ಮಂಗಳೂರು: ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ ಕಡೆಯ ಕ್ಷಣದಲ್ಲಿ ರದ್ದು, ರಾತ್ರೋರಾತ್ರಿ ರೊಚ್ಚಿಗೆದ್ದ ಪ್ರಯಾಣಿಕರು ಮಾಡಿದ್ದೇನು?
ಬೆಂಗಳೂರು, ಡಿಸೆಂಬರ್, 24: ಯಾವುದೋ ಮುಖ್ಯವಾದ ಕೆಲಸದ ಮೇಲೆ ಬೇರೆ ಜಿಲ್ಲೆ, ರಾಜ್ಯ ಅಥವಾ ವಿದೇಶಗಳಿಗೆ ಅತೀ ಬೇಗ ತಲುಪಬೇಕೆಂದು ಬಹುತೇಕ ಪ್ರಯಾಣಿಕರು ಮುಂಚಿತವಾಗಿಯೇ ವಿಮಾನಗಳ ಹಾಸನಗಳಿಗೆ ಬುಕ್ ಮಾಡಿರುತ್ತಾರೆ. ಆದರೆ ಅದೇ ವಿಮಾನ ಯಾವುದೋ ಸಮಸ್ಯೆಯಿಂದ ರದ್ದಾದರೆ ಪ್ರಯಾಣಿಕರು ರೊಚ್ಚಿಗೇಳುವುದು ಸಾಮಾನ್ಯ. ಅಂತಹದ್ದೇ ಒಂದು ಘಟನೆ ಮಂಗಳೂರಿನಲ್ಲಿ ಶನಿವಾರ (ಡಿಸೆಂಬರ್ 23) ರಾತ್ರಿ ನಡೆದಿದೆ.
ಬೆಂಗಳೂರಿಗೆ ರಾತ್ರಿ 8:15ಕ್ಕೆ ಮಂಗಳೂರಿನಿಂದ ಹಾರಬೇಕಿದ್ದ ಏರ್ ಇಂಡಿಯಾ ವಿಮಾನ ಕೊನೇ ಕ್ಷಣದಲ್ಲಿ ರದ್ದಾಗಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ (ಡಿಸೆಂಬರ್ 23) ರಾತ್ರಿ ನಡೆದಿದೆ.

ಕೆಂಜಾರಿನಲ್ಲಿರುವ ವಿಮಾನ ನಿಲ್ದಾಣದಿಂದ ರಾತ್ರಿ 8:15ಕ್ಕೆ ಏರ್ ಇಂಡಿಯಾ ವಿಮಾನ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ವಿಮಾನ ಬಂದೇ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಕೆಂಡಕಾರಿದ್ದಾರೆ. ಅಮೆರಿಕಾಕ್ಕೆ ಪ್ರಯಾಣ ಬೆಳೆಸಬೇಕಿದ್ದ ಪ್ರಯಾಣಿಕರೊಬ್ಬರು ಬೆಂಗಳೂರಿಗೆ ಸಕಾಲಕ್ಕೆ ತಲುಪದಿದ್ದಲ್ಲಿ ವಿಮಾನ ಸಿಗುವುದಿಲ್ಲ.
ಕೊನೆಯ ಕ್ಷಣದಲ್ಲಿ ವಿಮಾನ ಇಲ್ಲದಿದ್ದಲ್ಲಿ ಏನು ಮಾಡಬೇಕೆಂದು ಪ್ರಯಾಣಿಕರೊಬ್ಬರು ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದಾರೆ. ಬೆಂಗಳೂರಿಗೆ ಪರೀಕ್ಷೆ ಬರೆಯಲೆಂದು ಹೊರಟ ಕೆಲವರು, ವಿಮಾನ ಇಲ್ಲದಿದ್ದಲ್ಲಿ ಮೊದಲೇ ತಿಳಿಸಬೇಕಿತ್ತು. ಕೊನೆಯ ಕ್ಷಣದಲ್ಲಿ ವಿಮಾನ ಇಲ್ಲವೆಂದರೆ ನಾವೇನು ಮಾಡಬೇಕು. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕ್ರಿಸ್ಮಸ್ ನಿಮಿತ್ತ ತುರ್ತು ಪ್ರಯಾಣ ಮಾಡುವವರೂ ಇದ್ದರು. ಆದ್ದರಿಂದ ಪ್ರಯಾಣಿಕರೆಲ್ಲರೂ ಇನ್ನೇನು ವಿಮಾನ ಹತ್ತಬೇಕೆನ್ನುವ ಹೊತ್ತಿಗೆ ವಿಮಾನವೇ ಇಲ್ಲ ಎಂದು ತಿಳಿದು ಕಂಗಾಲಾಗಿ ಹೋಗಿದ್ದರು. ನಾವು ತುರ್ತಾಗಿ ಹೋಗಲೇಬೇಕು, ಪರ್ಯಾಯ ವ್ಯವಸ್ಥೆ ಮಾಡಿ ಎಂದು ವಿಮಾನ ಸಿಬ್ಬಂದಿ ಮೇಲೆ ದುಂಬಾಲು ಬಿದ್ದಿದ್ದಾರೆ. ಸಿಬ್ಬಂದಿ ಪ್ರಯಾಣಿಕರನ್ನು ಸಮಾಧಾನ ಮಾಡಲೆತ್ನಿಸಿದರೂ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಕೊನೆಗೆ, ಏರ್ ಇಂಡಿಯಾ ಸಿಬ್ಬಂದಿ ವಿಮಾನವು ತೊಂದರೆಗೀಡಾಗಿದ್ದು, ತಾಂತ್ರಿಕ ಅಡಚಣೆಯಿಂದ ಬೆಂಗಳೂರಿನಲ್ಲಿಯೇ ಉಳಿದಿದೆ. ಪರ್ಯಾಯ ವ್ಯವಸ್ಥೆ ಮಾಡಿದ್ದು ರಾತ್ರಿ 2:15ಕ್ಕೆ ಬೇರೊಂದು ವಿಮಾನದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ. ರಾತ್ರಿ 8:15ಕ್ಕೆ ಹೊರಡಬೇಕಿದ್ದ ವಿಮಾನಕ್ಕಾಗಿ ಬಂದಿದ್ದ ಪ್ರಯಾಣಿಕರು ಬದಲಿ ವ್ಯವಸ್ಥೆಗಾಗಿ ವಿಮಾನ ನಿಲ್ದಾಣದಲ್ಲಿಯೇ ನಡುರಾತ್ರಿಯವರೆಗೆ ಕಾದು ಕುಳಿತುಕೊಳ್ಳುವಂತಾಗಿದೆ.












Click it and Unblock the Notifications