ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರ ಜಿಲ್ಲೆಯಲ್ಲಿವೆ ಹೊಸವರ್ಷ ಆಚರಣೆಗೆ ಸೂಕ್ತ ಪ್ರವಾಸಿ ತಾಣಗಳು, ಇಲ್ಲಿದೆ ವಿವರ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಡಿಸೆಂಬರ್‌, 26: 2022ರ ಕಾಲಘಟ್ಟ ಮುಗಿಯುವ ಹಂತದಲ್ಲಿದ್ದು, 2023ರ ಸ್ವಾಗತಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷವನ್ನು ಕಿರು ಪ್ರವಾಸ ಹಮ್ಮಿಕೊಂಡು ಆಚರಿಸಿ ಮನೆ-ಮಂದಿಯೊಟ್ಟಿಗೆ ರಿಲ್ಯಾಕ್ಸ್ ಮೂಡಿಗೆ ಜಾರಬೇಕಂದರೆ ಇಲ್ಲಿವೆ ನೋಡಿ ನಿಮಗೆ ಇಷ್ಟವಾಗುವ ಪ್ರವಾಸಿ ತಾಣಗಳು.

ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಳಗ್ಗೆ ಮತ್ತು ಸಂಜೆ ಸಫಾರಿ ನಡೆಸಬಹುದಾಗಿದೆ. ಹೊಸವರ್ಷದ ಆರಂಭವನ್ನು ಹಸಿರು ನೋಡಿ ಕಳೆಯುವುದು ಒಂದು ಒಳ್ಳೆಯ ಯೋಚನೆ ಕೂಡ ಆಗಿದೆ. ಅಂದಹಾಗೆ, ಮೈಸೂರಿನಿಂದ 75 ಕಿಲೋ ಮೀಟರ್‌ ದೂರದಲ್ಲಿರುವ ಬಂಡೀಪುರಕ್ಕೆ ಸ್ವಂತ ವಾಹನದಲ್ಲಿ ಬರುವುದು ಹೆಚ್ಚು ಸೂಕ್ತವಾಗಿದೆ. ಆದರೂ ಇಲ್ಲಿಗೆ ಸಾರಿಗೆ ಸಂಸ್ಥೆಯ ಬಸ್‌ಗಳ ವ್ಯವಸ್ಥೆಯೂ ಕೂಡ ಇದೆ.

ಹೊಸವರ್ಷ ಆಚರಣೆಗೆ ಬೆಂಗಳೂರಿನ ಸುತ್ತಮುತ್ತ ಇರುವ ಟಾಪ್‌ ಪ್ರವಾಸಿ ತಾಣಗಳು, ತಲುಪುವ ಮಾರ್ಗಗಳ ವಿವರ ಇಲ್ಲಿದೆಹೊಸವರ್ಷ ಆಚರಣೆಗೆ ಬೆಂಗಳೂರಿನ ಸುತ್ತಮುತ್ತ ಇರುವ ಟಾಪ್‌ ಪ್ರವಾಸಿ ತಾಣಗಳು, ತಲುಪುವ ಮಾರ್ಗಗಳ ವಿವರ ಇಲ್ಲಿದೆ

ಹಾಗೆಯೇ ಬಂಡೀಪುರದ ಸಮೀಪ ಹಿಮವದ್ ಗೋಪಾಲಸ್ವಾಮಿ ಬೆಟ್ಟವಿದ್ದು, ಇಲ್ಲಿ ಮಧ್ಯಾಹ್ನ ಆದರೂ ಮಂಜು ಮುಸುಕಿದ ವಾತಾವರಣ ಇರುತ್ತದೆ. ಆದ್ದರಿಂದ ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಲೇ ಇರುತ್ತಾರೆ. ಈ ಮೂಲಕ ಹೊಸ ವರ್ಷವನ್ನು ಇಲ್ಲಿಯೇ ಆಚರಣೆ ಮಾಡುವುದು ಇನ್ನು ಸೂಕ್ತವಾಗಿದೆ. ಬೆಳಗ್ಗೆ ಬಂಡೀಪುರ ಸಫಾರಿ ಮುಗಿಸಿಕೊಂಡು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಹಾಗೂ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲವೇ ಬೆಳಗ್ಗೆ ಬೆಟ್ಟಕ್ಕೆ ತೆರಳಿ, ಸಂಜೆ ಬಂಡೀಪುರ ಸಫಾರಿಗೂ ಹೋಗಬಹುದು.

 ಹೊಸವರ್ಷ ಆಚರಣೆಗೆ ಸೂಕ್ತ ತಾಣಗಳು

ಹೊಸವರ್ಷ ಆಚರಣೆಗೆ ಸೂಕ್ತ ತಾಣಗಳು

ಹೊಸ ವರ್ಷಕ್ಕೆ ಆಧ್ಯಾತ್ಮಿಕವಾಗಿ ಬರಮಾಡಿಕೊಳ್ಳಬೇಕೆಂದರೆ ಗುಂಡ್ಲುಪೇಟೆ ತಾಲೂಕಿನಿಂದ 15 ಕೀಲೋ ಮೀಟರ್‌ ದೂರದಲ್ಲಿ ತೆರಕಣಾಂಬಿ ಎಂಬ ಊರಿದೆ. ಅಲ್ಲಿ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಾಲಯ, ಆಂಜನೇಯನ ಗುಡಿ, ಪ್ರಕೃತಿ ಮಡಿಲಲ್ಲಿ ಮಾಂಡವ್ಯ ಮಹಾಋಷಿಗಳ ತಪಃಶಕ್ತಿ ಇರುವ ಹುಲುಗನಮುರುಡಿ ವೆಂಕಟರಮಣ ಸ್ವಾಮಿ ಬೆಟ್ಟವನ್ನು ಕಾಣಬಹುದಾಗಿದೆ. ಇಲ್ಲಿಂದ 10 ಕಿಲೋ ಮೀಟರ್‌ ಅಂತರದಲ್ಲಿ ಕಂದೇಗಾಲ ಸಮೀಪ ಸ್ಕಂದಗಿರಿ ಅಥವಾ ಪಾರ್ವತಿ ಬೆಟ್ಟ ಎಂಬ ದೇವಾಲಯವಿದ್ದು, ಇಲ್ಲಿನ ಪ್ರಕೃತಿ ಸೊಬಗು ಪ್ರವಾಸಿಗರಿಗೆ ಹೊಸ ಅನುಭವ ಕೊಡಲಿದೆ.

 ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುವ ಬೆಟ್ಟ

ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುವ ಬೆಟ್ಟ

ಬೈಕ್ ರೈಡಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ ಪ್ರಕೃತಿಯ ಮಡಿಲಲ್ಲಿ ಇರುವ ಬಿಳಿಗಿರಿರಂಗನಾಥ ಬೆಟ್ಟವಾಗಿದೆ. ಯಳಂದೂರು ತಾಲೂಕಿನಲ್ಲಿರುವ ಈ ಬೆಟ್ಟ ಹಸಿರಿನಿಂದ ಸದಾ ಕೊಂಗೊಳಿಸುತ್ತಿರುತ್ತದೆ. ಇಲ್ಲಿನ ಕಾಡಿನ ನಡುವೆ ಬೈಕ್ ಹಾಗೂ ಕಾರು ಚಲಾಯಿಸುವ ಮಜಾವೇ ಬೇರೆ ಆಗಿರುತ್ತದೆ‌. ಅಂದಾಹಾಗೆ, ದಾರಿ ಮಧ್ಯೆ ವಾಹನ ನಿಲ್ಲಿಸಿ, ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ. ಆದರೆ ವಾಹನ ಚಾಲಾಯಿಸುವಾಗಲೇ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಬಿಳಿಗಿರಿರಂಗನ ಬೆಟ್ಟದ ಬಳಿಕ 20 ಕಿಲೋ ಮೀಟರ್‌ ದೂರದಲ್ಲಿ ಕೆ.ಗುಡಿ ಇದ್ದು, ಇಲ್ಲಿನ ಪ್ರಕೃತಿ ಮತ್ತೊಂದು ರಮ್ಯತೆಗೆ ಸಾಕ್ಷಿಯಾಗಲಿದೆ. ನೀವು ದೂರದಲ್ಲಿ ನಿಂತೇ ಆನೆ, ಕಾಡೆಮ್ಮೆ, ಜಿಂಕೆ, ಸೀಳುನಾಯಿಗಳನ್ನು ನೋಡಬಹುದಾಗಿದೆ.

 ಬಿದ್ದಾಂಜನೇಯ ದೇವಾಲಯಕ್ಕೆ ಹೋಗುವ ಮಾರ್ಗ

ಬಿದ್ದಾಂಜನೇಯ ದೇವಾಲಯಕ್ಕೆ ಹೋಗುವ ಮಾರ್ಗ

ಇನ್ನು ಯಳಂದೂರು ಪಟ್ಟಣದಲ್ಲಿರುವ ಬಳೆಮಂಟಪವು ವಾಸ್ತುಶಿಲ್ಪದ ಹೆಮ್ಮೆಯಾಗಿದೆ. ಕಲ್ಲಿನಲ್ಲಿ ಸರಪಳಿ ಮಾಡಿ ತೂಗು ಹಾಕಿರುವುದು ಇಲ್ಲಿನ ವಿಶೇಷವಾಗಿದೆ. ದಿವಾನ್ ಪೂರ್ಣಯ್ಯನವರ ಮ್ಯೂಸಿಯಂ ಕೂಡ ಪಟ್ಟಣದಲ್ಲಿ ಇದೆ. ಯಳಂದೂರಿನಿಂದ 10-15 ಕಿಲೋ ಮೀಟರ್‌ ದೂರದಲ್ಲಿ ಬಿದ್ದಾಂಜನೇಯ ಸ್ವಾಮಿ ದೇವಾಲಯವಿದೆ. ಇದು ತುಂಬಾ ಐತಿಹಾಸಿಕ ದೇವಾಲಯವಾಗಿದ್ದು, ಇಲ್ಲಿನ ಆಂಜನೇಯ ಸ್ವಾಮಿ ಕೇಳಿದ್ದನ್ನು ಕರಿಣಿಸುತ್ತಾನೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ. ಹಾಗೆಯೇ ಹೊಸ ವರ್ಷವನ್ನು ಜಲಪಾತ ಕಂಡು ಸ್ವಾಗತಿಸಬೇಕೆಂದರೆ, ಕೊಳ್ಳೇಗಾಲದಿಂದ 20 ಕಿಲೋ ಮೀಟರ್‌ ದೂರದಲ್ಲಿ ಭರಚುಕ್ಕಿ ಜಲಪಾತವಿದೆ. ಕಾವೇರಿಯ ವಿಹಂಗಮ ನೋಟ, ಜಲವಿದ್ಯುತ್ ಗಾರ, ಮಧ್ಯರಂಗ, ಶಿಂಷಾ ಮಾರಮ್ಮವನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿಂದ ದರ್ಗಾ ಕೂಡ ಸ್ವಲ್ಪ ದೂರದಲ್ಲಿದ್ದು, ಇಲ್ಲಿಗೆ ಭೇಟಿ ಕೊಡಬಹುದಾಗಿದೆ.

 ಮಲೆಮಹದೇಶ್ವರ ಬೆಟ್ಟಕ್ಕೆ ತಲುಪುವ ಮಾರ್ಗ

ಮಲೆಮಹದೇಶ್ವರ ಬೆಟ್ಟಕ್ಕೆ ತಲುಪುವ ಮಾರ್ಗ

ರಾಜ್ಯದಲ್ಲೇ ಅತ್ತಧಿಕ ಆದಾಯ ಇರುವ ಎರಡನೇ ದೇಗುಲವಾದ ಮಲೆಮಹದೇಶ್ವರ ಬೆಟ್ಟಕ್ಕೆ ಹೊಸ ವರ್ಷದ ದಿನದಂದು ಆಗಮಿಸಿ ದರ್ಶನ ಪಡೆಯಬಹುದಾಗಿದೆ. ಜೊತೆಗೆ ನೂತನ ವರ್ಷ ಶುಭ ತರಲಿ ಎಂದು ಮಾದಪ್ಪನನ್ನು ಬೇಡಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ‌. ಮಲೆಮಹದೇಶ್ವರ ಬೆಟ್ಟದ ಬಳಿಕ ಗೋಪಿನಾಥಂ ಸಮೀಪ ಹೊಗೆನಕಲ್ ಜಲಪಾತವಿದೆ. ಇಲ್ಲಿ ಕಾವೇರಿಯ ರುದ್ರ ರಮಣೀಯತೆಯನ್ನೂ ಸವಿಯಬಹುದಾಗಿದೆ. ಮತ್ತೊಂದೆಡೆ ಮೈಸೂರಿನಿಂದ 65 ಕಿಲೋ ಮೀಟರ್‌ ದೂರದಲ್ಲಿರುವ ಚಾಮರಾಜನಗರಕ್ಕೆ ಬಂದರೆ, ಮೈಸೂರಿನ ಮಹಾರಾಜರು ನಿರ್ಮಿಸಿರುವ ಚಾಮರಾಜೇಶ್ವರ ದೇವಾಲಯಕ್ಕೆ ಭೇಟಿ ಕೊಡಬಹುದು. ಬಳಿಕ, 10 ಕಿಲೋ ಮೀಟರ್‌ ದೂರದಲ್ಲಿರುವ ಚಿಕ್ಕಹೊಳೆ ಮತ್ತು ಸುವರ್ಣಾವತಿ ಎಂಬ ಅವಳಿ ಜಲಾಶಯಗಳು ವೀಕೆಂಡ್ ಹಾಗೂ ಹೊಸವರ್ಷ ಆಚರಣೆಗೆ ಹೇಳಿ ಮಾಡಿಸಿದ ತಾಣಗಳಾಗಿವೆ.

ಬಂಡೀಪುರ, ಬಿಳಿಗಿರಿರಂಗನ ಬೆಟ್ಟದಲ್ಲಿ ಜಂಗಲ್ ಲಾಡ್ಜ್ ಸೇರಿದಂತೆ ವಾಸ್ತವ್ಯಕ್ಕೆ ವಿವಿಧ ಹೋಟೆಲ್‌ಗಳಿವೆ. ಹಾಗೂ ಗುಂಡ್ಲುಪೇಟೆಯಲ್ಲಿ ಹಲವು ರೆಸಾರ್ಟ್ ಗಳಿವೆ. ಮಲೆಮಹದೇಶ್ವರ ಬೆಟ್ಟದಲ್ಲಿ ವಸತಿ ಸೌಕರ್ಯವಿದ್ದು, ಪ್ರವಾಸಿಗರು ಕುಟುಂಬ ಇಲ್ಲವೇ ಸ್ನೇಹಿತರ ಜೊತೆ ಬಂದು ವಿನೂತನವಾಗಿ ಹೊಸವರ್ಷವನ್ನು ಸ್ವಾಗತಿಸಬಹುದಾಗಿದೆ.

English summary
Best tourist places in Chamarajanagar district to celebrate New Year 2023. Here see complete details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X