ಮಳೆರಾಯ ಸೈಲೆಂಟ್, ನಂದಿ ಕಡೆ ನುಗ್ಗಿದ ಸಿಟಿ ಮಂದಿ
ಈ ವಾರದ ಆರಂಭದಿಂದಲೂ ಸಿಲಿಕಾನ್ ಸಿಟಿಯು ಬೆಂಗಳೂರು ಭಾರಿ ಮಳೆಯಿಂದಾಗಿ ಮಲೆನಾಡಿನಂತೆ ಬದಲಾಗಿತ್ತು. ವರುಣನ ಆರ್ಭಟಕ್ಕೆ ಮನೆಯಿಂದ ಹೊರಬರಲಾರದೆ, ಒಂದು ರೀತಿ ಜೈಲಿನಲ್ಲೇ ಇರುವಂತೆ ಭಾಸವಾಗಿತ್ತು. ಮೊದಲು ಮಳೆ ನಿಂತರೆ ಸಾಕಪ್ಪಾ ಎಂದು ದೇವರಲ್ಲಿ ಬೇಡಿಕೊಂಡವರೇ ಹೆಚ್ಚು. ಅಷ್ಟರಮಟ್ಟಿಗೆ ಮಳೆ ಕಣ್ಣೀರು ತರಿಸಿಬಿಟ್ಟಿತ್ತು.
ಸದ್ಯ ಮಳೆ ಬ್ರೇಕ್ ಪಡೆದಿರುವ ಕಾರಣ ಸಿಲಿಕಾನ್ ಸಿಟಿ ಮಂದಿ ಚಿಲ್ ಮಾಡಲು ನಂದಿ ಗಿರಿಧಾಮದತ್ತ ದಂಡು ದಂಡಾಗಿ ತೆರಳಿದ್ದಾರೆ. ಗಿರಿಧಾಮದಲ್ಲಿ ಸುತ್ತಾಡಿ ಜಾಲಿ ಮೂಡ್‌ಗೆ ಜಾರಿದ್ದಾರೆ. ನಿನ್ನೆಯೂ ತುಸು ಮಳೆ ಸುರಿದಿತ್ತು. ಹವಾಮಾನ ಇಲಾಖೆ ನೀಡಿದ ಸೂಚನೆಯಂತೆ ಈ ವಾರವಿಡೀ ಬೆಂಗಳೂರಿಗೆ ವರುಣನ ಕಂಟಕವಿದೆ ಎಂದು ಹೇಳಿತ್ತು.

ಆದರೆ, ನಿನ್ನೆಯಿಂದ ಮಳೆ ಪ್ರಮಾಣ ಕ್ರಮೇಣ ತಗ್ಗಿತ್ತು. ಇಂದು ಮುಸುಕಿದ್ದ ಮೋಡ ಮರೆಯಾಗಿ ಸೂರ್ಯನ ಬೆಳಕು ಮೈಮೇಲೆ ಬಿದ್ದಿದೆ. ಇಷ್ಟಾಗಿದ್ದೇ ತಡ, ಪಕ್ಕದ ಬೆಂಗಳೂರು ಮಂದಿ ಪಿಕ್‌ನಿಕ್ ಮೂಡ್‌ಗೆ ತೆರಳಿದ್ದಾರೆ. ಬೆಂಗಳೂರಿಗೆ ಸಮೀಪದಲ್ಲೇ ಇರೋ ನಂದಿ ಗಿರಿಧಾಮಕ್ಕೆ ಬೈಕು, ಕಾರು ಹತ್ತಿಕೊಂಡು ಲಗ್ಗೆ ಇಟ್ಟಿದ್ದಾರೆ.
ಇಂದು ಶುಕ್ರವಾರ ಆಗಿರುವ ಕಾರಣ ಎಲ್ಲರೂ ವೀಕೆಂಡ್ ಮೂಡ್‌ನಲ್ಲಿದ್ದಾರೆ. ಒಂದು ವಾರದ ನಂತರ ಮಳೆ ಕಣ್ಮರೆಯಾಗಿ ನೆಮ್ಮದಿಯಾಗಿ ದಿನ ಕಳೆದ ಅನುಭವದಲ್ಲಿದ್ದಾರೆ. ಇನ್ನು ನಂದಿ ಗಿರಿಧಾಮಕ್ಕೆ ಎಲ್ಲರೂ ದಾಂಗುಡಿ ಇಟ್ಟಿದ್ದರಿಂದ ಬೆಟ್ಟದ ಪ್ರವೇಶದ್ವಾರದಿಂದಲೂ ಟ್ರಾಫಿಕ್ ಜಾಮ್ ಕಂಡುಬಂದಿದೆ.
ಬೆಟ್ಟದ ಮೇಲೆಯೂ ಪಾರ್ಕಿಂಗ್ ಸ್ಥಳದಲ್ಲಿ ದಟ್ಟಣೆ ಹೆಚ್ಚಾಗಿ ಸಮಸ್ಯೆಯೂ ಉಂಟಾಗಿದೆ. ಒಟ್ಟಾರೆ, ವಾರದಿಂದ ಕಟ್ಟಿಹಾಕಿದಂತಿದ್ದ ಸಿಟಿ ಮಂದಿಗೆ ಇಂದು ಚಿಲ್ ಮಾಡಿದ್ದಾರೆ. ಒಂದು ಲಾಂಗ್ ರೈಡ್, ಲಾಂಗ್ ಡ್ರೈವ್ ಮಾಡಿ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಇರುವ ಇಶಾ ಫೌಂಡೇಶನ್, ಭೋಗನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ಸೇರಿದಂತೆ ಹಲವು ಪ್ರವಾಸಿ ತಾಣಗಳೆಲ್ಲವೂ ಜನರಿಂದ ತುಂಬಿ ತುಳುಕಿವೆ.

ಕೆಲವರು ವಾರಕ್ಕೊಮ್ಮೆಯಾದರೂ ನಂದಿ ಬೆಟ್ಟಕ್ಕೆ ಹೋಗಿ ಬರುವವರೂ ಇದ್ದಾರೆ. ಇಂದಿನಿಂದ ವೀಕೆಂಡ್ ಶುರುವಾದ ಹಿನ್ನೆಲೆ ನಂದಿ ಬೆಟ್ಟವು ಪ್ರವಾಸಿಗರಿಂದ ತುಂಬಿ ತುಳುಕಾಡಿದೆ. ಇಂದು ಬೆಳಿಗ್ಗೆಯಿಂದಲೇ ನಂದಿ ಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸೂರ್ಯೋದಯವನ್ನು ಕಣ್ತುಂಬಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ನಂದಿಗಿರಿಧಾಮಕ್ಕೆ ಬೇರೆ ರಾಜ್ಯಗಳು, ವಿದೇಶಗಳಿಂದ ಹೆಚ್ಚು ಪ್ರವಾಸಿಗರು ಬಂದರೂ ಇವರ ಪೈಕಿ ಬೆಂಗಳೂರಿಗರಿಗೆ ಇದೇ ಫೇವರೇಟ್ ಸ್ಪಾಟ್ ಆಗಿದೆ. ಗಂಟೆಯೊಳಗೆಲ್ಲ ಅಲ್ಲಿಗೆ ತಲುಪಲು ಸಾಧ್ಯವಿರುವುದರಿಂದ ಒಂದು ರೀತಿಯಲ್ಲಿ ಪಕ್ಕದ ಗಲ್ಲಿ ಎನ್ನುವಂತೆ ನಂದಿ ಬೆಟ್ಟಕ್ಕೆ ಎಂಟ್ರಿ ಕೊಟ್ಟು ಬರುತ್ತಾರೆ.
ಈ ಬಾರಿ ದಸರಾ ವೇಳೆಯೂ ನಂದಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದಾರೆ. ವಿಜಯದಶಮಿ ಸಮಯದಲ್ಲಿ ಬರೋಬ್ಬರಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅತಿ ಹೆಚ್ಚು ಎನ್ನಲಾಗಿದೆ.

ಮೊದಲಿಗೆ ಹೋಲಿಸಿದರೆ ಇತ್ತೀಚೆಗೆ ವಾರಾಂತ್ಯದಲ್ಲಿ ನಂದಿಬೆಟ್ಟಕ್ಕೆ ಬರುವವರ ಸಂಖ್ಯೆ ಏರುತ್ತಲೇ ಇದೆ. ಮೇಲೆ ವಾಹನ ನಿಲುಗಡೆಗೂ ಜಾಗವಿಲ್ಲದಷ್ಟು ಪ್ರವಾಸಿಗರು ಇಲ್ಲಿಗೆ ಲಗ್ಗೆ ಇಡುತ್ತಿದ್ದಾರೆ. ಕೆಲವರು ಬೆಳಿಗ್ಗೆ ಬಂದರು ದಿನವಿಡೀ ಅಲ್ಲೇ ಸುತ್ತಾಡಿ, ಸಂಜೆ ವೇಳೆಗೆ ವಾಪಸ್ ಆಗುವವರೂ ಇದ್ದಾರೆ. ಬೆಂಗಳೂರಿನ ಸಮೀಪವೇ ಇಂತಹ ಪ್ರವಾಸಿ ತಾಣವಿರುವುದು ಎಲ್ಲರಿಗೂ ಒಂದು ಲಕ್ ಎಂದು ಹೇಳಲಾಗುತ್ತಿದೆ.












Click it and Unblock the Notifications