
ದಾವಣಗೆರೆ: ದೇವರಬೆಳಕೆರೆ ಡ್ಯಾಂನಿಂದ ಹೊರಬರುತ್ತಿರುವ ಜಲಸಿರಿ ವೈಭವ ನೋಡಬನ್ನಿರಿ
ದಾವಣಗೆರೆ, ಆಗಸ್ಟ್ 23: ಹೊರ ಬರುತ್ತಿರುವ ನೀರಿನಿಂದ ಹೊಸ ಲೋಕವೇ ಸೃಷ್ಟಿ, ರಭಸದ ಶಬ್ಧ ಕಿವಿಗೆ ಕೇಳಿಸುತ್ತಿದ್ದಂತೆ ರೋಮಾಂಚನ, ಹಾಲ್ನೊರೆಯ ಸೊಬಗು ಚೆಂದವೋ ಚೆಂದ. ನೋಡಲು ಕಣ್ಣೆರಡು ಸಾಲದು. ಇದು ದಾವಣಗೆರೆ ಸಮೀಪದ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾನಿಂದ ಹೊರಬರುತ್ತಿರುವ ನೀರು ಸೃಷ್ಟಿಸಿರುವ ಅದ್ಭುತ ಲೋಕ ನೋಡುವುದಕ್ಕೆ ಪ್ರವಾಸಿಗರು ದಾಂಗುಡಿಯಿಡುತ್ತಿದ್ದಾರೆ.
ಪಿಕಪ್ ಜಲಾಶಯ ಭರ್ತಿಯಾದೊಡನೆ ಹೊರಬುರುವ ನೀರು ಮುಂದೆ ದೊಡ್ಡ ಕಲ್ಲು ನಡುವೆ ಮೂರು ದೊಡ್ಡ ಕವಲುಗಳಾಗಿ ಸುಮಾರು ಒಂದು ಕಿಮೀ ವರೆಗೆ ಹರಿಯುತ್ತದೆ, ಕಲ್ಲು, ಮುಳ್ಳುಗಳಿಂದ ಕೂಡಿರುವ ಮಾರ್ಗವಾಗಿರುವುದರಿಂದ ಹತ್ತಿರುವ ಹೋಗುವುದು ಸ್ವಲ್ಪ ಕಷ್ಟ. ಆದರೂ ಈ ದೃಶ್ಯ ನೋಡಲೆಂದು ಸ್ಥಳೀಯರು ಆಗಮಿಸುತ್ತಾರೆ.
ಮತ್ತೆ ಓಡಲಿದೆ 'ಶ್ರೀ ರಾಮಾಯಣ ಯಾತ್ರೆ' ವಿಶೇಷ ರೈಲು : 2 ದಿನ ಹೆಚ್ಚಳ, ಈ ಪ್ಯಾಕೇಜ್ ಬಗ್ಗೆ ತಿಳಿಯಿರಿ
ದಾವಣಗೆರೆಯಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿರುವ ದೇವರ ಬೆಳಕೆರೆ ಡ್ಯಾಂ ಒನ್ ಡೇ ಪಿಕ್ ನಿಕ್ ಗೆ ಹೇಳಿಮಾಡಿಸಿದ ತಾಣ. ಸುತ್ತಮುತ್ತಲಿನ ಗ್ರಾಮಗಳ ಜನರು, ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಕುಟುಂಬ ಸಮೇತರಾಗಿ ಬಂದು ಇಲ್ಲಿನ ಸೊಬಗು ಕಂಡು ಫಿದಾ ಆಗಿದ್ದಾರೆ. ವೀಕೆಂಡ್‌ನಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚು. ಶ್ಯಾಗಳೆ ಹಳ್ಳಕ್ಕೆ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಆಗಿನಿಂದ ನೀರು ಸಂಗ್ರಹಣೆ ಮಾಡಲಾಗಿದೆ. ಕಳೆದ 50 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದರೂ ಅಭಿವೃದ್ಧಿ ಆಗಿದ್ದು ಕೆಲ ವರ್ಷಗಳ ಹಿಂದೆ.
ರೈತರಿಗೆ ಅನುಕೂಲ ಆಗಲಿ ಎಂದು ಪಿಕಪ್ ಡ್ಯಾಂ ಅನ್ನು 1986ರಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಎಚ್. ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಇದರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿತ್ತು.

ಡ್ಯಾಂಗೆ ತೆರಳುವುದೇಗೆ?
ದಾವಣಗೆರೆಯಿಂದ ಹೋಗುವವರು ಶಾಮನೂರು ಬೈಪಾಸ್ ನಿಂದ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿದೆ. ಸೇತುವೆಯ ಬಲಭಾಗದ ರಸ್ತೆಯಲ್ಲಿ ಹೋದರೆ ದೇವರ ಬೆಳಕೆರೆ ಗ್ರಾಮ ಬರುತ್ತೆ. ಇಲ್ಲಿ ಪಿಕ್ ಡ್ಯಾಂ ಇದ್ದು, ನೀರು ಹೆಚ್ಚಾದಾಗಲೆಲ್ಲಾ ಹೊರ ಬಿಡಲಾಗುತ್ತದೆ.
ಈ ಬಾರಿ ಭಾರೀ ಮಳೆ ಸುರಿದ ಪರಿಣಾಮ ಹಾಗೂ ಭದ್ರಾ ಜಲಾಶಯದಿಂದ ನೀರು ಹೊರ ಬಿಟ್ಟಿದ್ದರಿಂದಾಗಿ ಪಿಕಪ್ ಡ್ಯಾಂಗೆ ನೀರು ಹರಿದು ಬಂದ ಕಾರಣ ಹೆಚ್ಚಾದ ನೀರು ಹೊರಬಿಡಲಾಗುತ್ತಿದೆ. ಇದರಿಂದ ನೀರಿನ ಹಾಲ್ನೊರೆಯ ಹರಿಯುತ್ತಿದ್ದು ಸುಂದರತೆ ಸೃಷ್ಟಿಯಾಗಿದೆ.
ದಾವಣಗೆರೆ; ತುಂಬಿದ ಶಾಂತಿ ಸಾಗರ ಕೆರೆ, ರೈತರಿಗೆ ಹರ್ಷ ಮತ್ತು ಸಂಕಟ!

ಸೂಕ್ತ ನಿರ್ವಹಣೆಯಿಲ್ಲ
ಇನ್ನು ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ಈ ತಾಣದಲ್ಲಿ ಮೂಲಭೂತ ಸೌಲಭ್ಯಗಳು ಶೂನ್ಯ. ಹಿನ್ನೀರು ಪ್ರದೇಶದಲ್ಲಿ ನೀರು ಯಥೇಚ್ಛವಾಗಿ ಇರುವುದರಿಂದ ನೋಡಲು ಕಣ್ಣು ಸಾಲದು. ಎಲ್ಲಿ ನೋಡಿದರೂ ನೀರೋ ನೀರು. ಆದರೆ ಡ್ಯಾಂ ನಿರ್ಮಾಣವಾಗಿದ್ದರೂ ಈಗ ಅಭಿವೃದ್ಧಿ ಒತ್ತಟ್ಟಿಗಿರಲಿ, ನಿರ್ವಹಣೆಯೇ ಎಂಬುದೇ ಇಲ್ಲ. ಒಂದು ಕಂಬವೂ ಇಲ್ಲ. ವಿದ್ಯುತ್ ದೀಪವೂ ಇಲ್ಲ. ಬರುವ ಜನರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲ. ಡ್ಯಾಂನ ಮೇಲೆ ಹಾಕಲಾಗಿರುವ ಕಬ್ಬಿಣದ ಸರಳುಗಳು ಹೊರಬಂದಿವೆ. ಸುರಕ್ಷತೆ ಎಂಬುದೇ ಇಲ್ಲ. ಮೇಲೆ ನಿಂತು ನೋಡಬೇಕು. ಕೆಳಗಡೆ ಹೋಗಿ ಭಯದಲ್ಲೇ ಜನರು ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ರೈತರ ಪಾಲಿನ ಜೀವಸೆಲೆ
2286.08 ಚದರ ಮೀಟರ್ ವಿಸ್ತೀರ್ಣವುಳ್ಳ ಡ್ಯಾಂ, 10,570 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದೆ. ಲಕ್ಷಾಂತರ ಎಕರೆ ಜಮೀನುಗಳಿಗೆ ನೀರುಣಿಸುವ ಈ ಅಣೆಕಟ್ಟು ರೈತರ ಪಾಲಿಗೆ ಜೀವಸೆಲೆ. ತನ್ನ ಒಡಲಲ್ಲಿ ಸೌಂದರ್ಯದ ಸೊಬಗು ಇಟ್ಟುಕೊಂಡಿದ್ದರೂ ಅಪಾಯವನ್ನೂ ಹೊಂದಿದೆ. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾರಣ ಎನ್ನುವುದು ದೇವರಬೆಳಕೆರೆ ಗ್ರಾಮಸ್ಥರ ಆರೋಪ.

ಮೂಲಭೂತ ಸೌಕರ್ಯವಿಲ್ಲ
ದಾವಣಗೆರೆಯ ಪ್ರವಾಸಿ ತಾಣಗಳಲ್ಲಿ ಈ ಡ್ಯಾಂ ಕೂಡ ಒಂದು. ದಾವಣಗೆರೆ ಸಿಟಿಗೆ ಹತ್ತಿರವಾಗಿರುವ ಕಾರಣ ಜನರು ಶನಿವಾರ, ಭಾನುವಾರ ಹೆಚ್ಚಾಗಿ ಬರುತ್ತಾರೆ. ಆದರೆ ಇಲ್ಲಿ ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಜೊತೆಗೆ ಶೌಚಾಲಯವೂ ಮರೀಚಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಅರ್ಪಿಸಿದ್ದರೂ ಪ್ರಯೋಜನವಾಗಿಲ್ಲ. ದೇವರ ಬೆಳಕೆರೆ ಡ್ಯಾಂ ಸರಿಯಾಗಿ ಅಭಿವೃದ್ಧಿಪಡಿಸಿದರೆ ಅತ್ಯುತ್ತಮ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನ ಇಲ್ಲ. ಇದಕ್ಕೆ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಅನುದಾನ ನೀಡಿ ಮಾದರಿ ಪ್ರವಾಸಿ ತಾಣವನ್ನಾಗಿಸಬೇಕಷ್ಟೇ.