ಮಂಗಳೂರು-ಯಶವಂತಪುರ ರೈಲು ಅರಸೀಕೆರೆ ಮೂಲಕ ಸಾಗಲಿ
ಬೆಂಗಳೂರು, ಜೂನ್ 06: ಬೆಂಗಳೂರಿನ ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವಿನ ವಿಶೇಷ ರೈಲು ಕೇರಳ ಮೂಲಕ ಸಂಚಾರ ನಡೆಸಲು ಪ್ರಸ್ತಾಪ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ರೈಲನ್ನು ಕರ್ನಾಟಕದ ಹಾಸನ ಜಿಲ್ಲೆಯ ಅರಸೀಕೆರೆ ಮೂಲಕ ಓಡಿಸಬೇಕು ಎಂದು ಮನವಿ ಮಾಡಲಾಗಿದೆ.
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಮಂಗಳೂರು ಸೆಂಟ್ರಲ್-ಯಶವಂತಪುರ ವಿಶೇಷ ರೈಲನ್ನು ಕೇರಳದ ಶೋರ್ನೂರ್ ಮೂಲಕ ಓಡಿಸಲು ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಕಳಿಸಿದೆ. ಇದಕ್ಕೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅರಸೀಕೆರೆ ಮೂಲಕ ಓಡಿಸುವಂತೆ ಮನವಿ ಮಾಡಿದ್ದಾರೆ.

ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಹಿನ್ನಲೆಯಲ್ಲಿ ಕರ್ನಾಟಕದ ಕರಾವಳಿ ಮತ್ತು ರಾಜಧಾನಿ ಬೆಂಗಳೂರು ಸಂಪರ್ಕಿಸಲು ಮಂಗಳೂರು ಸೆಂಟ್ರಲ್-ಯಶವಂತಪುರಕ್ಕೆ ಸಾಪ್ತಾಹಿಕವಾಗಿ ವಿಶೇಷ ರೈಲು ಓಡಿಸುವ ಪ್ರಸ್ತಾವನೆ ಇದೆ. ಆದರೆ ಈ ರೈಲು ಕೇರಳದ ಪಾಲಕ್ಕಾಡ್ ಜಂಕ್ಷನ್ ಮೂಲಕ ಓಡಿಸಲು ಪ್ರಸ್ತಾಪಿಸಲಾಗಿದೆ.
ಹಲವು ರೈಲುಗಳ ಸಂಚಾರ; ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಮಂಗಳೂರು ಸೆಂಟ್ರಲ್ ಮತ್ತು ಕೇರಳ ರಾಜಧಾನಿ ತಿರುವನಂತಪುರ ನಡುವೆ ವಾರದಲ್ಲಿ ಎರಡು ಬಾರಿ ವಿಶೇಷ ರೈಲು, ಮಂಗಳೂರು ಸೆಂಟ್ರಲ್-ಯಶವಂತಪುರ ನಡುವೆ ವಿಶೇಷ ರೈಲು ಓಡಾಟಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಇದರಲ್ಲಿ ಬೆಂಗಳೂರು ರೈಲು ಅರಸೀಕರೆ ಮೂಲಕ ಸಾಗಬೇಕು ಎಂಬುದು ಬೇಡಿಕೆ.

ಪ್ರಸ್ತುತ ವಾರಕ್ಕೊಮ್ಮೆ ರೈಲು ಸಂಖ್ಯೆ 16565/ 66 ಮಂಗಳೂರು ಸೆಂಟ್ರಲ್-ಯಶವಂತಪುರ ಜಂಕ್ಷನ್ ನಡುವೆ ಸಾಪ್ತಾಹಿಕವಾಗಿ ಓಡುತ್ತಿದೆ. ರೈಲಿಗೆ ಕಣ್ಣೂರು ಮತ್ತು ಬೆಂಗಳೂರು ನಡುವೆ ಮಾತ್ರ ಹೆಚ್ಚಿನ ಬೇಡಿಕೆಯಿದೆ. ಮಂಗಳೂರು ಕಡೆ ಹೆಚ್ಚಿನ ಪ್ರಯಾಣಿಕರು ಆಗಮಿಸುತ್ತಿಲ್ಲ ಎಂಬ ವಾದವೂ ಇದೆ.
ಮಂಗಳೂರು-ಬೆಂಗಳೂರು ನಡುವೆ ಈಗಿರುವ ರೈಲುಗಳು ಹೆಚ್ಚಿನ ದಟ್ಟಣೆಯಿಂದ ಕೂಡಿವೆ. ಆದ್ದರಿಂದ ಇನ್ನೊಂದು ರೈಲಿನ ಅವಶ್ಯಕತೆಯಿದೆ ಎಂಬ ಬೇಡಿಕೆಯೂ ಇದೆ. ಹಾಸನ ಮೂಲಕ ಸಂಚಾರ ನಡೆಸುವ ರೈಲು ಸಂಖ್ಯೆ 16511/ 12 ಕಣ್ಣೂರು-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಎಕ್ಸ್‌ಪ್ರೆಸ್ ಹಾಗೂ ರೈಲು ಸಂಖ್ಯೆ 16585/ 86 ಮಂಗಳೂರು ಸೆಂಟ್ರಲ್- ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಬಹುಬೇಡಿಕೆಯಿದೆ.
ಪಶ್ಚಿಮ ಕರಾವಳಿ ರೈಲು ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಮಾತನಾಡಿ, "ಮಂಗಳೂರು ಸೆಂಟ್ರಲ್‌ನಿಂದ ಹಾಸನ, ಅರಸೀಕೆರೆ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಯಾವುದೇ ರೈಲು ಇಲ್ಲ. ಆದ್ದರಿಂದ ಮಂಗಳೂರು ಸೆಂಟ್ರಲ್-ಯಶವಂತಪುರ ರೈಲನ್ನು ಅರಸೀಕೆರೆ ಮಾರ್ಗವಾಗಿ ಓಡಿಸಬೇಕು ಎಂಬುದು ಬೇಡಿಕೆಯಾಗಿದೆ" ಎಂದು ಹೇಳಿದ್ದಾರೆ.
ಮಂಗಳೂರಿಗೆ ವಂದೇ ಭಾರತ್ ರೈಲು ವಿಸ್ತರಿಸಿ; ಮುಂಬೈ-ಗೋವಾ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಉಡುಪಿ ಮೂಲಕ ಮಂಗಳೂರಿಗೆ ವಿಸ್ತರಿಸುವಂತೆ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಅವರನ್ನು ಭೇಟಿ ಮಾಡಿ ಅವರ ಮೂಲಕ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮನವಿ ಸಲ್ಲಿಸಿದ್ದಾರೆ.
ಭಾರತೀಯ ರೈಲ್ವೆ ಶೀಘ್ರವೇ ಗೋವಾ-ಮುಂಬೈ ನಡುವೆ ವಂದೇ ಭಾರತ್ ರೈಲುಸೇವೆಯನ್ನು ಆರಂಭಿಸಲಿದೆ. ಇದನ್ನು ಮಂಗಳೂರಿನ ತನಕ ವಿಸ್ತರಿಸಿದಲ್ಲಿ ಉಡುಪಿ ಹಾಗೂ ಮಂಗಳೂರಿನ ಪ್ರಯಾಣಿಕರಿಗೆ ಸಹಾಯಕವಾಗಲಿದೆ ಎಂದು ಮನವಿ ಮಾಡಲಾಗಿದೆ.
ಅಲ್ಲದೇ ಶಾಸಕರು ಕಾರವಾರ-ತಿರುಪತಿ ನಡುವೆ ಬೆಂಗಳೂರು ಮೂಲಕ ವಂದೇ ಭಾರತ್ ರೈಲನ್ನು ಹೊಸದಾಗಿ ಆರಂಭ ಮಾಡಿದಲ್ಲಿ ಕರಾವಳಿ ಜಿಲ್ಲೆಗಳ ಹೆಚ್ಚಿನ ಉದ್ಯಮಗಳಿಗೆ ಹಾಗೂ ಮೀನುಗಾರರಿಗೆ, ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಡಿಸೆಂಬರ್‌ನಿಂದ ಜನವರಿ ಅಂತ್ಯದ ತನಕ ಉಡುಪಿ-ಮಂಗಳೂರಿನಿಂದ ತೆರಳುವ ಶಬರಿಮಲೆ ಯಾತ್ರಾರ್ಥಿಗಳಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡುವಂತೆ ಕೂಡ ಶಾಸಕರು ಮನವಿ ಮಾಡಿದ್ದಾರೆ.












Click it and Unblock the Notifications