ಕಾಶಿ ಮಾದರಿಯಲ್ಲಿ ದಕ್ಷಿಣ ಭಾರತ್ ದೇವಾಲಯ ಯಾತ್ರೆ; ಮಾರ್ಗ, ದರ
ಬೆಂಗಳೂರು, ಜನವರಿ 05: ಕರ್ನಾಟಕದ ಧಾರ್ಮಿಕ ದತ್ತಿ ಇಲಾಖೆ 'ಭಾರತ್ ಗೌರವ್ ಕಾಶಿ ದರ್ಶನ್' ರೈಲು ಸೇವೆ ಮಾದರಿಯಲ್ಲಿ ದಕ್ಷಿಣ ಭಾರತ್ ಯಾತ್ರೆಯ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಯಾತ್ರೆಗೆ ಜನವರಿ 18ರಿಂದ ಬುಕ್ಕಿಂಗ್ ಆರಂಭವಾಗಲಿದೆ.
ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಫೇಸ್‌ಬುಕ್ ಪುಟದಲ್ಲಿ ಈ ಯಾತ್ರೆಯ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಯಾತ್ರೆಯ ಮಾರ್ಗ, ದರದ ಮಾಹಿತಿ ನೀಡಿದ್ದಾರೆ. ಕರ್ನಾಟಕ ಸರ್ಕಾರದಿಂದ ಪ್ರತಿ ಯಾತ್ರಾರ್ಥಿಗೆ ರೂ. 5000 ಸಹಾಯಧನ ದೊರೆಯಲಿದೆ ಎಂದು ಹೇಳಿದ್ದಾರೆ.

ಪ್ಯಾಕೇಜ್ ವಿವರಗಳು; ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ 'ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ' ಘೋಷಣೆ ಮಾಡಿದೆ. ಈ ಯಾತ್ರೆ ರಾಮೇಶ್ವರ-ಕನ್ಯಾಕುಮಾರಿ-ಮಧುರೈ ಮತ್ತು ತಿರುವನಂತಪುರಂ ಅನ್ನು ಒಳಗೊಂಡಿದೆ. ಐಆರ್‌ಸಿಟಿಸಿ/ ಐಟಿಎಂಎಸ್ ವೆಬ್‌ಸೈಟ್ ಮೂಲಕ 18/1/2024ರಿಂದ ಬುಕ್ಕಿಂಗ್ ಆರಂಭ ಎಂದು ಮಾಹಿತಿ ನೀಡಲಾಗಿದೆ.
ಒಟ್ಟು 6 ದಿನಗಳ ಯಾತ್ರೆ ಇದಾಗಿದೆ. 3 ಟೈರ್ ಎಸಿ ರೈಲು ಪ್ರಯಾಣ, ತಿಂಡಿ-ಊಟ, ವಸತಿ ಮತ್ತು ದರ್ಶನ ವ್ಯವಸ್ಥೆಯನ್ನು ಒಳಗೊಂಡಿದೆ. ಯಾತ್ರಾರ್ಥಿಗಳ ಆರೋಗ್ಯ ಹಾಗೂ ಕ್ಷೇಮಾಭಿವೃದ್ಧಿದೃಷ್ಟಿಯಿಂದ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದು ಹೇಳಿದೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ರಾಮೇಶ್ವರ- ರಾಮೇಶ್ವರ ದೇವಾಲಯ. ಕನ್ಯಾಕುಮಾರಿ- ಶ್ರೀ ಭಗವತಿ ದೇವಾಲಯ. ಮಧುರೈ- ಶ್ರೀ ಮೀನಾಕ್ಷಿ ದೇವಾಲಯ. ತಿರುವನಂತಪುರಂ- ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನವನ್ನು ಈ ಪ್ಯಾಕೇಜ್ ಒಳಗೊಂಡಿದೆ.
ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15,000 ರೂ.ಗಳು. ಕರ್ನಾಟಕ ಸರ್ಕಾರದಿಂದ ಸಹಾಯಧನ 5000 ರೂ.ಗಳು. ಯಾತ್ರಿಯ ಪಾವತಿಸಬೇಕಾದ ಮೊತ್ತ ಕೇವಲ 10,000 ರೂ.ಗಳು. ಎಂದು ಫೇಸ್‌ಬುಕ್ ಪುಟದ ಪೋಸ್ಟ್‌ನಲ್ಲಿ ಮಾಹಿತಿ ನೀಡಲಾಗಿದೆ.
ಈ ವಿಶೇಷ ರೈಲು ಹೊರಡಲಿರುವ ದಿನಾಂಕಗಳು. ನಿರ್ಗಮನ 18/1/2024, ಆಗಮನ 23/1/2024. ನಿರ್ಗಮನ 30/1/2024, ಆಗಮನ 4/2/2024. ರೈಲು ಹತ್ತುವ ಮತ್ತು ಇಳಿಯುವ ನಿಲ್ದಾಣಗಳು ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ.
2022ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆ.ಎಸ್.ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ 'ಭಾರತ್ ಗೌರವ್ ಕಾಶಿ ದರ್ಶನ್' ರೈಲು ಸೇವೆಗೆ ಚಾಲನೆ ನೀಡಿದ್ದರು. ಕರ್ನಾಟಕದ ಮುಜರಾಯಿ ಇಲಾಖೆ, ರೈಲ್ವೆ ಇಲಾಖೆಯ ಈ ಜಂಟಿ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೇ ಮಾದರಿಯಲ್ಲಿ ದಕ್ಷಿಣ ಭಾಗರದ ದೇವಾಲಯಗಳ ದರ್ಶನಕ್ಕೆ ಸಹ ಮುಜರಾಯಿ ಇಲಾಖೆ ಪ್ಯಾಕೇಜ್ ಘೋಷಣೆ ಮಾಡಿದೆ.
ಭಾರತೀಯ ರೈಲ್ವೆ ನವೆಂಬರ್ 2021ರಲ್ಲಿ ಥೀಮ್ ಆಧಾರಿತ ಭಾರತ್ ಗೌರವ್ ರೈಲಿನ ಕಾರ್ಯಾಚರಣೆ ಆರಂಭಿಸಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಭಾರತ ಮತ್ತು ಪ್ರಪಂಚದ ಜನರಿಗೆ ಭಾರತ್ ಗೌರವ್ ರೈಲುಗಳ ಮೂಲಕ ಪರಿಚಯಿಸುವುದು ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆ ಭಾರತದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಲಿದೆ. ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಥೀಮ್-ಆಧಾರಿತ ರೈಲುಗಳನ್ನು ಓಡಿಸಲಾಗುತ್ತಿದೆ. ಇದು ಸಾಂಸ್ಕೃತಿ ಪರಿಚಯ ಮಾಡಿಕೊಡುವ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತಿದೆ.












Click it and Unblock the Notifications