Shivamogga Airport: ರಾತ್ರಿ ಲ್ಯಾಂಡಿಂಗ್, ಶಿವಮೊಗ್ಗ ಜನರಿಗೆ ಸಿಹಿಸುದ್ದಿ
ಶಿವಮೊಗ್ಗ, ಆಗಸ್ಟ್ 07: ಶಿವಮೊಗ್ಗದ ಸೋಗಾನೆ ಗ್ರಾಮದಲ್ಲಿ ಸುಮಾರು 662.38 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ 27/2/2023ರಂದು ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ವಿಮಾನಗಳು ಹಾರಾಟವನ್ನು ನಡೆಸುತ್ತಿವೆ. ಈಗ ಮಲೆನಾಡು ಭಾಗದ ಜನರಿಗೆ ಮತ್ತೊಂದು ಸಿಹಿಸುದ್ದಿ ಇದೆ.
ಈ ಕುರಿತು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಜನವರಿ 2024ರಲ್ಲಿ ಸ್ಥಗಿತಗೊಂಡ ರಾತ್ರಿ ಲ್ಯಾಂಡಿಂಗ್ ಕೆಲಸದ ಪುನರಾರಂಭವನ್ನು ಡಿಜಿಸಿಎ ಅನುಮೋದಿಸಿದೆ. KPWD ಎಕ್ಸಿಕ್ಯೂಟಿಂಗ್ ಏಜೆನ್ಸಿಯಾಗಿದೆ ಮತ್ತು DGCA ರೇಖಾಚಿತ್ರಗಳು, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಪರಿಕಲ್ಪನೆ/ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯ ಮಟ್ಟದ ಅನುಮೋದನೆಯನ್ನು ನೀಡಿದೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

'ಜನವರಿ 2024ರ ಹೊತ್ತಿಗೆ ಸುಮಾರು 65 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸವು ಕನಿಷ್ಠ ಎರಡು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಎಲ್ಲಾ ಹವಾಮಾನ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುವ ಮೊದಲು DGCA ಪೂರ್ಣಗೊಂಡ ಯೋಜನೆಯನ್ನು ಮರುಪರಿಶೀಲಿಸುತ್ತದೆ' ಎಂದು ಸಂಸದರು ಹೇಳಿದ್ದಾರೆ.
'ಈ ಎಲ್ಲಾ ಪ್ರಕ್ರಿಯೆಗಳು 3-4 ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಈ ಚಳಿಗಾಲದ ಋತುವಿನ ಆಗಮನದ ಮೊದಲು, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಎಲ್ಲಾ ಹವಾಮಾನ ಕಾರ್ಯಾಚರಣೆಗೆ ನವೀಕರಿಸಲಾಗುತ್ತದೆ ಮತ್ತು ಈ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ, ಮಳೆ, ರಾತ್ರಿ ಮುಂತಾದ ಅನಿರೀಕ್ಷಿತ ವಿಮಾನ ಕಾರ್ಯಾಚರಣೆ ಮತ್ತು ಪ್ರಯಾಣಿಕರ ಅನಾನುಕೂಲತೆಗಳನ್ನು ನಿವಾರಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.
ಏನು ಅನುಕೂಲವಾಗಲಿದೆ?: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸದ್ಯ ಹಗಲು ಹೊತ್ತಿನಲ್ಲಿ ಮಾತ್ರ ವಿಮಾನಗಳ ಸಂಪರ್ಕವಿದೆ. ಅಲ್ಲದೇ ಮಳೆ, ಪ್ರತಿಕೂಲ ಹವಾಮಾನದಲ್ಲಿ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಿಲ್ಲ. ಈಗಾಗಲೇ ಬೆಂಗಳೂರು ನಗರದಿಂದ ಹಗಲು ಹೊತ್ತಿನಲ್ಲಿ ಬಂದ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗದೇ ವಾಪಸ್ ತೆರಳಿದ ಘಟನೆಗಳು ಸಹ ನಡೆದಿವೆ.
ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ, ಮಳೆ, ರಾತ್ರಿಯ ಸಮಯದಲ್ಲಿ ವಿಮಾನ ಲ್ಯಾಂಡ್ ಮಾಡಲು ವಿಶೇಷ ವ್ಯವಸ್ಥೆ ಬೇಕಿದೆ. ಇದರ ಕಾಮಗಾರಿಗೆ ಡಿಜಿಸಿಎ ಈಗ ಅನುಮೋದನೆ ನೀಡಿದೆ ಎಂದು ಸಂಸದರು ಹೇಳಿದ್ದಾರೆ. ಈ ಕಾಮಗಾರಿ ಪೂರ್ಣಗೊಂಡರೆ ಶಿವಮೊಗ್ಗ ನಗರಕ್ಕೆ ರಾತ್ರಿಯೂ ವಿಮಾನ ಸಂಚಾರ ನಡೆಸಬಹುದು, ಪ್ರತಿಕೂಲ ಹವಾಮಾನ ಇದ್ದರೂ ಸಹ ವಿಮಾನಗಳನ್ನು ಲ್ಯಾಂಡ್ ಮಾಡಬಹುದು.
ಕೆಲವು ದಿನಗಳ ಹಿಂದೆ ಬಿ. ವೈ. ರಾಘವೇಂದ್ರ, "ಮೋಡ ಮುಸುಕಿದ ವಾತಾವರಣ ಮತ್ತು ರಾತ್ರಿ ವೇಳೆಯಲ್ಲೂ ವಿಮಾನ ಲ್ಯಾಂಡಿಂಗ್ ಆಗುವಂತಹ ವ್ಯವಸ್ಥೆಯನ್ನು ತ್ವರಿತವಾಗಿ ಮಾಡುವಂತೆ ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಈ ಸಂಬಂಧ ಹೊಸದಿಲ್ಲಿಯಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ" ಎಂದು ಹೇಳಿದ್ದರು.
ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರು, ಹೈದಬಾರಾದ್, ಗೋವಾ ಮತ್ತು ತಿರುಪತಿಗೆ ವಿಮಾನ ಸಂಪರ್ಕವಿದೆ. ಶಿವಮೊಗ್ಗ-ಮುಂಬೈ ಮಾರ್ಗಕ್ಕೆ ಬೇಡಿಕೆ ಇಡಲಾಗಿದೆ. ಒಟ್ಟು 12 ನಗರಗಳಿಗೆ ಸಂಪರ್ಕ ಕಲ್ಪಿಸಲು, ಉಡಾನ್ ಯೋಜನೆಗೆ ನಿಲ್ದಾಣವನ್ನು ಸೇರಿಸಬೇಕು ಎಂದು ವಿಮಾನಯಾನ ಸಚಿವಾಲಯಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.
ಶಿವಮೊಗ್ಗ-ಚೆನ್ನೈ ನಡುವೆ ಆಗಸ್ಟ್ 15ರಿಂದ ವಿಮಾನಯಾನ ಸೇವೆ ಆರಂಭವಾಗಲಿದೆ. ಚೆನ್ನೈ ವಿಮಾನ ಹಾರಾಟದ ಜೊತೆಗೆ ವಾರದಲ್ಲಿ 1 ದಿನ ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೂ ಸ್ಟೈಸ್ ಜೆಟ್ ವಿಮಾನ ಹಾರಾಟ ನಡೆಸಲಿದೆ. ಆದರೆ ಸದ್ಯ ಎಲ್ಲಾ ವಿಮಾನಗಳು ಹಗಲು ಹೊತ್ತಿನಲ್ಲಿ ಮಾತ್ರ ಸಂಚಾರ ನಡೆಸುತ್ತಿವೆ.
ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಅತಿ ಉದ್ದದ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಶಿವಮೊಗ್ಗದ್ದಾಗಿದೆ. ಮೊದಲು 2050 ಮೀಟರ್ ರನ್ ವೇ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಏರ್‌ಬಸ್ ಸೇರಿದಂತೆ ದೊಡ್ಡ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ರನ್ ವೇ ಉದ್ದವನ್ನು 3200 ಮೀಟರ್‌ಗೆ ಹೆಚ್ಚಿಸಲಾಗಿದೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸು. ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಯೋಜನೆಗೆ ಇದ್ದ ಅಡೆತಡೆ ನಿವಾರಣೆ ಮಾಡಿ, ಕಾಮಗಾರಿಗೆ ಚಾಲನೆ ನೀಡಿದ್ದರು. 2023ರ ಫೆಬ್ರವರಿ 27ರಂದು ಯಡಿಯೂರಪ್ಪ ಜನ್ಮದಿನದಂದೇ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದರು.












Click it and Unblock the Notifications