ವಿಜಯಪುರ-ಬೆಂಗಳೂರು ಕಲ್ಯಾಣ ರಥ ಬಸ್; ದರ, ವೇಳಾಪಟ್ಟಿ
ವಿಜಯಪುರ, ಜನವರಿ 28: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ವಿಜಯಪುರ-ಬೆಂಗಳೂರು ಮಾರ್ಗದಲ್ಲಿ ಮೊದಲ ಬಾರಿಗೆ ಐಷಾರಾಮಿ ಸ್ಲೀಪರ್ ಬಸ್‌ಗಳನ್ನು ಓಡಿಸುತ್ತಿದೆ.
ಕೆಕೆಆರ್‌ಟಿಸಿಯ ವಿಜಯಪುರ ವಿಭಾಗ 'ಕಲ್ಯಾಣ ರಥ' ಐಷರಾಮಿ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈಗಾಗಲೇ ಹಲವು ಮಾರ್ಗದಲ್ಲಿ ಈ ಬಸ್‌ಗಳನ್ನು ಓಡಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.

'ಕಲ್ಯಾಣ ರಥ' ಮಾದರಿಯ ಬಸ್‌ಗಳು ಅತ್ಯಾಧುನಿಕ BS6 ಮಾದರಿಯ ಇಂಜಿನ್ ಸೌಲಭ್ಯಗಳನ್ನು ಹೊಂದಿದೆ. ವಿಜಯಪುರ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಐಷಾರಾಮಿ ಪ್ರಯಾಣಿಕ ಸೌಲಭ್ಯವನ್ನು ಈ ಬಸ್ ನೀಡಲಿದೆ.
ವೇಳಾಪಟ್ಟಿ, ದರ; ವಿಜಯಪುರ-ಬೆಂಗಳೂರು ನಡುವಿನ 'ಕಲ್ಯಾಣ ರಥ' ಐಷರಾಮಿ ಬಸ್ ರಾತ್ರಿ 9.45ಕ್ಕೆ ಹೊರಡಲಿದ್ದು, ಬೆಂಗಳೂರು ನಗರವನ್ನು ಬೆಳಗ್ಗೆ 6.45ಕ್ಕೆ ತಲುಪಲಿದೆ. ಕೆಎಸ್ಆರ್‌ಟಿಸಿ ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದು.
ಬೆಂಗಳೂರು-ವಿಜಯಪುರ ನಡುವಿನ ಬಸ್ ಬೆಂಗಳೂರು ನಗರದಿಂದ ರಾತ್ರಿ 10 ಗಂಟೆಗೆ ಹೊರಡಲಿದೆ. ವಿಜಯಪುರಕ್ಕೆ ಬೆಳಗ್ಗೆ 7 ಗಂಟೆಗೆ ತಲುಪಲಿದೆ. ಈ ಬಸ್‌ಗೆ ಪ್ರಯಾಣ ದರವನ್ನು 1,417 ರೂ. ನಿಗದಿ ಮಾಡಲಾಗಿದೆ.
'ಕಲ್ಯಾಣ ರಥ' ವೋಲ್ವೋ ಬಸ್ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪರಿಚಯಿಸಿದ ಐಷಾರಾಮಿ ಬಸ್ ಸೇವೆಯಾಗಿದೆ. ಸಿಂಧನೂರು-ಬೆಂಗಳೂರು ಸೇರಿದಂತೆ ವಿವಿಧ ಮಾರ್ಗದಲ್ಲಿ ಈ ಮಾರ್ಗದ ಬಸ್‌ಗಳು ಈಗಾಗಲೇ ಸಂಚಾರ ನಡೆಸುತ್ತಿವೆ.
ಕಲ್ಯಾಣ ರಥ ಬಸ್ ವಿಶೇಷತೆ; ಕಲ್ಯಾಣ ರಥ ಬ್ಯಾಂಡ್‌ನ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಕ್ಲಾಸ್ ಬಸ್ 40 ಆಸನಗಳನ್ನು ಹೊಂದಿದೆ. ಬಿಎಸ್-6 ಇಂಜಿನ್ ಹೊಂದಿದೆ. ಬಸ್ಸಿಗೆ ವಿಶಿಷ್ಟ ಸಸ್ಪೆನ್ಸನ್‍ಗಳನ್ನು ಅಳವಡಿಸಲಾಗಿದೆ.
ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಬಸ್ ಒಳಗೊಂಡಿದೆ. ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ ಇದೆ.
ಬಸ್‌ನಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಇದೆ. ಒಟ್ಟಾರೆಯಾಗಿ ಆರಾಮದಾಯಕ ಮತ್ತು ಸುಖಕರ ಪ್ರಯಾಣವನ್ನು ಈ ಮಾದರಿಯ ಬಸ್‌ಗಳು ನೀಡಲಿವೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ 'ಕಲ್ಯಾಣ ರಥ' ಮತ್ತು 'ಅಮೋಘ ವರ್ಷ' ಎಂಬ ಎರಡು ಮಾದರಿಯ ಐಷಾರಾಮಿ ಬಸ್ ಸೇವೆಯನ್ನು ನೀಡುತ್ತಿದೆ. 'ಅಮೋಘ ವರ್ಷ' ಬ್ರ್ಯಾಂಡ್‌ನ 36 ನಾನ್ ಎಸಿ ಸ್ಲೀಪರ್ ಹಾಗೂ 4 ಎಸಿ ಸ್ಲೀಪರ್ ಬಸ್‍ಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆ ಮಾಡಿದ್ದರು.
30 ಆಸನಗಳ ಈ ಬಸ್ ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣ, ಪ್ರತಿ ಸೀಟಿಗೆ ಕಿರು ಲಗೇಜ್ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲ್ಯಾಂಪ್ ವ್ಯವಸ್ಥೆ, ಏರ್ ಸಸ್ಪೆಕ್ಷನ್ ಸಿಸ್ಟಮ್, ಪಬ್ಲಿಕ್ ಇನ್‍ಫಾರ್ಮೇಷನ್ ಸಿಸ್ಟಂ ಹೊಂದಿದೆ.
ರಿವರ್ಸ್ ಪಾರ್ಕಿಂಗ್ ಅಲಾರ್ಮ್ ಸೌಲಭ್ಯವನ್ನು ಬಸ್ ಒಳಗೊಂಡಿದೆ. ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ ಕವಿರಾಜ ಮಾರ್ಗ ಕೃತಿ ರಚಿಸಿದ ಕವಿ ಅಮೋಘ ವರ್ಷನ ಹೆಸರಿನಲ್ಲಿ ಈ ಬಸ್ಸುಗಳನ್ನು ಓಡಿಸಲಾಗುತ್ತಿದೆ.












Click it and Unblock the Notifications