377 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಈ ರೈಲು ನಿಲ್ದಾಣ ವಿಶ್ವದರ್ಜೆಗೆ- ಮಾಹಿತಿ, ವಿವರ
ಬೆಂಗಳೂರು, ನವೆಂಬರ್, 27: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು 377 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದರ್ಜೆಯ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ (ನವೆಂಬರ್ 27) ಹೇಳಿದ್ದಾರೆ.
ಕೆಲವು ಸಿವಿಲ್ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲು ನಿಲ್ದಾಣವು ಮೇಲ್ಛಾವಣಿ ಪ್ಲಾಜಾವನ್ನು ಹೊಂದಿದ್ದು, ಇದು ಮಕ್ಕಳ ಆಟದ ಪ್ರದೇಶ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಸ್ಥಳಾವಕಾಶವನ್ನು ಹೊಂದಿರಲಿದೆ. ಇದು ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.

377 ಕೋಟಿ ರೂಪಾಯಿ ಹೂಡಿಕೆ
ಇದು ಬೆಂಗಳೂರು (ನಗರ ನಿಲ್ದಾಣ), ಹಾಸನ, ತುಮಕೂರು, ಮತ್ತು ಹುಬ್ಬಳ್ಳಿ-ಧಾರವಾಡ ಮತ್ತು ದೆಹಲಿಯಿಂದ ಬರುವ ರೈಲು ಸಂಚಾರವನ್ನು ಒದಗಿಸುತ್ತದೆ. ಯಶವಂತಪುರದಲ್ಲಿ ಪ್ರಮುಖ ಪುನರಾಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಮಾಡಲು 377 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಿಲ್ದಾಣದ ಎರಡೂ ಬದಿಗಳು ಸಂಪರ್ಕಗೊಳ್ಳುತ್ತವೆ. ಎರಡೂ ಕಡೆಗಳಿಗೆ ಪ್ರವೇಶವಿರುತ್ತದೆ ಮತ್ತು ಮೇಲ್ಛಾವಣಿಯ ಪ್ಲಾಜಾ ಇರುತ್ತದೆ. ತುಂಬಾ ವಿಶಾಲವಾದ, ದೊಡ್ಡ ಛಾವಣಿಯ ಪ್ಲಾಜಾದಲ್ಲಿ ಜನರು ತುಂಬಾ ಆರಾಮದಾಯಕವಾಗಿ ಕಾಯಬಹುದಾಗಿದ್ದು, ಅಲ್ಲಿ ಮಕ್ಕಳು ಆಟವಾಡಬಹುದು, ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶಿಸಬಹುದು. ಮತ್ತು ಮಾರಾಟ ಮಾಡಬಹುದು. ಆದ್ದರಿಂದ, ನಾವು ಪ್ರಪಂಚದಾದ್ಯಂತ ನೋಡಿದ ರೀತಿಯಲ್ಲಿ, ಯಶವಂತಪುರದಲ್ಲೂ ಅಂತಹ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿ
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಈ ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಉಪನಗರ, ಮುಖ್ಯ ರೈಲು ಮತ್ತು ಮೆಟ್ರೋ ಇಲ್ಲಿಗೆ ಸೇರುವ ಕಾರಣ ಮುಂಬರುವ 20 ರಿಂದ 30 ವರ್ಷಗಳಲ್ಲಿ ಈ ನಿಲ್ದಾಣವು ಹೆಚ್ಚಿನ ದಟ್ಟಣೆಯನ್ನು ಪೂರೈಸುತ್ತದೆ ಎಂದು ತಿಳಿಸಿದರು.
ಮಾಸ್ಟರ್ ಪ್ಲಾನ್ ಮಾಡಲು ಪ್ರಯತ್ನಿಸಬೇಕು
ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು, ನಾವು ಭೂಮಿಯನ್ನು ಖರೀದಿಸಲು ಪ್ರಯತ್ನಿಸುತ್ತೇವೆ. ಎಲ್ಲಿಯಾದರೂ ಒಂದು ಮೀಟರ್ ಭೂಮಿ ಲಭ್ಯವಿದ್ದರೂ, ಆ ಭೂಮಿಯನ್ನು ಮುಕ್ತವಾಗಿ ಇಡಬೇಕು ಎಂದು ವೈಷ್ಣವ್ ತಿಳಿಸಿದರು. ಸಾಧ್ಯವಾದಾಗಲ್ಲೆಲ್ಲ, ರೈಲ್ವೆ ವಿಸ್ತರಣೆಯನ್ನು 'ಇಂದೇ' ಮಾಡಬಹುದಾದ ರೀತಿಯಲ್ಲಿ ಮಾಸ್ಟರ್ ಪ್ಲಾನ್ ಮಾಡಲು ಪ್ರಯತ್ನಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications