ಶಿಲ್ಪಕಲೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಆಗರ ಲಕ್ಕುಂಡಿ, ಇಲ್ಲಿದೆ ವಿವರ

ಗದಗ ಜಿಲ್ಲೆಯ ಲಕ್ಕುಂಡಿಯು ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಹಾಗಾದರೆ ಲಕ್ಕುಂಡಿಯಲ್ಲಿರುವ ವಿಶೇಷತೆಗಳು ಏನು ಅನ್ನುವುದನ್ನು ಇಲ್ಲಿ ತಿಳಿಯಿರಿ.

ಗದಗ, ಫೆಬ್ರವರಿ, 03: ನಮ್ಮ ನಾಡಿನ ಐತಿಹಾಸಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಗದಗ ಜಿಲ್ಲೆಯು ವಿಶೇಷ ಕೊಡುಗೆಯನ್ನು ನೀಡಿದೆ. ಈ ಭೂಮಿಯಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಶಾಶ್ವತ ಮೌಲ್ಯಗಳು ನೆಲೆಗೊಂಡಿವೆ. ಕವಿ ಕುಮಾರವ್ಯಾಸನ ಕರ್ಮಭೂಮಿಯಾದ ಈ ಜಿಲ್ಲೆಯಲ್ಲಿ ಚಾಲುಕ್ಯ , ಹೊಯ್ಸಳ, ವಿಜಯ ನಗರ ಶೈಲಿಯ ಪ್ರಾಚೀನ ದೇವಾಲಯಗಳು ಶಿಲ್ಪಕಲಾ ನೈಪುಣ್ಯವನ್ನು ಸಾರಿ ಹೇಳುತ್ತವೆ. ಲಕ್ಕುಂಡಿಯಲ್ಲಿರುವ ವಿವಿಧ ದೇವಾಲಯಗಳು ಭವ್ಯ ಶಿಲ್ಪಕಲೆಗಳಿಂದ ನೋಡುಗರ ಕಣ್ಮನ ಸೆಳೆಯುತ್ತವೆ. ಕಲಾವಿದರು ಕಣ್ಮರೆಯಾದರೂ ಅವರ ಕಲೆ ಮಾತ್ರ ಕಣ್ಮರೆಯಾಗುವುದಿಲ್ಲ ಎಂಬ ಮಾತಿನಂತೆ ಲಕ್ಕುಂಡಿಯ ದೇವಾಲಯಗಳ ಶಿಲ್ಪಕಲೆಯು ಅಭೂತಪೂರ್ವ ಇತಿಹಾಸವನ್ನು ಹೊಂದಿದೆ.

ಗದಗ ಜಿಲ್ಲಾ ಕೇಂದ್ರದಿಂದ 12 ಕಿಲೋ ಮೀಟರ್‌ ದೂರದಲ್ಲಿರುವ ಲಕ್ಕುಂಡಿಗೆ ಪೌರಾಣಿಕವಾಗಿ, ಐತಿಹಾಸಿಕವಾಗಿ ವಿಶೇಷ ಸ್ಥಾನವಿದೆ. ವಿವಿಧ ಅರಸು ಮನೆತನಗಳ ಆಳ್ವಿಕೆಗೊಳಪಟ್ಟಿದ್ದ ಲಕ್ಕುಂಡಿ ಬೆಳ್ವಲ ಆಡಳಿತಕ್ಕೆ ಸೇರಿತ್ತು. ಕನ್ನಡ ನಾಡಿನ ಹೃದಯ ಭಾಗ, ತಿರುಳ್ ಗನ್ನಡ ನಾಡಿನ ಮಧ್ಯದಲ್ಲಿರುವ ಬೆಳವಲದ ಈ ಸಿರಿಯಲ್ಲಿ ಶಿಲಾಯುಗದ ಐತಿಹಾಸಿಕ ನೆಲೆಗಳು ಲಭ್ಯವಾಗಿವೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣಗೊಂಡಿದ್ದು, ಲಕ್ಕುಂಡಿಯು ಶಿಲ್ಕಕಲೆಯ ತವರೂರಾಗಿದೆ.

 ಶಿಲ್ಪಕಲಾ ಪ್ರಪಂಚವೇ ಕಾಣುತ್ತದೆ

ಶಿಲ್ಪಕಲಾ ಪ್ರಪಂಚವೇ ಕಾಣುತ್ತದೆ

ನಯನ ಮನೋಹರ ಶಿಲ್ಪಕಲೆಗಳನ್ನು ಹೊಂದಿದ ಲಕ್ಕುಂಡಿಯು ನೂರೊಂದು ಗುಡಿ ಹಾಗೂ ನೂರೊಂದು ಬಾವಿಯನ್ನು ಹೊಂದಿರುವುದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ದಕ್ಷಿಣ ಭಾರತದ ವಾಸ್ತು ಶಿಲ್ಪ ಮುಕುಟ ಮಣಿಯೆಂದು ಹೆಸರುವಾಸಿಯಾಗಿರುವ ಲಕ್ಕುಂಡಿಯು ಇತಿಹಾಸದ ಪುಟಗಳಲ್ಲಿ ಲೋಹ ಖಂಡಪುರ, ಲೊಕ್ಕಿಗುಂಡಿ ಅಂತಲೂ ದಾಖಲಾಗಿದೆ. ದಾನವೀರ ಶಿಬಿ ಚಕ್ರವರ್ತಿಯ ನಾಡಾಗಿ, ಪರಮ ಜಿನಭಕ್ತ ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿಯಾಗಿ, ಅಜಗಣ್ಣ ಮುಕ್ತಾಯಕ್ಕರಂತಹ ಶಿವ ಶರಣರ ಧಾರ್ಮಿಕರ ಬೀಡಾಗಿ, ಟಂಕ ಶಾಲೆಯ ನೆಲೆಯಾಗಿ, ಹೊಯ್ಸಳ ಚಾಲುಕ್ಯರ ಆಡಳಿತದ ಸ್ಥಳವಾಗಿ, ಸಾಂಸ್ಕೃತಿಕ , ಶಿಲ್ಪಕಲಾ ಪ್ರಪಂಚದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಕಡಿಮೆಯಾದ ದೇವಸ್ಥಾನಗಳ ಸಂಖ್ಯೆ

ಕಡಿಮೆಯಾದ ದೇವಸ್ಥಾನಗಳ ಸಂಖ್ಯೆ

ಲಕ್ಕುಂಡಿಯಲ್ಲಿ ನೂರಕ್ಕೂ ಹೆಚ್ಚು ದೇವಸ್ಥಾನ ಹಾಗೂ ಬಾವಿಗಳು ಇದ್ದವು ಎಂಬ ಪ್ರತೀತಿಯಿದೆ. ಆದರೆ ಈಗ ಕೆಲವು ದೇವಸ್ಥಾನಗಳು ಮಾತ್ರ ಕಾಣಸಿಗುತ್ತವೆ. ಕಾಶಿ ವಿಶ್ವೇಶ್ವರ, ಮಲ್ಲಿಕಾರ್ಜುನ, ವಿರೂಪಾಕ್ಷ, ಲಕ್ಷ್ಮೀನಾರಾಯಣ, ಮಾಣಿಕೇಶ್ವರ, ವೀರಭದ್ರ , ನನ್ನೇಶ್ವರ, ಸೋಮೇಶ್ವರ, ನೀಲಕಂಠೇಶ್ವರ, ಕುಂಬಾರ ಸಿದ್ಧೇಶ್ವರ, ನಗರದೇವ ವಿಶ್ವನಾಥ ಇನ್ನೂ ಮುಂತಾದ ದೇವಾಲಯಗಳನ್ನು ನಾವು ಕಾಣಬಹುದಾಗಿದೆ. ಕಲ್ಯಾಣ ಚಾಲುಕ್ಯರ ಶಿಲ್ಪದ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂದು ಗುರುತಿಸಲಾಗಿದೆ.

ದೇವಸ್ಥಾನಗಳ ವಿವರ ಇಲ್ಲಿದೆ

ದೇವಸ್ಥಾನಗಳ ವಿವರ ಇಲ್ಲಿದೆ

ಶಿಲ್ಪಕಲೆಯ ಮೇರು ಕೃತಿಯಾದ ಕಾಶಿ ವಿಶ್ವೇಶ್ವರ ದೇವಾಲಯ, ನನ್ನೇಶ್ವರ ದೇವಸ್ಥಾನ, ಅತ್ತಿಮಬ್ಬೆ ನಿರ್ಮಿಸಿದ ಬ್ರಹ್ಮ ಜಿನಾಲಯ ಹಾಗೂ ಪ್ರಾಚೀನ ಕಾಲದ ಮೆಟ್ಟಿಲುಗಳ ಬಾವಿ ಹಾಗೂ ಇನ್ನಿತರ ದೇವಾಲಯಗಳು ಅಪೂರ್ವ ಶಿಲ್ಪಕಲೆಯ ಸಂಗಮವಾಗಿವೆ. ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ಎರಡು ಗರ್ಭಗುಡಿಗಳನ್ನು ಹೊಂದಿರುವ ಈ ದೇವಾಲಯದ ಮುಖ್ಯ ಗುಡಿಯಲ್ಲಿ ಕಾಶಿವಿಶ್ವೇಶ್ವರ ಲಿಂಗವಿದ್ದು, ಎದುರಿಗೆ ಸೂರ್ಯದೇವಾಲಯವಿದೆ. ದಾನ ಚಿಂತಾಮಣಿ ಅತ್ತಿಮಬ್ಬೆ ನಿರ್ಮಿಸಿದ ಬ್ರಹ್ಮ ಜಿನಾಲಯ ನವರಂಗ ಮುಖ್ಯಮಂಟಪಹೊಂದಿದ್ದು, ಸುಂದರ ಶಿಲೆಯ ಕುಸುರಿ ಗಮನ ಸೆಳೆಯುತ್ತದೆ. ಲಕ್ಕುಂಡಿ ನೆಲದಲ್ಲಿ ಟಂಕ ಶಾಲೆಯಿದ್ದು, ಅಲ್ಲಿ ತಯಾರಾದ ನಾಣ್ಯಗಳಿಗೆ ಲೊಕ್ಕಿಗದ್ಯಾಣ ಹಾಗೂ ಲೊಕ್ಕಿನಿಷ್ಟ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಬಾವಿಗಳು ಹಾಗೂ ಶಾಸನಗಳು ವಾಸ್ತು ಶಿಲ್ಪದ ಜಾಣ್ಮೆಯನ್ನು ಬಿಂಬಿಸುತ್ತವೆ.

ಅತ್ತಿಮಬ್ಬೆಗೆ ಇರುವ ಬಿರುದು ಏನು?

ಅತ್ತಿಮಬ್ಬೆಗೆ ಇರುವ ಬಿರುದು ಏನು?

ದಾನಚಿಂತಾಮಣಿ ಅತ್ತಿಮಬ್ಬೆಯ ಹೆಸರು ಲಕ್ಕುಂಡಿಯೊಂದಿಗೆ ಹಾಸುಹೊಕ್ಕಾಗಿದೆ. ಈ ಮಹಾಸಾಧ್ವಿ ಹೆಸರು ಲಕ್ಕುಂಡಿಯ ಧಾರ್ಮಿಕ ಜೀವನ ಹಾಗೂ ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚ ಹಸುರಾಗಿ ನಿಂತಿದೆ. ಅತ್ತಮಬ್ಬೆಯು 11ನೇ ಶತಮಾನದ ಕಲ್ಯಾಣ ಚಾಲುಕ್ಯ ಅರಸ ಅಹಮಲ್ಲ ದೇವನ ಕಾಲದಲ್ಲಿದ್ದಳು. ದೇವಾಲಯಗಳನ್ನು ಕಟ್ಟಿಸಿ, ಕವಿಗಳಿಗೆ ಆಶ್ರಯ ನೀಡಿ ಕವಿಜನ ಕಾಮಧೇನು ಎನಿಸಿಕೊಂಡು ಸಾಕಷ್ಟು ದಾನ ಮಾಡಿದ್ದಕ್ಕೆ ದಾನ ಚಿಂತಾಮಣಿ ಎಂಬ ಬಿರುದು ಪಡೆದಿದ್ದಳು.

ಲಕ್ಕುಂಡಿಯ ಸುತ್ತಮುತ್ತಲೂ ಸೇವಂತಿಗೆ, ಮಲ್ಲಿಗೆ , ಕನಕಾಂಬರಿ ಹೂವುಗಳನ್ನು ಬೆಳೆಯುತ್ತಿದ್ದು, ನೆರೆ ರಾಜ್ಯದ ವಿವಿಧ ಜಿಲ್ಲೆಗಳಿಗೂ ಇಲ್ಲಿನ ಹೂಗಳನ್ನು ಪೂರೈಸಲಾಗುತ್ತದೆ. ಹೂವಿನ ಬೆಳೆ ಬೆಳೆಯುವುದರಲ್ಲಿ ಲಕ್ಕುಂಡಿ ಪ್ರಸಿದ್ಧಿ ಪಡೆದಿದ್ದು, ಈ ಮೂಲಕ ಪುಷ್ಪಕಾಶಿಯ ಪರಿಮಳವನ್ನು ನಾಡಿನಾದ್ಯಂತ ಬೀರಿದೆ.

ಕಾರ್ಯಕ್ರಮದ ವಿವರಗಳು

ಕಾರ್ಯಕ್ರಮದ ವಿವರಗಳು

ಹಾಗೆಯೇ ಫೆಬ್ರವರಿ 10, 11 ಮತ್ತು 12 ಮೂರು ದಿನಗಳ ಕಾಲ ಲಕ್ಕುಂಡಿ ಉತ್ಸವ ಜರುಗಲಿದೆ. ಹಿಂದಿನ ಪೀಳಿಗೆಯ ಸಾಂಸ್ಕೃತಿಕ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಕಲಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಲಕ್ಕುಂಡಿ ಉತ್ಸವದ ಉದ್ದೇಶವಾಗಿದೆ. ಹೊರರಾಜ್ಯಗಳಿಂದ ಹಾಗೂ ಸ್ಥಳೀಯ ಕಲಾವಿದರುಗಳು, ವಿವಿಧ ಗಣ್ಯರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಲಾರಸಿಕರಿಗೆ ಇದು ಸಂತಸ ತರುವ ಉತ್ಸವವಾಗಲಿದೆ. ಹಾಗೆಯೇ ಫಲಪುಷ್ಪ ಪ್ರದರ್ಶನ, ಕೃಷಿ ಹಾಗೂ ಕವಿಗೋಷ್ಟಿಗಳು ಜರುಗಲಿದ್ದು, ನೋಡುಗರನ್ನು ತನ್ನತ್ತ ಸೆಳೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+