Muthyala Maduvu: ಭೋರ್ಗರೆಯುತ್ತಿದೆ ಬೆಂಗಳೂರಿಗೆ ಸಮೀಪವೇ ಇರುವ ಈ ಜಲಪಾತ
ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಬಿಡುವ ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸಲು ಆರಂಭಿಸಿದ್ದಾನೆ. ಮೇ ತಿಂಗಳಲ್ಲಿ ಹಲವು ದಿನಗಳು ಉತ್ತಮ ಮಳೆಯಾದ ಕಾರಣ, ಹಳ್ಳ, ಕೆರೆ, ಕಾಲುವೆಗಳಿಗೆ ಜೀವ ಬಂದಿತ್ತು. ಈಗ ಮತ್ತೆ ಮಳೆ ಆರಂಭವಾಗಿದ್ದು, ನದಿ, ತೊರೆಗಳಲ್ಲಿ ಕೂಡ ಹರಿವು ಹೆಚ್ಚಾಗಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೂಡ ಜೂನ್ 1ರಿಂದ ಮತ್ತೆ ಮಳೆ ಶುರುವಾಗಿದೆ. ಬೆಂಗಳೂರಿಗೆ ಸಮೀಪದಲ್ಲೇ ಇರುವು ಈ ಸುಂದರ ಜಲಪಾತ ಈಗ ಗತವೈಭವ ಮರಳಿ ಪಡೆದುಕೊಂಡಿದ್ದು, ಮೈದುಂಬಿ ಹರಿಯುತ್ತಿದೆ. ಹೌದು, ಬೆಂಗಳೂರಿಗೆ 40 ಕಿ.ಮೀ. ದೂರದಲ್ಲಿರುವ ಮುತ್ಯಾಲಮಡುವು ಜಲಪಾತ ಭೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಪೃಥ್ವಿ ರೆಡ್ಡಿ ಎನ್ನುವ ಟ್ವಿಟರ್ ಬಳಕೆದಾರರು ಜೂನ್ 1ರಂದು ವ್ಯಾಪಕ ಮಳೆಯಾದ ಬಳಿಕ ಮುತ್ಯಾಲ ಮಡುವು ಜಲಪಾತದ ಇತ್ತೀಚಿನ ದೃಶ್ಯಗಳನ್ನು ಹಂಚಿಕೊಂಡಿದ್ದು, ನೀರು ರಭಸವಾಗಿ ಧುಮ್ಮಿಕ್ಕುವುದನ್ನು ನೋಡಬಹುದು.
Muthyala Maduvu
— Pruthvin Reddy (@Pruthvinreddy) June 1, 2024
Come & witness waterfalls very near to #Bengaluru 😍😍
It's roaring for the first time this year #Anekal #BengaluruRains pic.twitter.com/mMW4COFgaf
ಹೋಗುವುದು ಹೇಗೆ?
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಬನ್ನೇರುಘಟ್ಟ ಮಾರ್ಗವಾಗಿ ಆನೇಕಲ್ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಖಾಸಗಿ ವಾಹನಗಳ ಮೂಲಕ ಮುತ್ಯಾಲ ಮಡುವು ಸೇರಬಹುದು. ಹೊಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬರುವ ಚಂದಾಪುರ-ಆನೇಕಲ್ ಮಾರ್ಗದ ಮೂಲಕವೂ ಇಲ್ಲಿಗೆ ತಲುಪಬಹುದಾಗಿದೆ. ಸ್ವಂತ ವಾಹನ ಇದ್ದವರು ಸುಲಭವಾಗಿ ಈ ಜಾಗಕ್ಕೆ ಹೋಗಿ ಬರಬಹುದಾಗಿದೆ.
ಶಿವನ ಮುಂದೆ ಜಲಪಾತದ ವೈಭವ
ಜಲಪಾತದ ಮುಂಭಾಗವೇ ಇತಿಹಾಸ ಪ್ರಸಿದ್ಧ ಶಿವನ ದೇವಸ್ಥಾನ ಇದೆ. ಜಲಪಾತದಲ್ಲಿ ಹೆಚ್ಚಿನ ಹರಿವು ಇದ್ದಾಗ ಸ್ನಾನ ಮಾಡುವುದು, ಸಾಹಸ ಮಾಡುವುದು ಅಪಾಯ ತಂದೊಡ್ಡುತ್ತದೆ. ಪ್ರಕೃತಿಯ ಸೌಂದರ್ಯವನ್ನು ಸವಿಯುವುದನ್ನು ಬಿಟ್ಟು ಹುಚ್ಚು ಸಾಹಸಕ್ಕೆ ಕೈಹಾಕಬೇಡಿ.
ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಬೋಟಿಂಗ್ ಕೂಡ ಇದೆ. ಮುತ್ಯಾಲಮಡುವು ಪ್ರವಾಸಿ ತಾಣವು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಡಿ ಬರುವುದರಿಂದ ಕೆಎಸ್‌ಟಿಸಿಡಿಸಿ ರೆಸ್ಟೋರೆಂಟ್ ಕೂಡ ಇದ್ದು, ಊಟ-ತಿಂಡಿ ಸೌಲಭ್ಯ ಸಿಗುತ್ತದೆ.












Click it and Unblock the Notifications