ಸೆಪ್ಟೆಂಬರ್ 17ರಿಂದ ಅಕ್ಟೋಬರ್ 16ರ ವರೆಗೆ ಈ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ರದ್ದು-ಮಾಹಿತಿ ಇಲ್ಲಿದೆ
ಬೆಂಗಳೂರು, ಸೆಪ್ಟೆಂಬರ್, 13: ಸಾಮಾನ್ಯವಾಗಿ ರೈಲುಗಳ ಹಳಿ ಅಳವಡಿಕೆ, ವಿದ್ಯುತ್ ಅಳವಡಿಕೆಯಂತಹ ಮಾರ್ಗಗಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರೈಲುಗಳ ಸೇವೆಯನ್ನು ರದ್ದುಪಡಿಸಲಾಗುತ್ತದೆ. ಹಾಗೆಯೇ ಇದೀಗ ಕಾಮಗಾರಿ ಹಿನ್ನೆಲೆ ಈ ನಿಲ್ದಾಣದಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 16ರ ವರೆಗೆ ರೈಲುಗಳ ನಿಲುಗಡೆಯನ್ನು ರದ್ದು ಮಾಡಲಾಗಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ರಾಜಾನಕುಂಟೆ ನಿಲ್ದಾಣದಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 16ರ ವರೆಗೆ ಈ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಯನ್ನು ರದ್ದು ಮಾಡಲಾಗಿದೆ.

ಹಿಂದೂಪುರ-ಕೆಎಸ್‌ಆರ್ ಬೆಂಗಳೂರು ಮೆಮು, ಶ್ರೀ ಸತ್ಯಬಾಯಿ ಪ್ರಶಾಂತಿ ನೀಲಯಂ-ಕೆಎಸ್‌ಆರ್ ಬೆಂಗಳೂರು ಮೆಮು, ಧರ್ಮಾವರಂ-ಕೆಎಸ್‌ಆರ್ ಬೆಂಗಳೂರು ಮೆಮು ರೈಲುಗಳು ಇಲ್ಲಿ ನಿಲುಗಡೆ ಹೊಂದಿದ್ದು, ಒಂದು ತಿಂಗಳ ಅವಧಿಯಲ್ಲಿ ನಿಲುಗಡೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗಾವಿಗೆ ವಂದೇ ಭಾರತ್ ಸೇವೆ ಯಾವಾಗ.?: ವಂದೇ ಭಾರತ್ ಎಕ್ಸ್‌ಪ್ರೆಸ್ ಐಷಾರಾಮಿ, ಹೈಸ್ಪೀಡ್ ರೈಲು ಆಗಿ ಗುರುತಿಸಿಕೊಂಡಿದೆ. ಇನ್ನೂ ಇದೀಗ ಬಹುದಿನಗಳ ಬೇಡಿಕೆಯಾಗಿದ್ದ ಪುಣೆ-ಹುಬ್ಬಳ್ಳಿ-ಬೆಳಗಾವಿ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆಯ ಬೇಡಿಕೆ ಈಡೇರುವ ಸಮಯ ಹತ್ತಿರದಲ್ಲಿ. ಇನ್ನು ಬೆಂಗಳೂರಿನಿಂದ-ಬೆಳಗಾವಿಗೆ ಈ ಸೇವೆಯನ್ನು ಶೀಘ್ರದಲ್ಲೇ ವಿಸ್ತರಿಸಲಾಗುವುದು ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬಹುನಿರೀಕ್ಷಿತ ಪುಣೆ-ಬೆಳಗಾವಿ ಮತ್ತು ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಸೇವೆಯ ಆರಂಭವು ಕೊನೆಗೂ ಕಾರ್ಯರೂಪಕ್ಕೆ ಬಂದಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು. ಇನ್ನು ಸೆಪ್ಟೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಲಿದ್ದು, ಜಗದೀಶ್ ಶೆಟ್ಟರ್ ಅವರು ಬೆಳಗಾವಿ ರೈಲು ನಿಲ್ದಾಣದಲ್ಲಿ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಗೆಷ್ಟೇ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅವರೊಂದಿಗೆ ಚರ್ಚೆ ನಡೆಸಿದ್ದರು. ಇನ್ನು ಜಗದೀಶ್ ಶೆಟ್ಟರ್ ಅವರು ಬೆಂಗಳೂರು-ಧಾರವಾಡದ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿಗೆ ವಿಸ್ತರಿಸಲು ಮನವಿ ಮಾಡಿದ್ದರು.
ಇದೀಗ ಪುಣೆ-ಹುಬ್ಬಳ್ಳಿ ಮಾರ್ಗಕ್ಕೆ ಅನುಮೋದನೆ ದೊರೆತಿದ್ದು, ಬೆಂಗಳೂರು-ಧಾರವಾಡದ ರೈಲು ಸೇವೆಯನ್ನು ಬೆಳಗಾವಿಗೆ ವಿಸ್ತರಿಸುವ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಸೂಚನೆ ನೀಡಿದ್ದಾರೆ.
"ಈ ಹಿಂದೆ ಅರಣ್ಯ ಪ್ರದೇಶಗಳು, ಟ್ರ್ಯಾಕ್ ಸಮಸ್ಯೆ, ತಾಂತ್ರಿಕ ಸವಾಲುಗಳನ್ನು ಎದುರಿಸಲಾಗಿದ್ದು, ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾರ್ಗವನ್ನು ಸ್ಥಾಪನೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಇನ್ನು ಅಸ್ತಿತ್ವದಲ್ಲಿರುವ ಮಾರ್ಗದಲ್ಲಿ ರೈಲು ಕಾರ್ಯನಿರ್ವಹಿಸಲು ನಾವು ವಿನಂತಿಸಿದ್ದೇವೆ ಮತ್ತು ಅದಕ್ಕೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲಾಗಿದೆ," ಎಂದು ಅವರು ಹೇಳಿದರು.












Click it and Unblock the Notifications