Kodagu: ಕೊಡಗಿನ ಮಳೆಗಾಲದ ವಿದೇಶಿ ಅತಿಥಿಗಳು ಯಾರು ಗೊತ್ತಾ..?
ಮಡಿಕೇರಿ, ಜೂನ್ 29: ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ಬಹುತೇಕ ಪಕ್ಷಿಗಳು ಇಲ್ಲಿನ ಮಳೆ, ಗಾಳಿ, ಚಳಿಯನ್ನು ಸಹಿಸದೆ ವಲಸೆ ಹೋಗಿ ಬಿಡುತ್ತವೆ. ಆದರೆ ವಿಶೇಷ ಎಂಬಂತೆ ಮಳೆಗಾಲದಲ್ಲಿಯೇ ವಿದೇಶದಿಂದ ಅತಿಥಿಯಾಗಿ ಇಲ್ಲಿಗೆ ಬೆಳ್ಳಕ್ಕಿಗಳು ಆಗಮಿಸುತ್ತವೆ. ಅಷ್ಟೇ ಅಲ್ಲದೆ ಆಯ್ದ ಜನ ಸಂದಣಿಯಿರುವ ಪಟ್ಟಣಗಳ ಪ್ರದೇಶದಲ್ಲಿನ ಮರಗಳಲ್ಲಿ ಮಳೆ ಗಾಳಿಗೆ ಬೆದರದೆ ಬೀಡು ಬಿಟ್ಟು, ಗೂಡು ಕಟ್ಟಿ ಮರಿ ಮಾಡಿ ಮಳೆಗಾಲ ಕಳೆಯುತ್ತಿದ್ದಂತೆಯೇ ತಮ್ಮ ಸ್ವಸ್ಥಾನಕ್ಕೆ ಹಿಂತಿರುಗುತ್ತವೆ.
ಇದು ಇವತ್ತು ನಿನ್ನೆಯ ಕಥೆಯಲ್ಲ. ಈ ಬೆಳ್ಳಕ್ಕಿಗಳು ಕೊಡಗಿನತ್ತ ಅತಿಥಿಯಾಗಿ ಬರಲು ಆರಂಭಿಸಿ ಹಲವು ದಶಕಗಳೇ ಕಳೆದು ಹೋಗಿವೆ. ಪ್ರತಿವರ್ಷವೂ ತಾವು ಬೀಡು ಬಿಡುವ ಪ್ರದೇಶಕ್ಕೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಬರುವುದು ಇವುಗಳ ವಿಶೇಷತೆ. ಇನ್ನು ಈ ಸಮಯದಲ್ಲಿಯಂತು ಹಾರಾಟ, ಚೀರಾಟದೊಂದಿಗೆ ತಮ್ಮ ಇರುವನ್ನು ದೃಢಪಡಿಸುತ್ತಾ ಸುತ್ತಲಿನ ತೋಟಗಳಿಂದ ಕಸ ಕಡ್ಡಿಗಳನ್ನು ತಂದು ಗೂಡು ಕಟ್ಟುವುದರಲ್ಲಿ ತಲ್ಲೀನರಾಗಿರುತ್ತವೆ. ಇನ್ನು ಕೆಲವು ಗದ್ದೆ ಬಯಲಿಗೆ ಹೋಗಿ ಆಹಾರಗಳನ್ನು ತರುತ್ತವೆ.

ಕೊಡಗಿನ ವೀರಾಜಪೇಟೆ, ಮೂರ್ನಾಡು, ನಾಪೋಕ್ಲು ಸೇರಿದಂತೆ ಹಲವು ಕಡೆಗಳಲ್ಲಿ ಬೀಡು ಬಿಡುವ ಇವು ತಮ್ಮ ಪಾಡಿಗೆ ತಾವು ಎಂಬಂತೆ ತಮ್ಮ ಸಂತಾನೋತ್ಪತ್ತಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಎದ್ದು ಕಾಣಿಸುತ್ತದೆ. ಇವು ಸಹಸ್ರಾರು ಕಿ.ಮೀ. ದೂರದಿಂದ ಬರುತ್ತಿದ್ದು ಇಲ್ಲಿನ ಹೆಮ್ಮರಗಳಲ್ಲಿ ಗುಂಪು ಗುಂಪಾಗಿ ಬೀಡು ಬಿಟ್ಟು, ಪಟ್ಟಣದ ಜನಜಂಗಳಿಯ ನಡುವೆ ಕಲರವ ಮಾಡುತ್ತಾ ನೀಲಾಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಾ, ಗೂಡುಕಟ್ಟುವುದರಲ್ಲಿ, ಮೊಟ್ಟೆಯಿಟ್ಟು ಮರಿಮಾಡುವುದರಲ್ಲಿ ನಿರತವಾಗಿ ಬಿಡುವ ದೃಶ್ಯ ಸಾಮಾನ್ಯವಾಗಿರುತ್ತದೆ.
ಗಂಡು ಹೆಣ್ಣು ಸಮನಾಗಿ ಕಾವು ಕೊಡುತ್ತವೆ
ಹಾಗೆನೋಡಿದರೆ ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಮಳೆ, ಗಾಳಿಯನ್ನು ಸಹಿಸದ ಕೆಲವು ಹಕ್ಕಿಗಳು ದೂರದ ಸುರಕ್ಷಿತ ತಾಣವನ್ನು ಅರಸುತ್ತಾ ವಲಸೆ ಹೋಗುವುದು ಹಿಂದಿನಿಂದಲೂ ನಡೆದು ಬಂದ ಪ್ರಕೃತಿ ನಿಯಮ. ಇವುಗಳ ನಡುವೆ ಇಲ್ಲಿಗೆ ಬರುವ ಬೆಳ್ಳಕ್ಕಿಗಳಿಗೆ ಆಹಾರದ ಸಮಸ್ಯೆ, ಜನರಿಂದ ಕಿರುಕುಳ ಇಲ್ಲದೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ವಲಸೆ ಬರುವ ಬೆಳ್ಳಕ್ಕಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮುಂಗಾರು ಆರಂಭವಾಗುತ್ತಿದ್ದಂತೆಯೇ ಅಂದರೆ ಮೇ-ಜೂನ್ ತಿಂಗಳಲ್ಲಿ ಹಿಂಡು ಹಿಂಡಾಗಿ ಬರುವ ಬೆಳ್ಳಕ್ಕಿಗಳು ನಿಗದಿತ ಸ್ಥಳಗಳಲ್ಲಿ ನೆಲೆಯೂರುತ್ತವೆ.
ಇದಾದ ನಂತರ ಸುತ್ತಮುತ್ತಲಿನ ಕಾಫಿ, ಏಲಕ್ಕಿ ತೋಟಗಳಿಂದ ಕಡ್ಡಿಕಸಗಳನ್ನು ಹೆಕ್ಕಿ ತಂದು ಮರಗಳಲ್ಲಿ ಗೂಡುಕಟ್ಟುವುದರಲ್ಲಿ ನಿರತವಾಗುತ್ತವೆ. ಮತ್ತೆ ಮೊಟ್ಟೆಯಿಡುತ್ತವೆ. ಈ ಸಂದರ್ಭ ಹೆಣ್ಣುಹಕ್ಕಿ ಮೊಟ್ಟೆಯಿಟ್ಟ ನಂತರ ಗಂಡು ಮತ್ತು ಹೆಣ್ಣು ಹಕ್ಕಿಗಳು ಸಮವಾಗಿ ಕಾವು ಕೊಡುವುದರಲ್ಲಿ ನಿರತರಾಗಿ, ಬಳಿಕ ಸರದಿಯಂತೆ ದೂರದ ಗದ್ದೆ ಬಯಲಿನಿಂದ ಅಡ್ಡಾಡಿ ಆಹಾರಗಳನ್ನು ತರುತ್ತವೆ. ಮೊಟ್ಟೆಯಿಟ್ಟು ಮರಿ ಮಾಡಿದ ನಂತರ ಮರಿಗಳಿಗೆ ಗುಟುಕು ನೀಡುವ ಕೆಲಸ ತಾಯಿ ಬೆಳ್ಳಕ್ಕಿಯದು. ಅಲ್ಲಿ, ಇಲ್ಲಿ ಸುತ್ತಾಡಿ ಆಹಾರವನ್ನು ತಂದು ಮರಿ ಹಕ್ಕಿಗಳಿಗೆ ಗುಟುಕು ನೀಡುವ ದೃಶ್ಯ ಮನಮೋಹಕವಾಗಿರುತ್ತದೆ.
ಬೆಳ್ಳಕ್ಕಿಗಳ ನೆಲೆ ದೂರದ ಯುರೋಪ್
ಸುತ್ತಮುತ್ತ ಗದ್ದೆ ಬಯಲುಗಳಿರುವುದರಿಂದ ಉಳುಮೆ ಮಾಡಿದಾಗ ಗದ್ದೆಗಳಲ್ಲಿ ಹುಳಹುಪ್ಪಟೆಗಳು ಹೇರಳವಾಗಿ ಸಿಗುತ್ತವೆ. ಮರಿಗಳು ಬೆಳೆದು ರೆಕ್ಕೆಪುಕ್ಕ ಹುಟ್ಟುತ್ತಿದ್ದಂತೆಯೇ ಹಾರಾಟ ಕಲಿಸುತ್ತವೆ. ಈ ಸಂದರ್ಭ ಹಕ್ಕಿಗಳ ಚೀರಾಟ... ಹಾರಾಟ... ಮುಗಿಲು ಮುಟ್ಟುತ್ತದೆ. ಜನರ ಸದ್ದಿಗೆ, ವಾಹನಗಳ ಓಡಾಟಕ್ಕೆ ಇವು ಸೊಪ್ಪು ಹಾಕದೆ ತಮ್ಮ ಕಾರ್ಯಗಳಲ್ಲಿ ನಿರತವಾಗಿಬಿಡುತ್ತವೆ. ನವೆಂಬರ್ ತಿಂಗಳ ವೇಳೆಗೆ ತಮ್ಮ ಮರಿಗಳೊಂದಿಗೆ ತಮ್ಮ ಸ್ವಸ್ಥಾನಕ್ಕೆ ಮರಳುತ್ತವೆ. ಮತ್ತೆ ಇವುಗಳು ಕಾಣಸಿಗುವುದು ಮುಂದಿನ ಮಳೆಗಾಲದಲ್ಲಿಯೇ...
ಇನ್ನು ಇವುಗಳ ಬಗ್ಗೆ ತಿಳಿಯುತ್ತಾ ಹೋದರೆ ಇವುಗಳ ಮೂಲ ನೆಲೆ ಯುರೋಪು, ಏಷಿಯಾ, ಆಸ್ಟೇಲಿಯಾದ ಉಷ್ಣವಲಯದ ಒಳನಾಡಿನ ಹಾಗೂ ಕರಾವಳಿಯ ಜೌಗು ಪ್ರದೇಶ ಎಂದು ಹೇಳಲಾಗುತ್ತದೆ. ಅದರಲ್ಲೂ ಯುರೋಪಿನಲ್ಲಿ ನೆಲೆ ಬಿಟ್ಟಿರುವ ಕೊಕ್ಕರೆಗಳು ಚಳಿಗಾಲದಲ್ಲಿ ಏಷ್ಯಾ ಖಂಡದ ಕಡೆಗೆ ವಲಸೆ ಹೋಗುತ್ತವೆಯಂತೆ. ಮರದ ಕೊಂಬೆ, ಪೊದೆಗಳಲ್ಲಿ ಕಸ ಕಡ್ಡಿಗಳಿಂದ ಗೂಡು ಕಟ್ಟಿಕೊಂಡು ಗುಂಪು ಗುಂಪಾಗಿ ವಾಸಿಸುವುದು ಇವುಗಳ ವಿಶೇಷತೆ.
ನಿಸರ್ಗದ ವಿಸ್ಮಯದಂತೆ ಗೋಚರಿಸುವ ಬೆಳ್ಳಕ್ಕಿಗಳು
ಬೆಳ್ಳಕ್ಕಿಗಳು ತಮ್ಮ ಗೂಡಿನ ಸುತ್ತಲಿನ ಮೂರರಿಂದ ನಾಲ್ಕು ಮೀಟರ್ ವ್ಯಾಪ್ತಿ ಪ್ರದೇಶವನ್ನು ಗಡಿಯಾಗಿ ಪರಿಗಣಿಸಿ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತವೆಯಂತೆ. ಹೆಣ್ಣು ಕೊಕ್ಕರೆ ಒಮ್ಮೆ ಮೂರರಿಂದ ನಾಲ್ಕು ಮೊಟ್ಟೆ ಇಟ್ಟು, ಇಪ್ಪತ್ತೊಂದರಿಂದ ಇಪ್ಪತ್ತೈದು ದಿನಗಳವರೆಗೆ ಸರದಿಯಲ್ಲಿ ಗಂಡು ಹೆಣ್ಣು ಎರಡೂ ಹಕ್ಕಿಗಳು ಕಾವು ಕೊಟ್ಟು ಮರಿ ಮಾಡುತ್ತವೆ. ಹುಟ್ಟಿದ ಮರಿಗಳು ಸುಮಾರು ಒಂದೂವರೆ ತಿಂಗಳ ಕಾಲ ತಾಯಿಯಿಂದ ಗುಟುಕು ಪಡೆಯುತ್ತವೆ. ಬಳಿಕ ಹಾರಲು ಆರಂಭಿಸಿ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ.
ಇನ್ನು ಕೊಡಗಿನಲ್ಲಿ ಬೆಳ್ಳಕ್ಕಿಗಳು ಇಷ್ಟಪಟ್ಟು ತಿನ್ನುವ ಕಪ್ಪೆ, ಮೀನು, ಏಡಿ, ಹುಳ, ಹುಪ್ಪಟೆಗಳು ಹೇರಳವಾಗಿ ಸಿಗುತ್ತವೆ. ಹೀಗಾಗಿ ಗದ್ದೆ, ಹೊಳೆ, ಕೆರೆಗಳ ಬದಿಯಲ್ಲಿ ಅವುಗಳನ್ನು ಬೇಟೆಯಾಡುತ್ತವೆ. ಅದು ಏನೇ ಇರಲಿ.. ಮಳೆಗಾಲದಲ್ಲಿ ಕೊಡಗಿನತ್ತ ಬರಲು ಜನರೇ ಹಿಂದೇಟು ಹಾಕುವಾಗ ಸಹಸ್ರಾರು ಕಿ.ಮೀ. ದೂರದಿಂದ ಬಂದು ಇಲ್ಲಿನ ಮಳೆಗೆ ಮೈಕೊಟ್ಟು ಮಳೆಯಲ್ಲಿಯೇ ಬದುಕು ಕಟ್ಟಿಕೊಂಡು ತಮ್ಮ ಸಂತಾನವನ್ನು ವೃದ್ಧಿ ಮಾಡಿಕೊಂಡು ಹೋಗುವ ಬೆಳ್ಳಕ್ಕಿಗಳು ನಿಸರ್ಗದ ವಿಸ್ಮಯವಾಗಿ ನಮ್ಮ ಕಣ್ಣಿಗೆ ಗೋಚರಿಸುತ್ತವೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications