ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮಕ್ಕೆ ಹೋಗುವ ಮಾರ್ಗ? ಇಲ್ಲಿದೆ ಮಾಹಿತಿ
ಶಿವಮೊಗ್ಗ, ಅಕ್ಟೋಬರ್, 16; ವಿವಿಧ ಪಕ್ಷಿಗಳ ಕಲರವ, ಹುಲಿ, ಸಿಂಹಗಳ ಘರ್ಜನೆ, ನೀರು ಕುದುರೆಯ ಕಣ್ಣಾಮುಚ್ಚಾಲೆ, ಕಾಡು ಕೋಣದ ರೋಷಾವೇಶದ ನೋಟಗಳನ್ನು ಶಿವಮೊಗದ ತ್ಯಾವರೆಕೊಪ್ಪದಲ್ಲಿ ಕಾಣಬಹುದಾಗಿದೆ. ಪ್ರತಿ ತಿಂಗಳು ಸಾವಿರಾರು ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಭೇಟಿ ನೀಡುತ್ತಾರೆ. ಹಾಗೂ ಇಲ್ಲಿನ ಪ್ರಾಣಿ ಪ್ರಪಂಚದ ಕುತೂಹಲಕಾರಿ ಸಂಗತಿಗಳನ್ನು ತಿಳಿದು ಹೋಗುತ್ತಾರೆ.
ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದೆ. ಮೈಸೂರು, ಬನ್ನೇರುಘಟ್ಟದ ನಂತರ ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಅರಣ್ಯದ ನಡುವೆ 250 ಹೆಕ್ಟೇರ್ ಪ್ರದೇಶದಲ್ಲಿ ಈ ಮೃಗಾಲಯವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಪ್ರವಾಸಿಗರು ಪ್ರಾಣಿ ಲೋಕದ ಜೊತೆಗೆ ಸಸ್ಯ ಪ್ರಪಂಚವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಕಿಕ್ಕಿರಿದು ಬರುತ್ತಾರೆ. ಇನ್ನು ಅರಣ್ಯದ ನಡುವೆ ಪ್ರಾಣಿಗಳನ್ನು ಸ್ವತಂತ್ರವಾಗಿ ಓಡಾಡುವುದನ್ನು ನೋಡಿ ಆನಂದಿಸಲು ಇಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.
ಇಲ್ಲಿ ವಿವಿಧ ರೀತಿಯ ಪಕ್ಷಿಗಳನ್ನು ಅತ್ಯಂತ ಹತ್ತಿರದಿಂದ ನೋಡಬಹುದಾಗಿದೆ. ಹಲವು ಜಾತಿಯ ಪಕ್ಷಿಗಳನ್ನು ಕಂಡು ಪ್ರವಾಸಿಗರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಈ ಪಕ್ಷಿಗಳನ್ನು ನೋಡಲು ಮತ್ತು ಅವುಗಳ ಫೋಟೋ ಕ್ಲಿಕ್ಕಿಸಲು ಇಲ್ಲಿ ವಿಶಾಲವಾದ ವ್ಯವಸ್ಥೆ ಮಾಡಲಾಗಿದೆ. ಗಾಜಿನ ಒಳಗಿನಿಂದ ಪಕ್ಷಿಗಳನ್ನು ನೋಡಬಹುದಾಗಿದೆ. ಸ್ವಲ್ಪ ದೊಡ್ಡ ಗಾತ್ರದ ಪಕ್ಷಿಗಳು ವಿಶಾಲವಾದ ಜಾಗದಲ್ಲಿ ಓಡಾಡಲು ಇಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.

ಮುಕುಂದ ಚಂದ್ರ ಹೇಳಿದ್ದೇನು?
ಹುಲಿ, ಸಿಂಹಧಾಮದಲ್ಲಿ ವ್ಯಾಘ್ರಗಳನ್ನು ಅತ್ಯಂತ ಸಮೀಪದಿಂದ ದರ್ಶನ ಮಾಡಬಹುದಾಗಿದೆ. ಚಿರತೆ, ಕರಡಿ, ನೀರು ಕುದುರೆ, ನೀಲ್ ಗಾಯ್, ಜಿಂಕೆಗಳು, ಕಾಡು ಕೋಣ ಸೇರಿದಂತೆ ಹಲವು ಪ್ರಾಣಿಗಳನ್ನು ಇಲ್ಲಿ ಹತ್ತಿರದಿಂದ ನೋಡಬಹುದಾಗಿದೆ. ‘ಮೃಗಾಲಯಕ್ಕೆ ನೀರು ಕುದುರೆ, ನೀಲ್ ಗಾಯ್ ಸೇರಿದಂತೆ ಹಲವು ಹೊಸ ಪ್ರಾಣಿಗಳನ್ನು ತರಿಸಲಾಗಿದೆ. ಪ್ರಾಣಿಗಳಿಗೆ ವಿಶಾಲವಾದ ಜಾಗವಿದೆ. ಅವು ಮುಕ್ತವಾಗಿ ಓಡಾಡಿಕೊಂಡಿರುತ್ತವೆ," ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ ಚಂದ್ರ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಮೃಗಾಲಯದ ವಾಹನದಲ್ಲೇ ಸಫಾರಿ
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಪ್ರಮುಖ ಆಕರ್ಷಣೆ ಇಲ್ಲಿನ ಸಫಾರಿ ಆಗಿದೆ. ಪ್ರವಾಸಿಗರು ಕಾಡಿನ ನಡುವೆ ಸಫಾರಿಗೆ ತೆರಳಿದರೆ ಪ್ರಾಣಿ ಪ್ರಪಂಚದ ಹಲವು ಕುತೂಹಲಕಾರಿ ಸಂಗತಿಗಳು ಅನಾವರಣಗೊಳ್ಳಲಿದೆ. ಸುಮಾರು ಒಂದು ಗಂಟೆಯ ಸಫಾರಿಯ ಸಂದರ್ಭದಲ್ಲಿ ಹುಲಿ, ಸಿಂಹಗಳು, ಜಿಂಕೆ, ನೀಲ್ ಗಾಯ್‌ಗಳನ್ನು ಕಾಣಬಹುದಾಗಿದೆ. ಮೃಗಾಲಯಕ್ಕೆ ಸೇರಿದ ವ್ಯಾನ್, ಜೀಪಿನಲ್ಲಿಯೇ ಸಫಾರಿಗೆ ತೆರಳಬೇಕಾಗುತ್ತದೆ. ಇದಕ್ಕೆ ಪ್ರತ್ಯೇಕ ದರ ನಿಗದಿಯನ್ನು ಮಾಡಲಾಗಿದೆ.

ಚಿಟ್ಟೆ ಪಾರ್ಕ್ ಆರಂಭಕ್ಕೆ ಭರದ ಸಿದ್ಧತೆ
ಹುಲಿ ಮತ್ತು ಸಿಂಹ ಧಾಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಮತ್ತು ಪ್ರಾಣಿ, ಪಕ್ಷಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೃಗಾಲಯದಲ್ಲಿ ಸದ್ಯದಲ್ಲೇ ಚಿಟ್ಟೆ ಪಾರ್ಕ್ ಆರಂಭಿಸಲಾಗುತ್ತದೆ. ಹಾಗೂ ಕಾಡುಕೋಣಗಳ ಪಾರ್ಕ್ ಕೂಡ ನಿರ್ಮಿಸಲಾಗುತ್ತಿದೆ. ಇದರಿಂದ ಹೊಸ ಪ್ರಾಣಿಗಳ ಪರಿಚಯವಾದಂತಾಗುತ್ತದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. "ನೀರು ಕುದುರೆಗಳು ಸಾಮಾನ್ಯವಾಗಿ ಆಫ್ರಿಕಾ ದೇಶದಲ್ಲಿ ಕಂಡುಬರುತ್ತವೆ. ಈಗ ಇಲ್ಲಿನ ವಾತಾವರಣಕ್ಕೂ ಅವುಗಳು ಹೊಂದಿಕೊಂಡಿವೆ. ಇತ್ತೀಚೆಗೆ ಮೈಸೂರು ಮೃಗಾಲಯದಿಂದ ಎರಡು ನೀರು ಕುದುರೆಗಳನ್ನು ಒದಗಿಸಿದ್ದಾರೆ. ಅವುಗಳಿಗೆ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಿದ್ದೇವೆ," ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ ಚಂದ್ರ ತಿಳಿಸಿದ್ದಾರೆ.

ಯಾವ ದಿನ ಮೃಗಾಲಯಕ್ಕೆ ರಜೆ?
ಶಿವಮೊಗ್ಗ ತಾಲೂಕು ತ್ಯಾವರೆಕೊಪ್ಪ ಗ್ರಾಮದಲ್ಲಿ ಹುಲಿ ಮತ್ತು ಸಿಂಹಧಾಮವಿದೆ. ಶಿವಮೊಗ್ಗ ನಗರದಿಂದ ಸಾಗರ ರಸ್ತೆಯ ಮೂಲಕ 10 ಕಿಲೋ ಮೀಟರ್ ಸಾಗಿದರೆ ಮೃಗಾಲಯ ಸಿಗಲಿದೆ. ಸಾಗರ, ಹೊಸನಗರ, ಆಯನೂರು ಕಡೆಗೆ ತೆರಳುವ ಬಸ್ಸುಗಳು ತ್ಯಾವರೆಕೊಪ್ಪದಲ್ಲಿ ನಿಲುಗಡೆ ಕೊಡುತ್ತವೆ. ಕಾರು, ಬಸ್ಸು, ದ್ವಿಚಕ್ರ ವಾಹನಗಳಲ್ಲಿ ಆಗಮಿಸುವ ಪ್ರವಾಸಿಗರಿಗೂ ಉತ್ತಮ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಂಗಳವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಸಿಂಹಧಾಮಕ್ಕೆ ರಜೆ ಇರಲಿದೆ. ವಿಶೇಷ ಸಂದರ್ಭದಲ್ಲಿ ಈ ರಜೆ ದಿನಗಳಲ್ಲಿಯೂ ಹುಲಿ ಮತ್ತು ಸಿಂಹಧಾಮದ ಬಾಗಿಲು ತೆರೆದಿರುತ್ತದೆ. ಸಿಂಹಧಾಮದಲ್ಲಿ ಮಕ್ಕಳ ಆಟಕ್ಕೆ ಪ್ರತ್ಯೇಕ ವ್ಯವಸ್ಥೆ ಇದೆ. ಪ್ರವಾಸಿಗರಿಗೆ ಕ್ಯಾಂಟೀನ್, ಸೂಕ್ತ ಶೌಚಾಲಯ ವ್ಯವಸ್ಥೆಯು ಇದೆ. ಹಾಗೆಯೇ ಫೋಟೋ, ಸೆಲ್ಫಿ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಇದಾಗಿದೆ.












Click it and Unblock the Notifications