Thailand Tour Package: ಕೇವಲ 52,350 ರೂಪಾಯಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳಿ, ಸ್ಥಳ, ದಿನಾಂಕ, ದರಗಳ ವಿವರವನ್ನು ತಿಳಿಯಿರಿ
ನವದೆಹಲಿ, ಏಪ್ರಿಲ್, 05: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಕೈಗೆಟುಕುವ ದರದಲ್ಲಿ ವಿದೇಶ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ರವಾಸ ಎಲ್ಲಿಗೆ ಮತ್ತು ಪ್ಯಾಕೇಜ್‌ನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಐಆರ್‌ಸಿಟಿಸಿಯು ಥೈಲ್ಯಾಂಡ್‌ಗೆ ದೀರ್ಘಾವಧಿಯ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹೀಗೆ ಸಾಮಾನ್ಯವಾಗಿ ಪ್ರಯಾಣವನ್ನು ಉತ್ತೇಜಿಸಲು ಐಆರ್‌ಸಿಟಿಸಿಯು ಹೊಸ ಹೊಸ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಿರುತ್ತದೆ. ಇದೀಗ ಈ ಪ್ಯಾಕೇಜ್‌ಗಳೊಂದಿಗೆ ವಿದೇಶ ಪ್ರವಾಸ ಮಾಡಲು ನಿಮಗೆ ಅವಕಾಶವನ್ನು ಕಲ್ಪಿಸಿದೆ.

ಥೈಲ್ಯಾಂಡ್‌ಗೆ ಪ್ರವಾಸ ಪ್ಯಾಕೇಜ್ ಘೋಷಣೆ
ಪ್ರಸ್ತುತ ಇದೀಗ ಥೈಲ್ಯಾಂಡ್‌ಗೆ ಪ್ರವಾಸ ಮಾಡುವವರಿಗೆ ಈ ಪ್ಯಾಕೇಜ್ ಅತ್ಯುತ್ತಮವಾಗಿದೆ. ಅದರಲ್ಲೂ ಸ್ನೇಹಿತರೊಂದಿಗೆ ಥೈಲ್ಯಾಂಡ್‌ಗೆ ಪ್ರಯಾಣ ಮಾಡಲು ಏಪ್ರಿಲ್ ತಿಂಗಳು ಉತ್ತಮ ಸಮಯವಾಗಿದೆ. "ಥ್ರಿಲ್ಲಿಂಗ್ ಥೈಲ್ಯಾಂಡ್" ಎನ್ನುವುದು ಈ ಪ್ಯಾಕೇಜ್‌ನ ಹೆಸರಾಗಿದೆ. ಇದು 5 ರಾತ್ರಿ 6 ಹಗಲುಗಳ ಪ್ರವಾಸವಾಗಿದ್ದು, ಈ ಪ್ರವಾಸವು ಏಪ್ರಿಲ್ 25ರಿಂದ ಆರಂಭವಾಗಲಿದೆ. ಇದರಲ್ಲಿ ಪಟ್ಟಾಯ ಮತ್ತು ಬ್ಯಾಂಕಾಕ್‌ನಲ್ಲಿರುವ ವಿವಿಧ ಪ್ರವಾಸಿ ತಾಣಗಳ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ.
ಈ ಪ್ಯಾಕೇಜ್‌ನಲ್ಲಿ ಉಪಹಾರ ಮತ್ತು ರಾತ್ರಿಯ ಊಟ ಎರಡನ್ನೂ ಒದಗಿಸಲಾಗುತ್ತದೆ. ಏಪ್ರಿಲ್ 25ರಂದು ಪಾಟ್ನಾ ವಿಮಾನ ನಿಲ್ದಾಣದಿಂದ ಪ್ರವಾಸದ ವಿಮಾನ ನಿರ್ಗಮಿಸಲಿದೆ. ಎರಡನೇ ದಿನ ಬ್ಯಾಂಕಾಕ್‌ನಲ್ಲಿರುವ ವಿಮಾನ ನಿಲ್ದಾಣಕ್ಕೆ ತಲುಪಲಾಗುತ್ತದೆ. ಅಲ್ಲಿಂದ ಪಟ್ಟಾಯಕ್ಕೆ ಕರೆದೊಯ್ಯಲಾಗುತ್ತದೆ. ಒಂದು ದಿನದ ವಿಶ್ರಾಂತಿಯ ನಂತರ ಸಂಜೆ ಅಲ್ಕಾಜರ್ ಚಮತ್ಕಾರವನ್ನು ನೋಡಲು ನಿಮಗೆ ಅವಕಾಶ ಕಲ್ಪಿಸಲಾಗುತ್ತದೆ. ನಂತರ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಪ್ರವಾಸ ಪ್ಯಾಕೇಜ್‌ನ ವಿವರ ಇಲ್ಲಿದೆ
ಮೂರನೇ ದಿನ ಉಪಹಾರ ಮುಗಿದ ನಂತರ, ಸ್ಪೀಡ್‌ಬೋಟ್‌ನಲ್ಲಿ ಕೋರಸ್ ದ್ವೀಪಕ್ಕೆ ಕರೆದೊಯ್ಯಲಾಗುತ್ತದೆ. ನೀವು ಇಲ್ಲಿಯೇ ಸಮುದ್ರತೀರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಆದರೆ ಬಾಡಿಗೆಯ ವೆಚ್ಚವನ್ನು ನೀವೇ ಭರಿಸಬೇಕಾಗುತ್ತದೆ. ನಂತರ ನಿಮ್ಮನ್ನು ಪಟ್ಟಾಯಕ್ಕೆ ಕರೆದೊಯ್ಯಲಾಗುತ್ತದೆ. ಇನ್ನು ರಾತ್ರಿ ಊಟ ಮಾಡಿದ ನಂತರ ಹೋಟೆಲ್‌ನಲ್ಲಿಯೇ ತಂಗಲು ವ್ಯವಸ್ಥೆ ಮಾಡಲಾಗುತ್ತದೆ.

ನಾಲ್ಕನೇ ದಿನದ ಉಪಹಾರದ ನಂತರ ನಿಮ್ಮನ್ನು ಸಫಾರಿ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ. ನಂತರ ಬ್ಯಾಂಕಾಕ್‌ಗೆ ಹಿಂತಿರುಗಿಸಲಾಗುತ್ತದೆ. ಹೋಟೆಲ್‌ನಲ್ಲಿ ತಂಗುವಿಕೆ ಮತ್ತು ಭೋಜನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಐದನೇ ದಿನದ ಉಪಹಾರದ ನಂತರ ಅರ್ಧ ದಿನದವರೆಗೆ ನಗರವನ್ನು ಸುತ್ತಲು ಅವಕಾಶವನ್ನು ಕಲ್ಪಿಸಲಾಗಿದ್ದು, ನೀವು ಭಾರತೀಯ ರೆಸ್ಟೋರೆಂಟ್‌ನಲ್ಲಿ ಊಟವನ್ನು ಸವಿಯಬಹುದಾಗಿದೆ.
ಊಟದ ನಂತರ ಶಾಪಿಂಗ್ ಒಂದು ಬಾಕಿಯಿದ್ದು, ಇದನ್ನು ಭಾರತೀಯ ರೆಸ್ಟೋರೆಂಟ್‌ನಲ್ಲಿ ನಿಗದಿಪಡಿಸಲಾಗುತ್ತದೆ. ಬಳಿಕ ನಿಮ್ಮನ್ನು ವಿಮಾನ ನಿಲ್ದಾಣದಲ್ಲಿ ಬಿಡಲಾಗುತ್ತದೆ.
ದರಗಳ ವಿವರ ತಿಳಿಯಿರಿ
ಒಬ್ಬರಿಗೆ 60,010 ರೂಪಾಯಿ, ಒಂದು ವೇಳೆ ನೀವು ಒಂದೇ ಬಾರಿಗೆ ಇಬ್ಬರಿಗೆ ಟಿಕೆಟ್ ಬುಕ್ ಮಾಡಿದರೆ ಪ್ರತಿ ವ್ಯಕ್ತಿಗೆ 52,350 ರೂಪಾಯಿ ಪಾವತಿಸಬೇಕಾಗುತ್ತದೆ. ಮೂವರಿಗೆ 52,350 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು 5 ರಿಂದ 11 ವರ್ಷದೊಳಗಿನ ಮಗುವಿನೊಂದಿಗೆ ಪ್ರಯಾಣ ಮಾಡಲು ಇಚ್ಚಿಸಿದರೆ ಹಾಸಿಗೆ ಸಹಿತ 50,450 ರೂಪಾಯಿ, ಹಾಸಿಗೆ ಇಲ್ಲದೆ ಪ್ರಯಾಣಿಸಿದರೆ 45,710 ರೂಪಾಯಿ ವೆಚ್ಚ ತಗಲುತ್ತದೆ.
ಕೋಲ್ಕತ್ತಾದಿಂದ ಪ್ರವಾಸ ಆರಂಭ
ಇನ್ನು ಐಆರ್‌ಸಿಟಿಸಿಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಅದೇ ರೀತಿ ಇದೀಗ ಮೇ ತಿಂಗಳಲ್ಲಿ ಕೋಲ್ಕತ್ತಾದಿಂದ ಭಾರತ್ ಗೌರವ್ ವಿಶೇಷ ಪ್ರವಾಸಿ ರೈಲು ಓಡಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಐದು ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ ರೈಲು ಬಿಡಲು ನಿರ್ಧಿಸಿದ್ದು, ಈ ರೈಲು ಇದೇ ಮೇ 20ರಂದು ಕೋಲ್ಕತ್ತಾದಿಂದ ಹೊರಡಲಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ರೈಲಿನಲ್ಲಿ ಪ್ರವಾಸಕ್ಕಾಗಿ 700 ಆಸನಗಳನ್ನು ಕಲ್ಪಿಸಲಾಗಿದೆ ಎಂದು ಪೂರ್ವ ರೈಲ್ವೆ ಜನರಲ್ ಮ್ಯಾನೇಜರ್ ಅರುಣ್ ಅರೋರಾ ಅವರು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಯಾತ್ರೆಯಲ್ಲಿ ಓಂಕಾರೇಶ್ವರ, ಮಹಾಕಾಳೇಶ್ವರ, ಸೋಮನಾಥ, ನಾಗೇಶ್ವರ ಮತ್ತು ತ್ರಯಂಬಕೇಶ್ವರಕ್ಕೆ ಭೇಟಿ ನೀಡಬಹುದಾಗಿದೆ. ಇದು 11 ರಾತ್ರಿ ಮತ್ತು 12 ಹಗಲುಗಳ ಕಾಲ ಪ್ರವಾಸ ಆಗಿದೆ.












Click it and Unblock the Notifications