ಕೇವಲ ಯೂಟ್ಯೂಬ್ ನೋಡಿಯೇ JEE ಪಾಸ್: ಕೋಚಿಂಗ್ ಇಲ್ಲದೆ ಐಐಟಿ ಮದ್ರಾಸ್ ಸೇರಿದ ಮಿತ್ ಜೈನ್ ಯಶೋಗಾಥೆ
ಚೆನ್ನೈ/ಬೆಂಗಳೂರು: ಜೆಇಇ ಪಾಸ್ ಮಾಡುವುದು ಸುಲಭದ ಮಾತಲ್ಲ ಎನ್ನುವುದು ಎಲ್ಲರಿಗೂ ಗೊತ್ತೇಯಿದೆ. ಇದಕ್ಕಾಗಿ ಫೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿ ಕೋಚಿಂಗ್ ಸೆಂಟರ್‌ಗಳಿಗೆ ಕಳಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಯುವಕ ಯಾವುದೇ ಅಧಿಕೃತ ಕೋಚಿಂಗ್ ಸಂಸ್ಥೆಗೆ ಸೇರದೆ, ಕೇವಲ ಯೂಟ್ಯೂಬ್ ಉಪನ್ಯಾಸಗಳನ್ನು ನೋಡಿ ಸಿದ್ಧತೆ ನಡೆಸಿ ಮದ್ರಾಸ್ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (CSE) ಸೇರಿಕೊಂಡಿದ್ದಾನೆ.
ಈ ಯುವಕನ ಹೆಸರು ಮಿತ್ ಆರ್ ಜೈನ್. ಇವರ ಸಾಧನೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯೂ ಹೌದು. ಗಣಿತದ ಯೂಟ್ಯೂಬ್ ವಿಡಿಯೋಗಳನ್ನು ನೋಡುವ ಕುತೂಹಲದಿಂದ ಆರಂಭವಾದ ಇವರ ಪಯಣ, ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಗೆಲ್ಲುವ ತನಕವೂ ಮುಂದುವರೆದಿದೆ.

"ನಾನು ಅನೇಕರಂತೆ ಜೆಇಇ ಸಿದ್ಧತೆಗಾಗಿ ಕೋಚಿಂಗ್‌ಗೆ ಹೋಗಲಿಲ್ಲ. ಅನ್‌ಅಕಾಡೆಮಿ ಯೂಟ್ಯೂಬ್ ಚಾನೆಲ್‌ನ ವಿಡಿಯೋಗಳನ್ನು ನೋಡುತ್ತಾ ನಾನೇ ಸ್ವಂತವಾಗಿ ಅಧ್ಯಯನ ಮಾಡಿದೆ. ಕೋಚಿಂಗ್ ಇಲ್ಲದ ಕಾರಣ ಇತರ ವಿದ್ಯಾರ್ಥಿಗಳ ಪರಿಚಯವಿರಲಿಲ್ಲ ಹಾಗೂ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಮೆಂಟರ್‌ಗಳು ಇರಲಿಲ್ಲ. ಒಂಟಿತನ ಕಾಡುತ್ತಿತ್ತು. ಆದರೂ ನಿರಂತರ ಅಧ್ಯಯನದಿಂದ ಗುರಿ ಮುಟ್ಟಿದೆ," ಎನ್ನುತ್ತಾರೆ ಮಿತ್.
ಟಾಪರ್ ಆಗಿದ್ದ ಮಿತ್
ರಾಜಸ್ಥಾನದ ಜಾಲೋರ್ ಜಿಲ್ಲೆಯ ಭಿನ್ಮಾಲ್ ಮೂಲದವರಾದರೂ ಮಿತ್ ಬೆಳೆದದ್ದು ಚೆನ್ನೈನಲ್ಲಿ. ಅಲ್ಲಿನ ಮಹರ್ಷಿ ವಿದ್ಯಾ ಮಂದಿರ್ ಶಾಲೆಯಲ್ಲಿ 12ನೇ ತರಗತಿಯನ್ನು ಶೇ.99.8 ಅಂಕಗಳೊಂದಿಗೆ ಪೂರ್ಣಗೊಳಿಸಿ ಇಡೀ ತಮಿಳುನಾಡಿಗೆ ಟಾಪರ್ ಆಗಿದ್ದರು. ನಂತರ 2022ರಲ್ಲಿ ಜೆಇಇ ಮೇನ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 77ನೇ ರ‍್ಯಾಂಕ್ ಹಾಗೂ ಜೆಇಇ ಅಡ್ವಾನ್ಸ್ಡ್‌ನಲ್ಲಿ 579ನೇ ರ‍್ಯಾಂಕ್ ಪಡೆದು ಐಐಟಿ ಪ್ರವೇಶಿಸಿದ್ದರು.
ಐಐಟಿ ಮದ್ರಾಸ್ ಜೀವನ
ಜೋಸಾ ಕೌನ್ಸೆಲಿಂಗ್ ವೇಳೆ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಮಾತ್ರ ಆಸಕ್ತಿ ಹೊಂದಿದ್ದ ಅವರು, ಆರಂಭದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸೇರಿ, ನಂತರ ಬ್ರಾಂಚ್ ಬದಲಾಯಿಸಿ ಕಂಪ್ಯೂಟರ್ ಸೈನ್ಸ್ (CSE) ವಿಭಾಗಕ್ಕೆ ಸೇರಿದರು. ಪ್ರಸ್ತುತ ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಾರೆ.
"ನವೆಂಬರ್ 2022ರಲ್ಲಿ ಕ್ಯಾಂಪಸ್‌ಗೆ ಕಾಲಿಟ್ಟಾಗ ಹಾಸ್ಟೆಲ್ ಜೀವನ ಸಂಪೂರ್ಣ ಹೊಸದಾಗಿತ್ತು. ನಾನು ಜೈನ್ ಆಹಾರ ಪದ್ಧತಿಯನ್ನು ಪಾಲಿಸುವುದರಿಂದ, ಐಐಟಿಯಲ್ಲಿ ಪ್ರತ್ಯೇಕ ಜೈನ್ ಮೆಸ್ ಇದ್ದದ್ದು ಬಹಳ ನೆರವಾಯಿತು," ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಮೊದಲ ಸೆಮಿಸ್ಟರ್‌ನಿಂದಲೇ ಕ್ಯಾಂಪಸ್‌ನ ಹಲವು ಕ್ಲಬ್‌ಗಳಲ್ಲಿ ಸಕ್ರಿಯರಾಗಿದ್ದ ಇವರು, ಪ್ರೊಫೆಸರ್‌ಗಳಾದ ಮುರುಗೈಯನ್ ಅಮೃತಲಿಂಗಂ, ಸತ್ಯನಾರಾಯಣ ಎನ್. ಗುಮ್ಮಡಿ ಮತ್ತು ಫ್ಯಾಕಲ್ಟಿ ಅಡ್ವೈಸರ್ ಐಶ್ವರ್ಯ ತಿರುವೇಂಗಡಂ ಅವರ ಬೆಂಬಲವನ್ನು ಸ್ಮರಿಸುತ್ತಾರೆ. 'ಶಾಸ್ತ್ರ' ಟೆಕ್ ಫೆಸ್ಟ್, ಎಐ ಕ್ಲಬ್, ಸ್ಟಾರ್ಟ್ಅಪ್ ಸರ್ವೀಸಸ್ ಹಾಗೂ ಅವಿಷ್ಕಾರ್ ಹೈಪರ್‌ಲೂಪ್‌ಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ತಮ್ಮ ಅಂತಿಮ ವರ್ಷದಲ್ಲಿ ಸಹ-ಪಠ್ಯ ಚಟುವಟಿಕೆಗಳ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗಿನ ಸಂವಾದ ಕಾರ್ಯಕ್ರಮವನ್ನು ಕ್ಯಾಂಪಸ್‌ನಲ್ಲಿ ಆಯೋಜಿಸುವಂತಹ ಅಪರೂಪದ ಅವಕಾಶವನ್ನು ಮಿತ್ ಪಡೆದುಕೊಂಡಿದ್ದರು. ಇತ್ತೀಚೆಗೆ ಎನ್‌ಕೆ ಸೆಕ್ಯೂರಿಟೀಸ್ ರಿಸರ್ಚ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದ ಇವರು, ಕಾರ್ಪೊರೇಟ್ ಜಗತ್ತಿನ ಕಾರ್ಯವೈಖರಿಯನ್ನು ಅರಿತುಕೊಂಡಿದ್ದಾರೆ. ಇದೀಗ ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ವಲಯದಲ್ಲಿ ಅವರಿಗೆ ಪ್ರೀ-ಪ್ಲೇಸ್‌ಮೆಂಟ್ ಆಫರ್ (PPO) ಕೂಡ ಒಲಿದು ಬಂದಿದೆ.
ಸದ್ಯಕ್ಕೆ ಅದೇ ಕ್ಷೇತ್ರದಲ್ಲಿ ಮುಂದುವರಿಯುವ ಗುರಿ ಹೊಂದಿರುವ ಇವರು, ಭವಿಷ್ಯದಲ್ಲಿ ಸ್ವಂತ ಉದ್ಯಮ ಅಥವಾ ಜಾಗತಿಕ ಮಟ್ಟದ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ (MBA ಅಥವಾ MS) ಮಾಡುವ ಆಲೋಚನೆಯನ್ನೂ ಹೊಂದಿದ್ದಾರೆ. ಇವರ ಈ ಯಶೋಗಾಥೆ ಕೋಚಿಂಗ್ ಇಲ್ಲದೆ ಸಾಧನೆ ಮಾಡಲು ಹೊರಟಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ದೊಡ್ಡ ಪಾಠವಾಗಿದೆ.












Click it and Unblock the Notifications