ರೈಲು 4 ಗಂಟೆ ವಿಳಂಬ; ಅಧಿಕಾರಿಗೆ ಕ್ಷಮೆ ಕೋರಲು ಸೂಚನೆ!
ಧಾರವಾಡ, ಫೆಬ್ರವರಿ 04: ರೈಲು 4 ಗಂಟೆ ವಿಳಂಬವಾಗಿ ಪ್ರಯಾಣಿಕರೊಬ್ಬರು ಮಾನಸಿಕ ಕಿರಿಕಿರಿ ಅನುಭವಿಸಿದ್ದರು. ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಈ ಕುರಿತು ದೂರು ಸಲ್ಲಿಕೆಯಾಗಿತ್ತು. ದೂರು ಆಲಿಸಿದ ಆಯೋಗ ರೈಲ್ವೆ ಅಧಿಕಾರಿಗೆ ಸೂಚನೆಯೊಂದನ್ನು ನೀಡಿದೆ.
ಧಾರವಾಡದ ಮಾಳಮಡ್ಡಿ ನಿವಾಸಿ ಪ್ರಕಾಶ ಉಪ್ಪಾರ ಎಂಬುವವರು ಜರ್ಮನಿಯಲ್ಲಿ ನೆಲಸಿ, ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು. ಮದುವೆ ಮುಗಿದ ನಂತರ ಜರ್ಮನಿಗೆ ಮರಳಲು ಮುಂಬೈನಿಂದ ವಿಮಾನವನ್ನು 28/11/2022ರಂದು ಬುಕ್ ಮಾಡಿದ್ದರು.

ಧಾರವಾಡದಿಂದ ಮುಂಬೈ ತಲುಪಲು ರೈಲು ನಂಬರ್ 17317ರಲ್ಲಿ 3ನೇ ಎಸಿ ಬುಕ್ ಮಾಡಿಸಿದ್ದರು. ಆದರೆ ರೈಲು ನಿಗದಿತ ವೇಳೆಗಿಂತ 4 ಗಂಟೆ ತಡವಾಗಿ ದಾದರ್ ರೇಲ್ವೆ ಸ್ಟೇಷನ್ ತಲುಪಿತ್ತು. ಇದರಿಂದ ದೂರುದಾರರಿಗೆ ವಿಮಾನ ನಿಲ್ದಾಣದ ಒಳಗಡೆ ಹೋಗಲು ಅನಾನುಕೂಲ ಜೊತೆಗೆ ಮಾನಸಿಕ ಕಿರಿಕಿರಿ ಉಂಟಾಗಿತ್ತು.
ಗ್ರಾಹಕ ಆಯೋಗಕ್ಕೆ ದೂರು; ಪ್ರಕಾಶ ಉಪ್ಪಾರ ವಿಮಾನ ಹೊರಡುವ ಕೆಲವೇ ಕ್ಷಣಗಳ ಮೊದಲು ವಿಮಾನ ನಿಲ್ದಾಣದ ಸಿಬ್ಬಂದಿಗಳನ್ನು ವಿನಂತಿಸಿ ಜರ್ಮನಿಗೆ ಪ್ರಯಾಣ ಬೆಳೆಸಿದ್ದರು. ದೂರುದಾರನಿಗೆ ಲಗೇಜುಗಳನ್ನು ಆತ ಜರ್ಮನಿ ತಲುಪಿದ 2 ದಿನಗಳ ನಂತರ ತಡವಾಗಿ ಬೇರೆ ವಿಮಾನದ ಮೂಲಕ ಕಳುಹಿಸಿಕೊಡಲಾಗಿತ್ತು.
ರೈಲ್ವೆ ಇಲಾಖೆಯವರ ಈ ರೀತಿಯ ವಿಳಂಬ ಧೋರಣೆಯಿಂದ ತಾನು ಮಾನಸಿಕ ಕಿರಿಕಿರಿ ಅನುಭವಿಸುವಂತಾಯಿತು. ಕಾರಣ ಇಲಾಖೆಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಕಾಶ ಉಪ್ಪಾರ 26/04/2023ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿಗೆ ಆಕ್ಷೇಪಣೆ ಸಲ್ಲಿಸಿದ್ದ ರೈಲ್ವೆ ಇಲಾಖೆ ತಾವು ದೇಶದಲ್ಲಿ ಸಂಚರಿಸುವ ಯಾವುದೇ ರೈಲುಗಳ ಆಗಮನ ಮತ್ತು ನಿರ್ಗಮನದ ಗ್ಯಾರಂಟಿ ಕೊಡುವುದಿಲ್ಲ. ಅಲ್ಲದೇ ರೈಲ್ವೆ ಇಲಾಖೆ ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರದ ಮಧ್ಯೆ ಯಾವುದೇ ಒಪ್ಪಂದ ಇರುವುದಿಲ್ಲ. ಅಷ್ಟಕ್ಕೂ ದೂರುದಾರ ಸಂಚರಿಸುತ್ತಿದ್ದ ರೈಲು ನಂಬರ್ 17317 ತಾಂತ್ರಿಕ ಕಾರಣಗಳಿಂದ 4 ಗಂಟೆ ವಿಳಂಬವಾಗಿ ಮುಂಬೈ ತಲುಪಿತ್ತು. ಇದರಲ್ಲಿ ಇಲಾಖೆ ಯಾವುದೇ ಸೇವಾ ನ್ಯೂನ್ಯತೆ ಎಸಗಿರುವುದಿಲ್ಲ ಎಂದು ಆಕ್ಷೇಪಣೆಯಲ್ಲಿ ವಿವರಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ ಹಿರೇಮಠ ಸದಸ್ಯರು, ರೈಲು ನಿಗದಿತ ವೇಳೆಗೆ ಮುಂಬೈ ತಲುಪದೇ ಇದ್ದರೂ ಸಹ ದೂರುದಾರ ತಾನು ಪ್ರಯಾಣಿಸುವ ವಿಮಾನದ ಮೂಲಕ ವಿದೇಶ ಪ್ರಯಾಣ ಬೆಳೆಸುವಲ್ಲಿ ಸಫಲನಾಗಿದ್ದಾನೆ ಎಂದು ಹೇಳಿದೆ.
ಆದರೆ ರೈಲು ವಿಳಂಬದಿಂದಾಗಿ ಆತ ವಿಮಾನ ನಿಲ್ದಾಣ ತಲುಪಲು ಅನಾನುಕೂಲ ಮತ್ತು ಮಾನಸಿಕ ಯಾತನೆ ಅನುಭವಿಸಿದ್ದರೂ ಸಹ ಎದುರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಅನ್ನುವುದನ್ನು ಒಪ್ಪಲಾಗುವುದಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ದೂರುದಾರನ ದೂರನ್ನು ವಜಾಗೊಳಿಸಿ ಆದೇಶ ನೀಡಿರುವುದರ ಜೊತೆಗೆ ರೈಲು ವಿಳಂಬಕ್ಕಾಗಿ ಸಂಬಂಧಿಸಿದ ರೈಲ್ವೆ ಅಧಿಕಾರಿ ದೂರುದಾರನ ಕ್ಷಮೆ ಯಾಚಿಸಬೇಕು ಎಂದು ನಿರ್ದೇಶಿಸಿದೆ.











Click it and Unblock the Notifications