ದಾವಣಗೆರೆ ಜಿಲ್ಲೆಯ ಟಾಪ್ 5 ಪ್ರವಾಸಿ ತಾಣಗಳು, ತಲುಪುವ ಮಾರ್ಗ
ದಾವಣಗೆರೆ, ಅಕ್ಟೋಬರ್, 03: ವಿಜಯದಶಮಿ ಹಿನ್ನೆಲೆ ಹಬ್ಬಕ್ಕೆ ಈ ಬಾರಿ ಎರಡು ದಿನ ರಜೆ ಬಂದಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ತುಂಬಾ ಜನ ಕೆಲಗಳ ಒತ್ತಡವನ್ನು ನಿವಾರಿಸಲು ಪ್ರವಾಸ ಹೋಗುತ್ತಾರೆ. ಹಾಗಾದರೆ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿದರೆ ಈ ಐದು ತಾಣಗಳಲ್ಲಿ ವಿಹರಿಸಬಹುದು
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಆಗಿದೆ. ಈ ಕೆರೆಯು ಅತ್ಯಂತ ಹೆಚ್ಚು ವಿಸ್ತೀರ್ಣ ಹೊಂದಿದೆ. ಶಾಂತಿಸಾಗರಕ್ಕೆ ಬಂದು ಎತ್ತ ಕಣ್ಣಾಯಿಸಿದರೂ ನಿಮಗೆ ಕಾಣಸಿಗುವುದು ಅಚ್ಚ ಹಸಿರಿನ ವಾತಾವರಣ. ಭಾರಿ ಮಳೆಯಾಗಿರುವ ಕಾರಣ ಸೂಳೆಕೆರೆ ಸಂಪೂರ್ಣವಾಗಿ ತುಂಬಿದೆ. ಇದರ ಸುಂದರ ನೋಟವನ್ನು ಸವಿಯಲು ವಿವಿಧ ರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣಗಳು ಇಲ್ಲಿ ಇವೆ.
ಸೂಳೆಕೆರೆಗೆ ತೆರಳಲು ಎರಡು ಮಾರ್ಗಗಳಿವೆ. ಶಿವಮೊಗ್ಗದಿಂದ ಚನ್ನಗಿರಿಗೆ ಬಂದು, ಅಲ್ಲಿಂದ ದಾವಣಗೆರೆ ಮಾರ್ಗವಾಗಿ ಬಂದರೆ ಕೆರೆಯನ್ನು ತಲುಪಬಹುದಾಗಿದೆ. ಚನ್ನಗಿರಿಯಿಂದ ಕೇವಲ 15 ಕಿಲೋ ಮೀಟರ್ ದೂರದಲ್ಲಿದೆ. ಇನ್ನು ದಾವಣಗೆರೆಯಿಂದ ಚನ್ನಗಿರಿ ಮಾರ್ಗವಾಗಿ ಬಂದರೆ 45 ಕಿಲೋ ಮೀಟರ್ ಆಗುತ್ತದೆ. ಹಾಗಾಗಿ ಚಿತ್ರದುರ್ಗದಿಂದ ಚನ್ನಗಿರಿಗೆ ಬರಬಹುದು. ಈ ಮಾರ್ಗಗಳಿಂದ ಬರಲು ಬಸ್ ವ್ಯವಸ್ಥೆಯೂ ಇದೆ.

ಗಾಜಿನ ಮನೆ ವಿಕ್ಷಿಸಲು ನೆರೆದ ಪ್ರವಾಸಿಗರ ದಂಡು
ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಅತಿ ದೊಡ್ಡ ಗಾಜಿನ ಮನೆಯ ಸೌಂದರ್ಯ ವೀಕ್ಷಿಸಬಹುದು. ದಾವಣಗೆರೆ - ಹರಿಹರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಈ ಗ್ಲಾಸ್ ಹೌಸ್ ನೋಡಲು ಪ್ರತಿನಿತ್ಯ ಜನರು ಕಿಕ್ಕಿರಿದು ಬರುತ್ತಾರೆ. ಇಲ್ಲಿಗೆ ಬಂದರೆ ಹೊಸ ಲೋಕವೇ ಸೃಷ್ಟಿ ಆಗಿರುತ್ತದೆ. ವಿದೇಶಿ ಗಿಡಗಳು, ಗಾಜಿನ ಮನೆ ಆಕಾರವನ್ನು ನೋಡಿ ಸಂತೋಷ ಪಡಬಹುದು. ದಾವಣಗೆರೆಯಿಂದ ಹೋಗುವವರಿಗೆ ಸುಲಭ ಮಾರ್ಗವಾಗಿದ್ದು, ಇಲ್ಲಿಂದ ಕೇವಲ ಏಳೆಂಟು ಕಿಲೋ ಮೀಟರ್ ದೂರ ಕ್ರಮಿಸಿದರೆ ಸಾಕು ಗಾಜಿನ ಮನೆ ಸಿಗುತ್ತದೆ. ಶಾಮನೂರು ಸೇತುವೆ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಗಾಜಿನ ಮನೆಯನ್ನು ತಲುಪಬಹುದು. ಇನ್ನು ಹರಿಹರ ತಾಲೂಕಿನಿಂದ ಬರುವವರಿಗೆ ಸುಲಭವಾಗಿದ್ದು, ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹರಿಹರದಿಂದ ಕೇವಲ 8 ಕಿಲೋ ಮೀಟರ್‌ವರೆಗೆ ಕ್ರಮಿಸಿದರೆ ಗಾಜಿನ ಮನೆ ಸಿಗುತ್ತದೆ.

ದಾವಣಗೆರೆ ಜನರ ಆರಾಧ್ಯ ದೇವಿಯ ವಿಶೇಷ
ದಾವಣಗೆರೆ ನಗರದ ಶಕ್ತಿದೇವತೆ ದುರ್ಗಾಂಬಿಕಾ ದೇವಸ್ಥಾನ ಆಗಿದೆ. ಈ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದುಬರುತ್ತದೆ. ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಇದೆ. ಮಾಜಿ ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಯಾರೇ ಬಂದರೂ ಈ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿಯೇ ಹಿಂದಿರುಗುತ್ತಾರೆ. ದುರ್ಗಾಂಬಿಕೆ ದೇವಸ್ಥಾನದ ಸುತ್ತಮುತ್ತಲೂ ದೇಗುಲಗಳಿದ್ದು, ಇಲ್ಲಿಗೆ ಪ್ರತಿನಿತ್ಯ ಬೇರೆ ಊರುಗಳಿಂದ ಜನರು ಆಗಮಿಸುತ್ತಾರೆ. ದಾವಣಗೆರೆಗೆ ಬಂದರೆ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮಹಾನಗರ ಪಾಲಿಕೆಯ ಎದುರುಗಡೆ ಇರುವ ಕೆಳ ಸೇತುವೆ ಮೂಲಕ ಬಂದರೆ ಮಂಡಿಪೇಟೆ ಸಿಗುತ್ತದೆ. ಅಲ್ಲಿಂದ ಶಿವಪ್ಪನಾಯಕ ವೃತ್ತದವರೆಗೆ ಬಂದರೆ ಅಲ್ಲಿಂದ ಸ್ವಲ್ಪ ದೂರದಲ್ಲಿರುವುದೇ ದುರ್ಗಾಂಬಿಕಾ ದೇವಸ್ಥಾನ ಆಗಿದೆ. ದೇವಸ್ಥಾನಕ್ಕೆ ಬರಲು ಇದು ಸುಲಭದ ಮಾರ್ಗವಾಗಿದೆ.

ಸಂಪೂರ್ಣವಾಗಿ ಭರ್ತಿಯಾದ ಕೊಂಡಜ್ಜಿ ಕೆರೆ
ಇನ್ನು ದಾವಣಗೆರೆ ತಾಲಕಿನ ಕೊಂಡಜ್ಜಿ ಕೆರೆಯು ನೋಡಲು ಸುಂದರವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಅತಿ ದೊಡ್ಡ ಕೆರೆಗಳಲ್ಲಿ ಕೊಂಡಜ್ಜಿ ಕೆರೆಯೂ ಒಂದಾಗಿದೆ. ಈ ಕೆರೆಯು ಭಾರಿ ಮಳೆಯಿಂದ ಸಂಪೂರ್ಣವಾಗಿ ತುಂಬಿದೆ. ಹಾಗಾಗಿ ನೋಡುಗರನ್ನು ತನ್ನತ್ತ ಸೆಳೆದೇ ಬಿಡುತ್ತದೆ.
ದಾವಣಗೆರೆಯಿಂದ ಕೊಂಡಜ್ಜಿ ಮಾರ್ಗವಾಗಿ ಹೋದರೆ ಕೊಂಡಜ್ಜಿ ಗ್ರಾಮದಲ್ಲಿ ಕೆರೆ ಸಿಗುತ್ತದೆ. ಅತಿ ವಿಶಾಲವಾಗಿರುವ ಈ ಕೆರೆಯ ದಡದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ಹೋಗಬಹುದು. ವೀಕೆಂಡ್‌ನಲ್ಲಿ ಇಲ್ಲಿನ ಪ್ರಕೃತಿ ಸವಿಯಲು ಜನರು ಸರದಿಯಲ್ಲಿ ಬರುತ್ತಾರೆ. ಹೀಗೆ ಇದು ಪ್ರವಾಸಿಗರ ಸ್ವರ್ಗವೂ ಆದಂತಾಗಿದೆ.

ದೇವರಬೆಳಕೆರೆ ಡ್ಯಾಂಗೆ ತಲುಪುವ ಮಾರ್ಗ
ಹರಿಹರ ತಾಲೂಕಿನ ದೇವರಬೆಳಕೆರೆ ಡ್ಯಾಂ ಸಹ ಸೂಜಿಗಲ್ಲಿನಂತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ಬಾರಿ ಸುರಿದ ಭಾರೀ ಮಳೆಯಿಂದ ದೇವರ ಬೆಳೆಕೆರೆ ಡ್ಯಾಂನ ಕ್ರಸ್ಟ್ ಗೇಟ್‌ಗಳಿಂದ ನೀರು ಹೊರಬಿಡಲಾಗುತ್ತಿದ್ದು, ಈ ಸುಂದರ ವೈಭವವನ್ನು ಸವಿಯಲು ಪ್ರವಾಸಿಗರ ದಂಡೇ ಕಲೆಯುತ್ತದೆ. ಈ ಡ್ಯಾನಿಂದ ಹೊರಬರುತ್ತಿರುವ ನೀರಿನ ಸೊಬಗು ನೋಡುವುದೇ ಒಂದು ಚೆಂದ. ದಾವಣಗೆರೆಯಿಂದ ಕೇವಲ 13 ಕಿಲೋ ಮೀಟರ್ ದೂರದಲ್ಲಿರುವ ದೇವರ ಬೆಳಕೆರೆ ಡ್ಯಾಂನಿಂದ ರಭಸವಾಗಿ ಹರಿಯುವ ನೀರು ನೋಡಲು ಜನರು, ಯುವಕರು, ವಿದ್ಯಾರ್ಥಿಗಳು ಕಿಕ್ಕಿರಿದು ಬರುತ್ತಾರೆ. ವಿಜಯದಶಮಿ ಹಾಗೂ ಆಯುಧ ಪೂಜೆಗೆ ಎರಡು ದಿನ ರಜೆ ಇದ್ದು, ಇಲ್ಲಿಗೆ ಹೆಚ್ಚಿನ ಜನರು ಆಗಮಿಸುತ್ತಾರೆ. ದೇವರ ಬೆಳಕೆರೆಗೆ ಮಲೆಬೆನ್ನೂರು ಮಾರ್ಗವಾಗಿ ಬರಬಹುದು. ದಾವಣಗೆರೆಯ ಶಾಮನೂರು ಸೇತುವೆಯ ಕೆಳಗಡೆಯಿಂದ ಆಂಜನೇಯ ಸ್ವಾಮಿ ದೇವಸ್ಥಾನ ಇರುವ ರಸ್ತೆಯಲ್ಲಿ ನೇರವಾಗಿ ಬಂದರೆ ದೇವರಬೆಳಕೆರೆ ಡ್ಯಾಂ ಸಿಗುತ್ತದೆ. ಅಲ್ಲಿನ ಸೇತುವೆ ಮೇಲೆ ನಿಂತು ದೇವರಬೆಳಕೆರೆ ಡ್ಯಾಂನಿಂದ ಹೊರಬರುವ ರಮಣೀಯ ದೃಶ್ಯವನ್ನು ಸವಿಯಬಹುದಾಗಿದೆ.












Click it and Unblock the Notifications