ಯಶವಂತಪುರ To ವಿಶ್ವಾಮಿತ್ರ; ಕೊಟ್ಟೂರು ಮಾರ್ಗವಾಗಿ ವಿಶೇಷ ರೈಲು ಆರಂಭ; ರಾಜ್ಯದ ಯಾವ ಸ್ಥಳದಲ್ಲಿ ನಿಲುಗಡೆ?
ಬೆಂಗಳೂರಿನ ಯಶವಂತಪುರದಿಂದ ವಡೋದರಾದ ವಿಶ್ವಾಮಿತ್ರದವರೆಗೆ ವಿಶೇಷ ರೈಲು (06565) ಸಂಚಾರ ಆರಂಭಗೊಂಡಿದೆ. ಇದು ಕೊಟ್ಟೂರು ಮಾರ್ಗವಾಗಿ ಚಲಿಸುತ್ತದೆ ಇನ್ನೂ ವಿಶೇಷವಾಗಿದೆ.
ಹರಪನಹಳ್ಳಿ ತಾಲ್ಲೂಕಿನ ಕೊಟ್ಟೂರು ರೈಲು ಮಾರ್ಗ ನಿರ್ಮಾಣವಾಗಿ ದಶಕಗಳೆ ಕಳೆದರೂ ಕೇವಲ ದಾವಣಗೆರೆ-ಹರಿಹರ-ಹೊಸಪೇಟೆ ಮಾರ್ಗದ ರೈಲು ಸಂಚಾರಕ್ಕೆ ಮಾತ್ರ ಸೀಮಿತಗೊಂಡಿತ್ತು. ಹೀಗಾಗಿ ಇಲ್ಲಿನ ನಾಗರಿಕರು ಕೊಟ್ಟೂರು ರೈಲು ಮಾರ್ಗದ ಮೂಲಕ ಮತ್ತಷ್ಟು ರೈಲು ಓಡಾಟ ಮಾಡಬೇಕು ಎಂಬ ಒತ್ತಾಯ ಮಾಡಿದ್ದರು.

ವರ್ಷದ ಹಿಂದೆ ಯಶವಂತಪುರ-ವಿಜಯಪುರ ರೈಲು ಸಹ ಓಡಾಟ ಆರಂಭಿಸಿತು. ಅಂದಿನಿಂದ ಆ ಭಾಗದ ಜನತೆಯಲ್ಲಿ ಹೊಸ ಬಗೆಯ ಆಶಯಗಳು ಹುಟ್ಟಿ ಹಾಕಿದವು.
ಇದೀಗ ಯಶವಂತಪುರದಿಂದ ಗುಜರಾತ್‌ನ ವಿಶ್ವಾಮಿತ್ರವರೆಗೆ ನೈಋತ್ಯ ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು ಓಡಿಸುತ್ತಿದೆ. ಈ ರೈಲು ಬೆಳಗ್ಗೆ 8.15ಕ್ಕೆ ಯಶವಂತಪುರದಿಂದ ಹೊರಟು ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ದಾವಣಗೆರೆ ಮೂಲಕ ಮಧ್ಯಾಹ್ನ 2.40ಕ್ಕೆ ಕೊಟ್ಟೂರು ತಲುಪುತ್ತದೆ.
ಬಳಿಕ ಅಲ್ಲಿಂದ 2.42ಕ್ಕೆ ಹೊರಟು ಮುಂದೆ ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಪುಣೆ, ವಸಾಯಿ ರೋಡ್, ವಾಪಿ ಮತ್ತು ಸೂರತ್ ಮಾರ್ಗದ ಮೂಲಕ ಸಂಚರಿಸಿ ಮರುದಿನ ಬೆಳಗಿನ ಜಾವ 4.30ಕ್ಕೆ ವಿಶ್ವಾಮಿತ್ರವನ್ನು ತಲುಪಲಿದೆ ಎಂದು ರೈಲ್ವೆ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಯಶವಂತಪುರ-ವಿಶ್ವಾಮಿತ್ರ ವಿಶೇಷ ರೈಲು ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆಯಲ್ಲೂ ನಿಲುಗಡೆಯಾಗಬೇಕು ಎಂದು ಈ ಭಾಗದ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಈ ಕುರಿತು ನೈಋತ್ಯ ರೈಲ್ವೆ ಮಂಡಳಿ ಇದಕ್ಕೆ ಸ್ಪಂದಿಸಬೇಕಿದೆ.
ಭದ್ರಾವತಿಯಲ್ಲಿ ಬೋಗಿ ಬಿಟ್ಟು ಚಲಿಸಿದ ರೈಲು ಎಂಜಿನ್
ಚಲಿಸುತ್ತಿದ್ದ ರೈಲಿನ ಬೋಗಿಗಳನ್ನು ಬಿಟ್ಟು ಎಂಜಿನ್ ಮುಂದಕ್ಕೆ ಚಲಿಸಿದ ಅಪರೂಪದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಸಮೀಪದ ಬಿಳಕಿ ಪ್ರದೇಶದ ಬಳಿ ಮೇ 26ರ ಶುಕ್ರವಾರ ಬೆಳಗ್ಗೆ ನಡೆದಿದೆ.
ತಾಳಗುಪ್ಪದಿಂದ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ತಾಳಗುಪ್ಪ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 7 ಗಂಟೆ 5 ನಿಮಿಷಕ್ಕೆ ಭದ್ರಾವತಿ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿದೆ. ಈ ವೇಳೆ ಬಿಳಕಿ ಸಮೀಪ ಏಕಾಏಕಿ ರೈಲ್ವೆ ಎಂಜಿನ್ ಬೋಗಿಗಳಿಂದ ಬೇರ್ಪಟ್ಟು ಮುಂದಕ್ಕೆ ಚಲಿಸಿದೆ.
ಕೊಂಚ ದೂರ ಕ್ರಮಿಸಿದ ನಂತರ ಎಂಜಿನ್‌ನನ್ನು, ಲೋಕೋ ಪೈಲೆಟ್ ನಿಲ್ಲಿಸಿದ್ದಾರೆ. ಎಂಜಿನ್- ಬೋಗಿಗಳ ನಡುವೆ ಸಂಪರ್ಕ ಕಳೆದುಕೊಂಡ ಈ ಘಟನೆಯಿಂದ ಕೆಲ ಸಮಯ ಪ್ರಯಾಣಿಕರು ಗೊಂದಲ ಹಾಗೂ ಆತಂಕಕ್ಕೀಡಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಭದ್ರಾವತಿ ಹಾಗೂ ಶಿವಮೊಗ್ಗದ ರೈಲ್ವೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಪರಿಶೀಲಿಸಿ ಎಂಜಿನ್ ಹಾಗೂ ಬೋಗಿ ನಡುವೆ ಸಂಪರ್ಕ ಕಲ್ಪಿಸಿದ ಬಳಿಕ ರೈಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಭದ್ರಾವತಿ ನಿಲ್ದಾಣದಲ್ಲಿ ಹೆಚ್ಚುವರಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ರೈಲು ಸಂಚಾರ ಆರಂಭಿಸಿದ್ದು, ಕೆಲಸ ಇನ್ನಿತರ ಕಾರ್ಯಗಳಿಗೆ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಪಡುವಂತಾಯಿತು. ಎಂಜಿನ್ ಬೋಗಿಗಳ ನಡುವೆ ಸಂಪರ್ಕ ತಪ್ಪುವುದು ಅಪರೂಪದಲ್ಲಿ ಅಪರೂಪ. ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಈ ರೀತಿಯ ಘಟನೆಗಳು ಜರುಗುತ್ತವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications