ಮಂಜಿನಿಂದ ಆವರಿಸಿದ ಗೋಪಾಲಸ್ವಾಮಿ ಬೆಟ್ಟದ ಮೇಲೆ ಪ್ರವಾಸಿಗರ ಸಂಭ್ರಮ
ಗುಂಡ್ಲುಪೇಟೆ, ಜುಲೈ, 10: ವಾರಾಂತ್ಯ ಬಂತೆಂದರೆ ಸಾಕು ನಗರ ಪ್ರದೇಶಗಳಲ್ಲಿರುವ ಜನರು ಕೆಲಸದ ಒತ್ತಡದಿಂದ ಹೊರಬರಲು ಪ್ರವಾಸಿ ತಾಣಗಳತ್ತ ಲಗ್ಗೆ ಇಡುತ್ತಾರೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿನ ಜನರಂತೂ ಹೆಚ್ಚಾಗಿ ವಾರಾಂತ್ಯ ಪ್ರವಾಸ ಕೈಗೊಳ್ಳಲು ಬಯಸುತ್ತಾರೆ. ಅದೇ ರೀತಿ ಬೆಂಗಳೂರಿನ ಸಮೀಪದಲ್ಲಿರುವ ಚಾಮರಾಜನಗರ ಜಿಲ್ಲೆಯ ಗೋಪಾಲಸ್ವಾಮಿ ಬೆಟ್ಟಕ್ಕೆ ಶನಿವಾರ ಮತ್ತು ಭಾನುವಾರ ಪ್ರವಾಸಿಗರ ದಂಡೇ ಹರಿದುಬಂದಿತ್ತು.
ಹೋಗುವ ಚಿಂತೆಯಲ್ಲಿರುತ್ತಾರೆ. ಇನ್ನು ಚಿಂತೆ ಬಿಡಿ.. ಸಿಲಿಕಾನ್ ಸಿಟಿ ಬೆಂಗಳೂರಿನ ಸಮೀಪದ ಚಾಮರಾಜನಗರ ಜಿಲ್ಲೆಯಲ್ಲೇ ಇದೆ ವಾರಾಂತ್ಯಕ್ಕೆ ಸೂಕ್ತ ಪ್ರವಾಸಿ ತಾಣ. ಇಲ್ಲಿಗೆ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಆಗಮಿಸಿದ್ದರು.

ವಾರಾಂತ್ಯದ ರಜೆ ಹಾಗೂ ಆಷಾಢ ಮಾಸದ ಹಿನ್ನೆಲೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರು ಹಾಗೂ ಭಕ್ತರ ದಂಡು ಹರಿದು ಬಂದಿತ್ತು. ಎರಡನೇ ಶನಿವಾರದ ರಜೆ ಹಾಗೂ ಭಾನುವಾರ ಹಿನ್ನೆಲೆ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತಾಧಿಗಳು ಒಮ್ಮೆಲೆ ಆಗಮಿಸಿದ್ದರು.
ಇದರಿಂದ ಜನರು ಬೆಟ್ಟಕ್ಕೆ ತೆರಳಲು ತಪ್ಪಲಿನಲ್ಲಿ ಕಿ.ಮೀ ದೂರದವರೆಗೆ ಸರತಿ ಸಾಲಿನಲ್ಲಿ ಬಿಸಿಲಿನ ಮಧ್ಯೆಯೇ ನಿಂತಿದ್ದರು. ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಕೆಎಸ್‍ಆರ್‌ಟಿಸಿ ಬಸ್ ಇಲ್ಲದ ಕಾರಣ ಗಂಟೆಗಟ್ಟಲೇ ಕಾಯುವಂತಾಗಿತ್ತು. ಅರಣ್ಯ ಇಲಾಖೆ ವತಿಯಿಂದಲೂ ಸಹ ಬೆಟ್ಟಕ್ಕೆ ತರಳಲು ವಾಹನ ವ್ಯವಸ್ಥೆ ಕಲ್ಪಿಸಿದ್ದರು.
ಗೋಪಾಲಸ್ವಾಮಿ ಬೆಟ್ಟದ ಮೇಲು ಕೂಡ ಜನಜಂಗುಳಿ ಹೆಚ್ಚಿದ್ದ ಕಾರಣ ಪ್ರವಾಸಿಗರು ದೇವಸ್ಥಾನದ ಸುತ್ತಲೂ ಸರತಿ ಸಾಲಿನಲ್ಲಿ ನಿಂತು ನಂತರ ಗೋಪಾಲನ ದರ್ಶನ ಪಡೆದರು. ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ಟರು ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದರು. ಇನ್ನೂ ಭಕ್ತರಿಗೆ ಮಧ್ಯಾಹ್ನ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವೂ ಸಹ ನಡೆಯಿತು.
ಸೆಲ್ಫಿ ಮೊರೆ ಹೋದ ಪ್ರವಾಸಿಗರು
ಕಳೆದ ಮೂರ್ನಾಲ್ಕು ದಿನದಿಂದಲೂ ತಾಲೂಕಿನಲ್ಲಿ ಮೋಡ ಕವಿದ ಮಳೆಯ ವಾತಾವರಣವಿರುವ ಹಿನ್ನೆಲೆ ಗೋಪಾಲ ಸ್ವಾಮಿ ಬೆಟ್ಟದಲ್ಲಿ ಹಿಮದ ರಾಶಿ ಕವಿದಿತ್ತು. ದೇವಸ್ಥಾನದ ಸುತ್ತಲೂ ಅಚ್ಚಹಸಿರು ಕಂಗೊಳಿಸುತ್ತಿದ್ದ ಹಿನ್ನೆಲೆ ಇಲ್ಲಿ ಪ್ರವಾಸಿಗರು ಸ್ನೇಹಿತರೊಡನೆ ಹಾಗೂ ಕುಟುಂಬ ಸಮೇತರಾಗಿ ಪೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಬಂಡೀಪುರ ಸಫಾರಿಯಲ್ಲೂ ಜನಜಂಗುಳಿ
ತಾಲೂಕಿನ ಬಂಡೀಪುರ ಅಭಯಾರಣ್ಯದ ಸಫಾರಿಗೂ ಕೂಡ ವಾರಾಂತ್ಯದ ರಜೆ ಹಿನ್ನೆಲೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಸಫಾರಿಗೆ ತೆರಳಿದ್ದರು. ಶನಿವಾರ ಮತ್ತು ಭಾನುವಾರ ಎರಡು ದಿನವೂ ಹೆಚ್ಚಿನ ಮಂದಿ ಆಗಮಿಸಿದ ಕಾರಣ ಹಲವರು ಟಿಕೆಟ್ ಸಿಗದೆ ನಿರಾಶೆಯಿಂದ ವಾಪಾಸ್ ತೆರಳಿದ ಘಟನೆಗಳು ನಡೆದವು.
ಹೆಚ್ಚಿನ ಮಂದಿ ಆನ್‍ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ ಸಫಾರಿಗೆ ಬಂದಿದ್ದರು. ಸಫಾರಿಯಲ್ಲಿ 8 ಬಸ್, 5 ಜೀಪ್, ಮತ್ತು ಒಂದು ಕ್ಯಾಂಟ್ ವಾಹನಗಳು ಸಂಚರಿಸಿದವು. ಸಫಾರಿ ವೇಳೆ ಕಾಡಾನೆ, ಕಾಡೆಮ್ಮೆ, ನವಿಲು, ಜಿಂಕೆ ಸೇರಿದಂತೆ ಇನ್ನಿತರ ಹಲವು ಪ್ರಾಣಿಗಳು ಕಾಣಸಿಕ್ಕಿದವು ಎಂದು ಪ್ರವಾಸಿಗರಾದ ದೇವರಾಜ್ ತಿಳಿಸಿದರು.
ಬೆಟ್ಟಕ್ಕೆ ತಲುಪುವುದು ಹೇಗೆ?
ಗುಂಡ್ಲುಪೇಟೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟ 15 ಕಿಲೋ ಮೀಟರ್ ಇದ್ದು, ಬೆಟ್ಟದ ತಪ್ಪಲಿನಿಂದ ಸಾರಿಗೆ ಬಸ್‌ಗಳಲ್ಲಿ ಮಾತ್ರ ತಲುಪಲು ಅವಕಾಶ ಇದೆ. ಮೈಸೂರು, ಬೆಂಗಳೂರಿನಿಂದ ಗುಂಡ್ಲುಪೇಟೆಗೆ ನೇರವಾಗಿ ಬಸ್ ಸೌಲಭ್ಯವೂ ಇದೆ. ಚಾಮರಾಜನಗರದದಿಂದ ಅನತಿ ದೂರದಲ್ಲಿರುವ ಈ ತಾಣಕ್ಕೆ ಪ್ರತಿನಿತ್ಯವೂ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಅಷ್ಟೇ ಅಲ್ಲದೆ ಗೋಪಾಲಸ್ವಾಮಿ ದರ್ಶನ ಪಡೆದು, ನಂತರ ಇಲ್ಲಿನ ಅಚ್ಚಹಸಿರಿನ ವಾತಾವರಣದ ಮಧ್ಯ ಸ್ನೇಹಿತರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂಭ್ರಮಿಸುತ್ತಾರೆ.












Click it and Unblock the Notifications