸಖಾಫ್ ಎಂಬ ಮತ್ತೊಬ್ಬ ಸಂತರ ದರ್ಗಾವನ್ನು ಕೂಡ ಕಾಣಬಹುದು. ಈ ಮಸೀದಿಯು ಸೂಫಿ ಶಹೀದ್ ದರ್ಗಾ ಶರೀಫ್ಗೆ ತೆರಳುವ ಮಾರ್ಗದ ಬಲಬದಿಯಲ್ಲಿದೆ. ಬಹಳ ವರ್ಷಗಳ ಹಿಂದಿನ ದರ್ಗಾಗಳನ್ನು ಪುನರ್ರಚಿಸಲಾಗಿದೆ. ಒಟ್ಟಾರೆ ಇಂತಹದೊಂದು ಕ್ಷೇತ್ರವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಹೀಗಾಗಿ ಈ ಪವಿತ್ರ ಸ್ಥಳಕ್ಕೆ ಆಗಮಿಸಿ ಸೂಫಿ ಶಹೀದ್ ಸಂತರ ದರ್ಗಾವನ್ನು ದರ್ಶನ ಮಾಡಿಕೊಂಡು ಜನರು ಹಿಂತಿರುಗುತ್ತಾರೆ. ದೂರದಿಂದ ಇಲ್ಲಿಗೆ ಸ್ವಂತ ವಾಹನ ಅಥವಾ ಬಸ್ ನಲ್ಲಿ ಬರಬಹುದಾಗಿದೆ. ನಾಪೋಕ್ಲಿನಿಂದ ಖಾಸಗಿ ವಾಹನಗಳಲ್ಲಿಯೂ ತೆರಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+