ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಮಂಗಳೂರು-ಅಯೋಧ್ಯೆ, ದರಪಟ್ಟಿ
ಬೆಂಗಳೂರು, ಏಪ್ರಿಲ್ 09: ಐಆರ್‌ಸಿಟಿಸಿ ಭಾರತೀಯ ರೈಲ್ವೆಯ ಮುಂಗಡ ಟಿಕೆಟ್‌ಗಳ ಬುಕ್ಕಿಂಗ್ ಜೊತೆ ವಿವಿಧ ಟೂರ್ ಪ್ಯಾಕೇಜ್‌ಗಳನ್ನು ಆಯೋಜನೆ ಮಾಡುತ್ತದೆ. ಬೇಸಿಗೆ ರಜೆ ಪ್ರಾರಂಭವಾಗಿದ್ದು, ಪ್ರವಾಸ ಮಾಡುವ ಜನರನ್ನು ಗುರಿಯಾಗಿಸಿಕೊಂಡು ಈಗ ಹೊಸ ಪ್ಯಾಕೇಜ್ ಘೋಷಣೆ ಮಾಡಿದೆ. ಇದಕ್ಕಾಗಿಯೇ ಕರ್ನಾಟಕದ ಕರಾವಳಿ ನಗರ ಮಂಗಳೂರಿನಲ್ಲಿ ಐಆರ್‌ಸಿಟಿಸಿ ಪ್ರವಾಸೋದ್ಯಮ ಮಾಹಿತಿ ಮತ್ತು ಸೌಲಭ್ಯ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಐಆರ್‌ಸಿಟಿಸಿ ಜಂಟಿ ಮಹಾ ಪ್ರಬಂಧಕ (ಪ್ರವಾಸೋದ್ಯಮ) ಸ್ಯಾಮ್ ಜೋಸೆಫ್ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ರವಾಸಿಗರನ್ನು ಆಕರ್ಷಿಸಲು ಮಂಗಳೂರಿನಲ್ಲಿ ಮಾಹಿತಿ ಮತ್ತು ಸೌಲಭ್ಯ ಕೇಂದ್ರವವನ್ನು ತೆರೆಯಲಾಗಿದೆ ಎಂದು ಹೇಳಿದ್ದಾರೆ.

ಈಗ ಐಆರ್‌ಸಿಟಿಸಿ ದಕ್ಷಿಣ ಕೊರಿಯಾ, ಯುರೋಪ್, ನೇಪಾಳ, ಶ್ರೀಲಂಕಾ, ಊಟಿ, ಅಯೋಧ್ಯೆ, ಕಾಶ್ಮೀರ ಪ್ರವಾಸವನ್ನು ಆಯೋಜನೆ ಮಾಡುತ್ತಿದೆ. ಆಸಕ್ತ ಪ್ರವಾಸಿಗರು ತನ್ನ ನೆಚ್ಚಿನ ತಾಣಗಳಿಗೆ ಭೇಟಿ ನೀಡಲು ಈ ಪ್ಯಾಕೇಜ್ ಟೂರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಅಯೋಧ್ಯೆ ಟೂರ್ ಪ್ಯಾಕೇಜ್: ಮಂಗಳೂರು ನಗರದಿಂದ ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ಏರ್ ಟೋರ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ಪ್ಯಾಕೇಜ್ ಟೂರ್ ಮಂಗಳೂರು ನಗರದಿಂದ ಮೇ 16ರಂದು ಪ್ರಾರಂಭವಾಗಲಿದೆ. ಈ ತೀರ್ಥಯಾತ್ರೆ ದೇಶದ ಪವಿತ್ರ ನಗರದ ಖ್ಯಾತಿಯ ವಾರಣಾಸಿಯಿಂದ ಆರಂಭಗೊಳ್ಳಲಿದೆ.
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳವಾದ ಪವಿತ್ರ ತ್ರಿವೇಣಿ ಸಂಗಮದ ನೆಲೆಯಾದ ಪ್ರಯಾಗ್‌ರಾಜ್ ತನಕ ಸಾಗಲಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾದ ಬಳಿಕ ಅಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಮಂಗಳೂರು ನಗರದಿಂದ ಆರಂಭವಾಗುವ ಪ್ಯಾಕೇಜ್ ಅಯೋಧ್ಯೆಯನ್ನು ತಲುಪಲಿದೆ. ಈ ಪ್ಯಾಕೇಜ್ ಅಡಿಯಲ್ಲಿ ಪ್ರತಿ ವ್ಯಕ್ತಿಗೆ 36,700 ರೂ. ದರವನ್ನು ನಿಗದಿ ಮಾಡಲಾಗಿದೆ. ಆಸಕ್ತರು ಈ ಪ್ಯಾಕೇಜ್ ಅಡಿಯಲ್ಲಿ ಸಂಚಾರ ನಡೆಸಲು ಮನವಿ ಮಾಡಲಾಗಿದೆ.
ಐಆರ್‌ಸಿಟಿಸಿ ಬಗ್ಗೆ ಹಲವಾರು ದೂರಗಳು ಬರುತ್ತಿದ್ದವು. ಆದ್ದರಿಂದ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್ ಇಂಡಿಯಾ ದೃಷ್ಟಿಕೋನದ ಆಧಾರದ ಮೇಲೆ ಭಾರತೀಯ ರೈಲ್ವೆ ಐಆರ್‌ಸಿಟಿಸಿ ಮತ್ತು ರೈಲ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್ ಅನ್ನು ನವೀಕರಣಗೊಳಿಸಿತು. ಈ ಎರಡು ಅಪ್ಲಿಕೇಶನ್ ಅನ್ನು ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್‌ಗಳನ್ನು ಬುಕಿಂಗ್ ಮಾಡಲು ಬಳಸಲಾಗುತ್ತದೆ. ಈಗ ಪ್ರವಾಸಿ ಟೂರ್ ಪ್ಯಾಕೇಜ್‌ಗಳನ್ನು ಸಹ ಐಆರ್‌ಸಿಟಿಸಿ ಒದಗಿಸುತ್ತಿದೆ.
ಎಲ್ಲಾ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಅಪ್‌ಡೇಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ಕೊಡುಗೆಯನ್ನು ನೀಡಿದೆ. "ರೈಲ್ವೆ ದೇಶಕ್ಕೆ ಸೇವೆ ಸಲ್ಲಿಸಲು ಬದ್ಧವಾಗಿದೆ ಮತ್ತು ರೈಲು ಪ್ರಯಾಣದ ಅನುಭವವನ್ನು ಮತ್ತಷ್ಟು ಸುಧಾರಿಸಲು ತನ್ನ ಸೇವೆಗಳನ್ನು ಹೆಚ್ಚಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಆನ್‌ಲೈನ್ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಲು ಈ ನವೀಕರಿಸಿದ ಇ-ಟಿಕೆಟಿಂಗ್ ವೇದಿಕೆಯು ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸುತ್ತದೆ" ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಜನರು ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ಹಾಲಿಡೇಸ್ ಟ್ಯಾಬ್ ಕ್ಲಿಕ್ ಮಾಡಿದರೆ ವಿವಿಧ ಟೂರ್ ಪ್ಯಾಕೇಜ್‌ಗಳ ವಿವರಗಳು ಇದರಲ್ಲಿ ಸಿಗುತ್ತದೆ. ನೆಚ್ಚಿನ ಪ್ಯಾಕೇಜ್ ಅನ್ನು ಜನರು ಆಯ್ಕೆ ಮಾಡಿಕೊಳ್ಳಬಹುದು. ಪ್ಯಾಕೇಜ್ ಸಂಪೂರ್ಣ ವಿವರ ಇಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡಲಾಗಿದೆ.












Click it and Unblock the Notifications