Shivamogga Airport: ಶಿವಮೊಗ್ಗದಿಂದ 3 ಹೊಸ ಮಾರ್ಗಗಳಿಗೆ ವಿಮಾನ ಹಾರಾಟ ಆರಂಭ, ಸಮಯಗಳ ವಿವರ
ಶಿವಮೊಗ್ಗ, ನವೆಂಬರ್, 21: ಮಲೆನಾಡಿನ ಹೆಬ್ಬಾಗಿಲು ಅಂತಲೇ ಕರೆಸಿಕೊಳ್ಳುವ ಶಿವಮೊಗ್ಗದ ಹೊರವಲಯದಲ್ಲಿರುವ ಸೋಗಾನೆ ಬಳಿ ನಿರ್ಮಾಣ ಆಗಿರುವ ವಿಮಾನ ನಿಲ್ದಾಣದಿಂದ ಹೊಸ ಮೂರು ಮಾರ್ಗಗಳಿಗೆ ಇಂದಿನಿಂದ ವಿಮಾನ ಸೇವೆ ಆರಂಭ ಆಗಿದೆ. ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ಮೂರು ಹೊಸ ದೈನಂದಿನ ವಿಮಾನಗಳ ಸಂಚಾರವನ್ನು ಪ್ರಾರಂಭ ಮಾಡಿದೆ.
ಈಗಾಗಲೇ ಶಿವಮೊಗ್ಗ-ಬೆಂಗಳೂರು ಸಂಚಾರ ಆರಂಭವಾಗಿದೆ. ಇದೀಗ ಹೈದರಾಬಾದ್, ಗೋವಾ, ತಿರುಪತಿಗೂ ಒಟ್ಟು ನಾಲ್ಕು ಮಾರ್ಗಗಗಳಿಗೆ ವಿಮಾನ ಸಂಚಾರ ಆರಂಭ ಆದಂತಾಗಿದೆ. ವಿಮಾನಯಾನ ಸಂಸ್ಥೆಯು ತಮ್ಮ ಹೊಸ Embraer E175 ವಿಮಾನವನ್ನು ಬಳಸಿಕೊಂಡು ಈ ಬಹು ನಿರೀಕ್ಷಿತ ಮಾರ್ಗಗಳಲ್ಲಿ ಸಂಚಾರ ಆರಂಭ ಮಾಡಿದೆ.

ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ವಾರದಲ್ಲಿ ಸ್ಟಾರ್ ಏರ್‌ನಿಂದ ನಾಲ್ಕು ದಿನ ವಿಮಾನ ಹಾರಾಟ ಇಂದಿನಿಂದಲೇ ಆರಂಭ ಆಗಿದೆ. ಶಿವಮೊಗ್ಗ-ಗೋವಾ, ಹೈದರಾಬಾದ್ ಮತ್ತು ತಿರುಪತಿ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ಈ ವಿಮಾನ ಹಾರಾಟ ಸೌಲಭ್ಯ ಇರಲಿದೆ. ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ಉಡಾನ್ ಯೋಜನೆಯಡಿ ಈ ಮೂರು ಮಾರ್ಗಗಗಳಿಗೆ ಹೋಗಲು ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗೆ ಸಬ್ಸಿಡಿ ನೀಡಲಿದೆ. ಎಕಾನಮಿ ಕ್ಲಾಸ್‌ನಲ್ಲಿ 1,999 ರೂಪಾಯಿ ಪಾವತಿಸಿ ಟಿಕೆಟ್ ಪಡೆಯಬಹುದಾಗಿದೆ.

ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟಿಸಿದ್ದರು. ಬಳಿಕ ಆಗಸ್ಟ್ 31ರಿಂದ ಶಿವಮೊಗ್ಗ- ಬೆಂಗಳೂರು ವಿಮಾನ ಸಂಚಾರ ಆರಂಭ ಆಗಿತ್ತು. ಇದೀಗ ಇಂದಿನಿಂದ ಮತ್ತೆ ಮೂರು ನಗರಗಳಿಗೆ ಶಿವಮೊಗ್ಗ ಏರ್‌ಪೋರ್ಟ್ ಮೂಲಕ ಸಂಪರ್ಕ ಲಭ್ಯ ಆಗಲಿದೆ. ಹೈದರಾಬಾದ್ ಹಾಗೂ ತಿರುಪತಿಗೆ ವಾರದಲ್ಲಿ 4 ದಿನ ಮಾತ್ರ ವಿಮಾನ ಸಂಚಾರ ಇರಲಿದೆ. ಉಡಾನ್ ಯೋಜನೆಯ ಸಬ್ಸಿಡಿ ಪಡೆಯುವವರು ಮೊದಲೇ ಟಿಕೆಟ್ ಬುಕಿಂಗ್ ಮಾಡಬೇಕಿದೆ.
ಶಿವಮೊಗ್ಗ-ಗೋವಾ ಮಾರ್ಗದ ವಿವರ
ಶಿವಮೊಗ್ಗದಿಂದ ಮಧ್ಯಾಹ್ನ 1:55ಕ್ಕೆ ವಿಮಾನ ಹೊರಡಲಿದ್ದು, ಮಧ್ಯಾಹ್ನ 2:40ಕ್ಕೆ ಗೋವಾ ತಲುಪಲಿದೆ. ಗೋವಾದಿಂದ ಮಧ್ಯಾಹ್ನ 3:10ಕ್ಕೆ ಹೊರಟು ಸಂಜೆ 4:05ಕ್ಕೆ ಶಿವಮೊಗ್ಗ ತಲುಪಲಿದೆ. ಬುಧವಾರ ಶಿವಮೊಗ್ಗದಿಂದ ಗೋವಾಕ್ಕೆ ಬೆಳಗ್ಗೆ 11 ಗಂಟೆಗೆ ಹೊರಡುವ ವಿಮಾನ ಬೆಳಗ್ಗೆ 11.50ಕ್ಕೆ ಗೋವಾ ತಲುಪಿ, ಅಲ್ಲಿಂದ ಮಧ್ಯಾಹ್ನ 12:20ಕ್ಕೆ ಹೊರಟು ಮಧ್ಯಾಹ್ನ1.10ಕ್ಕೆ ಶಿವಮೊಗ್ಗ ತಲುಪಲಿದೆ.
ಶಿವಮೊಗ್ಗ-ಹೈದರಬಾದ್ ಮಾರ್ಗದ ವಿವರ
ಹೈದರಬಾದ್‌ನಿಂದ ಬೆಳಗ್ಗೆ 9:35ಕ್ಕೆ ಹೊರಟು ಬೆಳಗ್ಗೆ 10:35ಕ್ಕೆ ಶಿವಮೊಗ್ಗ ತಲುಪಿ, ಮತ್ತೆ ಇಲ್ಲಿಂದ ಸಂಜೆ 4:30ಕ್ಕೆ ಹೊರಟು ಸಂಜೆ 5:30ಕ್ಕೆ ಹೈದರಾಬಾದ್ ತಲುಪಲಿದೆ.
ಶಿವಮೊಗ್ಗ-ತಿರುಪತಿ ಮಾರ್ಗದ ವಿವರ
ಶಿವಮೊಗ್ಗದಿಂದ ಬೆಳಗ್ಗೆ 11ಕ್ಕೆ ಹೊರಟು 11:50ಕ್ಕೆ ತಿರುಪತಿ, ಅಲ್ಲಿಂದ ಮಧ್ಯಾಹ್ನ 12:15ಕ್ಕೆ ಹೊರಟು ಮಧ್ಯಾಹ್ನ 1:40ಕ್ಕೆ ಶಿವಮೊಗ್ಗ ತಲುಪಲಿದೆ. ಇನ್ನು ಬುಧವಾರ ಶಿವಮೊಗ್ಗದಿಂದ ಮಧ್ಯಾಹ್ನ 1:40ಕ್ಕೆ ಹೊರಟು, 2:30ಕ್ಕೆ ತಿರುಪತಿ ತಲುಪಲಿದೆ. ಮತ್ತೆ ತಿರುಪತಿಯಿಂದ ಮಧ್ಯಾಹ್ನ 3ಕ್ಕೆ ಹೊರಟು 3:50ಕ್ಕೆ ಶಿವಮೊಗ್ಗ ತಲುಪಲಿದೆ. ಇನ್ನು ಶಿವಮೊಗ್ಗ-ಬೆಂಗಳೂರು ಈಗಾಗಲೇ ಇಂಡಿಗೋ ಸಂಸ್ಥೆಯ ವಿಮಾನ ಸೇವೆ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಿಗೂ ಸಂಪರ್ಕ ಕಲ್ಪಿಸುವ ಉದ್ದೇಶ ಇದೆ ಎಂದು ತಿಳಿದುಬಂದಿದೆ.
ಹೈದರಾಬಾದ್‌ನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಅನ್ವೇಷಿಸುವ ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಶಿವಮೊಗ್ಗ- ಹೈದರಾಬಾದ್ ತಡೆರಹಿತ ದೈನಂದಿನ ವಿಮಾನಗಳ ಸೇವೆ ಲಭ್ಯ ಇರುತ್ತದೆ ಎಂದು ಸ್ಟಾರ್ ಏರ್ ಮೂಲಗಳಿಂದ ತಿಳಿದುಬಂದಿದೆ.
ದೈನಂದಿನ ವಿಮಾನಗಳು ಶಿವಮೊಗ್ಗದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ವೆಂಕಟೇಶ್ವರ ದೇವಸ್ಥಾನ ಮತ್ತು ಇತರ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲ ಆಗಲಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆನಂದಿಸಬಹುದು ಮತ್ತು Embraer E175ನಲ್ಲಿನ ಸೌಕರ್ಯವನ್ನು ಅನುಭವಿಸಬಹುದಾಗಿದೆ.
ಇನ್ನು ಗೋವಾದ ಕಡಲತೀರಗಳಿಗೆ ಭೇಟಿ ನೀಡುವವರಿಗೆ, ಸ್ಟಾರ್ ಏರ್ ದೈನಂದಿನ ವಿಮಾನಗಳ ಸೇವೆಯನ್ನು ನೀಡಲಿದೆ. ಇದು ಗೋವಾದ ಕರಾವಳಿಗೆ ಸಂಪರ್ಕ ಒದಗಿಸುತ್ತದೆ ಎಂದು ಸ್ಟಾರ್ ಏರ್ ತಿಳಿಸಿದೆ. ಇನ್ನು Embraer E175 ತನ್ನ ಸೌಕರ್ಯ ಮತ್ತು ಕಾರ್ಯಕ್ಷಮತೆಗೆ ಹೆಸರುವಾಸಿ ಆಗಿದೆ. ಇದು ಈ ಹೊಸ ಮಾರ್ಗಗಳಿಗೆ ಸೂಕ್ತವಾದ ಆಯ್ಕೆ ಆಗಿದೆ ಎಂದು ಸ್ಟಾರ್ ಏರ್
ಹೇಳಿದೆ.












Click it and Unblock the Notifications