ಹಂಪಿ ಪ್ರವಾಸಿಗರಿಗಾಗಿ ವಿಶ್ರಾಂತಿ ಗೃಹ & ಕೆಫೆ ಆರಂಭಿಸಿದ ಭಾರತೀಯ ಪುರಾತತ್ವ ಇಲಾಖೆ: ಇಲ್ಲಿದೆ ವಿವರ
ಬಳ್ಳಾರಿ, ಜನವರಿ 01: ಹಂಪಿಗೆ ಆಗಮಿಸುವ ಪ್ರವಾಸಿಗರಿಗಾಗಿ ಭಾರತೀಯ ಪುರಾತತ್ವ ಇಲಾಖೆ (Archaeological Survey of India) ಹಂಪಿ ವೃತ್ತದಲ್ಲಿ ಪ್ರಥಮ ಬಾರಿಗೆ ವಿಶ್ರಾಂತಿ ಕೊಠಡಿ ಹಾಗೂ ಕೆಫೆಟೇರಿಯಾ ಸೇವೆ ಆರಂಭಿಸಿದೆ. ಈ ಮೂಲಕ ಪ್ರವಾಸಿಗರಿಗೆ ರೆಸ್ಟೋರೆಂಟ್ ಮತ್ತು ವಸತಿ ಸೌಲಭ್ಯದಂತಹ ಸೇವೆಗಳನ್ನು ಒದಗಿಸಲು ಎಎಸ್‌ಐ ಮುಂದಾಗಿದೆ.
ಹಂಪಿಯ ವಿಜಯ ವಿಠ್ಠಲ ದೇವಸ್ಥಾನ ಹಾಗೂ ಉಗ್ರ ನರಸಿಂಹ ದೇವಸ್ಥಾನದ ಬಳಿಯಲ್ಲಿ ಕೆಫೆಟೇರಿಯಾಗಳನ್ನು ಆರಂಭಿಸಲಾಗಿದೆ. ಸದ್ಯ ಚಹಾ, ಕಾಫಿ, ಹಾಗೂ ಲಘು ಉಪಹಾರಗಳ ಸೇವೆಗಳನ್ನು ನೀಡಲಾಗುತ್ತಿದ್ದು, ಎಎಸ್‌ಐ ತಂಡವು ಪ್ರವಾಸಿಗರಿಗೆ ವಸತಿ ಸೌಲಭ್ಯಕ್ಕಾಗಿ ಶೀಘ್ರದಲ್ಲೇ ಕೆಲವು ಕೊಠಡಿಗಳನ್ನು ಸಹ ಒದಗಿಸಲಿದೆ.

ಈ ಬಗ್ಗೆ ಎಎಸ್‌ಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಪ್ರವಾಸಿಗರಿಗೆ ಅನುಕೂಲವಾಗುವಂತೆ ಹಂಪಿಯಲ್ಲಿ ಎರಡು ಕೆಫೆಟೇರಿಯಾಗಳನ್ನು ತೆರೆಯಲಾಗಿದ್ದು, ಮುಂದೆ ಇನ್ನೂ ಹೆಚ್ಚಿನ ಅಂಗಡಿಗಳನ್ನು ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಒಂದು ಕಪ್ ಚಹಾ ಅಥವಾ ಕಾಫಿಯ ಬೆಲೆ 10 ರಿಂದ 20 ರೂಪಾಯಿ ಇರಲಿದ್ದು, ಸಮೋಸಾ, ಪಫ್ಸ್, ಕೂಲ್ ಡ್ರಿಂಕ್ಸ್ ಮತ್ತು ನೀರಿನ ಬಾಟಲಿಗಳು ಲಭ್ಯವಿರಲಿದೆ. ವಸತಿ ಸೌಲಭ್ಯದ ದರವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿಸಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ ವತಿಯಿಂದ ನೀಡುವ ಈ ವಸತಿ ಸೌಲಭ್ಯದ ಕೆಲಸಗಳು ಅಂತಿಮವಾದ ನಂತರ, ಪ್ರವಾಸಿಗರಿಗೆ ಉತ್ತಮ ಗುಟಮಟ್ಟದ ಸೇವೆ ಸಿಗಲಿದೆ. ಸ್ವಚ್ಛವಾದ ಕೊಠಡಿಗಳು, ಶೌಚಾಲಯಗಳು, ನೀರಿನ ವ್ಯವಸ್ಥೆ ಸೇರಿದಂತೆ ಇತರ ಸೇವೆಗಳು ಇರಲಿದೆ. ಇನ್ನು ಈ ಕಟ್ಟಡಗಳನ್ನು ಹಂಪಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಪ್ರವಾಸಿಗರಿಗೆ ಸ್ವಚ್ಛ ಮತ್ತು ಆರೋಗ್ಯಕರ ಆಹಾರ ಮತ್ತು ಕೊಠಡಿ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಹೊಂದಿದೆ.
ಪ್ರವಾಸಿಗರಿಗೆ ಈ ಸೌಲಭ್ಯಗಳನ್ನು ಒದಗಿಸುವ ಮುನ್ನ ಕೆಲವು ಶಿಷ್ಟಾಚಾರಗಳು ಇಲಾಖೆಯಿಂದ ಬಾಕಿಯಿದೆ. ಇನ್ನು ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ರಜೆ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು ಹಂಪಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಭಾರತೀಯ ಪುರಾತತ್ವ ಇಲಾಖೆಯ ಕೆಫೆಟೇರಿಯಾವನ್ನು ಪ್ರಯೋಗಾತ್ಮಕವಾಗಿ ಆರಂಭಿಸಲಾಗಿದ್ದು, ಪ್ರವಾಸಿಗರಿಗೆ, ತಿಂಡಿ ಹಾಗೂ ಪಾನೀಯಗಳ ವ್ಯವಸ್ಥೆ ನೀಡಲಾಗಿತ್ತು.

ಈ ಬಗ್ಗೆ ಪ್ರವಾಸಿಗರೊಬ್ಬರು ಮಾತನಾಡಿದ್ದು, ಭಾರತೀಯ ಪುರಾತತ್ವ ಇಲಾಖೆಯ ಈ ಹೊಸ ಸೇವೆಯು ಸ್ವಾಗತಾರ್ಹ. ಇದು ಪ್ರವಾಸಿಗರು ಅದರಲ್ಲೂ ವಿದೇಶಿಗರಿಗೆ ಹೆಚ್ಚಿನ ಸಹಾಯವಾಗಲಿದೆ. ಪ್ರವಾಸಿಗರು ಇದರ ಸದುಪಯೋಗ ಪಡೆಯುತ್ತಾರೆ ಎಂದು ಭಾವಿಸುತ್ತೇವೆ. ಸ್ಥಳೀಯರಿಗೂ ಕೂಡ ಇದರಿಂದ ಪ್ರಯೋಜನವಾಗಲಿದೆ ಎಂದರು.












Click it and Unblock the Notifications