Hubballi-Sabarimala train: ಹುಬ್ಬಳ್ಳಿಯಿಂದ ಶಬರಿಮಲೈಗೆ ಹೋಗುವವರಗೆ ಭಾರತೀಯ ರೈಲ್ವೆಯಿಂದ Good news
ಹುಬ್ಬಳ್ಳಿ, ನವೆಂಬರ್, 26: ಹಬ್ಬಹರಿದಿನಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ದಸರಾ, ದೀಪಾವಳಿಗೆ ವಿಶೇಷ ರೈಲುಗಳನ್ನು ಬಿಟ್ಟಿತ್ತು. ಹಾಗೆಯೇ ಇದೀಗ ಶಬರಿಮಲೈಗೆ ಹೋಗಲು ಎರಡು ವಿಶೇಷ ರೈಲು ಆರಂಭಿಸಿದ್ದು, ಅಯ್ಯಪ್ಪ ಸ್ವಾಮಿ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಬಾರ್ಕಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಬರಿಮಲೈಗೆ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ ಅನುಕೂಲ ಆಗಲಿ ಎಂದು ಕಳೆದ ವರ್ಷ ಸಾಲುಮರದ ತಿಮ್ಮಕ್ಕ ನೇತೃತ್ವದಲ್ಲಿ ಭಾರತೀಯ ಅಯ್ಯಪ್ಪ ಸ್ವಾಮಿ ಸೇವಾ ಸಂಘ ರೈಲ್ವೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮನವಿ ಸಲ್ಲಿಕೆ ಮಾಡಿತ್ತು. ಇದಕ್ಕೆ ಸ್ಪಂದಿಸಿದ್ದ ಇಲಾಖೆ ಎರಡು ವಿಶೇಷ ರೈಲು ಆರಂಭ ಮಾಡಿತ್ತು. ಅದರಂತೆಯೇ ಪ್ರಸ್ತುತ ವರ್ಷವೂ ಈ ಸೌಲಭ್ಯ ಇದೆ ಎಂದರು.
ವಾರದಲ್ಲಿಎರಡು ರೈಲುಗಳಿದ್ದು, ಡಿಸೆಂಬರ್ 2ರಿಂದ 20ರವರೆಗೆ ಸೌಲಭ್ಯ ಆರಂಭ ಆಗಲಿದೆ. ಪ್ರತಿ ಶನಿವಾರ ಹುಬ್ಬಳ್ಳಿಯಿಂದ ಕೊಟ್ಟಾಯಂಗೆ (07305) ರೈಲು ಬೆಳಗ್ಗೆ 10.30ಕ್ಕೆ ಹೊರಡಲಿದೆ.
ಕೊಟ್ಟಾಯಂನಿಂದ ಹುಬ್ಬಳ್ಳಿಗೆ(07306) ಪ್ರತಿ ಭಾನುವಾರ ಬೆಳಗ್ಗೆ 11ಕ್ಕೆ ಹಿಂದಿರುಗಲಿದೆ. ಡಿಸೆಂಬರ್ 5ರಿಂದ 17 ಪ್ರತಿ ಮಂಗಳವಾರ ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯಿಂದ ಕೊಟ್ಟಾಯಂಗೆ(07307) ಹೊರಟು, ಡಿಸೆಂಬರ್ 6ರಿಂದ ಕೊಟ್ಟಾಯಂನಿಂದ ಹುಬ್ಬಳ್ಳಿಗೆ (07308) ಪ್ರತಿ ಬುಧವಾರ ಬೆಳಗ್ಗೆ 11ಕ್ಕೆ ಬರಲಿದೆ. ಈಗಾಗಲೇ ಮುಂಗಡ ಟಿಕೆಟ್ ಆರಂಭವಾಗಿದೆ ಎಂದು ತಿಳಿಸಿದರು.

ರೈಲು ಸೇವೆಗಳ ಸಮಯ ಬದಲಾವಣೆ
ಇನ್ನು ಹಳಿ ಕಮಗಾರಿ ಸೇರಿದಂತೆ ಇನ್ನಿತರ ಕಾಮಗಾರಿ ಇದ್ದಾಗ ರೈಲ್ವೆಯು ಮುಂಜಾಗ್ರತಾ ಕ್ರಮವಾಗಿ ಕೆಲವು ಮಾರ್ಗಗಳಲ್ಲಿ ರೈಲುಗಳ ಸೇವೆಗಳ ಸಮಯವನ್ನು ಬದಲಾವಣೆ ಅಥವಾ ವಿಸ್ತರಣೆ ಮಾಡಿ ಆದೇಶ ಹೊರಡಿಸಿರುವ ಉದಾಹರಣೆಗಳು ಇವೆ. ಹಾಗೆಯೇ ಇದೀಗ ಬೆಂಗಳೂರು - ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆ ಮಾಡಿ ನೈಋುತ್ಯ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.
ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಬೆಳಗಾವಿ ರೈಲ್ವೇ ನಿಲ್ದಾಣಕ್ಕೆ ಬರುತ್ತಿದ್ದ ರೈಲು ಇನ್ಮುಂದೆ ಬೆಳಗ್ಗೆ 6:45ಕ್ಕೆ ಆಗಮಿಸಲಿದೆ. ಮೊದಲಿನ ವೇಳಾಪಟ್ಟಿ ಪ್ರಕಾರ ಬೆಂಗಳೂರು- ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಪ್ರತಿ ರಾತ್ರಿ 9 ಗಂಟೆಗೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಾರನೇ ದಿನ ಬೆಳಗ್ಗೆ 7:35ಕ್ಕೆ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ತಲುಪುತ್ತಿತ್ತು. ಆದರೆ ಅಕ್ಟೋಬರ್ ತಿಂಗಳನಿಂದ ರೈಲು ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟರೂ ಹುಬ್ಬಳ್ಳಿ ನಿಲ್ದಾಣದಲ್ಲಿ 1 ಗಂಟೆ ಕಾಲ ನಿಲುಗಡೆ ಆಗುತ್ತಿತ್ತು.
ಇದರಿಂದ ರೈಲು ಬೆಳಗಾವಿಗೆ ಆಗಮಿಸಲು ಬೆಳಗ್ಗೆ 8 ಗಂಟೆ ಆಗುತ್ತಿತ್ತು. ಆದ್ದರಿಂದ ಬೆಂಗಳೂರು- ಬೆಳಗಾವಿ ರೈಲಿನ ಹಿಂದೆ ಬರುವ ಲೋಂಡಾ-ಮಿರಜ್ ಎಕ್ಸ್‌ಪ್ರೆಸ್ ರೈಲು ಕೂಡ ವಿಳಂಬ ಆಗುತ್ತಿದ್ದರಿಂದ ಬೆಳಗಾವಿಯ ಪ್ರಯಾಣಿಕರು ತೊಂದರೆ ಅನುಭವಿಸುವಂತೆ ಆಗಿತ್ತು.
ಹೀಗೆಯೇ ಅರಸೀಕೆರೆ, ದಾವಣಗೆರೆ ಸೇರಿದಂತೆ ಮಾರ್ಗ ಮಧ್ಯದ ವಿವಿಧ ನಿಲ್ದಾಣಗಳಿಗೆ ಮೊದಲಿಗಿಂತಲೂ ಮುಂಚಿತವಾಗಿ ತಲುಪಿ ಬೆಳಗಿನ ಜಾವ 3:35ಕ್ಕೆ ಹುಬ್ಬಳ್ಳಿ ನಿಲ್ದಾಣ ಆಗಮಿಸಲಿದೆ. ಹುಬ್ಬಳ್ಳಿಯಿಂದ 3:45ಕ್ಕೆ ಹೊರಟು ಬೆಳಗ್ಗೆ 6:45ಕ್ಕೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications