ಕೊಡಗಿನಲ್ಲಿರುವ ಅಪರೂಪದ ಅರಮನೆ: ಈ ಸ್ಥಳದ ವಿಶೇಷತೆ ಏನು ಗೊತ್ತಾ?
ಮಡಿಕೇರಿ, ಜನವರಿ 16: ಸಾಮಾನ್ಯವಾಗಿ ಅರಮನೆಗಳು ಪಟ್ಟಣಕ್ಕೆ ಹತ್ತಿರದಲ್ಲಿರುತ್ತವೆ. ಅಷ್ಟೇ ಅಲ್ಲದೆ ಅವುಗಳ ಸದಾ ಪ್ರವಾಸಿಗರಿಂದ ಕೂಡಿರುತ್ತವೆ. ಆದರೆ ಕೊಡಗಿನಲ್ಲಿರುವ ಅರಮನೆಯೊಂದು ಕಾಡಿನ ನಡುವೆಯಿದ್ದು ಈಗಲೂ ಸುಸ್ಥಿತಿಯಲ್ಲಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ. ಕೊಡಗನ್ನು ಆಳುತ್ತಿದ್ದ ಅರಸರ ನೆನಪಿನ ಕುರುಹು ಆಗಿ, ಇತಿಹಾಸ ಕಥೆ ಹೇಳುತ್ತಿರುವ ಈ ಅರಮನೆಯನ್ನು ನೋಡುವುದು ಅಷ್ಟು ಸುಲಭವಲ್ಲ.
ಇಲ್ಲಿಗೆ ತೆರಳುವುದೇ ಒಂದು ಸಾಹಸ. ಕಾರಣ ಇದು ನಗರದ ನಡುವೆಯಿಲ್ಲದೆ ಅವತ್ತಿನ ಕಾನನ ಇವತ್ತಿನ ಕಾಫಿ ತೋಟಗಳ ನಡುವೆ ನಾಪೋಕ್ಲು ಸಮೀಪದ ಕಕ್ಕಬ್ಬೆಯ ಬಳಿಯಲ್ಲಿದೆ. ಈ ಅರಮನೆಯನ್ನು ನಾಲ್ಕುನಾಡು ಅರಮನೆ ಎಂದೇ ಕರೆಯಲಾಗುತ್ತದೆ. ಮೇಲ್ನೋಟಕ್ಕೆ ಕೊಡಗಿನ ಸಾಂಪ್ರದಾಯಿಕ ಐನ್ಮನೆಗಳಂತೆ ಕಾಣುತ್ತದೆ. ಜತೆಗೆ ಕರ್ನಾಟಕದಲ್ಲಿರುವ ಅರಮನೆಗಳಿಗೆ ಹೋಲಿಸಿದರೆ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.

ಕೊಡಗಿನ ಅತ್ಯಂತ ಎತ್ತರದ ಬೆಟ್ಟವಾದ ತಡಿಯಂಡಮೋಳ್ ಬೆಟ್ಟಶ್ರೇಣಿಗಳ ನಡುವೆ ಯುವಕಪಾಡಿ ಗ್ರಾಮದ ಎತ್ತರವಾದ ಗುಡ್ಡದ ಮೇಲೆ ನಿರ್ಮಾಣವಾಗಿರುವ ಈ ಅರಮನೆಯನ್ನು ನೋಡಿದವರಿಗೆ ದಟ್ಟ ಕಾನನದ ನಡುವೆ ಇಂತಹ ಅರಮನೆಯನ್ನೇಕೆ ನಿರ್ಮಿಸಿರಬಹುದು ಎಂಬ ಪ್ರಶ್ನೆಗಳು ಮೂಡುತ್ತವೆ. ಆದರೆ ಅರಮನೆಯ ಇತಿಹಾಸ ತಿಳಿಯುತ್ತಾ ಹೋದರೆ ಅದಕ್ಕೆ ಉತ್ತರವೂ ಸಿಗುತ್ತದೆ.
ಅರಮನೆಯ ಬಗ್ಗೆ ಇತಿಹಾಸ ಹೇಳುವುದೇನು?
ಈ ಅರಮನೆಯ ನಿರ್ಮಾಣದ ಕುರಿತಂತೆ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಒಂದಷ್ಟು ರೋಮಾಂಚನಕಾರಿ ಸಂಗತಿಗಳು ಹೊರಬೀಳುತ್ತವೆ. ಶ್ರೀಮಂತ ನಾಡಾದ ಕೊಡಗನ್ನು ವಶಪಡಿಸಿಕೊಳ್ಳುವುದು ಟಿಪ್ಪುಸುಲ್ತಾನನ ಉದ್ದೇಶವಾಗಿತ್ತು. ಹಾಗಾಗಿ ಕೊಡಗನ್ನು ಆಳುತ್ತಿದ್ದ ಅರಸರ ಮನೆತನದವನಾದ ದೊಡ್ಡ ವೀರರಾಜೇಂದ್ರನನ್ನು ಸೆರೆಹಿಡಿದ ಟಿಪ್ಪುಸುಲ್ತಾನ್ ಪಿರಿಯಾಪಟ್ಟಣದ ಕೋಟೆಯಲ್ಲಿ ಬಂಧಿಸಿಟ್ಟನು. ಆದರೆ 1791-92ರಲ್ಲಿ ಆಂಗ್ಲೋ-ಮೈಸೂರು ಯುದ್ದದ ಸಮಯದಲ್ಲಿ ಟಿಪ್ಪುಸುಲ್ತಾನನ ಸೆರೆಯಿಂದ ಕುಟುಂಬ ಸಮೇತ ತಪ್ಪಿಸಿಕೊಂಡಿದ್ದನು.
ಹೀಗೆ ಸೆರೆಮನೆಯಿಂದ ತಪ್ಪಿಸಿಕೊಂಡು ಬಂದ ದೊಡ್ಡವೀರರಾಜೇಂದ್ರನು ಕೊಡಗಿನ ಕುರ್ಚಿ ಎಂಬ ಗ್ರಾಮಕ್ಕೆ ಬಂದನಾದರೂ ಆ ವೇಳೆಗೆ ಅಲ್ಲಿದ್ದ ಅರಮನೆ ನಾಶವಾಗಿದ್ದರಿಂದ ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸುಭದ್ರ ತಾಣವೊಂದನ್ನು ಅರಸುತ್ತಾ ತನ್ನ ಸೇನಾಪರಿವಾರದೊಂದಿಗೆ ಬಂದಾಗ ಆತನ ಕಣ್ಣಿಗೆ ಬಿದ್ದಿದ್ದು ತಡಿಯಂಡಮೋಳ್ ಶ್ರೇಣಿಯ ಸಮತಟ್ಟು ಜಾಗವಾದ ಯುವಕಪಾಡಿ.

ಒಂದು ಕ್ಷಣ ನಿಂತು ಕಣ್ಣಾಯಿಸಿದ ರಾಜನಿಗೆ ಬೆಟ್ಟಶ್ರೇಣಿಗಳಿಂದ ಹಾಗೂ ದಟ್ಟವಾದ ಅರಣ್ಯದಿಂದ ಸುತ್ತುವರಿದ ಈ ತಾಣ ಅರಮನೆ ನಿರ್ಮಿಸಲು ಸೂಕ್ತ ಸ್ಥಳವಾಗಿ ಕಂಡು ಬಂದಿತು. ಕೂಡಲೇ ಅರಮನೆ ನಿರ್ಮಾಣ ಮಾಡಲು ಸೇವಕರಿಗೆ ಆಜ್ಞೆ ಮಾಡಿದನು. ಅಂದು ನಿರ್ಮಾಣಗೊಂಡ ಮನೆಯೇ ನಾಲ್ಕುನಾಡು ಅರಮನೆಯಾಗಿದೆ.
ರಾಜರ ಕಾಲದಲ್ಲಿ ಹುಲ್ಲಿನ ಅರಮನೆ
ದೊಡ್ಡ ವೀರರಾಜೇಂದ್ರನಿಂದ ನಿರ್ಮಿಸಲ್ಪಟ್ಟ ಈ ಅರಮನೆಯು ಮೊದಲು ಹುಲ್ಲಿನ ಹೊದಿಕೆಯನ್ನು ಹೊಂದಿತ್ತು. ಆ ನಂತರ ಬ್ರಿಟೀಷರ ಕಾಲದಲ್ಲಿ ಅದಕ್ಕೆ ಹೆಂಚಿನ ಹೊದಿಕೆಯನ್ನು ಹಾಕಲಾಯಿತು. ಎರಡು ಪ್ರವೇಶದ್ವಾರವಿರುವ ಈ ಅರಮನೆಯು ಎರಡು ಅಂತಸ್ತುಗಳನ್ನು ಹೊಂದಿದ್ದು, ಮೇಲಿನ ಅಂತಸ್ತಿನಲ್ಲಿ ಸುಂದರ ಕೆತ್ತನೆಗಳನ್ನು ಕಾಣಬಹುದು. ಇಲ್ಲಿ ಚಿಕ್ಕ ಹಾಗೂ ಚೊಕ್ಕದಾದ ವಿನ್ಯಾಸಗಳಿಂದ ಕೂಡಿದ ಹಲವು ಕೋಣೆಗಳಿವೆ. ಸುಂದರ ವರ್ಣ ಲೇಪನವನ್ನು ಹೊಂದಿರುವ ಛಾವಣಿ ಕೂಡ ಮರದಿಂದಲೇ ನಿರ್ಮಾಣವಾಗಿದೆ. ಇನ್ನು ಸುತ್ತಲಿನ ಗೋಡೆಗಳು ಆಕರ್ಷಕವಾಗಿದ್ದು ವೀಕ್ಷಕರ ಮನಸೆಳೆಯುತ್ತವೆ.
ಅರಮನೆಯಲ್ಲಿ ಸುಮಾರು 14ಚಿಕ್ಕ ಕೋಣೆಗಳು ಹಾಗೂ ಹಿಂಭಾಗದಲ್ಲಿ ನಾಲ್ಕು ಕತ್ತಲೆ ಕೋಣೆಗಳನ್ನು ಕಾಣಬಹುದು. ರಾಜರ ಕಾಲದಲ್ಲಿ ತಪ್ಪಿತಸ್ಥರನ್ನು ಈ ಕೋಣೆಯಲ್ಲಿ ಬಂಧಿಸಿಡುತ್ತಿದ್ದರೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಛಾವಣಿಯು ಷಟ್ಕೋನಾಕಾರದಲ್ಲಿದ್ದು, ಹನ್ನೆರಡು ಬೃಹತ್ ಕಂಬಗಳ ಮೇಲೆ ನಿಂತಿದೆ. ಉಬ್ಬು ಶಿಲ್ಪಗಳು ಕಂಬದ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಕಿಟಿಕಿ ಹಾಗೂ ಬಾಗಿಲುಗಳು ವಿಶಿಷ್ಟ ಕೆತ್ತನೆಗಳಿಂದ ಕೂಡಿದ್ದು, ಆ ಕಾಲದ ಕಲಾನೈಪುಣ್ಯತೆಗೆ ಹಿಡಿದ ಕೈಕನ್ನಡಿಯಾಗಿದೆ.

ಇಲ್ಲಿದೆ ಸುಂದರ ವಿವಾಹ ಮಂಟಪ
ಅರಮನೆಯ ಮೊದಲ ಹಜಾರದಲ್ಲಿ ಕಾಣ ಸಿಗುವ ಕಲಾ ಕೆತ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜವೈಭವಗಳನ್ನು ಸಾರುವ ಚಿತ್ರಗಳು ಅಲ್ಲಿವೆ. ಅಂಬಾರಿಯಲ್ಲಿ ಕುಳಿತ ರಾಜ. ಆತನ ಹಿಂದೆ ಹಾಗೂ ಮುಂದೆ ವಾದ್ಯವೃಂದದೊಂದಿಗೆ ಸಾಗುವ ಸೈನ್ಯದ ದೃಶ್ಯಗಳು ಕಂಡು ಬರುತ್ತವೆ. ಸಂಪೂರ್ಣ ಮರದಿಂದಲೇ ನಿರ್ಮಾಣವಾಗಿರುವುದು ಈ ಅರಮನೆಯ ವಿಶೇಷತೆಯಾಗಿದೆ.
ಇದೆಲ್ಲದರ ನಡುವೆ ಅರಮನೆಯ ಮುಂಭಾಗದಲ್ಲಿ ಚೌಕಾಕಾರದ ಕಿರುಮಂಟಪವಿದ್ದು, ಇದಕ್ಕೆ ನಾಲ್ಕು ಪ್ರವೇಶ ದ್ವಾರಗಳಿವೆ. ಮಂಟಪದ ಮೇಲ್ಭಾಗದಲ್ಲಿ ನಾಲ್ಕು ದಿಕ್ಕಿಗೂ ಮಲಗಿರುವ ಬಸವನ ಮೂರ್ತಿಯಿದೆ. ಇನ್ನು ಈ ಕಿರುಮಂಟಪವನ್ನು ವಿವಾಹಮಂಟಪ ಎಂದು ಕೂಡ ಕರೆಯಲಾಗುತ್ತದೆ. ಈ ಮಂಟಪದಲ್ಲಿ 1796ರ ಮಾಘ ಶುದ್ಧ ಭಾನುವಾರ ರಾತ್ರಿ 19ಗಳಿಗೆ ವೃಶ್ಚಿಕ ಲಗ್ನದಲ್ಲಿ ರಾಜಪುರೋಹಿತ ಶಿವಲಿಂಗಸ್ವಾಮಿ ಅವರ ಸಮ್ಮುಖದಲ್ಲಿ ದೊಡ್ಡವೀರರಾಜೇಂದ್ರ ಮತ್ತು ಮಹದೇವಮ್ಮಾಜಿಯವರ ವಿವಾಹ ನಡೆದಿತ್ತು ಎಂದು ಹೇಳಲಾಗಿದೆ.
ಚಾರಣಕ್ಕೆ ಇಲ್ಲಿಂದಲೇ ತೆರಳಬಹುದು
ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿರುವ ಈ ನಾಲ್ಕುನಾಡು ಅರಮನೆಗೆ ಕಳೆದ ಕೆಲವು ವರ್ಷಗಳ ಹಿಂದೆ ಕಾಯಕಲ್ಪ ನೀಡಲಾಗಿದೆ. ಅದಕ್ಕೂ ಮೊದಲು ಇಲ್ಲಿ ಕೆಲವರು ನಿಧಿ ಆಸೆಗಳಿಗಾಗಿ ಅಲ್ಲಲ್ಲಿ ಅಗೆದು, ಅರಮನೆಗೆ ಧಕ್ಕೆ ತಂದಿದ್ದರು. ಕಾಯಕಲ್ಪ ನೀಡಿದ ಬಳಿಕ ಶಿಥಿಲಾವಸ್ಥೆಯತ್ತ ತೆರಳುತ್ತಿದ್ದ ಅರಮನೆಗೆ ಹೊಸಕಳೆ ಬಂದಿದೆ. ಮೊದಲೆಲ್ಲಾ ಇಲ್ಲಿಗೆ ಹೋಗುವುದೆಂದರೆ ಪ್ರಯಾಸದ ಕೆಲಸವಾಗಿತ್ತು. ಏಕೆಂದರೆ ಸರಿಯಾದ ರಸ್ತೆಯಾಗಲೀ, ವಸತಿ ವ್ಯವಸ್ಥೆಯಾಗಲೀ ಇರಲಿಲ್ಲ. ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳುವವರು ಇಲ್ಲಿಗೆ ಬಂದು ವಾಸ್ತವ್ಯ ಹೂಡುತ್ತಿದ್ದರಷ್ಟೆ. ಈಗ ಹಾಗಿಲ್ಲ ದೂರದಿಂದ ಬರುವ ಪ್ರವಾಸಿಗರು ವಾಸ್ತವ್ಯ ಹೂಡಲೆಂದೇ ಹಲವು ಹೋಂಸ್ಟೇಗಳಾಗಿವೆ.
ಮಳೆಗಾಲದಲ್ಲಿ ಒಂದು ಜಲಪಾತ ಅರಮನೆ ಬಳಿಯ ಗುಡ್ಡದಿಂದ ಧುಮುಕಿದರೆ, ಮತ್ತೊಂದು ಜಲಪಾತ ಅರಮನೆ ಮುಂದಿನ ರಸ್ತೆಯಲ್ಲಿ ಸುಮಾರು ಮೂರು ಕಿ.ಮೀ.ನಷ್ಟು ಸಾಗಿದರೆ ಸಿಗುತ್ತದೆ. ಈ ಸುಂದರ ಜಲಪಾತವನ್ನು ಸ್ಥಳೀಯರು ಮಾದಂಡಅಬ್ಬಿ ಎಂದು ಕರೆಯುತ್ತಾರೆ. ಇನ್ನು ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳುವವರು ಇಲ್ಲಿಂದಲೇ ತಮ್ಮ ಚಾರಣವನ್ನು ಆರಂಭಿಸಬಹುದಾಗಿದೆ.
ಅರಮನೆ ಬಳಿಗೆ ತೆರಳುವುದು ಹೇಗೆ?
ದೂರದ ಪ್ರವಾಸಿಗರನ್ನು ಇನ್ನಷ್ಟು ಸೆಳೆಯಬೇಕಾದರೆ ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಅಗತ್ಯವಿದೆ. ಪೇಟೆ ಪಟ್ಟಣದ ಗೌಜುಗದ್ದಲದಿಂದ ದೂರವಿರುವುದರಿಂದ ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಾರದೆಯಿರುವುದರಿಂದ ಇಲ್ಲಿ ಸದಾ ನೀರವ ಮೌನ ಮನೆಮಾಡಿರುತ್ತದೆ. ಈ ವ್ಯಾಪ್ತಿಯಲ್ಲಿ ಹೋಂಸ್ಟೇಗಳು ಇರುವುದರಿಂದ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ತೊಂದರೆಯಾಗುವುದಿಲ್ಲ. ಮಡಿಕೇರಿಯಿಂದ ನಲವತ್ತು ಕಿ.ಮೀ.ಗಳ ದೂರದಲ್ಲಿರುವ ಮಡಿಕೇರಿಯಿಂದ ನಾಪೋಕ್ಲು- ಕಕ್ಕಬ್ಬೆ ಮೂಲಕ ತೆರಳಬಹುದಾಗಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications