ಫೆಬ್ರವರಿ 21ರಿಂದ "ಭಾರತ್ ಗೌರವ್ ಕಾಶಿ ದರ್ಶನ" ರೈಲು ಯಾತ್ರೆ ಆರಂಭ; ಬೆಂಗಳೂರಿನಿಂದ ಪ್ರವಾಸ ಬೆಳೆಸುವವರಿಗೆ ಸಿಹಿಸುದ್ದಿ
ಉತ್ತರ ಭಾರತದಲ್ಲಿ ಈ ಹಿಂದೆ ತೀವ್ರ ಚಳಿಯಿದ್ದ ಕಾರಣ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ ರೈಲು ಪ್ರವಾಸವನ್ನು ಮುಂಡೂಡಲಾಗಿತ್ತು. ಇದೀಗ ಚಳಿ ಕಡಿಮೆಯಾದ ಹಿನ್ನೆಲೆಯಲ್ಲಿ ಗೌರವ್ ಕಾಶಿ ದರ್ಶನ ರೈಲು ಪ್ರವಾಸ ಮತ್ತೆ ಆರಂಭವಾಗಲಿದೆ.
ಬೆಂಗಳೂರು, ಫೆಬ್ರವರಿ, 10: ಉತ್ತರ ಭಾರತದಲ್ಲಿ ಈ ಹಿಂದೆ ತೀವ್ರ ಚಳಿಯಿದ್ದ ಕಾರಣ ಕರ್ನಾಟಕ - ಭಾರತ್ ಗೌರವ್ ಕಾಶಿ ದರ್ಶನ ರೈಲು ಪ್ರವಾಸವನ್ನು ಮುಂದೂಡಲಾಗಿತ್ತು. ಇದೀಗ ಚಳಿ ಕಡಿಮೆಯಾದ ಹಿನ್ನೆಲೆಯಲ್ಲಿ ಗೌರವ್ ಕಾಶಿ ದರ್ಶನ ರೈಲು ಪ್ರವಾಸದ ಮೂರನೇ ಟ್ರಿಪ್ ಫೆಬ್ರವರಿ 21ರಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಶಿ ದರ್ಶನ ರೈಲು ಪ್ಯಾಕೇಜ್ ಟೂರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಬಳಿಕ ನಡೆದಂತಹ 2ನೇ ಟ್ರಿಪ್ ರೈಲು ಪ್ರವಾಸ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಯಿತು.
ಫೆಬ್ರವರಿ 21ರಂದು ಟ್ರಿಪ್ ಪ್ರಾರಂಭ
ಇನ್ನು ಇದೇ ತಿಂಗಳು ಫೆಬ್ರವರಿ 21ರಂದು ಕರ್ನಾಟಕ - ಭಾರತ್ ಗೌರವ್ ಕಾಶಿ ದರ್ಶನ ರೈಲು ಪ್ರವಾಸ ಮೂರನೇ ಟ್ರಿಪ್ ಪ್ರಾರಂಭವಾಗಲಿದೆ. 8 ದಿನಗಳ ಯಾತ್ರೆಯಲ್ಲಿ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ಹಿಂದಿರುಗಲಿದೆ. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಭಾರತ್ ಗೌರವ್ ರೈಲನ್ನು ಪ್ರಾರಂಭಿಸುತ್ತಿರುವ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಪಾತ್ರವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 3 ಟಯರ್ ಎಸಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, 14 ಬೋಗಿಗಳ ಮೇಲೂ ರಾಜ್ಯದ 28 ದೇವಸ್ಥಾನಗಳ ಛಾಯಾಚಿತ್ರಗಳ ಬ್ರಾಂಡಿಂಗ್ ಅನ್ನು ಮಾಡಿರುವುದು ಇನ್ನು ವಿಶೇಷವಾಗಿದೆ.

ಯಾವೆಲ್ಲ ಸೌಲಭ್ಯಗಳು ಲಭ್ಯ?
IRCTCಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಊಟ, ಉಪಾಹಾರ, ಯಾತ್ರಾ ಸ್ಥಳದಲ್ಲಿ ತಂಗುವ ವ್ಯವಸ್ಥೆ ಹಾಗೂ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಸಾರಿಗೆ ವ್ಯವಸ್ಥೆ ಹಾಗೂ ತುರ್ತು ವೈದ್ಯಕೀಯ ಸೇವೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ರೈಲ್ವೆ ಇಲಾಖೆಯು ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಟೂರ್ ಪ್ಯಾಕೇಜ್‌ಗಳನ್ನು ಕೂಡ ಬಿಡುಗಡೆ ಮಾಡುತ್ತಲೇ ಇದೆ. ಈಗಾಗಲೇ ಹೊಸವರ್ಷ, ಸಂಕ್ರಾಂತಿಗೆ ವಿಶೇಷ ರೈಲುಗಳನ್ನು ಬಿಡಲಾಗಿತ್ತು. ಇದೀಗ ಮತ್ತೆ ವಾರಣಾಸಿ, ಅಯೋಧ್ಯೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ವಿಶೇಷ ಟೂರ್ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ಘೋಷಿಸಿದೆ.











Click it and Unblock the Notifications