ಶಬರಿಮಲೆ ಭಕ್ತರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ತಿರುವನಂತಪುರಂ, ಏಪ್ರಿಲ್ 18; ಶಬರಿಮಲೆ ಅಯ್ಯಪ್ಪ ದೇವಾಲಯದ ಭಕ್ತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಕೊಟ್ಟಾಯಂ ಜಿಲ್ಲೆಯ ಹಸಿರು ವಿಮಾನ ನಿಲ್ದಾಣ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ನಾಗರಿಕರ ವಿಮಾನಯಾನ ಸಚಿವಾಲಯ ಶಬರಿಮಲೆ ಅಯ್ಯಪ್ಪ ದೇವಾಲಯದ ಸಮೀಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದೆ. ಈ ಮೂಲಕ ಶಬರಿಮಲೆಗೆ ಬೇರೆ ಬೇರೆ ರಾಜ್ಯಗಳಿಂದ ಸಂಪರ್ಕ ಉತ್ತಮವಾಗಲಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗೂ ಸಹಾಯಕವಾಗಲಿದೆ.
ಸಚಿವಾಲಯ ಮತ್ತು ಯೋಜನಾ ಪ್ರಾಧಿಕಾರ, ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ನಡುವಿನ ಹಲವು ಸುತ್ತಿನ ಸಭೆಯ ಬಳಿಕ ಹೊಸ ಹಸಿರು ವಿಮಾನ ನಿಲ್ದಾಣ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಯೋಜನೆಗೆ ಪರಿಸರ ಪ್ರೇಮಿಗಳ ವಿರೋಧ ಎದುರಾಗಿತ್ತು. ಪರಿಸರ ಇಲಾಖೆಯೂ ಸಹ ಯೋಜನೆ ಕುರಿತು ವಿವರವಾದ ಅಧ್ಯಯನ ನಡೆಸಿ ವರದಿ ತಯಾರು ಮಾಡಿತ್ತು.

ಯೋಜನೆಯ ವಿವರಗಳು; ಕೇರಳ ರಾಜ್ಯದ ಕೊಟ್ಟಾಯಂ ಹಸಿರು ವಿಮಾನ ನಿಲ್ದಾಣ 2,250 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಈ ಯೋಜನೆಗೆ ಸುಮಾರು 4000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ನಿಲ್ದಾಣ ಯೋಜನೆಗೆ ಒಪ್ಪಿಗೆ ನೀಡಿರುವ ಕುರಿತು ಟ್ವೀಟ್ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಈ ಟ್ವೀಟ್ ಅನ್ನು ರಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ Great news for tourism and especially spiritual tourism ಎಂದು ಹೇಳಿದ್ದಾರೆ. ಈ ವಿಮಾನ ನಿಲ್ದಾಣದಿಂದ ಶಬರಿಮಲೆ ದೇವಾಲಯಕ್ಕೆ ಸುಮಾರು 45 ಕಿ. ಮೀ. ದೂರವಿದೆ. ವಿಮಾನ ನಿಲ್ದಾಣ ನಿರ್ಮಾಣದಿಂದ ದೇವಾಲಯಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸಹಾಯಕವಾಗಲಿದೆ.
ಕಳೆದ ವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಿಟಿಐ ಜೊತೆ ಮಾತನಾಡಿದ್ದರು. ಆಗ, "ಶಬರಿಮಲೆಯಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳಿಗೆ ಅನುಮತಿಗಳನ್ನು ಪಡೆದುಕೊಳ್ಳಲಾಗಿದೆ" ಎಂದು ಹೇಳಿದ್ದರು. ಈ ವಾರ ಕೇಂದ್ರ ನಾಗರಿಕರ ವಿಮಾನಯಾನ ಸಚಿವಾಲಯ ಯೋಜನೆಗೆ ಒಪ್ಪಿಗೆ ನೀಡಿರುವ ಕುರಿತು ಟ್ವೀಟ್ ಮಾಡಿದೆ.

ಯೋಜನೆಯ ವಿವರದಂತೆ ಎಲ್ಲಾ ಮಾದರಿ ವಿಮಾನಗಳು ಇಳಿಯಲು ಸಹಕಾರಿಯಾಗುವಂತೆ 3.5 ಕಿ. ಮೀ. ಉದ್ದದ ರನ್ ವೇಯನ್ನು ನಿರ್ಮಾಣ ಮಾಡಲಾಗುತ್ತದೆ. ಭೂ ಸ್ವಾಧೀನ ಪೂರ್ಣಗೊಂಡ ಬಳಿಕ ಯೋಜನೆಯ ವಿವರವಾದ ಡಿಪಿಆರ್ ಸಿದ್ಧಗೊಳಿಸಲಾಗುತ್ತದೆ ಎಂದು ಕೇರಳ ಸರ್ಕಾರ ಹೇಳಿದೆ. 2017ರಲ್ಲಿಯೇ ರಾಜ್ಯ ಸರ್ಕಾರ ಈ ಯೋಜನೆಯ ಪ್ರಸ್ತಾವನೆ ಸಿದ್ಧಪಡಿಸಿತ್ತು. ಆದರೆ ಅರಣ್ಯ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕಾರಣಕ್ಕೆ ವಿವಾದ ಉಂಟಾಗಿತ್ತು.
ಕೇರಳ ಸರ್ಕಾರ ಕೆಲವು ದಿನಗಳ ಹಿಂದೆ ಹೇಳಿದಂತೆ ಹಸಿರು ವಿಮಾನ ನಿಲ್ದಾಣ ಯೋಜನೆಗೆ ಎರುಮೆಲಿ ದಕ್ಷಿಣ ಮತ್ತು ಮಣಿಮಾಲಾ ಗ್ರಾಮಗಳಲ್ಲಿ 1,039.876 ಹೆಕ್ಟೇರ್ (2,570 ಎಕರೆ) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಕೆ ಮಾಡಿತ್ತು. ಇದರ ಆಧಾರದ ಮೇಲೆ ಒಪ್ಪಿಗೆ ಸಿಕ್ಕಿದೆ.
ಈ ವಿಮಾನ ನಿಲ್ದಾಣ ಯೋಜನೆಗಾಗಿಯೇ ವಿ. ತುಳಸಿದಾಸ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದೆ. ಕೆಲವು ದಿನಗಳ ಹಿಂದೆ ಅವರು ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ್ದರು. ಯೋಜನೆಯು ಮಹತ್ವದ ತಾಂತ್ರಿಕ ಮೈಲಿಗಲ್ಲು ದಾಟಿದೆ. ಯೋಜನೆಯ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಅಧ್ಯಯನ ವರದಿ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದರು.












Click it and Unblock the Notifications