ಮೈಸೂರು: ಇದೇ ಡಿಸೆಂಬರ್‌ನಲ್ಲಿ 356 ಕೋಟಿ ರೂ. ವೆಚ್ಚದ ರೈಲ್ವೆ ನಿಲ್ದಾಣ ವಿಸ್ತರಣೆ ಕಾಮಗಾರಿ ಪ್ರಾರಂಭ: ಪ್ರತಾಪ್ ಸಿಂಹ
ಮೈಸೂರು, ಅಕ್ಟೋಬರ್, 05: ಈಗಾಗಲೇ ರಾಜ್ಯದ ಹಲವೆಡೆ ರೈಲ್ವೆ ನಿಲ್ದಾಣಗಳ ವಿಸ್ತರಣೆ ಕಾಮಗಾರಿಗಳು ಚರುಕುಗೊಂಡಿದ್ದು, ಇನ್ನು ಕೆಲವೆಡೆ ನಿಧಾನಗತಿಯಲ್ಲಿ ಸಾಗಿವೆ. ಇನ್ನು ಮೈಸೂರು ರೈಲ್ವೆ ನಿಲ್ದಾಣವನ್ನು ಮುಂದಿನ 30-40 ವರ್ಷಗಳಲ್ಲಿ ಬೆಳವಣಿಗೆಯನ್ನು ಗಮನಿಸಿಕೊಂಡು ಪ್ರಯಾಣಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮೇಲ್ದರ್ಜೇಗೇರಿಸಿ ವಿಸ್ತರಿಸುವ ಕಾಮಗಾರಿಯನ್ನು ಡಿಸೆಂಬರ್ ತಿಂಗಳಲ್ಲಿ ಆರಂಭ ಮಾಡಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದಿಂದ ಮೆಮೋ ರೈಲುಗಳು ಓಡಾಟ ಶುರು ಮಾಡಲಿವೆ ಎಂದು ಹೇಳಿದರು. ಅಷ್ಟೇ ಅಲ್ಲದೆ ನಗರದ ಮುಖ್ಯ ರೈಲು ನಿಲ್ದಾಣದ ಬಳಿ ಇರುವ 65 ಹೆಕ್ಟೇರ್ ಜಾಗವನ್ನು ಬಳಸಿಕೊಂಡು ಮೇಲ್ದರ್ಜೆಗೇರಿಸುವ ಜೊತೆಗೆ ಮತ್ತಷ್ಟು ವಿಸ್ತರಣೆ ಮಾಡಲಾಗುತ್ತದೆ. ಸುಮಾರು 356 ಕೋಟಿ ರೂಪಾಯಿ ವೆಚ್ಚದಲ್ಲಿ 3 ಸ್ಟೇಬಲಿನ್ ಲೈನ್, ಮೂರು ಫಿಟ್ ಲೈನ್, ನಾಲ್ಕು ಪ್ಲಾಟ್ ಫಾರಂಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ನಾಗನಹಳ್ಳಿ ಬಳಿ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಆದರೆ ಭೂಮಿ ಸ್ವಾಧೀನ ಕಾರ್ಯಕ್ಕೆ ಭಾರೀ ಪ್ರಮಾಣದಲ್ಲಿ ಅನುದಾನ ಬೇಕಾಗುತ್ತದೆ. ಅದರ ಬದಲಿಗೆ ರೈಲ್ವೆ ನಿಲ್ದಾಣದ ಬಳಿಯಿರುವ ಹಳೆ ವಸತಿ ಗೃಹಗಳನ್ನು ತೆರವುಗೊಳಿಸಿ ವಿಸ್ತರಣೆ ಮಾಡಲಾಗುತ್ತದೆ. ಅಲ್ಲದೆ ಮತ್ತೊಂದು ಪ್ರವೇಶ ದ್ವಾರಕ್ಕೂ ಅಂತಿಮ ವಿನ್ಯಾಸ ಸಿದ್ಧವಾಗುತ್ತಿದೆ ಎನ್ನುವ ಮಾಹಿತಿಯನ್ನು ನೀಡಿದರು.
ಈಗಾಗಲೇ ಅಶೋಕಪುರಂ ರೈಲು ನಿಲ್ದಾಣದ ಕಾಮಗಾರಿ ಮುಗಿದಿದ್ದು, ಶೀಘ್ರದಲ್ಲೇ ಕೇಂದ್ರ ಸಚಿವರನ್ನು ಆಹ್ವಾನಿಸಿ ಉದ್ಘಾಟನೆ ಮಾಡಲು ಮಾತುಕತೆ ನಡೆಸುತ್ತಿದ್ದೇವೆ. ಮೈಸೂರು ದಸರಾ ವೇಳೆ ದಿನಾಂಕ ನಿಗದಿಪಡಿಸಿ ಇದಕ್ಕೆ ಚಾಲನೆ ನೀಡಲಾಗುತ್ತದೆ. ಮುಖ್ಯ ರೈಲು ನಿಲ್ದಾಣದ ಬದಲಿಗೆ ಅಶೋಕಪುರಂ ನಿಲ್ದಾಣದಿಂದ 4 ಮೆಮೋ ರೈಲುಗಳು ಸಾಂಚಾರ ಶುರು ಮಾಡಿದರೆ ತುಂಬಾ ಅನುಕೂಲ ಆಗಲಿದೆ. ಕಡಿಮೆ ದರದಲ್ಲಿ ಬೆಂಗಳೂರಿಗೆ ಹೋಗುವವರಿಗೆ ಇದೂ ನೆರವಾಗಲಿದೆ ಎಂದರು.
ಬೆಂಗಳೂರು ರೈಲ್ವೆ ನಿಲ್ದಾಣ ಸೇರಿ ಹಲವು ಕಡೆ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರು-ಮೈಸೂರು ನಡುವೆ ಸಂಚಾರ ಮಾಡುತ್ತಿರುವ ರೈಲುಗಳು ತಲುಪುವುದು ಬಹಳ ವಿಳಂಬ ಆಗುತ್ತಿದೆ. ಆದ್ದರಿಂದ ರೈಲುಗಳ ಸಂಚಾರದ ವೇಗ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಕಾವೇರಿ ಎಕ್ಸ್‌ಪ್ರೆಸ್, ಚೆನ್ನೈ ಎಕ್ಸ್ ಪ್ರೆಸ್, ಹಂಪಿ, ವಿಶ್ವಮಾವನ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗಳ ವೇಗ ಹೆಚ್ಚಳ ಮಾಡಲಾಗುತ್ತದೆ. ಈಗಾಗಲೇ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆ ಜತೆಗೆ ಚಾಮರಾಜನಗರ ಜಿಲ್ಲೆಯ ರೈಲು ನಿಲ್ದಾಣ ಅಭಿವೃದ್ಧಿಪಡಿಸಬೇಕಿದೆ. ಭವಿಷ್ಯದಲ್ಲಿ ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾದರೆ ಭಾರೀ ಬೇಡಿಕೆ ಬರಲಿದೆ. ಈಗಿನಿಂದಲೇ ಅಗತ್ಯ ಇರುವ ಪ್ಲಾಟ್ ಫಾರಂಗಳನ್ನು ನಿರ್ಮಾಣ ಮಾಡಿದರೆ ಹೆಚ್ಚು ರೈಲುಗಳ ಸಂಚಾರಕ್ಕೆ ಸುಲಭ ಆಗಲಿದೆ ಎಂದರು.












Click it and Unblock the Notifications