Bengaluru-chennai expressway: ಉದ್ಘಾಟನೆ ದಿನಾಂಕ ವಿಳಂಬ, ಕಾರಣ ಏನು?-ಮಾಹಿತಿ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 10: ಇದೇ ವರ್ಷದ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಮಾಡಲಾಗಿತ್ತು. ಹಾಗೆಯೇ ಬಹುನಿರೀಕ್ಷಿತ ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇ 2024ರ ಅಕ್ಟೋಬರ್‌ನಲ್ಲಿ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಸಿದ್ಧಗೊಳ್ಳಲಿಗೆ ಎನ್ನುವ ಮಾಹಿತಿ ಇತ್ತು. ಆದರೆ ಇದೀಗ ಉದ್ಘಾಟನೆ ದಿನಾಂಕ ವಿಳಂಬವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯಾರಂಭ ಮಾಡಿದಾಗ ಅತ್ಯಂತ ವೇಗವನ್ನು ಪಡೆದಿತ್ತು. ಅಲ್ಲದೆ ಅಕ್ಟೋಬರ್ 2024ಕ್ಕೆ ಇದು ಲೋಕಾರ್ಪಣಗೆ ಸಿದ್ಧವಾಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಇದೀಗ ಈ ಉದ್ಘಾಟನೆ ದಿನಾಂಕ ಇನ್ನೂ ವಿಳಂಬ ಆಗುತ್ತಿದೆ ಎಂದು ತಿಳಿದುಬಂದಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಹಾಗೂ ದಿನಾಂಕ ಯಾವಾಗ ನೀಡಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮುಖ್ಯವಾಗಿ ಆಂಧ್ರಪ್ರದೇಶದ ಒಂದು ವಿಭಾಗದಲ್ಲಿನ ನಿಧಾನಗತಿಯೇ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನ ಉದ್ಘಾಟನೆ ದಿನಾಂಕ ಮುಂದೆ ಹೋಗಿದ್ದು, ಇದು 2025 ಜೂನ್ ತಿಂಗಳೊಳಗೆ ಪೂರ್ಣಗೊಳ್ಳಲಿಗೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ. ಇದೀಗ ನಿರ್ಮಾಣ ಹಂತದಲ್ಲಿರುವ ಈ ಎಕ್ಸ್‌ಪ್ರೆಸ್ ವೇ ನಡುವಿನ ಪ್ರಯಾಣದ ಸಮಯವು 6-7 ಏಳು ಗಂಟೆಗಳಿದೆ. ನೂತನ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕೇವಲ ಎರಡು ಗಂಟೆಗಳಿಗೆ ಈ ಪ್ರಯಾಣ ಸಮಯವನ್ನು ಕಡಿತಗೊಳಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಹೆದ್ದಾರಿಯು 90 ಮೀಟರ್ ಅಗಲ ಇದ್ದು, 120 ಕಿ.ಮೀ ವೇಗವನ್ನು ಅನುಮತಿಸುತ್ತದೆ. ಕೋಲಾರ, ಚಿತ್ತೂರು, ವೆಲ್ಲೂರು, ಕಾಂಚೀಪುರಂ ಮತ್ತು ಚೆನ್ನೈನಂತಹ ಪ್ರದೇಶಗಳಲ್ಲಿನ 20.9 ಮಿಲಿಯನ್ (2 ಕೋಟಿ) ನಿವಾಸಿಗಳನ್ನು ಪರಸ್ಪರ ಸಂಪರ್ಕಿಸುತ್ತದೆ. ಇಂತಹ ಮಹತ್ವದ ಯೋಜನೆಯು ಈಗ ವಿಳಂಬವನ್ನು ಎದುರಿಸುತ್ತಿದೆ. ಈ ಯೋಜನೆಯು ಜೂನ್ 2025ರೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಶೇಕಡಾ 51.5ರಷ್ಟು ಪ್ರಗತಿಯನ್ನು ಗುರುತಿಸಲಾಗಿದೆ. 262 - ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಚೆನ್ನೈ ನಡುವಿನ ದೂರವನ್ನು ಶೇಕಡಾ 13ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಲೋಕಸಭೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರಸ್ತುತಪಡಿಸಿದ ವಿಸ್ತೃತ ಯೋಜನೆಯ ನವೀಕರಣದಲ್ಲಿ, ವಿವರವಾದ ಪ್ರಗತಿಯನ್ನು ಎತ್ತಿ ತೋರಿಸಲಾಗಿದೆ. 1,496.30 ಕೋಟಿ ರೂಪಾಯಿಗಳ ಯೋಜನಾ ವೆಚ್ಚದೊಂದಿಗೆ ಮಾಲೂರಿನಿಂದ ಬಂಗಾರಪೇಟೆ (27.1 ಕಿಮೀ) ವರೆಗಿನ ವಿಸ್ತರಣೆಯು ಸೆಪ್ಟೆಂಬರ್ 20, 2021ರಂದು ಪ್ರಾರಂಭ ಆಯಿತು.

ಈಗ ಶೇಕಡಾ 78.68 ರಷ್ಟು ಪೂರ್ಣಗೊಂಡಿದ್ದು, ಮಾರ್ಚ್ 31, 2024ರೊಳಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ. ಇನ್ನು ಹೊಸಕೋಟೆಯಿಂದ ಮಾಲೂರಿಗೆ ಸಂಪರ್ಕ ಕಲ್ಪಿಸುವ (26.4 ಕಿಮೀ) 2,761.12 ಕೋಟಿ ರೂ. ವೆಚ್ಚದ ಕಾಮಗಾರಿಯು ಸೆಪ್ಟೆಂಬರ್ 15, 2021 ರಂದು ಪ್ರಾರಂಭ ಆಯಿತು. ಪ್ರಸ್ತುತ ಶೇಕಡಾ 77.12ರಷ್ಟು ಕಾರ್ಯ ಪೂರ್ಣಗೊಂಡಿದೆ. ಮಾರ್ಚ್ 31, 2024ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಯೋಜನೆಯ 4ನೇ ಹಂತದ ಬೇತಮಂಗಲದಿಂದ ಆಂಧ್ರಪ್ರದೇಶದ ಬೈರೆಡ್ಡಿಪಲ್ಲಿಯವರೆಗಿನ (25 ಕಿಲೋ ಮೀಟರ್ ಯೋಜನೆಯ ವೆಚ್ಚ 1,306.96 ಕೋಟಿ ರೂಪಾಯಿ) ಕಾಮಗಾರಿ ಪ್ರಸ್ತುತ ಶೇಕಡಾ 39.83ರಷ್ಟು ಪೂರ್ಣ ಆಗಿದೆ. ಅಕ್ಟೋಬರ್ 9, 2024ರ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಇವೆಲ್ಲವೂ ಬಹುತೇಕ ಅಂದುಕೊಂಡ ಸಮಯದ ಆಸುಪಾಸಿನಲ್ಲಿವೆ. ಅತ್ಯಂತ ಮಹತ್ವದ ಹಿನ್ನಡೆಯು 5ನೇ ಹಂತದಲ್ಲಿದ್ದು, ಬೈರೆಡ್ಡಿಪಲ್ಲಿ ಮತ್ತು ಬಂಗಾರುಪಾಳ್ಯಂ ನಡುವಿನ 31 ಕಿಲೋ ಮೀಟರ್ (ಯೋಜನೆಯ ವೆಚ್ಚ ರೂ 2,171.37 ಕೋಟಿ) ಕೇವಲ ಶೇಕಡಾ 10.05ರಷ್ಟು ಪ್ರಗತಿಯನ್ನಷ್ಟೇ ಸಾಧಿಸಿದೆ.
ಇದು ಜೂನ್ 7, 2025ರ ವೇಳೆಗೆ ಪೂರ್ಣಗೊಳ್ಳಲಿದೆ. ಇದು ಒಟ್ಟಾರೆ ಪ್ರಾಜೆಕ್ಟ್ ಟೈಮ್‌ಲೈನ್‌ನಲ್ಲಿ ವಿಳಂಬವನ್ನು ತೋರಿಸುತ್ತದೆ. ಅಲ್ಲದೆ, ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ವೇ ವಿಶಾಲವಾದ ಚೆನ್ನೈ - ದೆಹಲಿ ಎಕ್ಸ್‌ಪ್ರೆಸ್ ವೇ ನೆಟ್ವರ್ಕ್‌ನ ಅವಿಭಾಜ್ಯ ವಿಭಾಗವಾಗಿದೆ, ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ ಯೋಜನೆಯ ಮೂಲಕ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್‌ವೇ ಮೂಲಕ ಬೆಂಗಳೂರು-ಮುಂಬೈ ಮಾರ್ಗವನ್ನು ಸಂಪರ್ಕ ಕಲ್ಪಿಸುತ್ತದೆ.
ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ 45,000 ಕೋಟಿ ರೂಪಾಗಳ ಅಂದಾಜು ವೆಚ್ಚ ಆಗಲಿದೆ. ಈ ಉಪಕ್ರಮವು ಬೆಂಗಳೂರು ಮತ್ತು ಪುಣೆ ನಡುವಿನ ಅಂತರವನ್ನು ಶೇಕಡಾ 7ರಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಜೊತೆಗೆ ಗಂಟೆಗೆ 100 ಕಿ.ಮೀ. ಸರಾಸರಿ ವೇಗವನ್ನು ಗುರಿಯಾಗಿ ಇಟ್ಟುಕೊಂಡು ವಿವರವಾದ ಯೋಜನಾ ವರದಿಯನ್ನು ರಚಿಸುವ ಪ್ರಯತ್ನಗಳು ನಡೆಯುತ್ತಿವೆ.












Click it and Unblock the Notifications