ಹೊಗೇನಕಲ್‌ನಲ್ಲಿ ತೆಪ್ಪದಲ್ಲಿ ನದಿ ದಾಟುವ ಬೈಕ್‌ಗಳು: ಏನಿದರ ಕರಾಮತ್ತು?
ಚಾಮರಾಜನಗರ, ಮಾರ್ಚ್ 15: ಕರ್ನಾಟಕ ಮತ್ತು ತಮಿಳುನಾಡಿನ ಗಡಿಭಾಗದಲ್ಲಿರುವ ಹೊಗೇನಕಲ್ ಜಲಪಾತ ಒಂದು ಸುಂದರ ಪ್ರವಾಸಿ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಬಂಡೆಕಲ್ಲುಗಳ ನಡುವೆ ಕಾವೇರಿ ನದಿ ಧಮ್ಮಿಕ್ಕಿ ನದಿಯಾಗಿ ಹರಿದು ಹೋಗುವ ನಿಸರ್ಗ ಸುಂದರ ದೃಶ್ಯಗಳು ನಿಸರ್ಗದ ಚೆಲುವನ್ನು ಆಸ್ವಾದಿಸಲು ಬಯಸುವ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಹೀಗಾಗಿಯೇ ಪ್ರವಾಸಿಗರು ಸದಾ ಇಲ್ಲಿಗೆ ಲಗ್ಗೆಯಿಡುತ್ತಾರೆ. ಅದರಲ್ಲೂ ಮಳೆಗಾಲದಲ್ಲಿ ಇಲ್ಲಿನ ರುದ್ರರಮಣೀಯ ದೃಶ್ಯಗಳು ರೋಮಾಂಚನ ಗೊಳಿಸುತ್ತವೆ.
ಹೊಗೇನಕಲ್ ಜಲಪಾತವು ಕರ್ನಾಟಕ ಮತ್ತು ತಮಿಳುನಾಡಿಗೆ ಪ್ರವಾಸೋದ್ಯಮದ ದೃಷ್ಟಿಯಿಂದ ಆದಾಯ ತಂದುಕೊಡುವ ತಾಣವಾಗಿದೆ. ಇಲ್ಲಿ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತದೆ. ಅದರಲ್ಲೂ ತೆಪ್ಪದ ಮೂಲಕ ಜಲಪಾತ ಧುಮ್ಮಿಕ್ಕುವ ಸ್ಥಳಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ದೃಶ್ಯ ರೋಮಾಂಚನಕಾರಿಯಾಗಿದೆ. ಇಲ್ಲಿ ಪ್ರವಾಸಿಗರಿಗೆ ತೆಪ್ಪದಲ್ಲಿಯೇ ಬೇಕಾದ ತಿನಿಸುಗಳನ್ನು ನೀಡುವವರು ಇದ್ದಾರೆ. ಹೆಬ್ಬಂಡೆಗಳ ಕಣಿವೆಯಲ್ಲಿ ತೆಪ್ಪದಲ್ಲಿ ಸಾಗುವ ಅನುಭವ ಮರೆಯಲಾಗದು. ಮಳೆಗಾಲದಲ್ಲಿ ಕಾವೇರಿ ಧುಮ್ಮಿಕ್ಕಿ ಹರಿಯುವಾಗ ನೋಡುವುದೇ ಒಂಥರಾ ಮಜಾ.

ವಿಶಾಲಬಂಡೆಗಳಿಂದ ಹರಡಿದ ಪ್ರದೇಶವಾಗಿದ್ದು ಇದರ ಮೇಲೆ ಹರಿಯುವ ಕಾವೇರಿ ನದಿ ಬಳಿಕ ಕಂದಕಕ್ಕೆ ಧುಮುಕುತ್ತದೆ. ಈ ವೇಳೆ ನೀರು ಹೊಗೆಯಂತೆ ಹಾರುವ ದೃಶ್ಯ ಚೇತೋಹಾರಿಯಾಗಿರುತ್ತದೆ. ಈ ಕಲ್ಲುಗಳ ನಡುವಿನಿಂದ ಎದ್ದು ಬರುವ ಹೊಗೆಯ ಸುಂದರ ದೃಶ್ಯವನ್ನು ನೋಡಿದವರು ಹೊಗೇನಕಲ್ ಎಂದು ಹೆಸರಿಟ್ಟಿದ್ದಾರೆ. ಕಾವೇರಿ ನದಿ ಕರ್ನಾಟಕದಿಂದ ತಮಿಳುನಾಡಿಗೆ ಪ್ರವೇಶಿಸುತ್ತಿದ್ದಂತೆ ಬಂಡೆಗಳ ಮೇಲೆ ಸಾಕಷ್ಟು ನೀರು ಬೀಳುವಾಗ ಕಾಣುವ ದೃಶ್ಯ ಮರೆಯಲಾರದ್ದಾಗಿರುತ್ತದೆ.
ಜೀವದ ಹಂಗು ತೊರೆದು ಬೈಕ್ ಸವಾರರ ದುಸ್ಸಾಹಸ
ಹೊಗೇನಕಲ್ ನ ವಿಶೇಷತೆ ಏನೆಂದರೆ ಮಳೆಗಾಲದ ದಿನಗಳನ್ನು ಹೊರತು ಪಡಿಸಿ ಅದರಲ್ಲೂ ಬೇಸಿಗೆಯ ದಿನಗಳಲ್ಲಿ ಎರಡೂ ಬದಿಗಳಲ್ಲಿ ಜಲಪಾತಗಳನ್ನು ಹೊಂದಿರುವ ಎರಡು ದೈತ್ಯ ಬಂಡೆಗಳ ಮಧ್ಯೆ ಹರಿಯುವ ಕಾವೇರಿ ನದಿಯಲ್ಲಿ ಜಲಪಾತದ ಬಳಿಗೆ ತೆಪ್ಪದಲ್ಲಿ ತೆರಳುವುದನ್ನು ಕೊರಾಕಲ್ ಸವಾರಿ ಎಂದು ಕರೆಯಲಾಗುತ್ತದೆ. ಇದೊಂದು ತಾಣ ವಿಶಾಲದ್ವೀಪ ಸಮೂಹವಾಗಿದ್ದು ಗಮನಸೆಳೆಯುತ್ತದೆ. ಇಲ್ಲಿ ಪ್ರವಾಸಿಗರಿಗೆ ದೋಣಿವಿಹಾರ ಮತ್ತು ಮೀನಿನ ಖಾದ್ಯಗಳು ದೊರೆಯುತ್ತವೆ ನದಿ ತೀರದಲ್ಲಿ ತೈಲಮಸಾಜನ್ನು ಕೂಡ ಮಾಡಿಕೊಡಲಾಗುತ್ತದೆ.

ಪ್ರವಾಸಿ ತಾಣವಾಗಿ ಗಮನಸೆಳೆದಿರುವ ಹೊಗೇನಕಲ್‌ನ ವ್ಯಾಪ್ತಿಯಲ್ಲಿ ನೆಲೆಸಿರುವ ಬಹುತೇಕರು ಜೀವನೋಪಾಯಕ್ಕಾಗಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದು, ಉದ್ಯೋಗಕ್ಕಾಗಿ ನೆರೆಯ ತಮಿಳುನಾಡಿಗೆ ಹೋಗುವವರಿದ್ದಾರೆ. ಹೀಗೆ ಹೋಗುವವರು ತೆಪ್ಪದಲ್ಲಿ ಆಚೆ ಕಡೆಗೆ ದಾಟಿ ಅಲ್ಲಿಂದ ಬಸ್ ಅಥವಾ ಇನ್ನಿತರ ವಾಹನಗಳಲ್ಲಿ ತಾವು ತೆರಳಬೇಕಾದ ಪ್ರದೇಶಗಳಿಗೆ ಹೋಗುತ್ತಾರೆ. ಆದರೆ ಇತ್ತೀಚೆಗೆ ಕೆಲವರು ತಾವು ಮಾತ್ರವಲ್ಲದೆ ತಮ್ಮ ಬೈಕ್‌ಗಳನ್ನು ತೆಪ್ಪದಲ್ಲಿ ಆಚೆ ಕಡೆಗೆ ಸಾಗಿಸುತ್ತಿರುವುದು ಕಂಡು ಬರುತ್ತಿದೆ. ಇದೆಷ್ಟು ಅಪಾಯಕಾರಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೂ ಇಂತಹದೊಂದು ಸಾಹಸ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ತೆಪ್ಪದಲ್ಲಿ ಬೈಕ್ ಸಾಗಿಸಲು ಕೇವಲ 70 ರೂ. ಮಾತ್ರ
ನಿವೇನು ಜೀವದ ಜತೆ ಚೆಲ್ಲಾಟ ಆಡುತ್ತಿದ್ದೀರಾ ಎಂದು ಜನ ಪ್ರಶ್ನಿಸುವಂತಾಗಿದೆ. ಬೈಕ್ ಸವಾರರು ಹೊಗನೇಕಲ್ ಜಲಪಾತದ ಬಳಿ ಉಭಯ ರಾಜ್ಯಗಳ ಗಡಿ ಭಾಗವನ್ನು ದಾಟಲು ತೆಪ್ಪದ ಮೂಲಕ ಬೈಕ್ ಗಳನ್ನು ಸಾಗಿಸುತ್ತಿದ್ದ ದೃಶ್ಯ ಇದೀಗ ವೈರಲ್ ಆಗಿದೆ. ಚಾಮರಾಜನಗರ ಜಿಲ್ಲೆಯ ಹೊಗನೇಕಲ್ ಜಲಪಾತದ ಪೂರ್ವ ಭಾಗದಲ್ಲಿ ತಮಿಳುನಾಡು ಇದ್ದು ಅಲ್ಲಿಂದ ಮತ್ತು ಕರ್ನಾಟಕ ಭಾಗದಿಂದ ತಮಿಳುನಾಡು ಭಾಗಕ್ಕೆ ಹೋಗುವವರು ತಮ್ಮೊಂದಿಗೆ ಬೈಕ್‌ಗಳನ್ನು ಕೊಂಡೊಯ್ಯಲು ತೆಪ್ಪವನ್ನು ಬಳಸುತ್ತಿದ್ದು ತೆಪ್ಪದವರು ಹಣ ಸಿಗುತ್ತದೆ ಎಂಬ ಕಾರಣಕ್ಕೆ ಬೈಕ್‌ಗಳನ್ನು ತೆಪ್ಪದಲ್ಲಿಟ್ಟು ನದಿ ದಾಟಿಸಲು ಒಪ್ಪಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಬೈಕ್‌ಗಳನ್ನು ತೆಪ್ಪದಲ್ಲಿ ನದಿ ದಾಟಿಸಲು ಇವರು ಪ್ರತಿಯೊಬ್ಬರಿಗೂ ಕೇವಲ 70 ರೂಪಾಯಿ ಪಡೆದುಕೊಳ್ಳುತ್ತಾರಂತೆ. ಒಂದು ತೆಪ್ಪದಲ್ಲಿ ಐದಾರು ಬೈಕ್‌ಗಳನ್ನು ಹಾಗೂ ಸವಾರರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸುತ್ತಿದ್ದು, ಸವಾರರಿಗೆ ಕಡಿಮೆ ಖರ್ಚಿನಲ್ಲಿ ತಮ್ಮದೇ ಬೈಕ್‌ನಲ್ಲಿ ಓಡಾಡಬಹುದು ಎಂಬ ಆಲೋಚನೆಯಾದರೆ, ತೆಪ್ಪ ನಡೆಸುವವರಿಗೆ ಒಂದಷ್ಟು ಸಂಪಾದನೆಯಾಗುತ್ತದೆ ಎಂಬ ಖುಷಿ. ಆದರೆ ಹೆಚ್ಚು ಕಡಿಮೆ ಆಗಿ ಅವಘಡ ಸಂಭವಿಸಿದರೆ ಗತಿಯೇನು? ಎಂಬುದರ ಬಗ್ಗೆ ಇಲ್ಲಿ ಯಾರೂ ಯೋಚನೆ ಮಾಡಿದಂತೆ ಕಾಣುತ್ತಿಲ್ಲ
ಇನ್ನಾದರೂ ಹುಚ್ಚಾಟಕ್ಕೆ ಕಡಿವಾಣ ಬೀಳಲಿ
ಹೊಗೇನಕಲ್ ಜಲಪಾತ ನೋಡಲು ಎಷ್ಟು ಸುಂದರವೋ ಅಷ್ಟೇ ಭಯಾನಕವಾಗಿದೆ. ಅದರಲ್ಲೂ ಕಾವೇರಿ ನದಿ ಹರಿಯುವ ಜಾಗ ಹೆಚ್ಚಿನ ಆಳವಿದ್ದು, ಎಚ್ಚರ ತಪ್ಪಿದರೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಇದರ ಬಗ್ಗೆ ಅರಿವಿದ್ದರೂ ದುಸ್ಸಾಹಸಕ್ಕೆ ಕೈಹಾಕುತ್ತಿರುವುದು ಮಾತ್ರ ಬೇಸರದ ಸಂಗತಿಯಾಗಿದೆ. ಇಷ್ಟೆಲ್ಲಾ ಆದರೂ ಉಭಯ ರಾಜ್ಯಗಳ ಪೊಲೀಸ್ ಇಲಾಖೆ ಮಾತ್ರ ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶನ ಮಾಡುತ್ತಿರುವುದೇ ಬೈಕ್ ಸವಾರರು ಇಂತಹ ಕಾನೂನು ಬಾಹಿರ ದುಸ್ಸಾಹಸ ಮಾಡಲು ಕಾರಣ ಎಂಬ ಆರೋಪ ಸ್ಥಳೀಯರದ್ದಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕಡಿವಾಣ ಹಾಕಬೇಕಾಗಿದೆ.












Click it and Unblock the Notifications