Hogenakkal Falls: ಪ್ರವಾಸಿಗರಿಗೆ ಸಿಹಿಸುದ್ದಿ, ಹೊಗೇನಕಲ್ ಜಲಪಾತಕ್ಕಿದ್ದ ಪ್ರವೇಶ ನಿರ್ಬಂಧ ತೆರವು
Hogenakkal Falls: ಭಾರೀ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಹಾಗೆಯೇ ಭಾರತದ ನಯಾಗರ ಎಂದೇ ಪ್ರಸಿದ್ಧಿಯಾಗಿರುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವಚಾಮರಾಜನಗರ ಜಿಲ್ಲೆಯ ಹೊಗೇನಕಲ್ ಜಲಪಾತಕ್ಕೆ ನಿರ್ಬಂಧ ಹೇರಲಾಗಿದ್ದು, ಇದೀಗ ಮತ್ತೆ ಅವಕಾಶ ಕಲ್ಪಿಸಲಾಗಿದೆ.
ಕೇರಳದ ವೈನಾಡಿನಲ್ಲಿ ಅಪಾರ ಪ್ರಮಾಣದ ಮಳೆಯಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದ ಹಿನ್ನೆಲೆ ಕಬಿನಿ ಜಲಾಶಯದಿಂದ 70,000 ಕ್ಯೂಸೆಕ್ಸ್ ಹಾಗೂ ಕೆಆರ್‌ಎಸ್ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿತ್ತು. ಆದರೆ ಹೊಗೇನಕಲ್ ಫಾಲ್ಸ್‌ನಲ್ಲಿ ಕಾವೇರಿ ರೌದ್ರ ನರ್ತನ ಉಂಟಾಗಿ ಜಲಪಾತವೇ ಮುಚ್ಚಿ ಹೋಗಿತ್ತು. ಈ ಹಿನ್ನೆಲೆ ಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಬರುವ ಗೋಪಿನಾಥಂ ವಲಯ ಅರಣ್ಯ ಅಧಿಕಾರಿಗಳು ಜುಲೈ 20ರಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರು.

ಇದೀಗ ನದಿ ಹರಿವಿನಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಆಗಸ್ಟ್ 7ರಿಂದ ಪ್ರವಾಸಿಗರಿಗೆ ತೆಪ್ಪದಲ್ಲಿ ಸಂಚಾರ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕೆಲವು ದಿನಗಳ ಹಿಂದೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಪ್ರವಾಸಿಗರಿಗೆ ತೆಪ್ಪ ಸಂಚಾರ ನಿರ್ಬಂಧ ಮಾಡಲಾಗಿತ್ತು. ಇದೀಗ ನೀರಿನ ಪ್ರಮಾಣ ಕಡಿಮೆಯಾಗಿದ್ದು, ತೆಪ್ಪ ಸಂಚರಿಸಲು ಅನುಕೂಲ ಆಗಿರುವುದರಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರ್‌ಎಫ್ಒ ಸಂಪತ್ ತಿಳಿಸಿದ್ದಾರೆ.
ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಪ್ರವಾಸಿ ತಾಣಗಳಾದ ವೆಸ್ಲಿ ಸೇತುವೆ, ಶಿವನಸಮುದ್ರ, ಭರಚುಕ್ಕಿ ಹಾಗೂ ಹೊಗೇನಕಲ್ ಜಲಪಾತ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತಿದ್ದು, ಯಾವುದೇ ಅವಘಡಗಳು ಸಂಭವಿಸದಂತೆ ಇಲ್ಲಿವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಅಧಿಕಾರಿಗಳ ನಿರ್ಲಕ್ಷ್ಯ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಮಳೆರಾಯನ ಆರ್ಭಟ ತಗ್ಗಿದ್ದು, ಇನ್ನು ಕೆಲವು ಜಿಲ್ಲೆಗಳಲ್ಲಿ ಮಾತ್ರ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಅದರಲ್ಲೂ ಬೆಳಗಾವಿ ಭಾಗದಲ್ಲಿ ಮಳೆ ಮುಂದುವರೆದ ಹಿನ್ನೆಲೆ ಪ್ರವಾಹದಂತಹ ವಾತಾವರಣ ನಿರ್ಮಾಣವಾಗಿದೆ. ಹಾಗಾದರೆ ಏನೆಲ್ಲ ಅನಾಹುತಗಳು ಸಂಭವಿಸಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಸುರಿಯುತ್ತಿರುವ ಹಿನ್ನೆಲೆ ಕೆರೆ, ಹಳ್ಳ-ಕೊಳ್ಳ, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಜಿಲ್ಲೆಯ ನಿಂಗಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಹುಲಿಕೆರೆ ಹಿನ್ನೀರಿನಲ್ಲಿ ಗಾಳಿ ತುಂಬಿದ ಟ್ಯೂಬ್ ಮೂಲಕವೇ ವಿದ್ಯಾರ್ಥಿಗಳು ಶಾಲೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ. ಮಳೆ ಬಂತೆದಂರೆ ಸಾಕು ಯಾವುದೇ ಪರ್ಯಾಯ ದಾರಿಯಿಲ್ಲದೆ, ಕಲಿಕೆಗಾಗಿ ಈ ಹಿನ್ನೀರನ್ನೂ ದಾಟಿಕೊಂಡೇ ಹೋಗುತ್ತಿದ್ದೇವೆ ಎಂದು ಮಕ್ಕಳು ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಜೀವವನ್ನು ಅಂಗೈಯಲ್ಲಿಡಿದು ಗಾಳಿ ತುಂಬಿದ ಟ್ಯೂಬೇ ಅನ್ನೇ ಬಳಸಿಕೊಂಡು ಕೆರೆ ಹಿನ್ನೀರು ದಾಟಿ ಶಾಲೆಗೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ದೃಶ್ಯ ನೋಡಿದರೆ, ಎಂಥಹವರ ಎದೆ ಝೆಲ್ ಎನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಗಾಳಿ ತುಂಬಿದ ಟ್ಯೂಬ್‌ಗೆ ಹಗ್ಗ ಕಟ್ಟಿ ಎಳೆದು ಮಕ್ಕಳನ್ನು ಈ ಕೆರೆಯನ್ನು ಪ್ರತಿನಿತ್ಯ ದಾಟಿಸುತ್ತಿದ್ದು, ಇದು ಸ್ವಲ್ಪ ಆಯ ತಪ್ಪಿದರೂ ಸಹ ಮಕ್ಕಳು ಕೆರೆ ಪಾಲಾಗುವ ಭೀತಿಯಲ್ಲಿ ಪೋಷಕರು ಇದ್ದಾರೆ. ಈಗಾಗಲೇ ಈ ಭಾಗದಲ್ಲಿ ಸೇತುವೆ ನಿರ್ಮಾಣ ಮಾಡಿ ಕೊಡಿ ಎಂದು 20 ವರ್ಷಗಳಿಂದಲೂ ಅಧಿಕಾರಿಗಳನ್ನು ಕೇಳಿಕೊಳ್ಳುತ್ತಲೇ ಇದ್ದೇವೆ. ಆದರೆ, ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಆದ್ದರಿಂದ ರಬ್ಬರ್ ಟ್ಯೂಬ್ ಅನ್ನೇ ಇವರು ಬೋಟ್, ಹಿನ್ನೀರು ದಾಟಿಸುವ ದೋಣಿಯಾಗಿ ಮಾಡಿಕೊಂಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಭಾಗದ ಶಾಲಾ ಮಕ್ಕಳಿಗೆ ಅನುಕೂಲ ಆಗುವಂತೆ ಸೇತುವೆ ನೀರ್ಮಾಣ ಮಾಡಿಕೊಡಿ ಎನ್ನುವುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications