ಪ್ರಯಾಣಿಕರ 4 ಪ್ರಮುಖ ಬೇಡಿಕೆ ತಿರಸ್ಕರಿಸಿದ ದಕ್ಷಿಣ ರೈಲ್ವೆ
ಬೆಂಗಳೂರು, ಜನವರಿ 02: ಕರ್ನಾಟಕದ ಕರಾವಳಿ ವಿಚಾರದಲ್ಲಿ ದಕ್ಷಿಣ ರೈಲ್ವೆ ವಲಯ ಮಲತಾಯಿ ಧೋರಣೆ ಅನುಸರಿಸುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕರಾವಳಿ ಭಾಗದ ಜನರ ನಾಲ್ಕು ಪ್ರಮುಖ ಬೇಡಿಕೆಗಳನ್ನು ರೈಲ್ವೆ ವಲಯ ತಿರಸ್ಕಾರ ಮಾಡಿದೆ.
ನಾಲ್ಕು ಪ್ರಮುಖ ರೈಲುಗಳನ್ನು ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್ ನಿಲ್ದಾಣದ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಆದರೆ ಇದಕ್ಕೆ ರೈಲ್ವೆ ವಲಯ ಒಪ್ಪಿಗೆ ಕೊಟ್ಟಿಲ್ಲ. ರೈಲು ಸೇವೆ ವಿಸ್ತರಣೆಗೊಂಡು ಸಹಾಯಕವಾಗಲಿದೆ ಎಂಬ ಕರಾವಳಿ ಭಾಗದ ಜನರ ಭರವಸೆ ಹುಸಿಯಾಗಿದೆ.

ರೈಲ್ವೆ ಹೋರಾಟ ಸಮಿತಿಗಳು, ಪ್ರಯಾಣಿಕರು ಹಲವು ದಿನಗಳಿಂದ ನಾಲ್ಕು ಪ್ರಮುಖ ಬೇಡಿಕೆಗಳನ್ನು ದಕ್ಷಿಣ ರೈಲ್ವೆ ಮುಂದೆ ಇಟ್ಟಿದ್ದರು. ಈಗಿರುವ ಪ್ಲಾಟ್ ಫಾರಂ ಲಭ್ಯತೆ, ಸಂಚಾರ ದಟ್ಟಣೆಯನ್ನು ಗಮನಿಸಿ ರೈಲುಗಳನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ರೈಲ್ವೆ ವಲಯ ಹೇಳಿದೆ.
ಯಾವ-ಯಾವ ರೈಲುಗಳು: ದಕ್ಷಿಣ ರೈಲ್ವೆಯ ಮುಂದೆ ರೈಲು ನಂಬರ್ 12133/134 ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್-ಮಂಗಳೂರು ಜಂಕ್ಷನ್-ಮುಂಬೈ ಸಿಎಸ್‌ಟಿಎಂ ಸೂಪರ್ ಫಾಸ್ಟ್ ರೈನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು.
ರೈಲು ನಂಬರ್ 16575/ 576 ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಗೊಮ್ಮಟೇಶ್ವರ ವಾರದಲ್ಲಿ ಮೂರು ಬಾರಿ ಸಂಚಾರ ನಡೆಸುವ ರೈಲು, ರೈಲು ನಂಬರ್ 16539/ 546 ಯಶವಂತಪುರ-ಮಂಗಳೂರು ಜಂಕ್ಷನ್, ಯಶವಂತಪುರ ವಾರದ ರೈಲು ಸಹ ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಬೇಕು ಎಂದು ಮನವಿ ಮಾಡಲಾಗಿತ್ತು.
ರೈಲು ನಂಬರ್ 07337/ 338 ವಿಜಯಪುರ-ಮಂಗಳೂರು ಜಂಕ್ಷನ್-ವಿಜಯಪುರ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಸಹ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಜನಪ್ರತಿನಿಧಿಗಳು ಸಹ ಈ ಕುರಿತು ರೈಲ್ವೆ ಇಲಾಖೆಗೆ ಪತ್ರವನ್ನು ಬರೆದಿದ್ದರು.
ದಕ್ಷಿಣ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಆರ್. ಎನ್. ಸಿನ್ಹಾ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಪತ್ರವೊಂದನ್ನು ಬರೆದಿದ್ದಾರೆ. ಸದ್ಯದ ಸಂಚಾರ ದಟ್ಟಣೆ, ಪ್ಲಾಟ್ ಫಾರಂ ಲಭ್ಯತೆ ಅನುಸಾರವಾಗಿ ರೈಲುಗಳ ಸೇವೆಗಳನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಎರಡು ಪ್ಲಾಟ್ ಫಾರಂನ ಕಾಮಗಾರಿ ಪೂರ್ಣಗೊಂಡ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.
ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲುಗಳು ಸಂಜೆ 4.40ರ ಸುಮಾರಿಗೆ ಆಗಮಿಸುತ್ತವೆ. ಇದರಿಂದಾಗಿ ಸಂಜೆ ಪೀಕ್ ಅವರ್‌ನ ಸಂಚಾರ ದಟ್ಟಣೆಗೆ ತೊಂದರೆಯಾಗಲಿದೆ. ಆದ್ದರಿಂದ ಸದ್ಯ ರೈಲು ಸೇವೆ ವಿಸ್ತರಣೆ ಸಾಧ್ಯವಿಲ್ಲ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಮಂಗಳೂರು ಸೆಂಟ್ರಲ್ ನಿಲ್ದಾಣದ ರೈಲು ಪ್ಲಾಟ್ ಫಾರಂಗಳನ್ನು ಕೇರಳ ಭಾಗದ ರೈಲುಗಳಿಗಾಗಿ ಮಾತ್ರ ನಿರ್ಮಾಣ ಮಾಡಿಲ್ಲ. ಕರ್ನಾಟಕದ ಭಾಗದ ರೈಲು ಪ್ರಯಾಣಿಕರ ಬೇಡಿಕೆಗಳನ್ನು ಸಹಪರಿಗಣಿಸಬೇಕು ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಮೊದಲು ಮಂಗಳೂರು-ವಿಜಯಪುರ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿತ್ತು. ಆದರೆ ಈಗ ಪ್ಲಾಟ್ ಫಾರಂ ಲಭ್ಯವಿಲ್ಲ ಎಂದು ರೈಲ್ವೆ ವಲಯ ಹೇಳುತ್ತಿದೆ. ಈ ರೈಲು ಸೇವೆ ವಿಸ್ತರಣೆಯಿಂದ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಮಿತಿ ಹೇಳಿದೆ.
ದಕ್ಷಿಣ ರೈಲ್ವೆ ವಲಯದ ಮಲತಾಯಿ ಧೋರಣೆ ಹಿನ್ನಲೆಯಲ್ಲಿಯೇ ಮಂಗಳೂರನ್ನು ನೈಋತ್ಯ ವಿಭಾಗಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು ಹಿಂದಿನಿಂದಲೂ ಇಡಲಾಗುತ್ತಿದೆ. ಆದರೆ ರೈಲ್ವೆ ಇಲಾಖೆ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ.












Click it and Unblock the Notifications