ಸಿನಿಮಾ, ಪ್ರವಾಸ ಎರಡು ಇಷ್ಟವೇ? ಇಲ್ಲಿದೆ ಅವಕಾಶ: ಕೇರಳ ಪ್ರಾರಂಭಿಸಲಿದೆ 'ಸಿನಿಮಾ ಪ್ರವಾಸೋದ್ಯಮ'
ತಿರುವನಂತಪುರ, ಜುಲೈ. 13: ದೇವರ ನಾಡು ಕೇರಳ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ. ಒಮ್ಮೆಯಾದರೂ ಕೇರಳದ ಆಲಪ್ಪುಳದ ಹಿನ್ನೀರು ಮತ್ತು ತೆಕ್ಕಡಿಯ ಹಿತವಾದ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಎನಿಸುತ್ತದೆ. ಸಿನಿಮಾಗಳಲ್ಲಿ ಕೇರಳವನ್ನು ನೋಡಿದವರು ಅಲ್ಲಿಗೆ ತೆರಳಲು ಹೆಚ್ಚು ಉತ್ಸುಕತಾಗಿರುತ್ತಾರೆ. ಇದನ್ನೇ ಸರ್ಕಾರ ಉಪಯೋಗಿಸಿಕೊಳ್ಳಲು ಯೋಜಿಸುತ್ತಿದೆ.
ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಕೇರಳದ ಅದ್ಭುತ ಸೌಂದರ್ಯವನ್ನು ನೋಡಬಹುದು. ಅದರಲ್ಲಿ ದಿಲ್ ಸೇ ಚಿತ್ರದಲ್ಲಿನ "ಜಿಯಾ ಜಾಲೆ" ಹಾಡಿಗೆ ನಟ ಶಾರುಖ್ ಖಾನ್ ಮತ್ತು ನಟಿ ಪ್ರೀತಿ ಜಿಂಟಾ ಅವರ ನೃತ್ಯದಲ್ಲಿ ಆಲಪ್ಪುಳದ ಹಿನ್ನೀರು ಮತ್ತು ಕೇರಳದ ತೆಕ್ಕಡಿಯನ್ನು ನೋಡಬಹುದು. ಅತಿರಪಳ್ಳಿ ಜಲಪಾತದ ಮುಂದೆ ಐಶ್ವರ್ಯಾ ರೈ ಅವರ ಬರ್ಸೋ ರೇ ಹಾಡನ್ನು ಮರೆಯಲು ಸಾಧ್ಯವೇ?

ಹೀಗಾಗಿಯೇ ಕೇರಳ ಪ್ರವಾಸೋದ್ಯಮ ಇಲಾಖೆಯು ಸಿನಿಮಾಗಳ ಮೂಲಕ ಜನಮಾನಸದಲ್ಲಿ ನೆಲೆಯಾಗಿರುವ ಕೇರಳದ ಸುಂದರ ತಾಣಗಳಿಗೆ ಹೋಗಲು ಬಯಸುವವರಿಗಾಗಿ ಸಿನಿಮಾ ಪ್ರವಾಸೋದ್ಯಮ ಯೋಜನೆಯನ್ನು ಸಿದ್ಧಪಡಿಸಲು ಕೇರಳ ಸರ್ಕಾರ ಮುಂದಾಗಿದೆ. 'ಸಿನಿಮಾ ಪ್ರವಾಸೋದ್ಯಮ' ಕೇರಳದ ಸುಂದರ ದೃಶ್ಯಗಳ ನೆನಪುಗಳನ್ನು ಇಟ್ಟುಕೊಂಡು ಪ್ರವಾಸಿಗರನ್ನು ಆಕರ್ಷಿಸುವ ಕೇರಳ ಸರ್ಕಾರದ ಹೊಸ ಯೋಜನೆಯಾಗಿದೆ.
ಅಪ್ರತಿಮ ಭಾರತೀಯ ಚಲನಚಿತ್ರಗಳಲ್ಲಿ ಚಿತ್ರಿಸಲಾದ ಕೇರಳದ ಅದ್ವುತ ಪ್ರಾಕೃತಿಕ ದೃಶ್ಯಗಳನ್ನು ಈ ಯೋಜನೆಯ ಮೂಲಕ ಪ್ರದರ್ಶಿಸಲಾಗುತ್ತದೆ. ಚಲನಚಿತ್ರಗಳ ಮೂಲಕ ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಕೇರಳದ ಮೋಡಿಮಾಡುವ ಸ್ಥಳಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಕೇರಳ ಪ್ರವಾಸೋದ್ಯಮ ಇಲಾಖೆಯು ರೂಪಿಸಿರುವ ಈ ಯೋಜನೆಗೆ ಚಲನಚಿತ್ರ ನಿರ್ದೇಶಕ ಮಣಿರತ್ನಂ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೇರಳ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆ ಸಚಿವ ಪಿಎ ಮುಹಮ್ಮದ್ ರಿಯಾಸ್ ಅವರು ಕೋಝಿಕ್ಕೋಡ್‌ನಲ್ಲಿ ಮಣಿರತ್ನಂ ಅವರೊಂದಿಗೆ ಮಾತುಕತೆ ನಡೆಸಿದ್ದು, ನಿರ್ದೇಶಕರು ಈ ಯೋಜನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಕೇರಳದಲ್ಲಿ ಅಸಂಖ್ಯಾತ ಸುಂದರ ಲೊಕೇಶನ್‌ಗಳಿದ್ದು, ಸಿನಿಮಾದಲ್ಲಿ ಕೆಲಸ ಮಾಡಿದವರು ಮತ್ತೆ ಅದೇ ಲೊಕೇಶನ್ ಗೆ ಬಂದು ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಾರೆ ಎಂದು ಮಣಿರತ್ನಂ ಹೇಳಿದ್ದಾರೆ. "ಸಿನಿಮಾ ಪ್ರವಾಸೋದ್ಯಮ ಯೋಜನೆಗೆ ಮೆಚ್ಚುಗೆ ಪಡೆದ ನಿರ್ದೇಶಕರ ಅನುಮೋದನೆಯು ಕೇರಳ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಗೆ ಮಹತ್ತರವಾದ ಉತ್ತೇಜನವಾಗಿದೆ" ಎಂದು ಸಚಿವ ಮುಹಮ್ಮದ್ ರಿಯಾಸ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಮಣಿರತ್ನಂ ಅವರ "ಬಾಂಬೆ" ಚಿತ್ರೀಕರಿಸಲಾದ ಕಾಸರಗೋಡು ಜಿಲ್ಲೆಯ ಬೇಕಲ್ ಕೋಟೆಯನ್ನು ಸೇರಿಸುವುದು ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಈ ಬಗ್ಗೆ ಬೇಕಲ್ ಕೋಟೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೊತೆಗೆ "ಬಾಂಬೆ" ಚಿತ್ರದ ತಾರೆಯರು ಈ ಸಮಾರಂಭದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಕೇರಳ ಸರ್ಕಾರದ ಸಿನಿಮಾ ಪ್ರವಾಸೋದ್ಯಮ ಯೋಜನೆಯು ಪ್ರವಾಸಿಗರನ್ನು ಸೆಳೆಯುವ ಯೋಜನೆಯಾಗಿದೆ. ಬೆಳ್ಳಿತೆರೆಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿದ ಸ್ಥಳಗಳನ್ನು ನೇರವಾಗಿ ಅನುಭವಿಸಲು ಅನುವು ಮಾಡಿಕೊಡುತ್ತದೆ. ಇದು ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವ ಒಂದು ಪ್ರಯತ್ನವಾಗಿದೆ.












Click it and Unblock the Notifications