Vande Bharat Train: ಜೂನ್ 20ರಿಂದ ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು
ಬೆಂಗಳೂರು, ಜೂನ್ 16: ಲೋಕಸಭೆ ಚುನಾವಣೆ 2024 ಮುಗಿದು ಕೇಂದ್ರದಲ್ಲಿ ಸರ್ಕಾರ ರಚನೆಯಾಗಿದೆ. ಈಗ ಹೊಸ ರೈಲುಗಳಿಗೆ ಚಾಲನೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಹೊಸ ವಂದೇ ಭಾರತ್ ರೈಲು ಸಿಕ್ಕಿದ್ದು, ಜೂನ್ 20ರಂದು ಈ ರೈಲಿಗೆ ಚಾಲನೆ ಸಿಗುವ ನಿರೀಕ್ಷೆ ಇದೆ.
ಸದ್ಯದ ಮಾಹಿತಿ ಪ್ರಕಾರ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ರಾಜಧಾನಿ ಚೆನ್ನೈಗೆ ಭೇಟಿ ನೀಡಲಿದ್ದಾರೆ. ಅಂದು ಅವರು ಎರಡು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ.

ಮಧುರೈ-ಬೆಂಗಳೂರು ಮತ್ತು ಚೆನ್ನೈ-ನಾಗರ್‌ಕೋಯಿಲ್ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ. ಜೂನ್ 20ರಂದು ಈ ರೈಲು ಸೇವೆಗೆ ಚಾಲನೆ ಸಿಗುವ ಮೂಲಕ ಉದ್ಯಾನ ನಗರಿ ಬೆಂಗಳೂರು ನಗರಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸಂಪರ್ಕ ಸಿಗಲಿದೆ.
ವಂದೇ ಭಾರತ್ ರೈಲು ಸೇವೆಗೆ ಈಗಾಗಲೇ ವಿವಿಧ ರಾಜ್ಯಗಳಲ್ಲಿ ಭಾರೀ ಬೇಡಿಕೆ ಇದೆ. 24 ರಾಜ್ಯಗಳು, 256 ಜಿಲ್ಲೆಗಳಲ್ಲಿ 50ಕ್ಕೂ ಅಧಿಕ ವಂದೇ ಭಾರತ್ ರೈಲುಗಳು ಈಗಾಗಲೇ ಸಂಚಾರ ನಡೆಸುತ್ತಿವೆ. ಕರ್ನಾಟಕದಲ್ಲಿಯೇ 4ಕ್ಕೂ ಅಧಿಕ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ.
ಮಧುರೈ-ಬೆಂಗಳೂರು ರೈಲು: ನೂತನವಾಗಿ ಆರಂಭವಾಗಲಿರುವ ಮಧುರೈ-ಬೆಂಗಳೂರು ವಂದೇ ಭಾರತ್ ರೈಲಿನಿಂದ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ 6 ಗಂಟೆಗೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ರೈಲು ಸದ್ಯದ ಮಾಹಿತಿ ಪ್ರಕಾರ ದಿಂಡಿಗಲ್, ಕರೂರ್, ಸೇಲಂ, ಧರ್ಮಪುರಿ ಮತ್ತು ಹೊಸೂರು ನಿಲ್ದಾಣದಲ್ಲಿ ನಿಲುಗಡೆ ಹೊಂದಿರಲಿದೆ. ರೈಲಿನ ವೇಳಾಪಟ್ಟಿ, ದರವನ್ನು ರೈಲ್ವೆ ಇಲಾಖೆ ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.
ಭಾರತೀಯ ರೈಲ್ವೆ ಈಗಾಗಲೇ 8 ಮತ್ತು 16 ಬೋಗಿಗಳ ವಂದೇ ಭಾರತ್ ರೈಲುಗಳನ್ನು ಓಡಿಸುತ್ತಿವೆ. ಬಿಳಿ ಮತ್ತು ಕೇಸರಿ ಬಣ್ಣದ ರೈಲುಗಳಿವೆ. ಮಧುರೈ-ಬೆಂಗಳೂರು ನಡುವೆ 8 ಬೋಗಿಯ ರೈಲು ಓಡಲಿದೆ ಎಂದು ಅಂದಾಜಿಸಲಾಗಿದೆ.
ರೈಲಿನ ತಾತ್ಕಲಿಕ ವೇಳಾಪಟ್ಟಿ
Tentative proposed trial run schedule for Madurai - SMV Bengaluru Vande Bharat on 17.6.2024 pic.twitter.com/eV5bWCrchD
— Karnataka Rail Users (@KARailway) June 16, 2024
ಪ್ರಯಾಣಿಕರ ಆಕ್ರೋಶ: ಮಧುರೈ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಕ್ಕೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಹಲವು ಜಿಲ್ಲೆಗಳಿಗೆ ಇನ್ನೂ ವಂದೇ ಭಾರತ್ ಸಂಪರ್ಕವಿಲ್ಲ. ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಿ ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಮೈಸೂರು-ಬೆಂಗಳೂರು-ಚೆನ್ನೈ, ಬೆಂಗಳೂರು-ಕೊಯಮತ್ತೂರು ನಡುವೆ ವಂದೇ ಭಾರತ್ ರೈಲು ಸಂಪರ್ಕವಿದೆ. ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ವಂದೇ ಭಾರತ್ ರೈಲು ಸಂಪರ್ಕ ಬೇಕು, ಯಾವಾಗ ಆರಂಭಿಸುತ್ತೀರಿ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಲಾಗಿದೆ.
ಕರ್ನಾಟಕದ ಮೊದಲ ವಂದೇ ಭಾರತ್ ರೈಲು 2022ರ ನವೆಂಬರ್‌ನಲ್ಲಿ ಮೈಸೂರು-ಚೆನ್ನೈ ವಯಾ ಬೆಂಗಳೂರು ಆರಂಭವಾಯಿತು. ಬಳಿಕ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ, ಬೆಂಗಳೂರು-ಕಾಚಿಗುಡ, ಬೆಂಗಳೂರು-ಕೊಯಮತ್ತೂರು, ಮಂಗಳೂರು-ಮಡಗಾಂವ್, ಮಂಗಳೂರು-ತಿರುವನಂತಪುರಂ, ಬೆಂಗಳೂರು-ಕಲಬುರಗಿ ನಡುವೆ ರೈಲುಗಳ ಸಂಚಾರ ಆರಂಭವಾಯಿತು.
ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಈಗಾಗಲೇ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. 2023ರ ನವೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರ ಸಹ ಪೂರ್ಣಗೊಂಡಿದೆ. ಆದರೆ ಇನ್ನೂ ರೈಲುಗಳ ಸಂಚಾರ ಆರಂಭವಾಗಿಲ್ಲ.
ಕರ್ನಾಟಕದಲ್ಲಿ 10ಕ್ಕೂ ಹೆಚ್ಚು ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಇವುಗಳಲ್ಲಿ ಬೆಂಗಳೂರು-ಶಿವಮೊಗ್ಗ, ಬಳ್ಳಾರಿ-ಬೆಂಗಳೂರು, ಬೀದರ್-ಬೆಂಗಳೂರು ಮುಂತಾದ ಮಾರ್ಗಗಳು ಸೇರಿವೆ. ಆದರೆ ರೈಲ್ವೆ ಇಲಾಖೆ ರಾಜ್ಯದಲ್ಲಿ ಸದ್ಯಕ್ಕೆ ಹೊಸ ರೈಲು ಓಡಿಸುವ ಕುರಿತು ಯಾವುದೇ ಮಾಹಿತಿಯನ್ನು ಇನ್ನೂ ನೀಡಿಲ್ಲ.












Click it and Unblock the Notifications