Vande Bharat Express: ಕೇರಳಕ್ಕೆ ವಂದೇ ಭಾರತ್ ರೈಲು ಬೋಗಿಗಳು, ಕರ್ನಾಟಕದ ಜನರಿಗೂ ಅನುಕೂಲ
ಬೆಂಗಳೂರು, ನವೆಂಬರ್ 02: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತೀಯ ರೈಲ್ವೆ ಕೇರಳಕ್ಕೆ ಕೊಡುಗೆಯೊಂದನ್ನು ನೀಡಿದೆ. ದೇಶದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರೀ ಬೇಡಿಕೆ ಇದೆ, ಇದನ್ನು ಪರಿಗಣಿಸಿ ಕೇರಳ ರಾಜ್ಯಕ್ಕೆ ಹೆಚ್ಚುವರಿ ಬೋಗಿಯನ್ನು ಮಂಜೂರು ಮಾಡಲಾಗಿದೆ. ಈ ಬೋಗಿಗಳಿಂದ ಕರ್ನಾಟಕಕ್ಕೆ ಸಹ ಅನುಕೂಲವಾಗಲಿದೆ. ಎರಡು ಮಹಾ ನಗರಗಳ ನಡುವಿನ ಪ್ರಯಾಣದ ಅವಧಿ ಇಳಿಕೆ ಮಾಡುವಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸದ್ಯ ಪ್ರಮುಖ ಪಾತ್ರವಹಿಸುತ್ತಿದೆ.
ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಹೊಸ ಬೋಗಿಗಳನ್ನು ಸ್ವಾಗತಿಸಲು ತಯಾರಿ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯಂತೆ ಕೇರಳ ರಾಜ್ಯಕ್ಕೆ ಹೊಸ ಮಾದರಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಚ್ಚುವರಿ ಬೋಗಿಗಳನ್ನು ಮಂಜೂರು ಮಾಡಲಾಗಿದೆ. ಸದ್ಯ ಕೇರಳದಲ್ಲಿ ಎರಡು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ.

ಕರ್ನಾಟಕಕ್ಕೆ ಅನುಕೂಲ: ಕೇರಳದಲ್ಲಿ ತಿರುವನಂತಪುರಂ-ಮಂಗಳೂರು ಮತ್ತು ತಿರುವನಂತಪುರಂ-ಕಾಸರಗೋಡು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಈ ಎರಡು ರೈಲುಗಳಿಗೆ ಜೋಡಣೆ ಮಾಡಲು ಹೆಚ್ಚುವರಿ ಬೋಗಿಯನ್ನು ಕೇರಳ ರಾಜ್ಯಕ್ಕೆ ಭಾರತೀಯ ರೈಲ್ವೆ ನೀಡುತ್ತಿದೆ.
ಸದ್ಯ ತಿರುವನಂತಪುರಂ-ಮಂಗಳೂರು ನಡುವೆ 8 ಬೋಗಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಈ ಮಾರ್ಗದಲ್ಲಿ ಇರುವ ಪ್ರಯಾಣಿಕರ ದಟ್ಟಣೆಯನ್ನು ನೋಡಿಕೊಂಡು ಈ ರೈಲನ್ನು 16 ಬೋಗಿಯ ರೈಲಾಗಿ ಪರಿವರ್ತನೆ ಮಾಡಲಾಗುತ್ತದೆ. ಅದಕ್ಕಾಗಿ ಹೊಸ ಬೋಗಿಯನ್ನು ಸೇರಿಸಲಾಗುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ತಿರುವನಂತಪುರಂ-ಮಂಗಳೂರು ನಡುವಿನ ಸಂಚಾರಕ್ಕೆ 8 ಗಂಟೆ 35 ನಿಮಿಷ ತೆಗೆದುಕೊಳ್ಳುತ್ತದೆ. ಇದೇ ಮಾರ್ಗದಲ್ಲಿ ಸಾಮಾನ್ಯ ರೈಲು ಸಂಚಾರಕ್ಕೆ 12 ಗಂಟೆ 50 ನಿಮಿಷ ಮತ್ತು 15 ಗಂಟೆ ತೆಗೆದುಕೊಳ್ಳುತ್ತದೆ. ಆದ್ದರಿಂದ ವಂದೇ ಭಾರತ್‌ಗೆ ಬೇಡಿಕೆ ಹೆಚ್ಚಿದೆ. ಈ ಮಾರ್ಗದ ರೈಲು ಸಂಚಾರ ಆರಂಭವಾದಾಗಿನಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೈಲು ಸಂಪೂರ್ಣ ಭರ್ತಿಯಾಗಿ ಸಂಚಾರವನ್ನು ನಡೆಸುತ್ತಿದೆ.
ಇದಲ್ಲದೇ ಬೆಂಗಳೂರು-ಕೊಚ್ಚಿ ನಡುವೆ ವಾರದಲ್ಲಿ ಮೂರು ದಿನ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಈ ರೈಲಿಗೆ ಸಹ ಭಾರೀ ಬೇಡಿಕೆ ಇದೆ. ಪ್ರಯಾಣಿಕರ ದಟ್ಟಣೆಯನ್ನು ಗಮನಿಸಿ, ಇದರ ಬೋಗಿಯ ಸಂಖ್ಯೆಯನ್ನು ಹೆಚ್ಚಳ ಮಾಡಲು ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿದೆ.
ತಿರುವನಂತಪುರಂ-ಕಾಸರಗೋಡು ನಡುವಿನ ರೈಲು ಸದ್ಯ 16 ಬೋಗಿಯನ್ನು ಹೊಂದಿದೆ. ಈ ಮಾರ್ಗದ ರೈಲಿಗೆ ಸಹ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಈ ರೈಲನ್ನು 20 ಬೋಗಿಯ ರೈಲಾಗಿ ಪರಿವರ್ತನೆ ಮಾಡಲು ಇಲಾಖೆ ಮುಂದಾಗಿದೆ. ಆದ್ದರಿಂದ ಕೇರಳಕ್ಕೆ ಹೆಚ್ಚುವರಿ ಬೋಗಿಗಳನ್ನು ಒದಗಿಸಲಾಗುತ್ತಿದೆ.
ವಂದೇ ಭಾರತ್ ರೈಲಿಗೆ ಇರುವ ಬೇಡಿಕೆ ಗಮನಿಸಿರುವ ಭಾರತೀಯ ರೈಲ್ವೆ 2025ರಲ್ಲಿ ಸ್ಲೀಪರ್ ಮಾದರಿ ವಂದೇ ಭಾರತ್ ರೈಲು ಪರಿಚಯಿಸಲಿದೆ. ಈಗಾಗಲೇ ಬೋಗಿಯ ಮಾದರಿಯನ್ನು ಅನಾವರಣಗೊಳಿಸಲಾಗಿದ್ದು, ಜನವರಿಯಲ್ಲಿ ಹಳಿಯ ಮೇಲೆ ರೈಲು ಓಡುವ ನಿರೀಕ್ಷೆ ಇದೆ.
ಬುಧವಾರ ರೈಲ್ವೆ ಇಲಾಖೆ ದೆಹಲಿ-ಪಾಟ್ನಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಆರಂಭಿಸಿದೆ. ದೀಪಾವಳಿ ಮತ್ತು ಛತ್ ಪೂಜೆಯ ಅಂಗವಾಗಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಪ್ರಾಯೋಗಿಕವಾಗಿ ಈ ಮಾರ್ಗದಲ್ಲಿ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ದೆಹಲಿ-ಪಾಟ್ನಾ ಮಾರ್ಗದ ರೈಲು ದೇಶದ ಅತಿ ದೂರ ಮಾರ್ಗದ ವಂದೇ ಭಾರತ್ ರೈಲಾಗಿದೆ. 994 ಕಿ. ಮೀ. ಮಾರ್ಗವನ್ನು ಈ ರೈಲು 11 ಗಂಟೆ 35 ನಿಮಿಷಗಳಲ್ಲಿ ಸಂಚಾರವನ್ನು ನಡೆಸಲಿದೆ.












Click it and Unblock the Notifications