ವಿಜಯಪುರ-ಮಂಗಳೂರು ರೈಲು ಕಾಯಂಗೊಳಿಸಲು ಕೂಗು
ವಿಜಯಪುರ, ಸೆಪ್ಟೆಂಬರ್ 15; ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ರೈಲು ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು. ಈ ರೈಲು ಸೇವೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಪ್ರಯಾಣಿಕರು ಇದನ್ನು ಕಾಯಂಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಿ ಸುಮಾರು 2 ವರ್ಷಗಳು ಕಳೆದಿವೆ. ಆದರೆ ಇನ್ನೂ ಸಹ ರೈಲು ತತ್ಕಾಲ್ ಬೋರ್ಡ್‌ನಲ್ಲಿಯೇ ಸಂಚಾರ ನಡೆಸುತ್ತಿದೆ. ರೈಲ್ವೆ ಇಲಾಖೆ ಈ ರೈಲನ್ನು ಕಾಯಂಗೊಳಿಸಿಲ್ಲ.

ಈ ರೈಲನ್ನು ಕಾಯಂಗೊಳಿಸುವ ಯಾವುದೇ ಪ್ರಸ್ತಾಪ ಇಲಾಖೆ ಮುಂದೆ ಇಲ್ಲ ಎಂದು ಮಾಹಿತಿ ಹಕ್ಕು ಅಡಿ ಕೇಳಿದ ಪ್ರಶ್ನೆಗೆ ರೈಲ್ವೆ ಸಚಿವಾಲಯ ಉತ್ತರ ಕೊಟ್ಟಿದೆ. ತತ್ಕಾಲ್ ಸೇವೆಯಾದರೆ ರೈಲಿನ ದರಗಳು ಹೆಚ್ಚು, ಕಾಯಂಗೊಳಿಸಿ ದರವನ್ನು ಕಡಿಮೆ ಮಾಡಬೇಕು ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ.
ಸೆಪ್ಟೆಂಬರ್ ಅಂತ್ಯದ ತನಕ ವಿಸ್ತರಣೆ; ನೈಋತ್ಯ ರೈಲ್ವೆ ಆಗಸ್ಟ್‌ನಲ್ಲಿ ಹೊರಡಿಸಿದ ಆದೇಶದಂತೆ
ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಮೊದಲು ಪ್ರತಿದಿನ ಆಗಸ್ಟ್ 31ರ ತನಕ ಓಡಿಸಲು ಸೂಚಿಸಲಾಗಿತ್ತು. ಈಗ ಸೆಪ್ಟೆಂಬರ್ 1 ರಿಂದ 30ರ ತನಕ ವಿಸ್ತರಣೆ ಮಾಡಲಾಗಿದೆ.
ಅಲ್ಲದೇ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಪ್ರತಿದಿನ ಸೆಪ್ಟೆಂಬರ್ 1ರ ತನಕ ಓಡಿಸಲು ಈ ಹಿಂದೆ ಸೂಚಿಸಲಾಗಿತ್ತು. ಈಗ ಅದನ್ನು ಸೆಪ್ಟೆಂಬರ್ 2 ರಿಂದ ಅಕ್ಟೋಬರ್ 1ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಬಳಿಕ ಮತ್ತೆ ಸೇವೆ ವಿಸ್ತರಣೆ ಮಾಡಲಾಗುತ್ತದೆ.
ಕೋವಿಡ್ ಪರಿಸ್ಥಿತಿಯಲ್ಲಿ ಈ ರೈಲು ಸಹ ರದ್ದುಗೊಂಡಿತ್ತು. ಬಳಿಕ ಪ್ರಯಾಣಿಕರ ಬೇಡಿಕೆಯಂತೆ ರೈಲು ಸೇವೆ ಪುನಃ ಆರಂಭಿಸಲಾಗಿತ್ತು. ಆದರೆ ಇದನ್ನು ವಿಶೇಷ ರೈಲಾಗಿ ಘೋಷಣೆ ಮಾಡಿಯೇ ಓಡಿಸಲಾಗುತ್ತಿದೆ. ಕಾಯಂಗೊಳಿಸಿ ಎಂಬ ಪ್ರಯಾಣಿಕರ ಕೂಗಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.
ರೈಲು ಸೇವೆ ಕಾಯಂಗೊಳ್ಳದ ಕಾರಣ ವಿಶೇಷ ರೈಲಿನ ಟಿಕೆಟ್ ದರ ಶೇ 25 ರಿಂದ 100ರಷ್ಟು ದುಬಾರಿ. ರೈಲು ಕಾಯಂಗೊಂಡರೆ ಪ್ರಯಾಣ ದರ ಕಡಿಮೆಯಾಗಲಿದೆ. ಆಗ ಇನ್ನೂ ಹೆಚ್ಚಿನ ಜನರು ರೈಲಿನಲ್ಲಿ ಸಂಚಾರ ನಡೆಸಲು ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಇದು ವಿಶೇಷ ರೈಲು ಆಗಿರುವ ಕಾರಣ ಪ್ರಯಾಣಿಕರು ಬುಕ್ ಮಾಡುವಾಗ ತತ್ಕಾಲ್ ನೆಲೆಯಲ್ಲಿ ಸೀಟು ಕಾಯ್ದಿರಿಸಬೇಕು. ತತ್ಕಾಲ್ ಪ್ರಯಾಣದ ಟಿಕೆಟ್ ಕಾಯಂ ರೈಲಿಗಿಂತ ಅಧಿಕ. ನೈಋತ್ಯ ರೈಲ್ವೆ ಎರಡು ವರ್ಷಗಳಿಂದ ತತ್ಕಾಲ್ ಅವಧಿ ಪೂರ್ಣಗೊಳ್ಳುವ ಕೆಲವು ದಿನಗಳ ಮೊದಲು ಮತ್ತೆ ಒಂದು ತಿಂಗಳು ರೈಲು ಸೇವೆ ವಿಸ್ತರಣೆ ಮಾಡುತ್ತದೆ. ಆದರೆ ಕಾಯಂಗೊಳಿಸುತ್ತಿಲ್ಲ.
ಮಂಗಳೂರು-ಹಾಸನ ನಡುವೆ ಸ್ಲೀಪರ್ ಕೋಚ್ ಟಿಕೆಟ್ ದರ ಕಾಯಂ ರೈಲುಗಳಲ್ಲಿ 180 ರೂ. ಆಗಿದೆ. ಆದರೆ ಈ ವಿಶೇಷ ತತ್ಕಾಲ್ ಬೋರ್ಡ್ ರೈಲಿನಲ್ಲಿ ಪ್ರಯಾಣ ದರ 385 ರೂ. ಆಗಿದೆ. ಆದ್ದರಿಂದ ರೈಲು ಕಾಯಂಗೊಳಿಸಿ ಜನರಿಗೆ ಸಹಾಯ ಮಾಡಿ ಎಂದು ಬೇಡಿಕೆ ಇಡಲಾಗಿದೆ.
ವಿಜಯಪುರ-ಮಂಗಳೂರು ರೈಲು ಕರಾವಳಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುತ್ತದೆ. ವಿಜಯಪುರದಿಂದ ಹೊರಡುವ ರೈಲು, ಬಾಗಲಕೋಟೆ, ಗದಗ, ಹಾವೇರಿ, ಬ್ಯಾಡಗಿ, ಹರಿಹರ, ದಾವಣಗೆರೆ, ಹಾಸನ, ಸಕಲೇಶಪುರ, ಕುಕ್ಕೆ ಸುಬ್ರಮಣ್ಯ ಮಾರ್ಗವಾಗಿ ಮಂಗಳೂರಿಗೆ ಸಂಚಾರ ನಡೆಸುತ್ತದೆ. ಆರೋಗ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳ ಭೇಟಿಗಾಗಿ ಹಲವಾರು ಜನರು ಈ ರೈಲಿನಲ್ಲಿ ಸಂಚಾರ ನಡೆಸುತ್ತಾರೆ.












Click it and Unblock the Notifications