ಬೆಂಗಳೂರು-ಕಾರವಾರ ನಡುವೆ ವಿಶೇಷ ರೈಲು, ವೇಳಾಪಟ್ಟಿ
ಬೆಂಗಳೂರು, ಜುಲೈ 24: ನೈಋತ್ಯ ರೈಲ್ವೆ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಬೆಂಗಳೂರು-ಕಾರವಾರ ನಡುವೆ ಎರಡು ಟ್ರಿಪ್ ಈ ವಿಶೇಷ ರೈಲು ಸಂಚಾರ ನಡೆಸಲಿದ್ದು, ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಡುವೆ ಎರಡು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಜುಲೈ 26 ಮತ್ತು 28ರಂದು ಈ ರೈಲುಗಳು ಸಂಚಾರ ನಡೆಸುತ್ತವೆ ಎಂದು ಮಾಹಿತಿ ನೀಡಲಾಗಿದೆ.

ವಿಶೇಷ ರೈಲು ವೇಳಾಪಟ್ಟಿ: ಬೆಂಗಳೂರು-ಕಾರವಾರ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಬಿಡುಗಡೆ ಮಾಡಿದೆ.
ಜುಲೈ 26 ಮತ್ತು 28 ರಂದು ರೈಲು ಸಂಖ್ಯೆ 06567 ಎಸ್‌ಎಂವಿಟಿ ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು ಎಸ್‌ಎಂವಿಟಿ ಬೆಂಗಳೂರಿನಿಂದ ಮಧ್ಯರಾತ್ರಿ 00:30 ಗಂಟೆಗೆ ಹೊರಟು, ಅದೇ ದಿನ ಸಂಜೆ 4 ಗಂಟೆಗೆ ಕಾರವಾರ ನಿಲ್ದಾಣವನ್ನು ತಲುಪಲಿದೆ.
ಪುನಃ ರೈಲು ಸಂಖ್ಯೆ 06568 ಜುಲೈ 26 ಮತ್ತು 28 ರಂದು ಕಾರವಾರ ನಿಲ್ದಾಣದಿಂದ ರಾತ್ರಿ 11:30ಕ್ಕೆ ಹೊರಟು, ಮರುದಿನ ಸಂಜೆ 3:30 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲು ಬಾಣಸವಾಡಿ, ಚಿಕ್ಕಬಾಣಾವರ, ಕುಣಿಗಲ್, ಚನ್ನಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಈ ವಿಶೇಷ ರೈಲು ಎಸಿ-ಟು ಟೈಯರ್-2, ಎಸಿ-ತ್ರಿ ಟೈಯರ್-2, ಸ್ಲೀಪರ್ ಕ್ಲಾಸ್-6, ಸಾಮಾನ್ಯ ದ್ವಿತೀಯ ದರ್ಜೆ-6 ಮತ್ತು ಎಸ್ಎಲ್‌ಆರ್/ಡಿ -2 ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತವೆ.
ಬೆಂಗಳೂರು ನಗರದಿಂದ ಹೊರಡುವ ರೈಲು ತುಮಕೂರು, ಹಾಸನ, ಉಡುಪಿ ಮೂಲಕ ಕಾರವಾರಕ್ಕೆ ಸಂಚಾರ ನಡೆಸಲಿದೆ. ಇದರಿಂದಾಗಿ ಹಲವು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಬೆಂಗಳೂರಿನಿಂದ ಸುರಿಯುವ ಮಳೆಯಲ್ಲಿ ಚಾರ್ಮಾಡಿ ಘಾಟ್, ಶಿರಾಡಿ ಘಾಟ್ ಮೂಲಕ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ತೊಂದರೆ ತಪ್ಪಲಿದೆ.
ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಆದ್ದರಿಂದ ರಾಜಧಾನಿ ಬೆಂಗಳೂರು-ಕರಾವಳಿ ಸಂಪರ್ಕಿಸುವ ಮಾರ್ಗದಲ್ಲಿ ಗುಡ್ಡ ಕುಸಿತ ಮುಂತಾದ ಕಾರಣದಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಇದರಿಂದಾಗಿ ಬೆಂಗಳೂರು ನಗರದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಸಂಚಾರ ನಡೆಸುವ ಜನರಿಗೆ ತೊಂದರೆಯಾಗಿದೆ. ಹೀಗಾಗಿ ಬೆಂಗಳೂರು-ಕರಾವಳಿ ನಡುವೆ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲು ಓಡಿಸಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಲಾಗಿತ್ತು.
ಅಲ್ಲದೇ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಈ ಕುರಿತು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸಚಿವರು ವಿಶೇಷ ರೈಲು ಸಂಚಾರ ಆರಂಭಿಸಲು ಒಪ್ಪಿಗೆ ನೀಡಿದ್ದರು.












Click it and Unblock the Notifications