Vande Bharat; ಹಾಸನಕ್ಕೆ ಬರಲಿದೆ ವಂದೇ ಭಾರತ್ ರೈಲು
ಹಾಸನ, ನವೆಂಬರ್ 15; ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು-ಮಂಗಳೂರು ನಡುವೆ ಓಡಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈ ರೈಲು ಸಂಚಾರ ಆರಂಭವಾದರೆ ಹಾಸನ ಜಿಲ್ಲೆಯ ಜನರಿಗೆ ಸಹ ಅನುಕೂಲವಾಗಲಿದೆ.
ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕ ಸಂಪರ್ಕಿಸುವ ರೈಲುಗಳು ಹಾಸನ ಮಾರ್ಗವಾಗಿ ಸಂಚಾರ ನಡೆಸುತ್ತವೆ. ಶೀಘ್ರವೇ ಮಂಗಳೂರು ನಗರಕ್ಕೆ ವಂದೇ ಭಾರತ್ ರೈಲು ಸಂಪರ್ಕ ದೊರೆಯಲಿದೆ. ಆದ್ದರಿಂದ ಹಾಸನಕ್ಕೆ ಸಹ ವಂದೇ ಭಾರತ್ ರೈಲು ಬರಲಿದೆ.

ಈಗಾಗಲೇ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್, 'ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿ ಅದು ಕೂಡ ಈಡೇರಲಿದೆ. ಈ ಸಿಹಿಸುದ್ದಿಗಾಗಿ ಜಿಲ್ಲೆಯ ನಾಗರಿಕರ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದಾರೆ.
ಹಾಸನಕ್ಕೂ ವಂದೇ ಭಾರತ್ ರೈಲು; ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಬೆಂಗಳೂರು-ಹಾಸನ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಹ ಅನುಕೂಲವಾಗಲಿದೆ. ಹಾಸನ ಮಾರ್ಗವಾಗಿ ಮಂಗಳೂರಿಗೆ ವಂದೇ ಭಾರತ್ ರೈಲು ಓಡಿಸುವಂತೆ ರೈಲ್ವೆ ಸಚಿವರಿಗೆ ಈ ಹಿಂದೆಯೇ ಮನವಿ ಮಾಡಲಾಗಿತ್ತು.
ಆಗ ಹಾಸನದ ಶಾಸಕರಾಗಿದ್ದ ಪ್ರೀತಂ ಗೌಡ ಹಾಗೂ ಸಕಲೇಶಪುರದ ಶಾಸಕರು ಜಂಟಿಯಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿಯನ್ನು ಸಲ್ಲಿಕೆ ಮಾಡಿದ್ದರು. ಹಾಸನಕ್ಕೆ ವಂದೇ ಭಾರತ್ ರೈಲು ಬೇಕು ಎಂದು ಬೇಡಿಕೆ ಇಟ್ಟಿದ್ದರು.
ಈ ಕುರಿತು ಪ್ರೀತಂ ಗೌಡ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಮಂಗಳೂರು-ಹಾಸನ-ಬೆಂಗಳೂರು ಮಾರ್ಗವಾಗಿ ವಂದೇ ಭಾರತ್ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದೆ. ಇದು ಶೀಘ್ರದಲ್ಲೇ ಈಡೇರಲಿದೆ" ಎಂದು ಹೇಳಿದ್ದಾರೆ.
"ವಂದೇ ಭಾರತ್ ರೈಲು ಸಂಪರ್ಕ ಆರಂಭವಾದರೆ ಹಾಸನ ಜಿಲ್ಲೆಯ ಜನರು ಅತಿ ಕಡಿಮೆ ಅವಧಿಯಲ್ಲಿ ಬೆಂಗಳೂರು ಮತ್ತು ಮಂಗಳೂರು ನಗರಕ್ಕೆ ಸಂಚಾರ ನಡೆಸಬಹುದಾಗಿದೆ. ಇದು ಹಾಸನದ ಆರ್ಥಿಕ ಅಭಿವೃದ್ಧಿಗೆ ಸಹ ಸಹಕಾರಿಯಾಗಿದೆ" ಎಂದು ಮಾಜಿ ಶಾಸಕರು ತಿಳಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಟ್ವೀಟ್‌ನಲ್ಲಿ, "ಮಂಗಳೂರು - ಮಡಗಾಂ ವಂದೇ ಭಾರತ್ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು, ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ' ಎಂದು ಉಲ್ಲೇಖಿಸಿದ್ದಾರೆ.
ಈ ರೈಲು ಸಂಚಾರ ಆರಂಭವಾದ ಬಳಿಕ ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿದೆ. 2024ರಲ್ಲಿ ಹಾಸನ ಜಿಲ್ಲೆಯ ಜನರು ವಂದೇ ಭಾರತ್ ರೈಲನ್ನು ನಿರೀಕ್ಷೆ ಮಾಡಬಹುದಾಗಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಈಗಾಗಲೇ ವಂದೇ ಭಾರತ್ ರೈಲುಗಳ ನಿರ್ವಹಣೆಗಾಗಿಯೇ ಮೂಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸುಮಾರು 60 ಲಕ್ಷ ವೆಚ್ಚದಲ್ಲಿ ಹೊಸದಾಗಿ ಪಿಟ್‌ಲೈನ್ ನಿರ್ಮಾಣ ಮಾಡಲಾಗಿದೆ. ಹೊಸ ಪಿಟ್‌ಲೈನ್‌ಗೆ Over Head equipment(OHE) ಲೈನ್ ಅಳವಡಿಕೆ ಮಾಡಲಾಗಿದೆ.
ವಂದೇ ಭಾರತ್ ರೈಲು ಸ್ವಾಗತಿಸಲು ಕರಾವಳಿ ಭಾಗದ ಜನರು ಸಿದ್ಧರಾಗಿದ್ದಾರೆ. ವಂದೇ ಭಾರತ್ ರೈಲು ಒಮ್ಮೆ ಸಂಚಾರ ಪೂರ್ಣಗೊಳಿಸಿದ ಬಳಿಕ ರೈಲುಗಳ ಸ್ವಚ್ಚತೆ, ಮೆಕಾನಿಕಲ್ ಮತ್ತು ಎಲೆಕ್ಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ಆದ್ದರಿಂದ ವಂದೇ ಭಾರತ್ ರೈಲುಗಳನ್ನು ಓಡಿಸುವ ಮೊದಲು ಅದರ ನಿರ್ವಹಣೆಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ.
ಕರ್ನಾಟಕದಲ್ಲಿ 2022ರ ನವೆಂಬರ್‌ನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು ಸಂಚಾರ ಮೊದಲು ಆರಂಭವಾಯಿತು. 2023ರಲ್ಲಿ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮತ್ತು ಯಶವಂತಪುರ-ಕಾಚಿಗುಡ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಯಿತು. ಭಾರತೀಯ ರೈಲ್ವೆ ನವೆಂಬರ್ 14ರಂದು ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಿದೆ.












Click it and Unblock the Notifications