Vande Bharat Train; ಬೆಳಗಾವಿ-ಪುಣೆ ರೈಲು ಬಗ್ಗೆ ಅಪ್‌ಡೇಟ್
ಬೆಳಗಾವಿ, ಫೆಬ್ರವರಿ 07: ಬೆಳಗಾವಿ ನಗರಕ್ಕೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಇದೆ. ಬೆಂಗಳೂರು-ಬೆಳಗಾವಿ ನಡುವೆ ರೈಲಿನ ಪ್ರಾಯೋಗಿಕ ಸಂಚಾರ ಸಹ ಪೂರ್ಣಗೊಂಡಿದೆ. ಆದರೆ ಸೇವೆ ಆರಂಭವಾಗಿಲ್ಲ. ಈಗ ಪುಣೆ-ಬೆಳಗಾವಿ ರೈಲಿನ ಕುರಿತು ಮಾಹಿತಿ ಬಂದಿದೆ.
ರೈಲ್ವೆ ಖಾತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿಗೆ ಪತ್ರವನ್ನು ಬರೆದಿದ್ದಾರೆ. ಸಚಿವರನ್ನು ಭೇಟಿ ಮಾಡಿ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿತ್ತು.

ಪತ್ರದ ವಿವರ; ಸಚಿವ ಅಶ್ವಿನಿ ವೈಷ್ಣವ್ ಸಂಸದ ಈರಣ್ಣ ಕಡಾಡಿ ಅವರ 13/12/2023ರ ಪತ್ರವನ್ನು ಉಲ್ಲೇಖಿಸಿ ಈ ಪತ್ರವನ್ನು ಬರೆದಿದ್ದಾರೆ. ಸಂಸದರು ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು ಆರಂಭಿಸಬೇಕು ಎಂದು ಸಚಿವರಿಗೆ ಪತ್ರವನ್ನು ಬರೆದಿದ್ದರು.
ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಕುರಿತು ಈ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವರು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ವ್ಯಾಪರ, ಅಭಿವೃದ್ಧಿಗೆ ಸಹಾಯಕ; ಬೆಳಗಾವಿ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಜಿಲ್ಲೆ ಪ್ರತಿನಿತ್ಯ ಎರಡೂ ರಾಜ್ಯಗಳ ನಡುವೆ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಅಲ್ಲದೇ ಬೆಳಗಾವಿ-ಪುಣೆ ನಡುವೆಯೂ ನೂರಾರು ಜನರು ಓಡಾಡುತ್ತಾರೆ.
ಬೆಳಗಾವಿ ಪುಣೆ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಒಪ್ಪಿಗೆ....
— Iranna Kadadi-MP (@Irannakadadi_MP) February 7, 2024
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಶ್ರೀ @AshwiniVaishnaw ಅವರನ್ನು ಭೇಟಿ ಮಾಡಿ ಬೆಳಗಾವಿ ಪುಣೆ ನಡವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಾರಂಭಿಸುವ ಕುರಿತು ಚರ್ಚಿಸಲಾಯಿತು. (1/3) pic.twitter.com/5AbwWuDz4t
ಉಭಯ ನಗರಗಳನ್ನು ಸಂಪರ್ಕಿಸಲು ವಂದೇ ಭಾರತ್ ರೈಲು ಸಂಚಾರ ಆರಂಭಿಸಿದರೆ ಅನುಕೂಲವಾಗಲಿದೆ ಎಂದು ಸಂಸದರು ಪತ್ರದಲ್ಲಿ ವಿವರಣೆ ನೀಡಿದ್ದರು. ಈ ಪತ್ರಕ್ಕೆ ಈಗ ರೈಲ್ವೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಬೇಕು ಎನ್ನುವುದು ಸಹ ಪ್ರಯಾಣಿಕರ ಬೇಡಿಕೆಯಾಗಿತ್ತು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕೇಂದ್ರ ರೈಲ್ವೆ ಸಚಿವರಿಗೆ ಪತ್ರವನ್ನು ಬರೆದಿದ್ದರು. ಇದಕ್ಕೆ ರೈಲ್ವೆ ಇಲಾಖೆ ಸಹ ಒಪ್ಪಿಗೆ ನೀಡಿತ್ತು.
ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತಿರುವ ರೈಲು ನಂಬರ್ 20661/ 20662 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೇ 2023ರ ನವೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿ ನಡೆದಿದೆ. ಆದರೆ ರೈಲು ಸಂಚಾರ ಇನ್ನೂ ಆರಂಭಗೊಂಡಿಲ್ಲ.
ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಆರ್‌ಟಿಐ ಮೂಲಕ ಏಕೆ ರೈಲು ಸಂಚಾರ ಆರಂಭವಾಗಿಲ್ಲ ಎಂದು ಇಲಾಖೆಯನ್ನು ಪ್ರಶ್ನಿಸಿದ್ದರು. ರೈಲ್ವೆ ಇಲಾಖೆ ಉತ್ತರ ನೀಡಿ, ಬೆಂಗಳೂರು-ಬೆಳಗಾವಿ ನಡುವಿನ ಪ್ರಾಯೋಗಿಕ ಸಂಚಾರದ ವೇಳೆ ರೈಲಿನ ನಿರ್ವಹಣೆ ಪ್ರಮುಖವಾಗಿ ರೈಲಿಗೆ ನೀರು ತುಂಬಿಸುವ ವ್ಯವಸ್ಥೆ ಪ್ಲಾಟ್ ಫಾರಂನಲ್ಲಿ ಲಭ್ಯವಿಲ್ಲದಿರುವುದನ್ನು ಗಮನಿಸಲಾಗಿದೆ ಎಂದು ಹೇಳಿತ್ತು.
ಅಲ್ಲದೇ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಓವರ್ ಹೆಡ್ ಎಕ್ವಿಪ್ಮೆಂಟ್ (ಒಹೆಚ್ಇ) ಸಂಪರ್ಕ ಹೊಂದಿರುವ ಪಿಟ್ ಲೈನ್ ಇಲ್ಲ ಎಂಬುದನ್ನು ಗಮನಿಸಲಾಗಿದೆ ಎಂದು ತಿಳಿಸಿತ್ತು. ಈ ಮೂಲ ಸೌಲಭ್ಯಗಳು ಸಿದ್ಧವಾಗುತ್ತಿದ್ದು, ಬಳಿಕ ಬೆಳಗಾವಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications