Deepavali Special Train: ಮಂಗಳೂರು-ಬೆಂಗಳೂರು-ಹುಬ್ಬಳ್ಳಿ ದೀಪಾವಳಿ ವಿಶೇಷ ರೈಲು, ವೇಳಾಪಟ್ಟಿ
ಮಂಗಳೂರು, ಅಕ್ಟೋಬರ್ 20: ದೀಪಾವಳಿ ಹಬ್ಬ, ವಾರಾಂತ್ಯದ ರಜೆ ಹಿನ್ನಲೆಯಲ್ಲಿ ಬಸ್, ರೈಲು ಸೇರಿದಂತೆ ವಿವಿಧ ಸಾರಿಗೆಗೆ ಭಾರೀ ಬೇಡಿಕೆ ಇದೆ. ಬೆಂಗಳೂರು-ಕರಾವಳಿ ನಡುವೆ ಸಂಚಾರ ನಡೆಸುವ ಜನರು ಹೆಚ್ಚಿನ ರೈಲಿಗಾಗಿ ಬೇಡಿಕೆ ಇಟ್ಟಿದ್ದರು. ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ಮಂಗಳೂರು-ಹುಬ್ಬಳ್ಳಿ ವಯಾ ಬೆಂಗಳೂರು ವಿಶೇಷ ರೈಲು ಸೇವೆ ಘೋಷಣೆ ಮಾಡಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಮಾಹಿತಿಯನ್ನು ನೀಡಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಮಂಗಳೂರು ಜಂಕ್ಷನ್-ಬೆಂಗಳೂರು-ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಬೆಂಗಳೂರು-ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಜನರು ಸಂಚಾರ ನಡೆಸಬಹುದು.

ರೈಲು ನಂಬರ್ 07311 ಎಸ್ಎಸ್ ಹುಬ್ಬಳ್ಳಿ-ಮಂಗಳೂರು ಜಂಕ್ಷನ್ ನಡುವೆ ವಯಾ ಬೆಂಗಳೂರು ಶನಿವಾರ (2/11/2024) ಒಂದು ಟ್ರಿಪ್ ಸಂಚಾರವನ್ನು ನಡೆಸಲಿದೆ. ರೈಲು ನಂಬರ್ 07312 ಮಂಗಳೂರು ಜಂಕ್ಷನ್-ಎಸ್ಎಸ್ಎಸ್ ಹುಬ್ಬಳ್ಳಿ ವಯಾ ಬೆಂಗಳೂರು ಭಾನುವಾರ (3/11/2024)ರಂದು ಒಂದು ಟ್ರಿಪ್ ಮಾತ್ರ ಸಂಚಾರವನ್ನು ನಡೆಸಲಿದೆ.
ರೈಲು ನಿಲ್ದಾಣ, ವೇಳಾಪಟ್ಟಿ: ರೈಲು ಸಂಖ್ಯೆ 07311 ಎಸ್ಎಸ್‌ಎಸ್ ಹುಬ್ಬಳ್ಳಿ-ಮಂಗಳೂರು ಜಂಕ್ಷನ್ ವಿಶೇಷ ರೈಲು ಹುಬ್ಬಳ್ಳಿಯಿಂದ ಸಂಜೆ 4ಕ್ಕೆ ಹೊರಟು ರಾತ್ರಿ 11:25ಕ್ಕೆ ಬೆಂಗಳೂರಿನ ಯಶವಂತಪುರಕ್ಕೆ ಬರಲಿದೆ. ರೈಲು ಯಶವಂತಪುರದಿಂದ ರಾತ್ರಿ 11:55ಕ್ಕೆ ಹೊರಟು 3/11/2024ರ ಭಾನುವಾರ 11:45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
3/11/2024ರ ಭಾನುವಾರ ರೈಲು ಸಂಖ್ಯೆ 07312 ಮಂಗಳೂರು ಜಂಕ್ಷನ್- ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲು ಮಂಗಳೂರಿನಿಂದ ಮಧ್ಯಾಹ್ನ 1ಕ್ಕೆ ಹೊರಟು ರಾತ್ರಿ 10ಗಂಟೆಗೆ ಯಶವಂತಪುರ ತಲುಪಲಿದೆ. ಯಶವಂತಪುರದಿಂದ ರಾತ್ರಿ 10:30ಕ್ಕೆ ಹೊರಟು 4/11/2024 ಸೋಮವಾರ ಬೆಳಗ್ಗೆ 7ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ತಲುಪಲಿದೆ.
ರೈಲು ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ ಜಂಕ್ಷನ್, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ ರೈಲು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ. ರೈಲು 2 ಜನರಲ್ ಕೋಚ್, 5 ಸ್ಲೀಪರ್ ಕ್ಲಾಸ್, 3 ತೃತೀಯ ದರ್ಜೆಯ ಎಸಿ, 2 ದ್ವಿತೀಯ ದರ್ಜೆಯ ಎಸಿ, 1 ಪ್ರಥಮ ದರ್ಜೆ/ ಕ್ಯಾಬಿನ್ ಎಸಿ ಕೋಚ್ ಹೊಂದಿದೆ.
ಇದಲ್ಲದೇ ನೈಋತ್ಯ ರೈಲ್ವೆ 30/10/2024ರಂದು ರೈಲು ಸಂಖ್ಯೆ 06565 ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಹಾಗೂ 31/10/2024ರಂದು ರೈಲು ಸಂಖ್ಯೆ 06566 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ವಿಶೇಷ ರೈಲನ್ನು ಓಡಿಸುತ್ತಿದೆ.
ಪ್ರಯಾಣಿಕರಿಗೆ ಶುಭ ಸುದ್ದಿ!
— Dakshina Kannada District Railway Users (@dkdistrictrail) October 19, 2024
ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದು ಮರಳಿ ಬೆಂಗಳೂರಿಗೆ ಹೋಗುವುದು ಹೇಗೆ ಎಂಬ ಚಿಂತೆಯಲ್ಲಿ ಇದ್ದೀರಾ!? ಚಿಂತಿಸಬೇಡಿ!
ನೈರುತ್ಯ ರೈಲ್ವೆ ವಲಯ ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಹಾಗು ಮಂಗಳೂರಿನಿಂದ ಬೆಂಗಳೂರು ಮಾರ್ಗವಾಗಿ ಹುಬ್ಬಳ್ಳಿಗೆ ವಿಶೇಷ ರೈಲು… pic.twitter.com/bLfvTfiGcH
ಬೆಂಗಳೂರು-ಕರಾವಳಿ ಸಂಪರ್ಕಿಸಲು ದೀಪಾವಳಿ ಸಂದರ್ಭದಲ್ಲಿ ವಿಶೇಷ ರೈಲು ಬೇಕು ಎಂದು ದಕ್ಷಿಣ ಕನ್ನಡದ ಸಂಸದ ಬ್ರಿಜೇಶ್ ಚೌಟ ನೈಋತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ರೈಲ್ವೆ ವಲಯ ವಿಶೇಷ ರೈಲು ಘೋಷಣೆ ಮಾಡಿದೆ.
ವಿಶೇಷ ರೈಲು ಓಡಿಸಲು ಮನವಿ ಮಾಡಿದ್ದ ಸಂಸದ ಬ್ರಿಜೇಶ್ ಚೌಟ ಹಾಗೂ ರೈಲು ಓಡಿಸಲು ಕ್ರಮ ಕೈಗೊಂಡ ನೈಋತ್ಯ ರೈಲ್ವೆ ವಲಯಕ್ಕೆ ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಧನ್ಯವಾದಗಳನ್ನು ಸಲ್ಲಿಸಿದೆ. ಪ್ರಯಾಣಿಕರ ರೈಲು ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
ಸಂಸದ ಬ್ರಿಜೇಶ್ ಚೌಟಾ ಪೋಸ್ಟ್‌ವೊಂದನ್ನ ಹಾಕಿದ್ದು, ದೀಪಾವಳಿ ಹಬ್ಬ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಲು ನವೆಂಬರ್ 3ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವವರಿಗೆ ಅನುಕೂಲ ಆಗಲು ವಿಶೇಷ ರೈಲು ಓಡಿಸಬೇಕೆಂದು ನಾನು ಮಾಡಿದ ಮನವಿಯ ಮೇರೆಗೆ ನೈಋತ್ಯ ರೈಲ್ವೆ ವಲಯವು ವಿಶೇಷ ರೈಲು ಬಿಡುಗಡೆ ಮಾಡಿದೆ. ನಮ್ಮ ಮನವಿಗೆ ಶೀಘ್ರವಾಗಿ ಸ್ಪಂದಿಸಿ ಈ ವಿಶೇಷ ರೈಲು ಸೇವೆಯನ್ನು ಬಿಡುಗಡೆಗೊಳಿಸಿದ ನಮ್ಮ ಕೇಂದ್ರ ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ರೈಲ್ವೇ ಖಾತೆಯ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಅನಂತ ಧನ್ಯವಾದಗಳು ಎಂದು ಹೇಳಿದ್ದಾರೆ.












Click it and Unblock the Notifications