Travel: ಚಾರಣಪ್ರಿಯರ ಸ್ವರ್ಗ ಮಡಿಕೇರಿಯ ತಡಿಯಂಡಮೋಳ್..ಆದರೆ ಎಚ್ಚರ..! ಎಚ್ಚರ..!
ಮಡಿಕೇರಿ, ನವೆಂಬರ್ 29: ಬೆಟ್ಟಗುಡ್ಡಗಳಿಗೆ ಚಾರಣ ತೆರಳಲು ಚಾರಣಪ್ರಿಯರಿಗೆ ಇದು ಸಕಾಲವಾಗಿದೆ. ಹೆಚ್ಚು ಪ್ರಖರತೆ ಇಲ್ಲದ ಬಿಸಿಲು ಅದರಾಚೆಗೆ ಸಣ್ಣಗೆ ನಡುಕ ಹುಟ್ಟಿಸುವ ಚಳಿಯಲ್ಲಿ ನಡೆಯುವುದು, ಬೆಟ್ಟಗುಡ್ಡಗಳನ್ನೇರುವುದು ಒಂಥರಾ ಮಜಾ ಕೊಡುತ್ತದೆ. ಸಾಗುವ ಹಾದಿಯಲ್ಲಿ ಸುಸ್ತು ಕಾಣಿಸದೆ ಮುನ್ನಡೆಯಲು ಈಗಿನ ವಾತಾವರಣ ಸಾಥ್ ನೀಡುತ್ತದೆ. ಹೀಗಾಗಿಯೇ ಚಾರಣ ಪ್ರಿಯರು ಕೊಡಗಿನತ್ತ ಮುಖ ಮಾಡುತ್ತಿದ್ದಾರೆ. ಆದರೆ ಒಂದಷ್ಟು ಮುಂಜಾಗ್ರತೆ ವಹಿಸಿ, ನಿಯಮ ಪಾಲನೆ ಮಾಡಿದರೆ ನಿಮ್ಮ ಚಾರಣ ಸುಖಮಯವಾಗಿರುತ್ತದೆ.
ಕೊಡಗಿನಲ್ಲಿ ಚಾರಣ ಮಾಡಲು ಹಲವು ಬೆಟ್ಟಗಳಿದ್ದರೂ ಹೆಚ್ಚಿನವರು ಒಮ್ಮೆಯಾದರೂ ಜಿಲ್ಲೆಯ ಅತಿ ಎತ್ತರದ ಬೆಟ್ಟವಾದ ತಡಿಯಂಡಮೋಳ್ ಬೆಟ್ಟವನ್ನೇರ ಬೇಕೆಂದು ಬಯಸುವುದು ಸಹಜ. ಕಾರಣ ಈ ಬೆಟ್ಟದ ತುತ್ತ ತುದಿಗೇರಿದ ನಂತರ ಅಲ್ಲಿಂದ ಕಂಡು ಬರುವ ದೃಶ್ಯಗಳನ್ನು ನೋಡುವುದು ಮತ್ತು ಬೀಸಿ ಬರುವ ತಂಗಾಳಿಯಲ್ಲಿ ಮೈಯೊಡ್ಡಿ ನಿಲ್ಲುವುದು ಮರೆಯಲಾರದ ಸುಖಾನುಭವ ನೀಡುತ್ತದೆ. ಹೀಗಾಗಿಯೇ ಈ ಬೆಟ್ಟವನ್ನೇರುವ ಬಯಕೆ ತೋರುತ್ತಾರೆ.

ನಗರದ ಜಂಜಾಟದ ಬದುಕಿನಲ್ಲಿ ಕಾಲ ಕಳೆಯುವವರು, ಸದಾ ಕೆಲಸದ ಒತ್ತಡದಲ್ಲಿ ಹೈರಾಣರಾದವರು ಒಂದಷ್ಟು ಬಿಡುವ ಮಾಡಿಕೊಂಡು ನಿಸರ್ಗದ ಮಡಿಲಲ್ಲಿ ಕಾಲ ಕಳೆಯ ಬೇಕೆಂದು ಬಯಸುವುದು ಸಹಜ ಅಂಥವರು ಇಲ್ಲಿಗೆ ಬಂದರೆ ಅವರ ಮೈಮನವನ್ನು ಹಗುರವಾಗಿಸುವುದರಲ್ಲಿ ಎರಡು ಮಾತಿಲ್ಲ. ಇದರ ಸತ್ಯ ಅರಿತ ಕಾರಣದಿಂದಲೇ ಇಲ್ಲಿಗೆ ಚಾರಣ ಮಾಡಲೆಂದೇ ಪ್ರವಾಸಿಗರು ಬರುವುದು ಸಾಮಾನ್ಯವಾಗಿದೆ.
ಚಾರಣಿಗರಿಗೆ ಹೇಳಿ ಮಾಡಿಸಿದ ಶಿಖರ
ಹಾಗೆನೋಡಿದರೆ ಕೊಡಗು ಬೆಟ್ಟಶ್ರೇಣಿಯನ್ನೇ ಹೊದ್ದು ಕುಳಿತ ಪುಟ್ಟ ಜಿಲ್ಲೆ. ಇಲ್ಲಿ ಸಮತಟ್ಟು ಪ್ರದೇಶಕ್ಕಿಂತ ಹೆಚ್ಚಾಗಿ ಬೆಟ್ಟಗುಡ್ಡಗಳಿವೆ. ಅದರ ಮೇಲೆ ಮತ್ತು ನಡುವೆ ಜನ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವೆಡೆ ಭತ್ತದ ಬಯಲು ಅದರಾಚೆಗೆ ಕಾಫಿತೋಟಗಳು ಹಸಿರಿನಿಂದ ಕಂಗೊಳಿಸುತ್ತದೆ. ಅಲ್ಲಲ್ಲಿ ಇರುವ ಕಾಡುಗಳು ಇಲ್ಲಿನ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿವೆ. ನಡೆದು ನೋಡು ಕೊಡಗಿನ ಸೊಬಗು ಎಂಬಂತೆ ಬೆಟ್ಟಗುಡ್ಡಗಳನ್ನೇರುವ ಸಾಹಸಿಗರಿಗೆ ಹತ್ತು ಹಲವು ನಿಸರ್ಗದ ನೋಟಗಳು ರಸದೌತಣ ನೀಡುತ್ತವೆ.

ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿರುವ ತಡಿಯಂಡಮೋಳ್ ಬೆಟ್ಟ ಚಾರಣಿಗರಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿಯೇ ಮೊದಲಿನಿಂದಲೂ ಈ ಬೆಟ್ಟದತ್ತ ಚಾರಣಿಗರು ಬರುವುದು ಮಾಮೂಲಿಯಾಗಿದೆ. ಈ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 6500ಅಡಿಗಳಷ್ಟು (1717ಮೀಟರ್) ಎತ್ತರದಲ್ಲಿದೆ. ಇದು ಕೊಡಗಿನಲ್ಲಿರುವ ಇತರೆ ಬೆಟ್ಟಗಳಿಗಿಂತ ಎತ್ತರದ ಬೆಟ್ಟವಾಗಿದೆ. ಈ ಬೆಟ್ಟದ ತುತ್ತ ತುದಿಯನ್ನುನ ತಲುಪಬೇಕಾದರೆ ಸುಮಾರು ಎಂಟರಿಂದ ಹತ್ತು ಕಿ.ಮೀ.ನಷ್ಟು ನಡೆಯುವುದು ಅನಿವಾರ್ಯವಾಗುತ್ತದೆ. ಇಷ್ಟಕ್ಕೆ ಸಿದ್ದರಾಗಿದ್ದರೆ ಯಾವುದೇ ತೊಂದರೆಯಿಲ್ಲದೆ ಚಾರಣ ಮಾಡಬಹುದಾಗಿದೆ.
ಚಾರಣಕ್ಕೆ ಮಾರ್ಗದರ್ಶಕರಿದ್ದರೆ ಒಳಿತು
ಇನ್ನು ತಡಿಯಂಡ ಮೋಳ್ ಬೆಟ್ಟಕ್ಕೆ ಹೋಗುವುದು ಹೇಗೆ ಎಂದು ನೋಡಿದ್ದೇ ಆದರೆ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ನಾಪೋಕ್ಲುಗೆ ತೆರಳಿ ಅಲ್ಲಿಗೆ ಸಮೀಪದ ಕಕ್ಕಬೆ ಮೂಲಕ ತೆರಳಬೇಕಾಗುತ್ತದೆ. ಬಹಳಷ್ಟು ಚಾರಣಿಗರು ನಾಪೋಕ್ಲು ಅಥವಾ ಕಕ್ಕಬೆ ವ್ಯಾಪ್ತಿಯಲ್ಲಿರುವ ಹೋಂಸ್ಟೇಗಳಲ್ಲಿ ರಾತ್ರಿ ತಂಗಿದ್ದು ಅವರ ಮಾರ್ಗದರ್ಶನದಲ್ಲಿ ಮುಂಜಾನೆ ಚಾರಣ ಆರಂಭಿಸುತ್ತಾರೆ. ನಿಧಾನವಾಗಿ ಬೆಟ್ಟವನ್ನೇರ ಬೇಕಾಗುತ್ತದೆ. ಹೀಗೆ ಬೆಟ್ಟವನ್ನೇರ ಬೇಕಾದರೆ ಕೆಲವರಿಗೆ ಉಸಿರಾಟದ ಸಮಸ್ಯೆ ಕಾಣಿಸಬಹುದು. ಹೀಗಾಗಿ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಸಾಗುವುದು ಒಳಿತು.

ಚಾರಣಕ್ಕೆ ತೆರಳುವವರು ಸ್ಥಳೀಯರ ಮಾರ್ಗದರ್ಶನ ಪಡೆದು ಹಾಗೆಯೇ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಕೂಡ ಬಹುಮುಖ್ಯವಾಗಿದೆ. ಚಾರಣಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅನಾಹುತಗಳು ಹೆಚ್ಚಾಗುತ್ತಿವೆ. ಚಾರಣದ ಸಂದರ್ಭ ಉಸಿರಾಟದ ಸಮಸ್ಯೆಯುಂಟಾಗಿ ಸಾವನ್ನಪ್ಪಿದ ಪ್ರಕರಣಗಳು ಇಲ್ಲದಿಲ್ಲ. ಆದ್ದರಿಂದ ಆರೋಗ್ಯವಾಗಿದ್ದು, ಬೆಟ್ಟವನ್ನೇರಲು ಸಾಮರ್ಥ್ಯವಿದ್ದರೆ ಮಾತ್ರ ಚಾರಣ ಮಾಡುವುದು ಒಳ್ಳೆಯದು. ಏಕೆಂದರೆ ಆರಂಭದ ಒಂದಷ್ಟು ನಡಿಗೆ ಮೂಲಕ ಸಾಗುವಾಗ ಕಷ್ಟವೆನಿಸುವುದಿಲ್ಲ.
ನಿಯಮ ಉಲ್ಲಂಘಿಸಿದರೆ ಕ್ರಮ ತಪ್ಪಿದಲ್ಲ
ಮುಂದೆ ಸಾಗುತ್ತಾ ಏರು ಹಾದಿ ಆರಂಭವಾಗಿ ಬೆಟ್ಟವನ್ನು ಏರುವುದು ಅನಿವಾರ್ಯವಾದಾಗ ಎದುಸಿರು ಬಿಡುವಂತಾಗುತ್ತದೆ. ಇಂತಹ ಸಂದರ್ಭ ಅಲ್ಲಿಯೇ ಕುಳಿತು ಸುತ್ತಲೂ ಕಂಡು ಬರುವ ನಿಸರ್ಗ ಸುಂದರ ದೃಶ್ಯಗಳನ್ನು ನೋಡಿಕೊಂಡು ವಿಶ್ರಾಂತಿ ಪಡೆದು ನಿಧಾನವಾಗಿ ಮುನ್ನಡೆಯುವುದು ಒಳ್ಳೆಯದು. ಸೂರ್ಯ ನೆತ್ತಿಗೆ ಬರುವ ಮುನ್ನ ಬೆಟ್ಟದ ಮೇಲ್ಭಾಗವನ್ನು ತಲುಪಿದರೆ ಒಂದಷ್ಟು ಸಮಯವನ್ನು ಕಳೆದು ಬರಲು ಸಹಕಾರಿಯಾಗುತ್ತದೆ. ಬೇಸಿಗೆಯ ಸಮಯದಲ್ಲಿ ಬಿಸಿಲಿನ ಧಗೆ ಜೊತೆಗೆ ಹಸಿರ ಬದಲಿಗೆ ಬೋಳುಗುಡ್ಡಗಳು ಕಾಣಿಸುತ್ತವೆ. ಆದರೆ ಈ ಸಮಯದಲ್ಲಿ ಇಡೀ ಬೆಟ್ಟಶ್ರೇಣಿಗಳು ಹಸಿರಿನಿಂದ ಕಂಗೊಳಿಸಿ ಕಣ್ಣನ್ನು ತಂಪಾಗಿಸುತ್ತದೆ.
ಮೊದಲೆಲ್ಲ ಚಾರಣಕ್ಕೆಂದು ಬರುವವರಿ ಅವರ ಪಾಡಿಗೆ ಚಾರಣ ಮಾಡಿಕೊಂಡು ಹಿಂತಿರುಗುತ್ತಿದ್ದರು. ಆದರೆ ವೀಕೆಂಡ್ ಬಂತೆಂದರೆ ಮೋಜು ಮಸ್ತಿಗಾಗಿ ಬರುವವರ ಸಂಖ್ಯೆ ಹೆಚ್ಚಾಗಲಾರಂಭಿಸಿತು. ಹೀಗಾಗಿ ಪರಿಸರ ಕಲುಷಿತಗೊಳ್ಳಲು ಆರಂಭವಾಯಿತು. ಇದರಿಂದ ಅರಣ್ಯ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಚಾರಣಕ್ಕೆ ಅನುಮತಿ ಕಡ್ಡಾಯಗೊಳಿಸಿದೆ. ಜತೆಗೆ ಸಮಯನ್ನು ನಿಗದಿಗೊಳಿಸಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಒಳಿತು.












Click it and Unblock the Notifications