New year 2024: ಬೆಣ್ಣೆನಗರಿಯಲ್ಲಿ ನೀವು ನೋಡಬಹುದಾದ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳು-ಮಾರ್ಗಗಳ ವಿವರ ತಿಳಿಯಿರಿ
ದಾವಣಗೆರೆ, ಡಿಸೆಂಬರ್, 21: ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆ. ಕರುನಾಡಿನ ಮಧ್ಯ ಕೇಂದ್ರವೂ ಹೌದು. ಇದು ಕೇವಲ ಬೆಣ್ಣೆದೋಸೆಗೆ ಮಾತ್ರ ಸೀಮಿತವಲ್ಲ, ಅಲ್ಲದೆ ಖಾರ, ಮಂಡಕ್ಕಿ ಖಾದ್ಯ ಸವಿಯುವುದಕ್ಕೆ ಅಷ್ಟೇ ಪ್ರಖ್ಯಾತಿ ಹೊಂದಿಲ್ಲ. ಇಲ್ಲಿನ ಪ್ರವಾಸಿ ತಾಣಗಳು ಹೊಸ ವರ್ಷಾಚರಣೆಗೆ ಸೂಕ್ತವಾಗಿವೆ. ದಾವಣಗೆರೆ ಜಿಲ್ಲೆಗೆ ಬಂದರೆ ಈ ತಾಣಗಳಿಗೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಿಂದು ಖುಷಿಪಡಬಹುದು. ಹಾಗಾದರೆ ಇತಿಹಾಸ ಪ್ರಸಿದ್ಧ ತಾಣಗಳು ಯಾವುವು ಮತ್ತು ಅಲ್ಲಿಗೆ ತಲುಪುವುದೇಗೆ ಎಂದು ಇಲ್ಲಿ ತಿಳಿಯಿರಿ.
ಇನ್ನು 10 ದಿನ ಕಳೆದರೆ ಹೊಸ ವರ್ಷ ಆರಂಭವಾಗುತ್ತದೆ. 2023ಕ್ಕೆ ವಿದಾಯ ಹೇಳಿ 2024 ಬರಮಾಡಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷಾಚರಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿರುವ ಕೆಲವರು ಅದ್ಧೂರಿಯಾಗಿಸಲು ನಿರ್ಧರಿಸಿದ್ದಾರೆ.

ಸ್ವಲ್ಪ ಕೊರೊನಾ ಹೊಸ ತಳಿ ಆತಂಕವಿದ್ದರೂ ಸರ್ಕಾರ ಸಂಭ್ರಮಾಚರಣೆಗೆ ನಿಯಮ ರೂಪಿಸಿಲ್ಲ. ಹಾಗಾಗಿ, ಹೊಸ ವರ್ಷಾಚರಣೆ ಈ ಬಾರಿ ರಂಗೇರುವುದು ಖಚಿತ. ಮತ್ತೆ ಕೆಲವರು ಹೊಸ ವರ್ಷಕ್ಕೆ ಮುನ್ನ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯೋಜನೆ ರೂಪಿಸಿರುತ್ತಾರೆ. ಅಂತಹ ಪ್ರವಾಸ ಪ್ರಿಯರು, ಚಾರಣಿಗರಿಗೆ ದಾವಣಗೆರೆಯ ಈ ಪ್ರವಾಸಿ ತಾಣಗಳು ಹೇಳಿ ಮಾಡಿಸಿದ ತಾಣಗಳಾಗಿವೆ.
ದಾವಣಗೆರೆ ಗ್ಲಾಸ್ ಹೌಸ್: ದಾವಣಗೆರೆಯಲ್ಲಿನ ಗ್ಲಾಸ್ ಹೌಸ್ ಏಷ್ಯಾ ಖಂಡದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮಾತ್ರವಲ್ಲ, ಭಾರತದ ಎರಡನೇ ಅತಿ ದೊಡ್ಡ ಗಾಜಿನ ಮನೆ ಎಂಬ ಖ್ಯಾತಿಯನ್ನೂ ಪಡೆದಿದೆ. ದಾವಣಗೆರೆಯಲ್ಲಿ ಮೈದೆಳೆದಿರುವ ಗಾಜಿನ ಮನೆ ಅಥವಾ ಗ್ಲಾಸ್ ಹೌಸ್ ನೋಡಲು ಬರಬಹುದು. ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಈ ಗಾಜಿನ ಮನೆ ಇರುವುದು ದಾವಣಗೆರೆ - ಹರಿಹರ ರಾಷ್ಟ್ರೀಯ ಹೆದ್ದಾರಿಯಲ್ಲಿ. ಇಲ್ಲಿಗೆ ಬಂದರೆ ಹೊಸ ಲೋಕವೇ ಸೃಷ್ಟಿಯಾಗಿರುತ್ತದೆ. ವಿದೇಶಿ ಗಿಡಗಳು, ಗಾಜಿನ ಮನೆ ಆಕಾರವನ್ನು ನೋಡಿ ಸಂತೋಷಪಡಬಹುದು. ದಾವಣಗೆರೆಯಿಂದ ಕೇವಲ ಏಳೆಂಟು ಕಿಲೋ ಮೀಟರ್ ದೂರ ಕ್ರಮಿಸಿದರೆ ಈ ಗಾಜಿನ ಮನೆ ಸಿಗುತ್ತದೆ.
ಶಾಮನೂರು ಸೇತುವೆ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗಬಹುದು. ಇನ್ನು ಹರಿಹರ ತಾಲೂಕಿನಿಂದ ಬರುವವರಿಗೆ ಸುಲಭ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹರಿಹರದಿಂದ ಕೇವಲ 8 ಕಿಲೋ ಮೀಟರ್‌ವರೆಗೆ ಕ್ರಮಿಸಿದರೆ ಗಾಜಿನ ಮನೆ ಸಿಗುತ್ತದೆ. ಕುಟುಂಬ ಸಮೇತರಾಗಿ ಆಗಮಿಸಿ ಇಲ್ಲಿನ ಸೊಬಗು ನೋಡಿ ಖುಷಿಪಡಬಹುದು.

ಸೂಳೆಕೆರೆ ಅಥವಾ ಶಾಂತಿಸಾಗರ: ಚನ್ನಗಿರಿ ತಾಲೂಕಿನ ಶಾಂತಿ ಸಾಗರ ಅಥವಾ ಸೂಳೆಕೆರೆ ಏಷ್ಯಾ ಖಂಡದಲ್ಲಿ ಎರಡನೇ ಅತಿ ದೊಡ್ಡ ಕೆರೆ. ದಾವಣಗೆರೆಯಿಂದ 45 ಕಿಲೋ ಮೀಟರ್ ದೂರದಲ್ಲಿರುವ ಶಾಂತಿಸಾಗರಕ್ಕೆ ಚನ್ನಗಿರಿಯಿಂದಲೂ ಹೋಗಬಹುದು. ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಕೆರೆಯು ಅತ್ಯಂತ ಹೆಚ್ಚು ವಿಸ್ತೀರ್ಣ ಹೊಂದಿದೆ. ಶಾಂತಿಸಾಗರಕ್ಕೆ ಬಂದು ಎತ್ತ ಕಣ್ಣಾಯಿಸಿದರೂ ನಿಮಗೆ ಕಾಣಸಿಗುವುದು ನೀರೋ ನೀರು. ಈ ಬಾರಿ ಮಳೆ ಕೈಕೊಟ್ಟಿದೆ. ಬರಗಾಲವೂ ತಲೆದೋರಿದೆ. ಆದ್ರೆ, ಸೂಳೆಕೆರೆಯಲ್ಲಿ ಕಣ್ಣಾಯಿಸಿದಷ್ಟು ನೀರು ಕಾಣ ಸಿಗುತ್ತದೆ.
ಬೆಳಿಗ್ಗಿನ ಚುಮುಚುಮು ಚಳಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಇಲ್ಲಿ ಆಸ್ವಾದಿಸಬಹುದು. ಸೂರ್ಯಾಸ್ತಮಾನದ ವೇಳೆ ನೀರಿನ ಮೇಲೆ ಸೃಷ್ಟಿಸುವ ಸೊಬಗು ನೋಡಲು ತುಂಬಾನೇ ಖುಷಿ ಕೊಡುತ್ತದೆ. ಇನ್ನುಸೂಳೆಕೆರೆಯಿಂದ ಸ್ವಲ್ಪ ಮುಂದೆ ಅಂದರೆ ಸುಮಾರು 1 ಕಿಲೋ ಮೀಟರ್ ಹೋದರೆ ಬೋಟಿಂಗ್ ಕೂಡ ಇದೆ. ಎಲ್ಲಾ ರೀತಿಯಲ್ಲಿಯೂ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಗಾರ್ಡ್‌ಗಳೂ ಸಹ ಇರುತ್ತಾರೆ. ವಿಸ್ತಾರವಾದ ನೀರಿನೊಳಗೆ ಬೋಟಿಂಗ್ ಮಾಡುವ ಮೂಲಕ ಸಂತೋಷ ಪಡಬಹುದು. ವರ್ಷಾಚರಣೆಗೂ ಮುನ್ನ ಹಾಗೂ ನ್ಯೂ ಇಯರ್ ವೇಳೆ ಎಂಜಾಯ್ ಮಾಡಲು ಉತ್ತಮ ತಾಣವಾಗಿದೆ.
ಸಂತೆಬೆನ್ನೂರಿನ ಪುಷ್ಕರಣಿ: ಮತ್ತೊಂದು ತಾಣ ಚನ್ನಗಿರಿ ತಾಲೂಕಿನಲ್ಲಿದೆ. ಸಂತೆಬೆನ್ನೂರಿನ ಐತಿಹಾಸಿಕ ಸುಂದರ ಪುಷ್ಕರಣಿ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಚನ್ನಗಿರಿಯಿಂದ 23 ಕಿಲೋ ಮೀಟರ್ ಹಾಗೂ ದಾವಣಗೆರೆಯಿಂದ 36 ಕಿಲೋ ಮೀಟರ್ ದೂರದಲ್ಲಿದೆ. ಇದು ಶಾಸನಸ್ತ ಐತಿಹಾಸಿಕ ಸ್ಥಳವೂ ಹೌದು.
ಬಸವಾಪಟ್ಟಣದ ಒಡೆಯರು ಸಂತೆಬೆನ್ನೂರು ಗ್ರಾಮವನ್ನು ರಾಜಧಾನಿಯನ್ನಾಗಿಸಿಕೊಂಡಿದ್ದರು. ಇದಕ್ಕೆ ಸಾಕಷ್ಟು ದಾಖಲಾತಿಗಳು ಇಲ್ಲಿವೆ. 16ನೇ ಶತಮಾನದ ಮಧ್ಯ ಭಾಗದಲ್ಲಿ ವಿಜಯನಗರ ಅರಸರ ಅಧೀನರಾಗಿದ್ದ ಪಾಳೇಗಾರರು ಆ ಮೇಲೆ ಸ್ವತಂತ್ರವಾಗಿ ಈ ಪಾಳೆಯ ಪಟ್ಟಿಗಳನ್ನು ಆಳ್ವಿಕೆ ಮಾಡಿದ್ದಾರೆ. ಕ್ರಿ. ಶ. 1783ರಲ್ಲಿ ಭಾರತದ ಸರ್ವೆಯರ್ ಜನರಲ್ ಬರೆಸಿದ ಸಂತೆಬೆನ್ನೂರು ಸೀಮೆ ಇದು.
ಇನ್ನು ಸಂತೆಬೆನ್ನೂರಿನ ಸುಂದರ ಪುಷ್ಕರಣಿ ನೋಡಲು ಚೆಂದವೋ ಚೆಂದ. 238 ಅಡಿ ಉದ್ದ, 245 ಅಡಿ ಅಗಲವಿದ್ದು, 30 ಅಡಿ ಆಳವಾಗಿದೆ. ಇದಕ್ಕೆ ಸ್ಥಳೀಯರು ಹೊಂಡ ಎಂಬುದಾಗಿಯೂ ಕರೆಯುತ್ತಾರೆ. ಈ ಹೊಂಡದ ಸುತ್ತ 3 ಅಡಿ ಅಗಲದ ಪೌಳಿಗೋಡೆ ಇದೆ. ನಾಲ್ಕು ದಿಕ್ಕಿನಿಂದಲೂ ಹೊಂಡಕ್ಕೆ ಇಳಿಯಲು ಪಾವಟಿಗೆಗಳಿವೆ. ಈ ಕೊಳ ಕಟ್ಟಿದಾಗ ಹೊಂಡ ಸುತ್ತ ಅಷ್ಟ ದಿಕ್ಕುಗಳಲ್ಲಿಯೂ ಅಷ್ಟಮಂಟಪಗಳಿದ್ದು, ಈಗ ಆರು ಮಂಟಪಗಳು ಮಾತ್ರ ಉಳಿದಿವೆ.
ಮುಖ್ಯ ಪ್ರವೇಶ ದ್ವಾರದಿಂದ ಕೊಳಕ್ಕೆ ಇಳಿಯಲು 52 ದೊಡ್ಡ ದೊಡ್ಡ ಪಾವಟಿಗಳಿವೆ. ಉಳಿದ ಮೂರು ಭಾಗದಲ್ಲಿ 44 ಮೆಟ್ಟಿಲುಗಳಿವೆ. ಕಲ್ಯಾಣಿಯ ತಳಭಾಗದ ಉದ್ದ 150 ಅಡಿ, ಅಗಲ 160 ಅಡಿ ಇದ್ದು, ಮೊದಲು ಈ ಹೊಂಡದಿಂದಲೇ ಕುಡಿಯುವ ನೀರು ಆಸರೆಯಾಗಿತ್ತು. ಇನ್ನು ಇಲ್ಲಿನ ಮಂಟಪಗಳ ಮಧ್ಯೆ ಭವ್ಯ ಹಾಗೂ ನಯನ ಮನೋಹರವಾದ ವಸಂತಮಂಟಪವಿದೆ. ಇದಕ್ಕೆ ಸ್ಥಳೀಯರು ಕಾರಂಜಿ ಮಂಟಪ ಅಂತಾನೂ ಹೆಸರಿಸುತ್ತಾರೆ. ಇದೂ ಸಹ ಪ್ರವಾಸಿಗರ ಕಣ್ಮನ ಸೆಳೆಯುವ ಐತಿಹಾಸಿಕ ತಾಣವಾಗಿದೆ.
ದುರ್ಗಾಂಬಿಕಾ ದೇವಸ್ಥಾನ: ದಾವಣಗೆರೆ ನಗರದ ಶಕ್ತಿ ದೇವತೆ ದುರ್ಗಾಂಬಿಕೆ ತಾಯಿ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ದೇವತೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದೇಗುಲದಲ್ಲಿ ತಾಯಿಯ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆಯೂ ಇದೆ.
ಜನಪ್ರತಿನಿಧಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಯಾರೇ ಬಂದರೂ ಈ ದೇವಿಯ ದರ್ಶನ ಪಡೆಯುತ್ತಾರೆ, ವಿಶೇಷ ಪೂಜೆಸಲ್ಲಿಸುತ್ತಾರೆ. ದುರ್ಗಾಂಬಿಕೆ ದೇವಸ್ಥಾನದ ಸುತ್ತಮುತ್ತಲೂ ದೇಗುಲಗಳಿದ್ದು, ಇಲ್ಲಿ ದೇವರ ದರ್ಶನ ಪಡೆದು ಪುನೀತರಾಗಬಹುದು.
ಇಲ್ಲಿಗೆ ಬರುವುದು ಹೇಗೆ?
ದಾವಣಗೆರೆಗೆ ಬಂದರೆ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮಹಾನಗರ ಪಾಲಿಕೆಯ ಎದುರುಗಡೆ ಇರುವ ಕೆಳ ಸೇತುವೆ ಮೂಲಕ ಬಂದರೆ ಮಂಡಿಪೇಟೆ ಸಿಗುತ್ತದೆ. ಅಲ್ಲಿಂದ ಶಿವಪ್ಪನಾಯಕ ವೃತ್ತದವರೆಗೆ ಬಂದರೆ ಅಲ್ಲಿಂದ ಸ್ವಲ್ಪ ದೂರದಲ್ಲಿರುವುದೇ ದುರ್ಗಾಂಬಿಕಾ ದೇವಸ್ಥಾನ. ಈ ದೇವಸ್ಥಾನಕ್ಕೆ ಬರಲು ಸುಲಭ ಮಾರ್ಗ.
ಆನೆಕೊಂಡ: ದಾವಣಗೆರೆ ತಾಲೂಕಿನ ಆನೆಕೊಂಡ 11-12ನೇ ಶತಮಾನದಲ್ಲಿ ಉಚ್ಚಂಗೀಪಾಂಡ್ಯರ ಕೇಂದ್ರ ದೊಡ್ಡ ಪಟ್ಟಣ, ಪಾಂಡ್ಯರ, ಚಾಲುಕ್ಯ, ಹೊಯ್ಸಳರ ಶಾಸನಗಳಿವೆ. ಕ್ರಿ.ಶ. 1120ರಲ್ಲಿ ತ್ರಿಭುವನಮಲ್ಲ ಪಾಂಡೇಶ್ವರನು ಕಟ್ಟಿಸಿದ ಈಶ್ವರ ದೇವಾಲಯವು ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಇದನ್ನು ಜಕ್ಕಣಾಚಾರಿ ಕಟ್ಟಿದನೆಂದು ಹೇಳಲಾಗುತ್ತದೆ.
ಈ ದೇವಸ್ಥಾನವು ಪೂರ್ವಭಿಮುಖವಾಗಿದ್ದು, ಬಳಪ ಮತ್ತು ಗ್ರಾನೈಟ್ ಶಿಲೆಯಿಂದ ಕಲಾತ್ಮಕ ಕೆತ್ತನೆಗಳಿಂದ ಕೂಡಿದೆ. ನವರಂಗ, ಸುಕನಾಶಿ, ಗರ್ಭಗುಡಿಯಿಂದ ಕೂಡಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಸಾಧಾರಣ ಚಾವಣಿ ಇದ್ದು, ಇಲ್ಲಿ ಸುಮಾರು ಮೂರು ಅಡಿ ಎತ್ತರದ ಶಿವಲಿಂಗವಿದೆ.
ಕಡಲೆಬಾಳು ಆಂಜನೇಯಸ್ವಾಮಿ: ಕಡಲೆಬಾಳು ಶ್ರೀ ಆಂಜನೆೇಯಸ್ವಾಮಿ ದೇವಸ್ಥಾನವು ದಾವಣಗೆರೆ ಜಿಲ್ಲೆಯಲ್ಲಿ ಪ್ರಸಿದ್ಧ ದೇಗುಲಗಳಲ್ಲಿ ಒಂದು. ಈ ದೇವಾಲಯದಲ್ಲಿ ಆಂಜನೇಯ ವಿಗ್ರಹಕ್ಕೆ ಬದಲಾಗಿ ಒಂದು ಶಿಲಾಫಲಕದಲ್ಲಿ ಶ್ರೀ ಮಧ್ವಾಚಾರ್ಯರು ಆಂಜನೇಯ ಸ್ವರೂಪವಾಗಿ ಈ ಶಿಲೆಯಲ್ಲಿ ಉದ್ಭವಿಸಿದ್ದಾರೆ ಎಂಬ ಪ್ರತೀತಿಯಿದೆ. ಕಲ್ಲಿನ ಮೇಲುಭಾಗದಲ್ಲಿ ಆಂಜನೇಯ, ಕೆಳಗಡೆ ಅರ್ಧ ಭಾಗದಲ್ಲಿ ಮಧ್ವಾಚಾರ್ಯರು, ಇನ್ನರ್ಧ ಭಾಗದಲ್ಲಿ ಭೀಮಸೇನ ದೇವರನ್ನು ಕಾಣಬಹುದು.
ಹರಿಹರೇಶ್ವರ ದೇವಾಲಯ: ಹರಿಹರೇಶ್ವರ ದೇವರ ವಿಗ್ರಹವು ಮಾನವನಷ್ಟು ಎತ್ತರವಿದ್ದು, ಸಾಲಿಗ್ರಾಮ ಶಿಲೆಯಾಗಿದೆ. ದೇವರು ಪೂರ್ವಭಿಮುಖವಾಗಿ ನಿಂತಿದ್ದು, ಮೂರ್ತಿಯ ಬಲಭಾಗವು ಪರಮೇಶ್ವರನೆಂದು (ಹರ), ಎಡ ಭಾಗವು ವಿಷ್ಣುವಿನದೆಂದು (ಹರಿ) ಎರಡು ಭಾಗ ಸೇರಿ ಹರಿಹರೇಶ್ವರನಾಡಿ ಒಡಮೂಡಿದ ಸ್ವಯಂಭುಮೂರ್ತಿ, ಹರನ ಭಾಗದಲ್ಲಿ ತ್ರಿಶೂಲವಿದ್ದು, ತಲೆ ಜಟಾಧಾರಿಯಾಗಿ ಗಂಗೆ ಮತ್ತು ಚಂದ್ರನಿಂದ ಕೂಡಿದೆ.
ಶಂಖಚಕ್ರವನ್ನು ಕೂಡ ಇಲ್ಲಿ ಕಾಣಬಹುದಾಗಿದ್ದು, ಬಲಗಿವಿಯಲ್ಲಿ ನಾಗಭೂಷಣ, ಎಡಗಿವಿಯಲ್ಲಿ ಕರ್ಣಕುಂಡಲಗಳಿವೆ. ಹರಿ ಕಿರೀಟ, ರುಂಡಮಾಲೆ, ವೈಜಯಂತಿಮಾಲೆಗಳನ್ನು ಧರಿಸಿದ್ದಾನೆ. ಬಲಗಡೆ ಗಣಪತಿ ಪಾರ್ವತಿಯರ, ಎಡಭಾಗದಲ್ಲಿ ಲಕ್ಷ್ಮೀದೇವಿ, ಋಷ್ಯಶೃಂಗ ಋಷಿಗಳ ವಿಗ್ರಹಗಳಿವೆ. ಹರಿಹರೇಶ್ವರನ ದೇವಾಲಯದ ಆವರಣದಲ್ಲಿ ಅಮೃತಶಿಲೆಯ ಪೇಶ್ವೆಗಳ ಕಾಲದ ಮಹಿಷ ಮರ್ಧಿನಿ ವಿಗ್ರಹವಿದೆ. ದಕ್ಷಿಣದಲ್ಲಿ ಪಾರ್ವತಿ ದೇವಾಲಯವಿತ್ತೆಂದು ಹೇಳಲಾಗಿದೆ.
ಒಟ್ಟಾರೆ ದಾವಣಗೆರೆ ಜಿಲ್ಲೆಗೆ ಹೊಸ ವರ್ಷಾಚರಣೆಗೆ ಬರುವ ಪ್ರವಾಸಿಗರಿಗೆ ಇವಿಷ್ಟು ಹೇಳಿ ಮಾಡಿಸಿದ ತಾಣಗಳಾಗಿವೆ. ಈ ಕಡೆ ಬರುವುದಿದ್ದರೆ ಇಲ್ಲಿಗೆ ಬನ್ನಿ ಭೇಟಿ ನೀಡಿ. ದೇವಾಲಯಗಳ ಜೊತೆಗೆ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಎಂಜಾಯ್ ಮಾಡಬಹುದಾಗಿದೆ.












Click it and Unblock the Notifications