Ram Mandir; ಬೆಳಗಾವಿ-ಅಯೋಧ್ಯೆ ರೈಲು; ದಿನಾಂಕ, ವೇಳಾಪಟ್ಟಿ
ಬೆಳಗಾವಿ, ಜನವರಿ 19: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಶ್ರೀ ರಾಮನ ದರ್ಶನಕ್ಕೆ ತೆರಳು ಭಕ್ತರ ಸಂಖ್ಯೆ ಏರಿಕೆಯಾಗಲಿದೆ.
ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿನ ಭಕ್ತರು ಅಯೋಧ್ಯಗೆ ಆಗಮಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜನವರಿ 23ರಿಂದ ರಾಮ ಮಂದಿರಕ್ಕೆ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆಯಬಹುದಾಗಿದೆ.

ಭಾರತೀಯ ರೈಲ್ವೆ ದೇಶದ ವಿವಿಧ ರಾಜ್ಯಗಳಿಂದ ಅಯೋಧ್ಯೆಗೆ ಭೇಟಿ ನೀಡುವ ಜನರಿಗಾಗಿಯೇ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಕರ್ನಾಟಕದಿಂದಲೂ ಹಲವು ರೈಲುಗಳು ಅಯೋಧ್ಯೆಗೆ ಸಂಚಾರ ನಡೆಸಲಿವೆ. ಬೆಳಗಾವಿಯಿಂದಲೂ ರೈಲು ಸಂಚಾರ ನಡೆಸಲಿದೆ.
ವಿಶೇಷ ರೈಲು ವೇಳಾಪಟ್ಟಿ; ಭಾರತೀಯ ರೈಲ್ವೆ ಬೆಳಗಾವಿ-ಅಯೋಧ್ಯೆಯ ನಡುವೆ ಒಂದು ಬಾರಿಯ ವಿಶೇಷ ರೈಲನ್ನು ಓಡಿಸುತ್ತಿದೆ. ಫೆಬ್ರವರಿ 17ರಂದು ಈ ರೈಲು ಬೆಳಗಾವಿಯಿಂದ ಹೊರಡಲಿದೆ ಮತ್ತು ಫೆಬ್ರವರಿ 20ರಂದು ಅಯೋಧ್ಯೆಯಿಂದ ಹೊರಡಲಿದೆ.
ಬೆಳಗಾವಿ-ಸಿಕಂದರಾಬಾದ್ ಮೂಲಕ ಅಯೋಧ್ಯೆಗೆ ಈ ರೈಲು 48 ಗಂಟೆಗಳಲ್ಲಿ ತಲುಪಲಿದೆ. ಈ ರೈಲು 20 ಜನರಲ್ ಸೆಕೆಂಡ್ ಕ್ಲಾಸ್, 2 ಲಗೇಜ್ ಕಂ ದಿವ್ಯಾಂಗ ಬೋಗಿಗಳನ್ನು ಒಳಗೊಂಡಿರುತ್ತದೆ.
ಈ ವಿಶೇಷ ರೈಲು ಬೆಳಗಾವಿಯಿಂದ ಫೆಬ್ರವರಿ 17ರ ಶನಿವಾರ 10.35ಕ್ಕೆ ಹೊರಡಲಿದೆ. ಅಯೋಧ್ಯೆಗೆ ಸೋಮವಾರ 10.35ಕ್ಕೆ ತಲುಪಲಿದೆ. ಅಯೋಧ್ಯೆಯಿಂದ ಫೆಬ್ರವರಿ 20ರಂದು 19.55ಕ್ಕೆ ಹೊರಡಲಿದೆ, ಬೆಳಗಾವಿಗೆ 16.45ಕ್ಕೆ ಆಗಮಿಸಲಿದೆ.
ವಿಶೇಷ ರೈಲು 2472 ಕಿ. ಮೀ.ಯನ್ನು 48 ಗಂಟೆಗಳಲ್ಲಿ ಸಂಚಾರ ನಡೆಸಲಿದೆ. ಅಯೋಧ್ಯೆಗೆ ಭೇಟಿ ನೀಡಲು ಯೋಜನೆ ರೂಪಿಸುತ್ತಿರುವವರು ಭಾರತೀಯ ರೈಲ್ವೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಕಲ್ಯಾಣ ಕರ್ನಾಟಕದಿಂದ ರೈಲುಗಳಿಲ್ಲ: ಕರ್ನಾಟಕ ಮತ್ತು ಉತ್ತರ ಪ್ರದೇಶದ ಅಯೋಧ್ಯೆಯ ನಡುವೆ 9ಕ್ಕೂ ಹೆಚ್ಚು ರೈಲುಗಳು ಸಂಚಾರ ನಡೆಸಲಿವೆ. ಆದರೆ ಕಲ್ಯಾಣ ಕರ್ನಾಟಕ ಭಾಗದಿಂದ ರೈಲುಗಳಿಲ್ಲ ಎಂದು ಜನರು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ, ಬೀದರ್, ರಾಯಚೂರು, ಯಾದಗಿರಿಯಿಂದ ಅಯೋಧ್ಯೆಗೆ ಯಾವುದೇ ರೈಲುಗಳಿಲ್ಲ ಎಂಬುದು ಜನರ ಆರೋಪವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲೇ ಬೇಡಿಕೆಯಷ್ಟು ರೈಲುಗಳಿಲ್ಲ. ಈಗ ಅಯೋಧ್ಯೆಗೆ ಸಹ ರೈಲುಗಳನ್ನು ಓಡಿಸುತ್ತಿಲ್ಲ ಎಂದು ಸಂಸದರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು, ಶಿವಮೊಗ್ಗ ಮತ್ತು ವಾಸ್ಕೋದಿಂದ ಅಯೋಧ್ಯೆಗೆ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ಈ ಎಲ್ಲಾ ರೈಲುಗಳು ಗದಗ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ ಜಿಲ್ಲೆಗಳ ಮೂಲಕ ಸಂಚಾರ ನಡೆಸುತ್ತವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬರುವುದಿಲ್ಲ ಎಂಬುದು ಜನರ ದೂರು.
ಬೀದರ್, ಕಲಬುರಗಿ, ಬಳ್ಳಾರಿ, ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರೇ ಇದ್ದಾರೆ. ಆದರೆ ಶ್ರೀ ರಾಮನ ಭಕ್ತರು ಅಯೋಧ್ಯೆಗೆ ತೆರಳಲು ಅನುಕೂಲವಾಗುವಂತೆ ಅವರು ರೈಲುಗಳನ್ನು ತಂದಿಲ್ಲ ಎಂದು ಜನರು ಆರೋಪ ಮಾಡುತ್ತಿದ್ದಾರೆ.












Click it and Unblock the Notifications