• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಡಿಯದೇ ಕಾಡುವ ತಡಿಯಂಡಮೋಲ್ (ಭಾಗ 3)

By Super
|

Fresh pugmark of Tiger
(ಮುಂದುವರಿದಿದೆ...)

ಹಿಂದಿನ ದಿನ ವಿಪರೀತ ಮಳೆಯಾಗಿದ್ದರಿಂದ ರಾಜಾ ಹಿಲ್‌ನ ಏರು ವಿಪರೀತ ಜಾರುತ್ತಿತ್ತು. ಸಣ್ಣ ಕಲ್ಲು ಸಿಕ್ಕರೂ ಸಾಕು ಅದರ ಮೇಲೆ ನಿಂತು ಕಾಲು ಜಾಡಿಸುತ್ತ ಜಿಗಣೆಗಳನ್ನು ಬೆರಳಿನ ತುದಿಯಿಂದ ಓಡಿಸುವುದೇ ಕೆಲಸವಾಯಿತು. ಶೂಸನ್ನು ದಾಟಿಕೊಂಡು ಕಾಲನ್ನೇರಿ ಚಡ್ಡಿಯೊಳಗೆ ಹೋಗಿಬಿಟ್ಟರೆ ಎಂಬ ದಿಗಿಲೂ ಆಗಾಗ ಕಾಡುತ್ತಿತ್ತು. ಮಳೆಗಾಲದಲ್ಲಿ ಹೋದರೆ ಜಿಗಟು ಜಿಗಣೆಗಳ ಕಾಟ ತಪ್ಪಿದ್ದಲ್ಲ. ರಕ್ತ ಹೀರಿದರೆ ಹೀರ್ಕೊಳ್ಳಿ ಚಾರಣ ಮಾಡುವುದಷ್ಟೇ ನನ್ನ ಕೆಲಸ ಅಂದ್ಕೊಂಡ್ರೆ ಸಿಗುವ ಆನಂದವೂ ಅಷ್ಟಿಷ್ಟಲ್ಲ. ನಡೆಯುತ್ತಾ ನಡೆಯುತ್ತಾ ಜಿಗಣೆಗಳ ಬಗೆಗಿನ ಹೆದರಿಕೆಯೂ ಸ್ವಲ್ಪ ಕಳೆದಿತ್ತು. ರಾಜಾ ಹಿಲ್ ತುತ್ತತುದಿಯ ಮೇಲೆ ನಿಂತು ನೋಡಿದಾಗ ಕಂಡ ಸೊಬಗು ವರ್ಣಿಸಲಸಾಧ್ಯ. ಅಲ್ಲಿಂದ ಇಡೀ ಕಬ್ಬಿನಕಾಡು, ಸುತ್ತಲಿನ ಹಳ್ಳಕೊಳ್ಳಗಳು, ಬತ್ತದ ಗದ್ದೆಗಳು, ಸರ್ಪದಂತೆ ಕಾಣುವ ರಸ್ತೆಗಳು ಪುಟ್ಟಪುಟ್ಟದಾಗಿ ಕಾಣುತ್ತಿದ್ದವು. ಅಲ್ಲಿಂದ ದೂರದ ತಡಿಯಂಡಮೋಲ್ ಬೆಟ್ಟ ಆಕಾಶದ ಕ್ಯಾನ್ವಾಸಿನ ಮೇಲೆ ನೀಲಿ ಬಣ್ಣದಿಂದ ರಚಿಸಿದ ವಾಟರ್ ಕಲರ್ ಪೇಂಟ್‌ನಂತೆ ಕಾಣುತ್ತಿತ್ತು.

ರಾಜಾ ಹಿಲ್ ದಾಟಿ ಮುಂದಿನ ಎರಡು ಗುಡ್ಡಗಳ ಮೇಲೆ ಹೋದಾಗ ಆಶ್ಚರ್ಯಕರ ರೀತಿಯಲ್ಲಿ ಜಿಗಣೆಗಳೇ ಇರಲಿಲ್ಲ. ಯಾಕಂದ್ರೆ ಅಲ್ಲಿ ಗಿಡಮರಗಳಿರಲಿಲ್ಲ. ಈ ಜಿಗಣೆಗಳು ಹುಟ್ಟಿಕೊಳ್ಳುವುದೇ ಒಣಗಿ ಉದುರಿದ ಎಲೆಗಳು ಕೊಳೆತ ಸ್ಥಳಗಳಲ್ಲಿ. ನಮಗಂತೂ ಸಂತೋಷವೋ ಸಂತೋಷ.

ಚಿಕ್ಕ ಕಾಡಿನ ನಡುವಿನಿಂದ ಹಳ್ಳ ದಾಟಿ ಇಕ್ಕೆಲಗಳಲ್ಲಿಯೂ ನಾಲ್ಕೈದಡಿ ಬೆಳೆದಿರುವ ಯಾವುದೋ ಬಗೆಯ ಗಿಡಗಳ ನಡುವಿನಿಂದ ಕಾಲುದಾರಿಯಲ್ಲಿ ಸಾಗುತ್ತಿದ್ದಾಗ ಅಪ್ಪಣ್ಣ ಗಕ್ಕನೆ ನಿಂತ. ಇಲ್ಲಿ ನೋಡಬನ್ನಿ ಎಲ್ಲರನ್ನೂ ಕರೆದ. ಆತನ ಮಾತಿನಲ್ಲಿನ ಬೆರಗಿನಿಂದಲೇ ನಮಗೂ ಕುತೂಹಲವುಂಟಾಯಿತು. ಏನದು ಅಂತ ಕೇಳಿದೆವು.

ಹುಲಿ ಹೆಜ್ಜೆ!

ಹೆಜ್ಜೆಯ ಗುರುತು ನೋಡಿದರೆ ಈಗ ತಾನೆ ಇಲ್ಲಿಂದ ನಾವು ಬಂದ ದಾರಿಯಲ್ಲೇ ಹೋಗಿದೆ. ನೋಡಿ ಒಂದು ದೊಡ್ಡದು ಇನ್ನೊಂದು ಸಣ್ಣದು. ಜೊತೆಗೆ ಮರಿಯೂ ಇರಬೇಕು. ಒಂಥರ ವಿಚಿತ್ರ ವಾಸನೆ ಇಲ್ಲೆಲ್ಲ ಹಬ್ಬಿಕೊಂಡಿದೆ ನೋಡಿ ಅಂದ.

ನಮಗೆಲ್ಲಾ ಜಂಗಾಬಲವೇ ಉಡುಗಿಹೋಯಿತು. ಹುಲಿ ಇರುವ ಸಂಗತಿಯನ್ನು ನೀವು, ಸುರೇಶ್ ಅವರು ಹೇಳಲೇ ಇಲ್ಲ ಅಂದಾಗ. ನೀವು ಹೆದರ್ತೀರಿ ಅಂದ್ಕೊಂಡು ಹೇಳಲಿಲ್ಲ ಅಂತ ಬಾಂಬ್ ಹಾಕಿದ. ನೋಡಿದ್ರೆ ಅರ್ಧ ದಾರಿ ಬಂದಾಗಿದೆ, ಹುಲಿ ಇಲ್ಲೆ ಎಲ್ಲೋ ಇರಬೇಕು ಅಂತಾನೆ, ಕೈಯಲ್ಲಿ ಕೋವಿಯೂ ಇಲ್ಲ, ಇದ್ದದ್ದು ಮಚ್ಚೊಂದೇ.

ಫೋಟೋ ತಕ್ಕಳ್ಳಿ ಸಾರ್ ಅಂದ. ಫೋಟೋ ಮನೆ ಹಾಳಾಗ್ಲಿ ಇಲ್ಲಿಂದ ಏನೂ ಅಪಾಯವಾಗದ ಹಾಗೆ ಹೋಗೋದು ಹ್ಯಾಗೆ ಅಂತ ಅಳಲು ತೋಡಿಕೊಂಡ್ವಿ. ಅಯ್ಯೋ ಹೆದರ್ಕೊಬೇಡಿ ಸಾರ್ ಅದು ಮನುಷ್ಯರಿಗೇನೂ ಮಾಡಲ್ಲ. ಸುಮ್ನೆ ಹೊಂಟೋಯ್ತದೆ ಅಂದು ಧೈರ್ಯ ತುಂಬಿದ. ನನಗೋ ಹೆದರಿಕೆ ಹಾಗೇ ಉಳಿದೇ ಇದ್ರೆ ಕೆಲವರು ಫೋಟೋ ತೆಗೆಯಲು ಪ್ರಾರಂಭಿಸಿದರು. ಅಷ್ಟರಲ್ಲಾಗಲೇ ಮದ್ಯಾಹ್ನವಾಗಿತ್ತು. ಸಾಯಂಕಾಲ ಬೆಂಗಳೂರಿನ ಬಸ್ಸು ಹತ್ತಬೇಕಿತ್ತು. ಅಲ್ಲೆಲ್ಲ ಕಪ್ಪು ಮೋಡ ಆವರಿಸಲು ಪ್ರಾರಂಭಿಸಿತ್ತು, ಹುಲಿ ಹೆದರಿಕೆ ಬೇರೆ. ಇಲ್ಲಿಂದ ಜಾಗ ಖಾಲಿ ಮಾಡಿದರೆ ಸಾಕೆಂದು ತಡಿಯಂಡಮೋಲ್ ತಡಿಯಪ್ಪಾ ಮತ್ತೊಮ್ಮೆ ಬರ್ತೀವಿ ಅಂದು ರೆಸಾರ್ಟ್‌ಗೆ ವಾಪಸು ಬಂದೆವು.

ಸ್ವಲ್ಪ ದೂರ ಹೋದ ನಂತರ ಮತ್ತೆ ನಿಂತ್ಕೊಳ್ಳಿ ಅಂದ ಅಪ್ಪಣ್ಣ. ಮತ್ತೇನಪ್ಪಾ ಹುಲಿ ಇರುವ ಸುಳಿವೇನಾದ್ರೂ ಸಿಕ್ಕಿದೆಯಾ ಅಂದ್ಕೊಂಡ್ರೆ ಅವನೇ ಹಾದಿ ತಪ್ಪಿದ್ದ. ಮತ್ತೆ ವಾಪಸು ಹೋಗಿ ಸರಿದಾರಿಯಲ್ಲಿ ಸಾಗಿತು ನಮ್ಮ ಪಯಣ. ಹಳ್ಳ ದಾಟುವಾಗ ಹೂಹ್ ಅಂತ ಹತ್ತಿರದಲ್ಲೆಲ್ಲೋ ಬಂದ ಧ್ವನಿ ನಮ್ಮೆಲ್ಲರನ್ನು ನಡುಗಿಸಿತ್ತು. ಅದು ಹುಲಿನೇ ಸಾರ್ ಹೆದರಬೇಡಿ ಅಂತ ಹೇಳಿದರೂ ನಮ್ಮ ಕೈಕಾಲು ನಡುಕ ನಿಂತಿದ್ದಿಲ್ಲ. ನಡೀರಪ್ಪ ಬೇಗನೆ ಇಲ್ಲಿಂದ ಜಾಗ ಖಾಲಿ ಮಾಡೋಣ ಅನ್ನುವಷ್ಟರಲ್ಲಿ ಕ್ಯಾಮೆರಾ ಹಿಡಿದಿದ್ದ ಗೆಳೆಯ ಕಾಲು ಜಾರಿ ಝರಿಯಲ್ಲಿ ಬಿದ್ದಿದ್ದ. ಪುಣ್ಯಕ್ಕೆ ಕ್ಯಾಮೆರಾಕ್ಕೇನೂ ಆಗಿರಲಿಲ್ಲ.

ಜಿಗಣೆಗಳಿರದ ಗುಡ್ಡದ ಮೇಲೆ ರೆಸಾರ್ಟ್‌ನಿಂದಲೇ ಕಟ್ಟಿಸಿಕೊಂಡು ಬಂದಿದ್ದ ಊಟ ಮಾಡಿ ಮುಂದೆ ಸಾಗಿದಾಗ ರಾಜಾ ಹಿಲ್ ಮೇಲೆ ಎರಡು ಗಂಡು ಎರಡು ಹೆಣ್ಣು ಕಂಡವು. ಮದುವೆಯಾದ ಯಾವ ಪುರಾವೆಯೂ ಕಾಣಲಿಲ್ಲ. ನಮಗ್ಯಾಕಪ್ಪಾ ಅವರ ಉಸಾಬರಿ ಅಂದ್ಕೊಂಡು ಮುಂದೆ ಹೊರಟೆವು. ತಡಿಯಂಡಮೋಲ್‌ಗೆ ಹೀಗೆನಾ ಹೋಗೋದು ಅಂತ ಹೆಣ್ಣು ಧ್ವನಿಯೊಂದು ಕೇಳಿತು. ಹೌದು, ಆದ್ರೆ ದಾರಿಯಲ್ಲಿ ಹುಲಿಗಳಿವೆ ನೀವಷ್ಟೇ ಹೋಗೋದು ಸೂಕ್ತವಲ್ಲ ಅಂತ ಉಪದೇಶ ಬಂತು ಗೆಳೆಯನೊಬ್ಬನಿಂದ. ಮತ್ತೊಂದು ಹೆಣ್ಣಿನಿಂದ ವಿಚಿತ್ರವಾದ ಚೀತ್ಕಾರವೊಂದು ಬಂತು. ಅವರೂ ನಮ್ಮೊಡನೆ ರೆಸಾರ್ಟ್‌ಗೆ ಹೆಜ್ಜೆ ಹಾಕಹತ್ತಿದರು.

ರೆಸಾರ್ಟಲ್ಲಿ ಸುರೇಶ್ ಅವರಿಗೆ ಹುಲಿಯ ಬಗ್ಗೆ ಕೇಳಿದಾಗ, ಜೊತೆಗಿದ್ದ ಅವರ ಹೆಂಡತಿ, ಹೌದು ಈಗಾಗಲೆ ನಮ್ಮೆರಡು ನಾಯಿಗಳನ್ನು ಹುಲಿ ಸ್ವಾಹಾ ಮಾಡಿದೆ. ಆದರೆ ಹುಲಿ ಇರುವ ವಿಷಯ ನಾವ್ಯಾರಿಗೂ ಹೇಳುವುದಿಲ್ಲ. ಮೊದಲೇ ಹೇಳಿದರೆ ಹೆದರಿಕೊಂಡು ಬಿಡುತ್ತಾರೆ. ಅದೂ ಅಲ್ದೆ ಹುಲಿ ನಿರುಪದ್ರವಿ ಅಂತ ಹೇಳಿದರು. ಭಾರತೀಯರಲ್ಲದೆ ವಿದೇಶೀಯರು ಸುಮಾರು ಜನ ಚಾರಣಕ್ಕೆಂದೇ ಅಲ್ಲಿಗೆ ಬಂದು ತಿಂಗಳಾನುಗಟ್ಟಲೆ ಬಿಡಾರ ಹೂಡುತ್ತಾರೆ. ಅಲ್ನೋಡಿ ಜ್ಯಾಕ್ ಅಂತ ಕೂತಿದ್ದಾರೆ, ಜರ್ಮನಿಯವರು ಅಂತ ಜ್ಯಾಕ್‌ನತ್ತ ಬೆರಳು ಮಾಡಿದರು.

ನಮಗೆ ತಲೆತಿರುಗಿ ಬೀಳುವುದೊಂದೇ ಬಾಕಿ. ಅವರ ಎರಡೂ ಕಾಲುಗಳು ರಕ್ತಮಯವಾಗಿದ್ದವು. ಜ್ಯಾಕ್‌ನನ್ನೇ ವಿಚಾರಿಸಿದಾಗ 16 ಕಡೆ ಜಿಗಣೆಗಳು ಕಚ್ಚಿವೆ ಅಂತ ಹೇಳಿದಾಗ ನಮ್ಮ ಚಡ್ಡಿಯಲ್ಲೇ ಜಿಗಣೆ ಹೊಕ್ಕಂಥ ಅನುಭವ. ಆದರೂ ಜ್ಯಾಕ್‌ನ ಮುಖದಲ್ಲಿ ಮಂದಹಾಸ ಮಾಸಿರಲಿಲ್ಲ. ತಡಿಯಂಡಮೋಲ್‌ವರೆಗೂ ಟ್ರೆಕ್ ಮಾಡಿ ಬಂದ ಸಂತಸ ಆತನ ಮನದಲ್ಲಿ ಮನೆಮಾಡಿತ್ತು. ನಮಗೆ ಒಂದೆರಡೇ ಜಿಗಣೆಗಳು ಕಚ್ಚಿವೆಯೆಂಬ ಸಂತಸವಿದ್ದರೆ, ಆತನಿಗೆ ಜಿಗಣೆಗಳ ಬಗ್ಗೆ ಲಕ್ಷ್ಯ ಕೂಡ ಇರದೆ ಸೌಂದರ್ಯವನ್ನು ಆಸ್ವಾದಿಸುತ್ತಾ ಚಾರಣ ಮಾಡಿಬಂದ ಆತ್ಮತೃಪ್ತಿಯಿತ್ತು.

ಐ ಲವ್ ದಿಸ್ ನೇಚರ್. ಫಂಟಾಸ್ಟಿಕ್ ಪ್ಲೇಸ್. ಐ ಡೋಂಟ್ ಕೇರ್ ಅಬೌಟ್ ದೀಸ್ ಲೀಚಸ್. ಜಸ್ಟ್ ವಾಂಟ್‌ ಟು ಟ್ರೆಕ್ ಅಂದ ಜ್ಯಾಕ್. ನಮಗೆ ಹೇಳುವುದೇನೂ ಇರಲಿಲ್ಲ.

ತಡಿಯಂಡಮೋಲ್ ಚಾರಣ ಲೇಖನದ ಮೊದಲ ಭಾಗ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Trekking has become a way of staying away from hectic city life these days. It is a different experience altogether when it is raining especially in Malenadu. Beautiful nature, refreshing atmosphere, deadly leaches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more