ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಕೆಂಡ್ ಮಸ್ತಿಗೆ ಸೂಕ್ತ ಕೊಡಗಿನ ಹೆಬ್ಬಾಗಿಲಲ್ಲಿರುವ ಈ ಪ್ರವಾಸಿ ತಾಣಗಳು!

|
Google Oneindia Kannada News

ವೀಕೆಂಡ್ ಪ್ರವಾಸಕ್ಕೆಂದು ಕೊಡಗಿನತ್ತ ಹೊರಡುವವರಿಗೆ ಇದು ಸಕಾಲ. ಮಳೆ ಕಡಿಮೆಯಾಗಿ ಒಂದಷ್ಟು ಹಿತಕರ ವಾತಾವರಣ ಸೃಷ್ಟಿಯಾಗಿದೆ. ಎಲ್ಲೆಡೆ ಹಸಿರು ಹಚ್ಚಡದಿಂದ ಕೂಡಿರುವ ಸುಂದರ ಪರಿಸರದಲ್ಲಿ ಒಂದಷ್ಟು ಸಮಯ ಕಳೆಯಲು ಸುಸಮಯವಾಗಿದೆ.

ಮೈಸೂರು ಮತ್ತು ಹಾಸನಕ್ಕೆ ಹೊಂದಿಕೊಂಡಂತಿರುವ ಕೊಡಗಿನ ಹೆಬ್ಬಾಗಿಲು ಎಂದೇ ಕರೆಯುವ ಕುಶಾಲನಗರದಲ್ಲಿ ವಾಸ್ತವ್ಯ ಹೂಡಿ ಅಲ್ಲಿಂದ ಸ್ಥಳೀಯ ಪ್ರವಾಸಿ ತಾಣಗಳಿಗೆ ತೆರಳುವ ಆಲೋಚನೆ ಮಾಡಿದ್ದರೆ ಕುಶಾಲನಗರ ಸುತ್ತಮುತ್ತಲಿರುವ ಕೆಲವೊಂದು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಕುಶಾಲನಗರಕ್ಕೆ ಹೊಂದಿಕೊಂಡಂತೆ ಟಿಬೆಟ್ ಕ್ಯಾಂಪ್‌ನ ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ದುಬಾರೆ ಮತ್ತು ಚಿಕ್ಲಿಹೊಳೆ ಜಲಾಶಯ ಮತ್ತು ವೀರಭೂಮಿ ಎಂಬ ಪ್ರವಾಸಿ ತಾಣವೂ ಇದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿವೆ ಅಪರೂಪದ ಪ್ರವಾಸಿ ತಾಣಗಳು, ಇಲ್ಲಿದೆ ಮಾಹಿತಿಚಿಕ್ಕಮಗಳೂರು ಜಿಲ್ಲೆಯಲ್ಲಿವೆ ಅಪರೂಪದ ಪ್ರವಾಸಿ ತಾಣಗಳು, ಇಲ್ಲಿದೆ ಮಾಹಿತಿ

ಇನ್ನು ಪ್ರವಾಸಿ ತಾಣಗಳ ಬಗ್ಗೆ ನೋಡುತ್ತಾ ಹೋದರೆ ನಗರಕ್ಕೆ ಹೊಂದಿಕೊಂಡಂತೆ ಕುಶಾಲನಗರ ಮಡಿಕೇರಿ ರಸ್ತೆ ನಡುವೆ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ರಸ್ತೆಯ ಎಡಭಾಗದಲ್ಲಿಯೇ ಕಾವೇರಿ ನಿಸರ್ಗಧಾಮದವಿದೆ. 1989ರಲ್ಲಿ ನಿರ್ಮಿಸಲ್ಪಟ್ಟ ಕಾವೇರಿ ನಿಸರ್ಗಧಾಮ ಅಲ್ಲಿಂದ ಇಲ್ಲಿಯವರೆಗೆ ದೇಶ, ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆದಿದೆ. ಸೆಳೆಯುತ್ತಲೇ ಇದೆ.

 ನಿಸರ್ಗಧಾಮಲ್ಲಿ ಆನೆ ಸವಾರಿಗೂ ಅವಕಾಶ

ನಿಸರ್ಗಧಾಮಲ್ಲಿ ಆನೆ ಸವಾರಿಗೂ ಅವಕಾಶ

ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತೂಗು ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ ಮುನ್ನಡೆದರೆ ನಿಸರ್ಗಧಾಮವನ್ನು ತಲುಪಬಹುದಾಗಿದೆ. ಇಲ್ಲಿ ಮಾರ್ಗಸೂಚಿ ಫಲಕಗಳಿದ್ದು, ನಿಸರ್ಗಧಾಮದ ಬಗ್ಗೆ ಮಾಹಿತಿ ನೀಡುತ್ತದೆ. ಅರಣ್ಯ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಉಪಹಾರ ಗೃಹವನ್ನು ತೆರೆದಿದ್ದು ಇದರ ಸಮೀಪವೇ ಮಕ್ಕಳ ವಿಹಾರಧಾಮವಿದೆ.

ಇಲ್ಲಿ ನಿಗದಿತ ಹಣವನ್ನು ನೀಡಿ ಆನೆಯ ಮೇಲೆ ಕುಳಿತು ಸವಾರಿಯನ್ನು ಮಾಡಬಹುದು. ಆನೆ ಸವಾರಿ ಪಕ್ಕದಲ್ಲಿಯೇ ಜಿಂಕೆವನವಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾಗಿ ತಂತಿ ಬೇಲಿ ಹಾಕಿ ನಿರ್ಮಿಸಲಾಗಿರುವ ಈ ವನದಲ್ಲಿ ಹಲವಾರು ಜಿಂಕೆ, ಕಡವೆಗಳಿವೆ. ಕಾಲು ದಾರಿಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆದರೆ ಮರದಿಂದ ನಿರ್ಮಿಸಲಾಗಿರುವ ಕುಟೀರಗಳು ಮನಸ್ಸೆಳೆಯುತ್ತವೆ. ಈ ಕುಟೀರಗಳಿಗೆ ಹತ್ತಲು ಏಣಿಗಳನ್ನು ನಿರ್ಮಿಸಿದ್ದು, ಇದರಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ನಿಸರ್ಗದ ಚೆಲುವನ್ನು ಸವಿಯುತ್ತಾ ಅಲ್ಲಿಯೇ ತಂಗುವುದಾದರೆ ಅದಕ್ಕೂ ವ್ಯವಸ್ಥೆಯಿದೆ.

ಇಟ್ಟಿಗೆ ಗೋಡೆ, ತೇಗದ ಮರ, ಹುಲ್ಲಿನ ಛಾವಣಿಯಿಂದ ನಿರ್ಮಿಸಲಾದಂತಹ ಐದು ಕಾಟೇಜ್‌ಗಳಿವೆ. ಕಾವೇರಿ ನದಿ ನಿರ್ಮಿಸಿದ ದ್ವೀಪ ಇದಾಗಿದ್ದು, ಸುಮಾರು 65 ಎಕರೆ ಪ್ರದೇಶವನ್ನು ಹೊಂದಿದೆ. ಆದರೆ ಕೇವಲ 15 ಎಕರೆ ಪ್ರದೇಶದಲ್ಲಿ ಮಾತ್ರ ವಿವಿಧ ಸವಲತ್ತುಗಳನ್ನು ಕಲ್ಪಿಸಿ ನಿಸರ್ಗಧಾಮವನ್ನು ನಿರ್ಮಿಸಲಾಗಿದೆ.

 ಪ್ರವಾಸಿಗರ ಸೆಳೆಯುವ ದುಬಾರೆಯ ರಿವರ್ ರಾಫ್ಟಿಂಗ್

ಪ್ರವಾಸಿಗರ ಸೆಳೆಯುವ ದುಬಾರೆಯ ರಿವರ್ ರಾಫ್ಟಿಂಗ್

ಇದಾದ ಬಳಿಕ ಪ್ರವಾಸಿಗರು ದುಬಾರೆ ಪ್ರವಾಸಿ ತಾಣಕ್ಕೆ ಭೇಟಿ ನೀಡಬಹುದಾಗಿದೆ. ದುಬಾರೆ ಕೂಡ ಕಾವೇರಿ ನದಿ ಸೃಷ್ಟಿಸಿದ ದ್ವೀಪವಾಗಿದೆ. ಕುಶಾಲನಗರದಿಂದ ಸುಮಾರು 18 ಕಿ.ಮೀ. ದೂರದಲ್ಲಿದೆ. ಸಿದ್ದಾಪುರ ರಸ್ತೆಯಲ್ಲಿ ಸಾಗಿದಾಗ ಸಿಗುವ ನಂಜರಾಯಪಟ್ಟಣದಿಂದ ಎಡಕ್ಕೆ ತಿರುಗಿದರೆ ಅಲ್ಲಿಂದ ಸುಮಾರು 1ಕಿ.ಮೀ. ದೂರದಲ್ಲಿ ದುಬಾರೆ ಸಿಗುತ್ತದೆ.

ದ್ವೀಪ ಪ್ರದೇಶವಾಗಿರುವುದರಿಂದ ಆನೆಶಿಬಿರಕ್ಕೆ ದೋಣಿಯಲ್ಲಿ ತೆರಳಬೇಕಾಗುತ್ತದೆ. ಕಾವೇರಿ ನದಿಯಲ್ಲಿ ರಾಫ್ಟಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು ದೋಣಿಯಲ್ಲಿ ಆನೆ ಶಿಬಿರಕ್ಕೆ ತೆರಳಿದರೆ ಅಲ್ಲಿ ಆನೆಗಳನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ಆನೆ ಸಫಾರಿ ಮಾಡಿ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಮೈಮರೆತು ನೀರಾಟವಾಡಿ ತಮ್ಮ ಊರುಗಳಿಗೆ ಹಿಂತಿರುಗಬಹುದು. ಸುಮಾರು 12,757 ಎಕರೆ ವಿಸ್ತೀರ್ಣ ಹೊಂದಿರುವ ದುಬಾರೆ ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ಗಿರಿಜನರು ವಾಸಿಸುತ್ತಾ ಬಂದಿದ್ದಾರೆ. ಇಲ್ಲಿ ಸೆರೆಹಿಡಿದ ಪುಂಡಾನೆಗಳನ್ನು ಪಳಗಿಸಲಾಗುತ್ತದೆ.

 ಮನಮೋಹಕ ಚಿಕ್ಲಿಹೊಳೆ ಜಲಾಶಯ

ಮನಮೋಹಕ ಚಿಕ್ಲಿಹೊಳೆ ಜಲಾಶಯ

ದುಬಾರೆಯಿಂದ ಸಿದ್ದಾಪುರ ರಸ್ತೆಯಲ್ಲಿ ಸಾಗಿ ಅಲ್ಲಿಂದ ಬಲಕ್ಕೆ ಸುಂಟಿಕೊಪ್ಪದ ಕಡೆಗಿನ ರಸ್ತೆಯಲ್ಲಿ ಸಾಗಿದರೆ ಚಿಕ್ಲಿಹೊಳೆ ಜಲಾಶಯವನ್ನು ತಲುಪಬಹುದು. ಈ ಜಲಾಶಯವನ್ನು ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18 ಗ್ರಾಮಗಳ 862 ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುವ ಉದ್ದೇಶದಿಂದ ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982ರಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಂದೆಡೆ ಕಾಫಿ ತೋಟ ಮತ್ತೊಂದೆಡೆ ಅರಣ್ಯ ಇದರ ನಡುವಿನ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡ ಜಲಾಶಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮಳೆಗಾಲದಲ್ಲಿ ಜಲಾಶಯ ತುಂಬಿ ವೃತ್ತಾಕಾರದಲ್ಲಿ ನೀರು ಹರಿದು ಹೋಗುವ ದೃಶ್ಯ ಮನಮೋಹಕವಾಗಿರುತ್ತದೆ.

 ಹಾರಂಗಿ ಜಲಾಶಯ

ಹಾರಂಗಿ ಜಲಾಶಯ

ಕುಶಾಲನಗರದಿಂದ ಸೋಮವಾರಪೇಟೆ ಕಡೆಗಿನ ರಸ್ತೆಯಲ್ಲಿ ತೆರಳಿದರೆ ಸುಮಾರು 8ಕಿ.ಮೀ. ದೂರದಲ್ಲಿ ಹಾರಂಗಿ ಜಲಾಶಯ ಸಿಗುತ್ತದೆ. 47 ಮೀಟರ್ ಎತ್ತರವಿರುವ ಅಣೆಕಟ್ಟು ಸುಮಾರು 846 ಮೀ. ಉದ್ದವನ್ನು ಹೊಂದಿದೆ. ಮಳೆಗಾಲದಲ್ಲಿ ಜಲಾಶಯ ತುಂಬಿದಾಗ ಕ್ರಸ್ಟ್‌ಗೇಟ್‌ಗಳ ಮೂಲಕ ಭೋರ್ಗರೆಯುವ ಸುಂದರ ದೃಶ್ಯ ಮನಮೋಹಕವಾಗಿರುತ್ತದೆ.

 ಗೋಲ್ಡನ್ ಟೆಂಪಲ್

ಗೋಲ್ಡನ್ ಟೆಂಪಲ್

ಮೈಸೂರು ಜಿಲ್ಲೆಗೆ ಸೇರಿರುವ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಪ್ರಸಿದ್ಧ ತಾಣವಾಗಿದೆ. ಇದು ಕೂಡ ಕುಶಾಲನಗರಕ್ಕೆ ಹೊಂದಿಕೊಂಡಂತೆ ಇದೆ. ಇಲ್ಲಿ ಸ್ವರ್ಣ ದೇಗುಲದೊಂದಿಗೆ ಸುಮಾರು ಹದಿನಾರಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ಧವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, ಎಂಟು ಸ್ಥೂಪಗಳು ತನ್ನದೇ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.

ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣಗೊಂಡಿರುವುದು ಸ್ವರ್ಣ ದೇಗುಲದ ವಿಶೇಷತೆಯಾಗಿದೆ. ಪರಮ ಪೂಜ್ಯ ಪನೋರ್ ರಿನ್ ಪೋಚೆಯವರು ಇದರ ನಿರ್ಮಾಣವನ್ನು 1995ರಲ್ಲಿ ಆರಂಭಿಸಿ 1999ರಲ್ಲಿ ಪೂರ್ಣಗೊಳಿಸಿದರು. ದೇವಾಲಯ ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರವಾಗಿದ್ದು, ಕಲೆಗೆ ಚಿನ್ನದ ಲೇಪನ ಮೆರುಗು ತಂದಿದೆ. ಇನ್ನು ಇಲ್ಲಿನ ಟಿಬೆಟ್ ಕ್ಯಾಂಪ್ ಟಿಬೆಟ್ ದೇಶವನ್ನು ನೆನಪಿಸುವಂತಿದೆ.

 ಶ್ರೀರಾಮಲಿಂಗೇಶ್ವರ ದೇಗುಲ

ಶ್ರೀರಾಮಲಿಂಗೇಶ್ವರ ದೇಗುಲ

ಕುಶಾಲನಗರದಿಂದ ಹಾಸನದ ಕಡೆಗೆ ತೆರಳುವ ರಸ್ತೆಯಲ್ಲಿ ಕೂಡಿಗೆ ಬಳಿ ಇರುವ ಕಣಿವೆ ಶ್ರೀರಾಮಲಿಂಗೇಶ್ವರ ದೇಗುಲದಿಂದ ಪ್ರಸಿದ್ಧಿ ಹೊಂದಿದೆ. ಕಾವೇರಿ ನದಿ ತಟದಲ್ಲಿರುವ ಈ ದೇಗುಲ ಸುಂದರವಾಗಿದೆ. ಸುಂದರ ಪರಿಸರ ಹೊಂದಿರುವ ಈ ಪ್ರದೇಶ ನಿಸರ್ಗಪ್ರೇಮಿಗಳ ಮನಸೆಳೆಯುತ್ತದೆ. ಪ್ರಶಾಂತ ವಾತಾವರಣದೊಂದಿಗೆ ಹಚ್ಚಹಸಿರಿನ ಬಯಲು ಪ್ರದೇಶ ಆಕರ್ಷಿಸುತ್ತದೆ. ಹಾರಂಗಿಯಿಂದ ಹಾದು ಹೋಗಿರುವ ನಾಲೆ ಎದ್ದು ಕಾಣಿಸುತ್ತದೆ.

 ಕೂಡ್ಲೂರು ವೀರಭೂಮಿ

ಕೂಡ್ಲೂರು ವೀರಭೂಮಿ

ಕುಶಾಲನಗರ ಬಳಿಯ ಕೂಡ್ಲೂರು ಎಂಬಲ್ಲಿರುವ ವೀರಭೂಮಿ ಕೂಡ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತದೆ. ಇದನ್ನು ನಿರ್ಮಿಸಿದ ಕೀರ್ತಿ ಆರ್.ಕೆ.ಸುಳ್ಯ( ರಾಮಕೃಷ್ಣ ಭಟ್) ಅವರಿಗೆ ಸಲ್ಲುತ್ತದೆ. ಅವರು ಪುತ್ತೂರಿನ ಸಮೀಪ ಪರ್ಪುಂಜ ಎಂಬಲ್ಲಿ ಮೊದಲಿಗೆ ವಿಹಾರಧಾಮ ನಿರ್ಮಿಸಿದ್ದರು. ಅದರ ಪ್ರೇರಣೆಯಲ್ಲಿಯೇ ಕೂಡ್ಲೂರಲ್ಲಿ ವೀರಭೂಮಿ ವಿಹಾರಧಾಮವನ್ನು ಸ್ಥಾಪಿಸಿದ್ದಾರೆ. ಪ್ರವಾಸಿಗರಿಗೆ ಮತ್ತು ಸಂಸ್ಕೃತಿ ಪರಂಪರೆಗೆ ಇಲ್ಲಿ ಒತ್ತು ನೀಡಲಾಗಿದೆ.

ಸಿದ್ದಾಪುರ; ಹೆಗ್ಗರಣಿಯಲ್ಲಿರುವ ಉಂಚಳ್ಳಿ ಜಲಪಾತದ ಸೊಬಗು; ತಲುಪುವ ಮಾರ್ಗಸಿದ್ದಾಪುರ; ಹೆಗ್ಗರಣಿಯಲ್ಲಿರುವ ಉಂಚಳ್ಳಿ ಜಲಪಾತದ ಸೊಬಗು; ತಲುಪುವ ಮಾರ್ಗ

English summary
Complete information about Kodagu district famouse tourist spots here. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X